ಬೆಟ್ಟದಬೀಡಲ್ಲಿ ನಾಳೆಯಿಂದ ‘ಭರತರಂಗ-2021’
ಮೈಸೂರು

ಬೆಟ್ಟದಬೀಡಲ್ಲಿ ನಾಳೆಯಿಂದ ‘ಭರತರಂಗ-2021’

February 12, 2021

ಮೈಸೂರು, ಫೆ.11(ಎಂಟಿವೈ)- ಮೈಸೂರಿನ ರಂಗಯಾನ ಟ್ರಸ್ಟ್, ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಬೆಟ್ಟದಬೀಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಫೆ.13ರಿಂದ 15ರವರೆಗೆ ‘ಭರತರಂಗ-2021’ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ರಂಗಯಾನ ಟ್ರಸ್ಟ್ ಅಧ್ಯಕ್ಷ ವಿಕಾಸ್ ಚಂದ್ರ ಮೈಸೂರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗ್ರಾಮ, ಹಾಡಿಗಳಿಗೂ ನಾಟಕೋತ್ಸವ ತಲುಪಿಸಬೇಕೆಂದೇ ರಂಗಯಾನ ಟ್ರಸ್ಟ್, ಭರತರಂಗ ಹಮ್ಮಿಕೊಂಡಿದ್ದು, ಫೆ.13ರ ಸಂಜೆ 5.30ಕ್ಕೆ ಉದ್ಘಾಟನೆಗೊಳ್ಳಲಿದೆ. ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಸ್ಥಳೀಯ ಗ್ರಾಪಂ ಸದಸ್ಯರು ಉಪಸ್ಥಿತರಿರುವರು. ನಂತರ ಜನಪದ ಗೀತೆ, ಸಂಜೆ 7.30ಕ್ಕೆ ಬಭ್ರುವಾಹನ ನಾಟಕ ಪ್ರದರ್ಶನವಿದೆ ಎಂದರು. ಫೆ.14ರ ಸಂಜೆ 5.30ಕ್ಕೆ ರಂಗಗೀತೆ, ರಂಗಕರ್ಮಿ, ಚಿತ್ರನಟ ಅವಿನಾಶ್ ಎಸ್.ಶಠಮರ್ಷನ್ ಭಾಗಿಯಾಗುವರು. ಸಂಜೆ 7.30ಕ್ಕೆ `ಮಿಡಿಚಂಭಟ್ಟ’ ಮಕ್ಕಳ ನಾಟಕ. ಸಮಾರೋಪದಲ್ಲಿ ಫೆ.15ರ ಸಂಜೆ 5.30ಕ್ಕೆ ಜನಪದ ಕಲಾತಂಡಗಳ ಮೆರವಣಿಗೆ, ಸಂಜೆ 6ಕ್ಕೆ `ಅವ್ವ ನನ್ನವ್ವ’ ನಾಟಕ. ರಾತ್ರಿ 8ಕ್ಕೆ `ಸ್ಮಶಾಣವಾಸಿಯ ಸ್ವಗತ’ ಏಕವ್ಯಕ್ತಿ ನಾಟಕ, ರಾತ್ರಿ 9ಕ್ಕೆ ಬುಡಕಟ್ಟು ಸೋದೇದಿಮ್ಮಿ ನೃತ್ಯ. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಹಿನ್ನೆಲೆ ಗಾಯಕಿಯರಾದ ವಸು ದೀಕ್ಷಿತ್, ಬಿಂದು ಮಾಲಿನಿ ಉಪಸ್ಥಿತರಿರುವರು ಎಂದರು. ಮುಖ್ಯಶಿಕ್ಷಕ ಪುಟ್ಟಮಾದಪ್ಪ, ಕಾರ್ಯಕ್ರಮ ಸಂಚಾಲಕ ಮಹೇಂದ್ರ, ನಿರ್ವಾಹಕ ನಟರಾಜು, ಗ್ರಾಪಂ ಸದಸ್ಯ ವಿದ್ಯಾಸಾಗರ್ ಸುದ್ದಿಗೋಷ್ಠಿಯಲ್ಲಿದ್ದರು.

 

Translate »