ಮೈಸೂರು ವಿವಿ ರಾಜ್ಯಪ್ರಶಸ್ತಿ ವಿಭಾಗದಲ್ಲಿ ಎನ್.ರಾಚಯ್ಯ ಅಧ್ಯಯನ ಪೀಠ ಉದ್ಘಾಟನೆ
ಮೈಸೂರು

ಮೈಸೂರು ವಿವಿ ರಾಜ್ಯಪ್ರಶಸ್ತಿ ವಿಭಾಗದಲ್ಲಿ ಎನ್.ರಾಚಯ್ಯ ಅಧ್ಯಯನ ಪೀಠ ಉದ್ಘಾಟನೆ

September 26, 2018

ಎಲ್ಲಾ ವರ್ಗಗಳಿಗೆ ಪ್ರೀತಿ ಪಾತ್ರರಾಗಿದ್ದರು: ಎನ್.ರಾಚಯ್ಯರ ಬಗ್ಗೆ ಮಾಜಿ ಸಚಿವ ಆಂಜನೇಯ ಗುಣಗಾನ
ಮೈಸೂರು:  ಹೆಮ್ಮೆಯ ರಾಜಕಾರಣಿಯಾಗಿ ಎಲ್ಲಾ ವರ್ಗಗಳ ಪ್ರೀತಿಗೆ ಪಾತ್ರರಾಗಿದ್ದ ಎನ್.ರಾಚಯ್ಯ ಅವರ ಸಾಮಾಜಿಕ ಬದ್ಧತೆ, ಸಾಧನೆ ಹಾಗೂ ಕೊಡುಗೆಗಳನ್ನು ಯುವ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅಭಿಪ್ರಾಯಪಟ್ಟರು.

ಮೈಸೂರು ವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗಕ್ಕೆ ರಾಜ್ಯ ಸರ್ಕಾರ ಮಂಜೂರು ಮಾಡಿರುವ ಎನ್.ರಾಚಯ್ಯ ಅಧ್ಯಯನ ಪೀಠದ ಉದ್ಘಾಟನೆಯನ್ನು ಎನ್.ರಾಚಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ನೆರವೇರಿಸಿ, ಮಾತನಾಡಿದರು.

ಒಂದು ಕಾಲದಲ್ಲಿ ಎನ್.ರಾಚಯ್ಯ ಎಂದರೆ ಯುವ ರಾಜಕಾರಣಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತಿತ್ತು. ಅಷ್ಟರ ಮಟ್ಟಿಗೆ ಅವರು ರಾಜಕಾರಣದಲ್ಲಿ ಛಾಪು ಮೂಡಿಸಿದ್ದರು. ಸರಳ ಹಾಗೂ ಸಜ್ಜನ ರಾಜಕಾರಣಿಯಾಗಿದ್ದ ಇವರು ಆದರ್ಶ ಗುಣಗಳನ್ನು ಹೊಂದಿದ್ದ, ಸಾಮಾಜಿಕ ನ್ಯಾಯದ ಪರ ಉದಾತ್ತ ಚಿಂತನೆಯುಳ್ಳವರಾಗಿದ್ದರು. ಇವರು ನಮ್ಮ ಯುವ ಸಮುದಾಯಕ್ಕೆ ಸ್ಫೂರ್ತಿ ಆಗಬೇಕಿದ್ದು, ಈ ನಿಟ್ಟಿನಲ್ಲಿ ಎನ್.ರಾಚಯ್ಯ ಅಧ್ಯಯನ ಪೀಠ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಎನ್.ರಾಚಯ್ಯ ಮೈಸೂರು ಮಣ್ಣಿನಿಂದ ಬಂದ ಕ್ರಾಂತಿಕಾರಕ ರಾಜಕಾರಣಿ. ತಮ್ಮ ಅಧಿಕಾರಾವಧಿಯಲ್ಲಿ ವಿದ್ಯಾರ್ಥಿನಿಲಯಗಳನ್ನು ಹೆಚ್ಚು ಹೆಚ್ಚು ಪ್ರಾರಂಭಿಸಲು ಕ್ರಮ ಕೈಗೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾರಣಿಭೂತರಾದರು. ಮೈಸೂರು ಜಿಲ್ಲೆಯ ಜನತೆಯಲ್ಲಿ ಎನ್.ರಾಚಯ್ಯ ಅವರ ಸಾಧನೆ ಇಂದಿಗೂ ಹಚ್ಚಹಸಿರಾಗಿದೆ. ಇವರ ಪರಿಚಯ ಯುವ ಪೀಳಿಗೆಗೆ ಮಾಡಿಕೊಡುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎನ್.ರಾಚಯ್ಯ ಅವರ ಅಧ್ಯಯನ ಪೀಠ ಸ್ಥಾಪನೆಗೆ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ಎನ್.ರಾಚಯ್ಯ ಹಾಗೂ ಬಿ.ಬಸವಲಿಂಗಪ್ಪ ಇಬ್ಬರು ಕ್ರಾಂತಿಕಾರಕ ಹಾಗೂ ಹೋರಾಟದ ಗುಣ ಹೊಂದಿದ್ದ ಪ್ರಾಮಾಣಿಕ ರಾಜಕಾರಣಿಗಳಾಗಿದ್ದವರು. ತಮಗೆ ದೊರೆತ ಅಧಿಕಾರವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಎಲ್ಲಾ ವರ್ಗದ ಬಡವರಿಗೆ ಸರ್ಕಾರದ ಸೌಲಭ್ಯ ಒದಗಿಸಲು ನಿಷ್ಠೆಯಿಂದ ದುಡಿದಿದ್ದಾರೆ. ಎನ್.ರಾಚಯ್ಯ ಅವರ ಹೆಸರು ಶಾಶ್ವತವಾಗಿ ಸಮಾಜದಲ್ಲಿ ಉಳಿಯುವ ಅಗತ್ಯವಿದ್ದು, ಇದನ್ನು ಮನಗಂಡು ಇವರ ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ಬಜೆಟ್‍ನಲ್ಲಿ ಹಣ ಮೀಸಲಿರಿಸಲಾಗಿದೆ ಎಂದು ನುಡಿದರು.

ಮಾಜಿಗಳಿಗೆ ಯಾರೂ ಮಣೆ ಹಾಕಲ್ಲ: ಅಧಿಕಾರ ಇಲ್ಲದೆ ಮಾಜಿ ಸಚಿವರಾಗಿದ್ದವರನ್ನು ಸಮಾರಂಭ ಉದ್ಘಾಟನೆಗೆ ಆಹ್ವಾನಿಸುವುದು ಸಾಮಾನ್ಯವಾಗಿ ತೀರಾ ಕಡಿಮೆ. ಆದರೆ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದು ಅತ್ಯಂತ ಸಂತಸ ಉಂಟು ಮಾಡಿದೆ ಎಂದ ಅವರು, ಶಿಕ್ಷಣ ಪಡೆಯುವುದರಿಂದ ಮಾತ್ರ ಎಲ್ಲಾ ರೀತಿಯ ಉನ್ನತ ಬದಲಾವಣೆ ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುನ್ನಡೆಯಬೇಕು. ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿ ಅಧ್ಯಯನ ನಡೆಸುವ ಹವ್ಯಾಸ ರೂಢಿಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದರು ಎಂದು ಸ್ಮರಿಸಿದರು.

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಕೃಷ್ಣ ಹೊಂಬಾಳ್ ಮಾತನಾಡಿ, ಎನ್.ರಾಚಯ್ಯ ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸಾಧನೆ, ಅವರ ಸಾಮಾಜಿಕ ಕಳಕಳಿ ಹಾಗೂ ಸಮಾಜಕ್ಕೆ ಕೊಟ್ಟ ಕೊಡುಗೆಗಳನ್ನು ವಿದ್ಯಾರ್ಥಿ ಸಮೂಹ ಹಾಗೂ ಸಮಾಜಕ್ಕೆ ತಿಳಿಸುವ ಧ್ಯೇಯಯೊಂದಿಗೆ ಅಧ್ಯಯನ ಪೀಠ ಮುನ್ನಡೆಯಲಿದೆ. ಎನ್.ರಾಚಯ್ಯ ಅವರ ಧ್ಯೇಯ, ಹೋರಾಟ ಹಾಗೂ ಚಿಂತನೆಗೆ ಕಾಯಕಲ್ಪ ಕೊಡುವ ನಿಟ್ಟಿನಲ್ಲಿ ಪೀಠ ತೊಡಗಿಸಿಕೊಳ್ಳಲಿದೆ ಎಂದು ತಿಳಿಸಿದರು.

ಬಳಿಕ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ದಿಕ್ಸೂಚಿ ಭಾಷಣ ಮಾಡಿದರು. `ಕರ್ನಾಟಕ ರಾಜಕೀಯ ನಾಯಕತ್ವ’ ಕುರಿತು ಎನ್.ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಹೆಚ್.ಎಂ.ರಾಜಶೇಖರ ಉಪನ್ಯಾಸ ನೀಡಿದರು. ಮೈಸೂರು ವಿವಿ ಆಡಳಿತಾಂಗ ಕುಲಸಚಿವ ಪ್ರೊ.ಆರ್.ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್.ರಾಚಯ್ಯ ಅವರ ಪುತ್ರರೂ ಆದ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಟಿ.ರಾಮಚಂದ್ರಪ್ಪ ಮತ್ತಿತರರು ಹಾಜರಿದ್ದರು.

ಬಿಜೆಪಿಯವರಿಗೆ ಅಧಿಕಾರ ದಾಹವಿದ್ದು, ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದೆ ಎಂಬ ಹುಂಬುತನದಲ್ಲಿ ರಾಜ್ಯ ರಾಜಕಾರಣ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೆಚ್.ಆಂಜನೇಯ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದಿನಂತೆ ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲ. ವಿಧಾನ ಪರಿಷತ್‍ನ ಮೂರು ಸ್ಥಾನಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅವರಿಂದ ಸಾಧ್ಯವಾಗಿಲ್ಲ. ಅಲ್ಲಿ ಅವರಿಗೆ ಬಹುಮತ ಇಲ್ಲ. ನಮಗೆ ಬಹುಮತ ಇದ್ದ ಕಾರಣ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದು ತಿಳಿಸಿದರು.

Translate »