ನಾಲೆ ಇಲ್ಲದೆ ರಸ್ತೆ-ಜಮೀನಿನಲ್ಲಿ ಹರಿಯುತ್ತಿದೆ ನೀರು
ಹಾಸನ

ನಾಲೆ ಇಲ್ಲದೆ ರಸ್ತೆ-ಜಮೀನಿನಲ್ಲಿ ಹರಿಯುತ್ತಿದೆ ನೀರು

September 26, 2018

ಬೇಲೂರು:ತಾಲೂಕಿನ ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಯಗಚಿ ನೀರು ಹರಿಸುವ ಹಾಲ್ತೊರೆ ಏತ ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲ ಆಗುವುದರ ಜತೆಗೆ ಹೆಚ್ಚಿನ ರೀತಿಯಲ್ಲಿ ಅನಾನುಕೂಲವೂ ಸಂಭವಿಸುತ್ತಿದೆ.

ರೈತರ ಹಿತಾಸಕ್ತಿ ಮರೆತು ಯೋಜನೆ ರೂಪಿಸಿರುವುದರಿಂದ ಇಂದು ನೂರಾರು ರೈತರು ತಮ್ಮ ಭೂಮಿಯಲ್ಲಿ ಬೆಳೆದಿರುವ ಬೆಳೆಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದು, ನಾಲೆ ಇಲ್ಲದೆ ಹಾಲ್ತೊರೆ ಏತನೀರಾವರಿ ಯೋಜನೆಯ ನೀರು ಜಮೀನು, ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ಮಲ್ಲಿಕಾರ್ಜುನಪುರ ವರೆಗೆ ನಾಲೆ: ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಯಗಚಿ ನೀರು ಹರಿಸಲು ಹಾಲ್ತೊರೆ ಸಮೀಪದ ಕೇಶವಪುರದ ಬಳಿ ಜಾಕ್ ವೆಲ್ ನಿರ್ಮಿಸಲಾಗಿದೆ. ಇಲ್ಲಿಂದ ಮೋಟಾರ್ ಮೂಲಕ ನೀರನ್ನು ನಾಲೆಗೆ ಹರಿಸಲಾಗುತ್ತಿದೆ. ಈ ನೀರು ಹಾಸನ ರಸ್ತೆಯ ಹಗರೆ ಸಮೀಪದ ಮಲ್ಲಿಕಾರ್ಜುನಪುರದವರೆಗೆ ಮಾತ್ರ ನಾಲೆಯಲ್ಲಿ ಹರಿಯುತ್ತಿದ್ದು, ನಂತರ ನಾಲೆಯಿಲ್ಲದ ಕಾರಣ ರಸ್ತೆ, ಜಮೀನುಗಳನ್ನು ತನ್ನ ಹರಿವಿಕೆಗೆ ದಾರಿ ಮಾಡಿಕೊಂಡಿದೆ.

ಕೆರೆ-ಕಟ್ಟೆಗಳಿದ್ದರೂ ನಾಲೆಗಳಿಲ್ಲ: ಮಲ್ಲಿಕಾರ್ಜುನಪುರ ಗ್ರಾಮದಿಂದ ನಂತರದಲ್ಲಿ ಹಳೇಬೀಡಿನ ದ್ವಾರಸಮುದ್ರ ಕೆರೆ ತನಕ ಹಲವಾರು ಗ್ರಾಮದಲ್ಲಿ ಕೆರೆ-ಕಟ್ಟೆಗಳಿದ್ದು, ಆ ಕೆರೆ-ಕಟ್ಟೆಗಳಿಗೆ ನೀರು ಹರಿಯಲು ನಾಲೆ ನಿರ್ಮಿಸಿಲ್ಲ. ಇದರಿಂದ ಮಲ್ಲಿಕಾರ್ಜುನಪುರದವರೆಗೆ ಹರಿದ ಏತ ನೀರಾವರಿ ನೀರು ನಂತರದ ತಗ್ಗು ಪ್ರದೇಶದಲ್ಲಿ ಹರಿದು ರೈತರ ಬೆಳೆಗಳಿಗೆ ಹಾನಿ ಉಂಟು ಮಾಡುತ್ತಿದೆ. ಕೆಲವೊಂದು ಭಾಗದಲ್ಲಿ ರಸ್ತೆಯನ್ನು ಆಕ್ರಮಿಸಿಕೊಂಡಿದೆ.

ದ್ವಾರಸಮುದ್ರವರೆಗೂ ನಾಲೆ ಅಗತ್ಯ: ಯಗಚಿಯಿಂದ ಹಳೇಬೀಡು ಹೋಬಳಿಗೆ ನೀರು ತೆಗೆದುಕೊಂಡು ಹೋಗುವಾಗ ಹಳೇ ಬೀಡು ದ್ವಾರಸಮುದ್ರ ಕೆರೆಯವರೆಗೂ ನಾಲೆ ಅಗತ್ಯವಿದೆ. ಆದರೆ ಯಗಚಿ ಯೋಜನೆ ಅಧಿಕಾರಿಗಳು ಯೋಜನೆ ರೂಪಿಸುವಾಗ ದ್ವಾರಸಮುದ್ರ ಕೆರೆವರೆಗೆ ನಾಲೆ ನಿರ್ಮಾ ಣಕ್ಕೆ ಯೋಜನೆ ರೂಪಿಸದೇ ಕೇವಲ ಮಲ್ಲಿಕಾರ್ಜುನಪುರ ದವರೆಗೆ ಮಾತ್ರವೇ ನಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಕೈತೊಳೆದುಕೊಂಡಂತಿದೆ.

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ: ಮಲ್ಲಿ ಕಾರ್ಜುನಪುರ ಗ್ರಾಮದ ನಂತರ ಹಳೇ ಬೀಡು ದ್ವಾರಸಮುದ್ರ ಕೆರೆವರೆಗೂ ತಗ್ಗು ಪ್ರದೇಶವಾಗಿದ್ದರಿಂದ ನಾಲೆಯ ನೀರು ಸರಾಗವಾಗಿ ಸಂದಿ-ಗೊಂದಿ, ಜಮೀನಿನ ನಡುವಿನ ಕಿರುನಾಲೆ ಮೂಲಕ ಹಲವು ಗ್ರಾಮಗಳ ಕೆರೆಕಟ್ಟೆಗಳಿಗೆ ಹರಿದು ಅಂತಿಮ ವಾಗಿ ಹಳೇಬೀಡು ದ್ವಾರಸಮುದ್ರ ಕೆರೆ ತಲು ಪಲಿದೆ. ತಗ್ಗು ಪ್ರದೇಶದಲ್ಲಿ ನೀರು ತಾನಾ ಗಿಯೇ ಹರಿಯುವುದರಿಂದ ಭೂಮಿ ವಶಪಡಿಸಿ ಕೊಂಡು ನಾಲೆ ತೋಡುವ ಅಗತ್ಯವಾದರೂ ಏನಿದೆ? ಎಂಬ ಧೋರಣೆ ಯೋಜನೆ ರೂಪಿಸಿದ ಅಧಿಕಾರಿ ಮಹಾಶಯರದ್ದು.

ರಸ್ತೆ ಮೇಲೆ ನೀರು: ಈಗಾಗಲೇ ಹಾಲ್ತೊರೆ ಜಾಕ್‍ವೆಲ್ ಇಂದ ಬಿಟ್ಟ ನೀರು ಮಲ್ಲಿ ಕಾರ್ಜುನಪುರ ಗ್ರಾಮದವರೆಗೆ ನಾಲೆಯಲ್ಲಿ ಸರಾಗವಾಗಿ ಹರಿದು ನಂತರ ನಾಲೆ ಇಲ್ಲದ ಕಾರಣ ದೇವಿಹಳ್ಳಿಗೆ ತೆರಳುವ ರಸ್ತೆಯ ಮೇಲೆ ನೀರುತ್ತಿದೆ. ಈ ರಸ್ತೆಯ ಮೇಲೆ ಹರಿದ ನೀರು ಮಲ್ಲಿಕಾರ್ಜುನಪುರ ಗ್ರಾಮದ ರೈತರ ಭೂಮಿಯನ್ನು ಆವರಿಸುವುದಲ್ಲದೆ, ಕೂಗಳತೆಯಲ್ಲಿರುವ ಸಣ್ಣಕಟ್ಟೆ ಸೇರಿ ಅಲ್ಲಿಂದ ಹಲವು ಹಳ್ಳಿಗಳ ಮೂಲಕ ದ್ವಾರ ಸಮುದ್ರದೆಡೆ ಹರಿಯುತ್ತದೆ.

ಸಣ್ಣಕಟ್ಟೆ ಏರಿ ಒಡೆದಿತ್ತು: ಈ ಸಣ್ಣಕಟ್ಟೆಗೆ ಈ ಹಿಂದೆ ಇದೇ ರೀತಿ ನೀರು ಹೆಚ್ಚಾಗಿ ಹರಿದ ಪರಿಣಾಮ ಏರಿ ಒಡೆದು ಹೋಗಿ ಸಾಕಷ್ಟು ಬೆಳೆ ಹಾನಿ ಸಂಭವಿಸಿತ್ತು. ಆದರೇ ಕೆಟ್ಟೆ ಇದುವರೆಗೂ ದುರಸ್ತಿ ಭಾಗ್ಯ ಕಂಡಿಲ್ಲ ಎಂಬುದು ಒಂದೆಡೆಯಾದರೆ, ಪುನಃ ನೀರು ಹೆಚ್ಚಿನ ರೀತಿಯಲ್ಲಿ ಕಟ್ಟೆಗೆ ಹರಿದು ಬರುತ್ತಿದ್ದು, ಕಟ್ಟೆ ಏರಿ ಸಂಪೂರ್ಣ ಒಡೆಯ ಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಆತಂಕ ಇಲ್ಲಿನ ರೈತರದ್ದು.

ಸಮೀಪದ ಗ್ರಾಮಗಳಲ್ಲೂ ಇದೇ ಸ್ಥಿತಿ: ಇದು ಕೇವಲ ಮಲ್ಲಿಕಾರ್ಜುನಪುರ ಗ್ರಾಮಸ್ಥ ರೊಬ್ಬರ ಸಮಸ್ಯೆಯಲ್ಲ. ಮಲ್ಲಿಕಾರ್ಜುನ ಪುರದಿಂದ ಹಳೇಬೀಡು ದ್ವಾರಸಮುದ್ರ ಕೆರೆಯವರೆಗೆ ಇರುವ ಹತ್ತಾರು ಗ್ರಾಮಗಳ ರೈತರ ನೋವು ಕೂಡ ಇದೆ ಆಗಿದೆ. ಏಕೆಂದರೆ ಇಲ್ಲೆಲ್ಲೂ ನಾಲೆ ನಿರ್ಮಾಣ ವಾಗಿಲ್ಲ. ಹಾಗಾಗಿ ಮಲ್ಲಿಕಾರ್ಜುನಪುರದಿಂದ ದ್ವಾರಸಮುದ್ರದ ವರೆಗಿನ ಎಲ್ಲಾ ಗ್ರಾಮಗಳ ರೈತರಿಗೂ ಸದ್ಯ ನಾಲೆ ನಿರ್ಮಾಣದ್ದೇ ಚಿಂತೆ.

ಭೂಮಿ ಪಡೆದು ಪರಿಹಾರ ನೀಡಿ: ಮಲ್ಲಿಕಾರ್ಜುಪುರ ಸೇರಿದಂತೆ ದ್ವಾರ ಸಮುದ್ರ ವರೆಗಿನ ಭಾಗದ ಎಲ್ಲಾ ರೈತರು ತಮ್ಮ ಜಮೀನಿನ ಮೂಲಕ ನೀರು ಹರಿಯಲು ತಡೆಯೇನು ಮಾಡುತ್ತಿಲ್ಲ. ಸದ್ಯ ನೀರು ಹರಿಯುತ್ತಿರುವ ಸ್ಥಳವೂ ರೈತರದ್ದೇ. ಆದರೆ ಇದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನು ಕೂಲವೇ ಹೆಚ್ಚಾಗಿದ್ದು, ನೀರಿನ ಎಡ್ಡಾದಿಡ್ಡಿ ಹರಿವಿನಿಂದ ಜಮೀನಿನ ಬೆಳೆ ಹಾಗೂ ಕೆರೆ-ಕಟ್ಟೆಗಳಿಗೂ ಹಾನಿ ಆಗುತ್ತಿದೆ. ಇದನ್ನು ತಪ್ಪಿಸಲು ಅಗತ್ಯವಿರುವ ಭೂಮಿ ವಶ ಪಡಿಸಿಕೊಂಡು ಪರಿಹಾರ ನೀಡಿ, ನಾಲೆ ನಿರ್ಮಾಣ ಮಾಡಲಿ ಎಂಬುದು ರೈತರ ಒತ್ತಾಯವಾಗಿದ್ದು, ಈ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳದೇ ಇದ್ದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎನ್ನುತ್ತಿದ್ದಾರೆ ಈ ಭಾಗದ ರೈತರು.

Translate »