ಲಿಂಗಾಂಬುಧಿ ಕೆರೆಗೆ ನೂರಾರು ಪರಿಸರ  ಪ್ರಿಯರ ಭೇಟಿ; ಚಿಟ್ಟೆ, ಕೀಟ, ಪಕ್ಷಿಗಳ ವೀಕ್ಷಣೆ
ಮೈಸೂರು

ಲಿಂಗಾಂಬುಧಿ ಕೆರೆಗೆ ನೂರಾರು ಪರಿಸರ ಪ್ರಿಯರ ಭೇಟಿ; ಚಿಟ್ಟೆ, ಕೀಟ, ಪಕ್ಷಿಗಳ ವೀಕ್ಷಣೆ

December 31, 2018

ಮೈಸೂರು: `ವೈಲ್ಡ್ ಮೈಸೂರು’ ಭಾನುವಾರ ಮೈಸೂರಿನ ಲಿಂಗಾಂಬುಧಿ ಕೆರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಎ.ಶಿವ ಪ್ರಕಾಶ್ ಅವರು, ಕೆರೆ ಮತ್ತು ಸುತ್ತಲಿನ ಜೀವ ವೈವಿಧ್ಯತೆ ಕುರಿತು ಪರಿಸರ ಪ್ರಿಯರಿಗೆ ಪರಿಚಯ ಮಾಡಿಕೊಟ್ಟರು.

ಪರಿಸರ, ಪ್ರಾಣಿ, ಪಕ್ಷಿ ಪ್ರಿಯರು, ಎಂಎಸ್‍ಸಿ, ಬಿಎಸ್‍ಸಿ ಮತ್ತು ಜೀವಶಾಸ್ತ್ರ ವಿದ್ಯಾರ್ಥಿಗಳು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಬೈನಾಕ್ಯುಲರ್‍ನೊಂದಿಗೆ ಪಾಲ್ಗೊಂಡು ಪರಿಸರ, ಪಕ್ಷಿ, ಚಿಟ್ಟೆಗಳನ್ನು ವೀಕ್ಷಿಸಿ ಆನಂ ದಿಸಿದರು. ಲಿಂಗಾಂಬುಧಿ ಉದ್ಯಾನ ಮತ್ತು ಕೆರೆಯನ್ನು ಒಂದು ಸುತ್ತು ಸುತ್ತಿದ ಬಳಿಕ ಚಿಟ್ಟೆ, ಕೀಟ, ಪಕ್ಷಿಗಳ ಬಗ್ಗೆ ಆಸ ಕ್ತರು ಕೇಳಿದ ಪ್ರಶ್ನೆಗಳಿಗೆ ಶಿವಪ್ರಕಾಶ್ ಅವರು ನಗು ನಗುತ್ತಲೇ ವಿವರ ನೀಡುತ್ತಾ ಹೋದರು.

ಉದ್ಯಾನವನ ಮತ್ತು ಕೆರೆಯ ದಂಡೆಯಲ್ಲಿ ಬೆಳೆದು ನಿಂತಿದ್ದ ಶ್ರೀಗಂಧ, ಅರಳಿ, ಗರಿಕೆ, ಬನ್ನಿ, ದರ್ಬೆ, ಉತ್ತರಾಣಿ, ಮುತ್ತುಗ, ಬೆಟ್ಟ ನೆಲ್ಲಿ, ಕಗ್ಗಲಿ, ಬಿಳಿ ಎಕ್ಕ ಹೀಗೆ ನಾನಾ ವಿಧದ ಸಸ್ಯಗಳನ್ನು ರಾಶಿ, ನಕ್ಷತ್ರಗಳ ಹೆಸರಿ ನಲ್ಲಿ ಹಿರಿಯರು ಉಳಿಸಿಕೊಂಡು ಬಂದಿ ದ್ದಾರೆ. ಹಾಗಾಗಿ ಇವೆಲ್ಲವೂ ಇಂದು ಉಳಿದುಕೊಂಡಿವೆ.

ಗೂಡು ಕಟ್ಟುವ ಜೇನು, ಗೆದ್ದಲು, ಕಡಜ, ಇರುವೆ, ಪಕ್ಷಿಗಳು ನಿಸರ್ಗದ ಶಿಲ್ಪಿಗಳು. ಅವುಗಳ ಇರುವಿಕೆಗೆ ಅಡ್ಡಿ ಮಾಡಬಾರದು ಎಂದು ಅರಿವು ಮೂಡಿಸಲೆತ್ನಿಸಿದರು. ಕೆಲ ಚಿಟ್ಟೆ, ಕೀಟಗಳು ಜೈವಿಕ ಸಮತೋಲನಕ್ಕೆ ಸಹಾಯಕ ವಾಗುತ್ತವೆ. ಅವುಗಳಲ್ಲಿ ವಾಟೆ ಹುಳುವೂ ಒಂದು. ತನಗೆ ಅಪಾಯ ಬಂದಾಗ ದುರ್ವಾಸನೆಯುಕ್ತ ದ್ರವವನ್ನು ತಮ್ಮ ಕಾಲುಗಳ ಸಂದುಗಳಿಂದ ಹೊರ ಹಾಕಿ, ತನ್ನನ್ನು ಬೇರೆಯ ಹುಳುಗಳು ತಿನ್ನದಂತೆ, ದೂರ ಇರುವಂತೆ ಮಾಡಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಎಂದರು.

ಲಿಂಗಾಂಬುದಿ ಕೆರೆ ಕುರಿತು ವಿಶ್ಲೇಷಿಸಿದ ಎ.ಶಿವ ಪ್ರಕಾಶ್, ಸುಂದರ ತಾಣವಾಗಿರುವ ಲಿಂಗಾಂಬುದಿ ಕೆರೆ 190 ವರ್ಷ ಹಳೆಯದು. 1828ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಶ್ರೀಮತಿ ಲಿಂಗಮ್ಮಣ್ಣಿ ಅವರ ನೆನಪಿಗಾಗಿ ಕಟ್ಟಿದರು. 1986-87ರಲ್ಲಿ ಇಲ್ಲಿ ಒಂದೆರಡು ಮನೆಗಳು ಮಾತ್ರ ಇದ್ದವು. ಊರಾಚೆ ಇದ್ದ ಕರೆ. ಕೆÉರೆ ಉಳಿಸಿಕೊಳ್ಳಲು 3 ಹಂತದ ಹೋರಾಟ ನಡೆದಿದೆ. ಇದೇ ಜಾಗದಲ್ಲಿ ರಿಂಗ್‍ರಸ್ತೆ ನಿರ್ಮಿಸಲು ಮುಂದಾಗಿದ್ದರು. ಬಳಿಕ ಹುಡ್ಕೊದವರು ಮನೆಗಳನ್ನು ನಿರ್ಮಿಸಲು ಮುಂದಾಗಿದ್ದರು. ಆಗ ಮೈಸೂರು ಗ್ರಾಹಕರ ಪರಿಷತ್, ಸ್ಥಳೀಯ ಜನ, ಪರಿಸರವಾದಿಗಳ ಹೋರಾಟದಿಂದಾಗಿ ಕೆರೆ ಉಳಿಯುವಂತಾಯಿತು ಎಂದರು. ಗಿರಿಜಾ, ಶಿವಶಂಕರ್, ಸುಮಾ, ವೈಶಾಕ್, ಪ್ರಭು, ಶೈಲಜೇಶ್, ಡಿ.ಎಚ್.ವಿನುತಾ ಸೇರಿದಂತೆ `ಮೈಸೂರು ನೇಚರ್ ವಾಕರ್ಸ್’ ತಂಡದ ಸದಸ್ಯರು, ನೂರಾರು ಪರಿಸರ ಪ್ರಿಯರು ಭಾಗವಹಿಸಿದ್ದರು.

Translate »