ಮೈಸೂರು

ಐಎಂಎ ಬಳಿ ಆಟೋ ನಿಲ್ದಾಣ ಉದ್ಘಾಟನೆ

February 11, 2021

ಮೈಸೂರು,ಫೆ.10-ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ಬಳಿ ಲಯನ್ಸ್ ಜೀವಧಾರ ಐಎಂಎ ಆಟೋ ನಿಲ್ದಾಣವನ್ನು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾ ಲಕ ಜೀವಧಾರ ಗಿರೀಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಮೈಸೂರಿಗರು ತಮ್ಮ ಆರೋಗ್ಯವನ್ನು ಕಾಪಾಡಲು ವೈದ್ಯರ ಮಾರ್ಗದರ್ಶನ, ಔಷಧಿ ಚಿಕಿತ್ಸೆ, ಆರೋಗ್ಯ ತಪಾಸಣೆ ಮಾಡಿಸಲು ಕೆ.ಆರ್ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಮೆಡಿಕಲ್ ಕಾಲೇಜು ಸೇರಿದಂತೆ ಇರ್ವಿನ್ ರಸ್ತೆಯ ಇಲ್ಲಿನ ಸುತ್ತ ಮುತ್ತಲಿನ ಡಯೋಗ್ನಾಸ್ಟಿಕ್ ಲ್ಯಾಬ್ ಗಳಿಗೆ ಬರುತ್ತಾರೆ. ಸಣ್ಣಪುಟ್ಟ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ತಮ್ಮ ಸ್ವಂತ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆಯ ಅವಶ್ಯಕತೆ ಇತ್ತು. ಇದನ್ನು ಮನಗಂಡು ಹತ್ತಾರು ಆಟೋ ಚಾಲಕರ ತಂಡ ಮಾಡಿ ಜೀವಧಾರ ಆಟೋ ನಿಲ್ದಾಣ ಸ್ಥಾಪಿಸಲಾಗಿದೆ ಎಂದರು.

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯೆ ರೇಣುಕಾ ರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಗರ್ಭಿಣಿಯರಿಗೆ ಬಸ್, ರೈಲ್ವೇ ನಿಲ್ದಾಣಕ್ಕೆ ತೆರಳಲು ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡುತ್ತಿರುವ ಲಯನ್ಸ್ ಜೀವಧಾರ ಆಟೋಚಾಲಕರ ಸೇವಾ ಮನೋಭಾವ ಶ್ಲಾಘನೀಯವಾದುದು ಎಂದರು. ಈ ಸಂದರ್ಭದಲ್ಲಿ ನಿರ್ದೇಶಕ ರಾದ ಮುತ್ತಣ್ಣ, ಆಟೋ ಚಾಲಕರಾದ ಸೂರಜ್, ಸದಾಶಿವ, ಜಾಕಿ, ಚಂದ್ರು, ಗೋಪಾಲ್ ಇನ್ನಿತರರು ಹಾಜರಿದ್ದರು.

Translate »