ಎಂಸಿಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಹುಣಸೂರು, ಬಿಳಿಕೆರೆ ಶಾಖೆಯ ಕೋಟ್ಯಾಂತರ ರೂ. ಅವ್ಯವಹಾರ ಪ್ರಸ್ತಾಪ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಹುಣಸೂರು, ಬಿಳಿಕೆರೆ ಶಾಖೆಯ ಕೋಟ್ಯಾಂತರ ರೂ. ಅವ್ಯವಹಾರ ಪ್ರಸ್ತಾಪ

September 26, 2018

ಅಧಿಕಾರಿಗಳ ವಿರುದ್ಧ ಸದಸ್ಯರ ಆಕ್ರೋಶ; ಗದ್ದಲದ ನಡುವೆ ಸಿಐಡಿ ತನಿಖೆಗೆ ಒಪ್ಪಿಸುವ ನಿರ್ಧಾರ
ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ (ಎಂಸಿಡಿಸಿಸಿ) ಬ್ಯಾಂಕ್‍ನ ಹುಣಸೂರು ಶಾಖೆ ಹಾಗೂ ಬಿಳಿಕೆರೆ ಶಾಖೆಯಲ್ಲಿ ನಡೆದಿರುವ ಅವ್ಯವಹಾರ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಧ್ವನಿಸಿ, ಭಾರೀ ಗದ್ದಲ ಉಂಟಾಗಿತ್ತು.

ಮೈಸೂರಿನ ಜೆಕೆ ಮೈದಾನದಲ್ಲಿನ ಮೈಸೂರು ಮೆಡಿಕಲ್ ಕಾಲೇಜು ಅಮೃತ ಮಹೋತ್ಸವ ಭವನದಲ್ಲಿ ಮಂಗಳವಾರ ನಡೆದ ಬ್ಯಾಂಕಿನ 64ನೇ ವಾರ್ಷಿಕ ಮಹಾಸಭೆಯಲ್ಲಿ ಹುಣಸೂರು ಹಾಗೂ ಬಿಳಿಕೆರೆ ಶಾಖೆಗಳಲ್ಲಿ ನಡೆದಿರುವ ಅವ್ಯವ ಹಾರದ ಬಗ್ಗೆ ಸದಸ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಯಿತು. ಅಕ್ರಮ ನಡೆಸಿ, ಬ್ಯಾಂಕಿಗೆ ವಂಚಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಭಾ ನಡಾವಳಿಯಲ್ಲಿ ಉಲ್ಲೇಖಿಸಬೇ ಕೆಂದು ಬ್ಯಾಂಕ್ ಅಧ್ಯಕ್ಷ ಎಸ್.ಚಂದ್ರಶೇಖರ್ ಅವರನ್ನು ಹುಣಸೂರು ತಾಲೂಕಿನ ಸಹಕಾರ ಸಂಘಗಳ ಪ್ರತಿನಿಧಿಗಳು ಆಗ್ರಹಿಸಿದರು.

ಸದಸ್ಯರ ಕೂಗಾಟದಿಂದ ಸಭೆ ಗದ್ದಲದ ಗೂಡಾಗಿತ್ತು. ಇದರ ನಡುವೆ ವೇದಿಕೆ ಯನ್ನೇರಿದ ಕೆಲ ಸದಸ್ಯರು, ಅಧ್ಯಕ್ಷರನ್ನು ಮುತ್ತಿಗೆ ಹಾಕಿ, ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡರು. ರೈತರಿಗೆ ಸಾಲ ನೀಡ ಬೇಕಾದ 27 ಕೋಟಿ ಅವ್ಯವಹಾರ ನಡೆದಿದೆ. ಅವ್ಯವಹಾರ ನಡೆಸಿರುವ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಆದರೆ ಸೆ.4ರಂದು ಆಡಳಿತ ಮಂಡಳಿ ಸಭೆಯಲ್ಲಿ ಮತ್ತೆ ಅಕ್ರಮ ಆರೋಪ ಹೊತ್ತಿ ರುವ ಅಧಿಕಾರಿಗಳನ್ನೇ ನಿಯೋಜಿಸಿಕೊಳ್ಳಲಾಗಿದೆ. ಹೀಗಾದರೆ ಬ್ಯಾಂಕ್ ಮೇಲೆ ನಂಬಿಕೆ ಉಳಿಯುವುದಾದರೂ ಹೇಗೆ?. ಅಕ್ರಮ ನಡೆಸಿದವರ ರಕ್ಷಣೆ ಮಾಡಿ ದಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅವ್ಯವಹಾರ ನಡೆಸಿದ ಹುಣಸೂರು ಶಾಖೆಯ ವ್ಯವಸ್ಥಾಪಕ ರಾಮಪ್ಪ ಪೂಜಾರ್ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಅಧಿಕಾರಿಗಳನ್ನು ವಾಪಸ್ಸು ಅದೇ ಜಾಗಕ್ಕೆ ನಿಯೋಜನೆ ಮಾಡಲಾಗಿದೆ. ಇದು ಸರಿಯಾದ ಕ್ರಮವಲ್ಲ. ಕೂಡಲೇ ಅವರ ವರ್ಗಾವಣೆಯನ್ನು ರದ್ದುಗೊಳಿಸ ಬೇಕು. ಇಲ್ಲವಾದರೆ ಬ್ಯಾಂಕಿನ ಬಗ್ಗೆ ಸದಸ್ಯರಲ್ಲಿ ಋಣಾತ್ಮಕ ಅಭಿಪ್ರಾಯ ಮೂಡು ತ್ತದೆ ಎಂದು ಬಿಗಿ ಪಟ್ಟು ಹಿಡಿದಿದ್ದರು.

ರಾಮಪ್ಪ ಪೂಜಾರ್ ಬ್ಯಾಂಕ್‍ನ ಕೋಟ್ಯಾಂ ತರ ರೂ.ಗಳನ್ನು ದುರುಪಯೋಗಪಡಿಸಿ ಕೊಂಡಿದ್ದಾರೆ. ಸದಸ್ಯರ ಹಣವನ್ನು ತಮ್ಮ ಉಳಿತಾಯ ಖಾತೆಗೆ ಜಮಾ ಮಾಡಿಕೊಂಡಿ ದ್ದಾರೆ. ಸದರಿ ಹಣವನ್ನು ಸಂಬಂಧಪಟ್ಟ ಸಹಕಾರ ಸಂಘಗಳಿಗೆ ಕಟ್ಟಿಸಿಕೊಳ್ಳಬೇಕು ಎಂದು ಆಗ್ರಹಿಸಿದರಲ್ಲದೆ, ಈ ಎಲ್ಲಾ ವಿಷಯಗಳನ್ನು ಸಭಾ ನಡಾವಳಿಯಲ್ಲಿ ದಾಖಲಿಸಬೇಕೆಂದು ಆಗ್ರಹಿಸಿದರು.

ರೈತರ ಪರ ನಿಂತ ಹರೀಶ್‍ಗೌಡ: ರೈತರ ಈ ಎಲ್ಲಾ ಬೇಡಿಕೆಗಳ ಪರವಾಗಿ ನಿಂತ ಬ್ಯಾಂಕಿನ ನಿರ್ದೇಶಕರೂ ಆದ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಹರೀಶ್‍ಗೌಡ ಅವರು ಮಧ್ಯ ಪ್ರವೇಶಿಸಿ, ಆಕ್ರೋಶಿತ ಸದಸ್ಯ ರನ್ನು ಸಮಾಧಾನಪಡಿಸಿದರು. ಇದೇ ವೇಳೆ ರೈತರ ಪರವಾಗಿಯೂ ಧ್ವನಿ ಎತ್ತಿದ ಅವರು, ನಮಗೆ ರೈತರ ಹಿತಾ ಸಕ್ತಿಯೇ ಮುಖ್ಯ. ಬ್ಯಾಂಕಿನಲ್ಲಿ ಅಕ್ರಮ ನಡೆದರೆ ಎಲ್ಲಾ ಸದಸ್ಯರೂ ಬಾಧಿತರಾಗುತ್ತಾರೆ. ಅಕ್ರಮ ನಡೆದಿರುವ ಬಗ್ಗೆ ನಡಾವಳಿಯಲ್ಲಿ ಉಲ್ಲೇಖ ಮಾಡಲೇಬೇಕೆಂದು ಪಟ್ಟು ಹಿಡಿದರು. ಕಡೆಗೂ ಸದಸ್ಯರ ಆಗ್ರಹದಂತೆ ಅಕ್ರಮದ ಬಗ್ಗೆ ನಡಾವಳಿಯಲ್ಲಿ ಉಲ್ಲೇಖ ಮಾಡಿಸುವ ಹರೀಶ್‍ಗೌಡರ ಪ್ರಯತ್ನ ಯಶಸ್ವಿಯಾಯಿತು.

ಹುಣಸೂರು ಶಾಖೆಯಲ್ಲಿ ನಡೆದಿರುವ ಭಾರೀ ಅವ್ಯವಹಾರದ ಬಗ್ಗೆ ಸೆ.4ರಂದು ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲೂ ತೀವ್ರ ಚರ್ಚೆ ನಡೆದಿತ್ತು. ಕೆಲ ನಿರ್ದೇಶಕರ ನಡುವೆ ವಾಕ್ಸಮರ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Translate »