ಮೈಸೂರು

ಕೆಆರ್‍ಎಸ್ ಡಿಸ್ನಿಲ್ಯಾಂಡ್ ನಿರ್ಮಾಣಕ್ಕೆ ವಿಘ್ನ!

December 31, 2018

ಮಂಡ್ಯ: ರಾಜ್ಯ ಸರ್ಕಾರದ ಮಹತ್ವಾ ಕಾಂಕ್ಷಿ ಯೋಜನೆ ಎಂದೇ ಬಿಂಬಿತವಾಗಿರುವ ಕೆಆರ್‍ಎಸ್‍ನ ಡಿಸ್ನಿಲ್ಯಾಂಡ್, ಬೃಹತ್ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಯೋಜನೆಗೀಗ ಕೇಂದ್ರ ಸರ್ಕಾರದ ಆದೇಶದಿಂದ ವಿಘ್ನ ಎದುರಾಗಿದೆ.

ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ಇದಕ್ಕೆ ಕಾರಣ ಎನ್ನಲಾಗುತ್ತಿದ್ದು, ಡಿಸ್ನಿಲ್ಯಾಂಡ್ ನಿರ್ಮಾಣ ಕಾರ್ಯ ಅನುಮಾನ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

ಕಾವೇರಿ ನದಿ ಪಾತ್ರದಲ್ಲಿ ಪ್ರವಾಸಿಗರಿಗೆ ಗೊತ್ತಿರುವುದು ರಂಗನತಿಟ್ಟು ಪಕ್ಷಿಧಾಮ ಮಾತ್ರ. ಆದರೆ ಕಾವೇರಿಗೆ ಮಂಡ್ಯ, ಮೈಸೂರು ಜಿಲ್ಲೆಯ 6 ಕಡೆ ದ್ವೀಪ ನಿರ್ಮಾಣವಾಗಿದ್ದು, ಅವೆಲ್ಲವೂ ಪಕ್ಷಿಧಾಮಗಳೇ ಆಗಿವೆ. ಇದರಲ್ಲಿ ಕೆಆರ್‍ಎಸ್ ಸಮೀಪವೇ ಇರುವ ದೇವರಾಜ ಪಕ್ಷಿಧಾಮವೂ ಕೂಡ ಒಂದು.

ಕಾವೇರಿ ಪ್ರತಿಮೆ, ಡಿಸ್ನಿಲ್ಯಾಂಡ್ ಯೋಜನೆಗೆ ಅವಕಾಶವಿಲ್ಲ…!: ವನ್ಯಜೀವಿ ವ್ಯಾಪ್ತಿ ಹಾಗೂ ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯಲ್ಲೇ ಬರುವ ಕೆಆರ್‍ಎಸ್‍ನಲ್ಲಿ ಬೃಹತ್ ಕಾವೇರಿ ಪ್ರತಿಮೆ ಹಾಗೂ ಡಿಸ್ನಿಲ್ಯಾಂಡ್ ಮಾದರಿ ಯೋಜನೆಗೆ, ಕೇಂದ್ರ ಸರ್ಕಾರ 2017ರ ನ.9ರಂದು ಹೊರಡಿಸಿರುವ ನೋಟಿಫಿಕೇಷನ್ ಅವಕಾಶವನ್ನೇ ನೀಡುವುದಿಲ್ಲ.

ಡಿಸ್ನಿಲ್ಯಾಂಡ್ ಯೋಜನೆಗೆ ಬೇಕಾಗಿರುವ ಜಮೀನು ದೇವರಾಜ, ಯಡತಿಟ್ಟು, ಪುಟ್ಟಿ ಕೊಪ್ಪಲು ಪಕ್ಷಿಧಾಮದ ವನ್ಯಜೀವಿ ವ್ಯಾಪ್ತಿಯ ಸೂಕ್ಷ್ಮ ಪರಿಸರ
ವಲಯ ವ್ಯಾಪ್ತಿಯಲ್ಲೇ ಬರುತ್ತದೆ. ಉಲ್ಲೇಖಿತ ಗೆಜೆಟ್ ನೋಟಿಫಿಕೇಷನ್ ಪ್ರಕಾರ ರಂಗನತಿಟ್ಟು ಪಕ್ಷಿಧಾಮದ ಜೊತೆಯಲ್ಲಿ ದೇವರಾಜ, ಯಡತಿಟ್ಟು, ಪುಟ್ಟಯ್ಯನಕೊಪ್ಪಲು, ಗೆಂಡೆಹೊಸಹಳ್ಳಿ ಮತ್ತು ಅರಕೆರೆ ಐಲ್ಯಾಂಡ್ ಸೇರಿದಂತೆ ಈ ಪಕ್ಷಿಧಾಮದ ವ್ಯಾಪ್ತಿಯ 26 ಗ್ರಾಮಗಳ 2804.61 ಹೆಕ್ಟೇರ್ ಜಮೀನು(6,142 ಎಕರೆ) ವನ್ಯಜೀವಿ ವಲಯ ವ್ಯಾಪ್ತಿಗೆ ಸೇರಿರುತ್ತದೆ. ಕೆಆರ್‍ಎಸ್ ಬೃಂದಾವನ ಗಾರ್ಡನ್‍ಗೆ ಹೊಂದಿಕೊಂಡಂತಿರುವ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿಗೆ ಸೇರಿದ ಗ್ರಾಮಗಳಾದ ಪುಟ್ಟಿಕೊಪ್ಪಲು, ಚೆಲುವರಸನಕೊಪ್ಪಲು, ಅಗ್ರಹಾರ, ಅರಳಕುಪ್ಪೆ, ಕರಿಮಂಟಿ, ಪಾಲಹಳ್ಳಿ, ಬೆಳಗೊಳ, ಕಾರೇಪುರ, ಕೆಂಪಲಿಂಗಾಪುರ, ಚಿಕ್ಕಯಾರಹಳ್ಳಿ, ಕಟ್ಟೇರಿ, ಹೊಂಗಳ್ಳಿ, ಯಡತಿಟ್ಟು, ಬಲಮುರಿ, ದುದ್ದ ಘಟ್ಟ ಪ್ರದೇಶವನ್ನು ವನ್ಯಜೀವಿ ವಲಯಕ್ಕೆ ಸೇರಿಸಲಾಗಿದೆ.

ದೇವರಾಜ ಯಡತಿಟ್ಟು ಮತ್ತು ಪುಟ್ಟಯ್ಯನಕೊಪ್ಪಲು ದ್ವೀಪಗಳಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆ ನಿರ್ಮಾಣ ಮಾಡಿರುವುದರಿಂದ ದೇಶ- ವಿದೇಶಗಳಿಂದ ಬರುವ ವಿವಿಧ ಜಾತಿಯ ಪಕ್ಷಿಗಳಿಗೆ ದೇವರಾಜ ಅಣೆಕಟ್ಟೆ ಆಶ್ರಯ ತಾಣವಾಗಿದೆ. ಅಲ್ಲದೇ, ದೇವರಾಜ ಪಕ್ಷಿಧಾಮಕ್ಕೆ ರಂಗನತಿಟ್ಟು ಪಕ್ಷಿಧಾಮಕ್ಕಿಂತಲೂ 3ರಿಂದ 4 ಪಟ್ಟು ಹೆಚ್ಚಿನ ಪಕ್ಷಿಗಳು ಬಂದು ನೆಲೆಸುತ್ತವೆ. ದೇವರಾಜ ಪಕ್ಷಿಧಾಮದಲ್ಲಿ ನೀರು ನಾಯಿಗಳಿದ್ದರೆ, ರಂಗನ ತಿಟ್ಟಿನಲ್ಲಿ ವಿವಿಧ ಜಾತಿಯ ಪಕ್ಷಿಗಳು ಮಾತ್ರವಲ್ಲದೆ ಮೊಸಳೆಗಳಂತಹ ಜಲಚರ ಪ್ರಾಣಿಗಳಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈಗ ದೇವರಾಜ ಪಕ್ಷಿಧಾಮವನ್ನು ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ಕ್ರಮ ತೆಗೆದುಕೊಂಡಿದ್ದು, ಉಲ್ಲೇಖದಂತೆ ನೋಟಿಫಿಕೇಷನ್ ಹೊರಡಿಸಲಾಗಿದೆ. ಅಲ್ಲದೆ, 1939ರಿಂದಲೂ ಕಾಲ ಕಾಲಕ್ಕೆ ಅನುಗುಣವಾಗಿ ರಂಗನತಿಟ್ಟು ಪಕ್ಷಿಧಾಮ ಸಂರಕ್ಷಣೆಗೆ ಗೆಜೆಟ್ ನೋಟಿಫಿಕೇಷನ್ ಅನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಹೊರಡಿಸುತ್ತಿದೆ. ಆದರೆ ರಾಜ್ಯ ಸರ್ಕಾರ, ರಂಗನತಿಟ್ಟು ಪಕ್ಷಿಧಾಮ ವ್ಯಾಪ್ತಿಯ ದೇವರಾಜ, ಯಡತಿಟ್ಟು ಮತ್ತು ಪುಟ್ಟಯ್ಯನಕೊಪ್ಪಲು ಪಕ್ಷಿಧಾಮದ ವನ್ಯಜೀವಿ ವಲಯ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯಲ್ಲಿ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಹಾಗೂ ಬೃಹತ್ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣದ ಯೋಜನೆ ಹಮ್ಮಿಕೊಂಡಿರುವುದು ನಿಯಮಗಳ ಉಲ್ಲಂಘನೆಯಾಗಲಿದೆ.

ಮುಖ್ಯ ಕಾರ್ಯದರ್ಶಿಗೆ ಪತ್ರ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಈ ಎಲ್ಲಾ ಅಂಶಗಳನ್ನು ವಿವರಿಸಿ ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಪತ್ರ ಬರೆದಿದ್ದಾರೆ. ಒಂದು ವೇಳೆ ಯೋಜನೆಗೆ ಮುಂದಾದರೆ ನ್ಯಾಯಾಂಗ ನಿಂದನೆ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮುಖ್ಯಸ್ಥರು ಅರಣ್ಯ ಪಡೆ), ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವೃತ್ತ, ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮೈಸೂರು ವಿಭಾಗ, ಮಂಡ್ಯ ಜಿಲ್ಲಾಧಿಕಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಮಂಡ್ಯ ಜಿಪಂ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಡ್ಯ ವಿಭಾಗ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೂ ರವೀಂದ್ರ ಪತ್ರದ ನಕಲು ರವಾನಿಸಿದ್ದಾರೆ.

Translate »