ಎನ್‍ಐಇ ಕಾಲೇಜನ್ನು ವಿಶ್ವವಿದ್ಯಾನಿಲಯ ಮಾಡುವ ಯೋಜನೆ
ಮೈಸೂರು

ಎನ್‍ಐಇ ಕಾಲೇಜನ್ನು ವಿಶ್ವವಿದ್ಯಾನಿಲಯ ಮಾಡುವ ಯೋಜನೆ

December 31, 2018

ಮೈಸೂರು: ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರೂ ಹಾಗೂ ಎನ್‍ಐಇ ಸಂಸ್ಥೆಯ ನಿರ್ದೇಶಕರೂ ಆಗಿರುವ ಎನ್.ಆರ್.ನಾರಾಯಣ ಮೂರ್ತಿ ಭಾನುವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ, ಎನ್‍ಐಇ ಸಂಸ್ಥೆಯನ್ನು ವಿಶ್ವವಿದ್ಯಾನಿಲಯವಾಗಿ ಮಾರ್ಪಡಿಸುವ ಸಂಬಂಧ ಗಹನವಾದ ಚರ್ಚೆ ನಡೆಸಿದರು.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಆವರಣ ದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ಕಚೇರಿಗೆ ಭಾನುವಾರ ಬೆಳಿಗ್ಗೆ ನಾರಾಯಣ ಮೂರ್ತಿ ಅವರು ಎನ್‍ಐಇ (ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್) ಸಂಸ್ಥೆಯ ನಿರ್ದೇಶಕ ಪ್ರಸನ್ನ ಅವರೊಂದಿಗೆ ಆಗಮಿಸಿ, ಸಚಿವರೊಂದಿಗೆ ಕೆಲಕಾಲ ಚರ್ಚಿಸಿದರು. ಮೂವರು ಚರ್ಚೆ ನಡೆಸುತ್ತಿದ್ದ ವೇಳೆ ಬೇರಾರಿಗೂ ಕಚೇರಿಗೆ ಪ್ರವೇಶಿಸಲು ನಿರಾಕರಿಸಲಾಗಿತ್ತು.

ಬಳಿಕ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಸಚಿವರು, ಮೈಸೂರಿನಲ್ಲಿರುವ ಎನ್‍ಐಇ ಸಂಸ್ಥೆಯನ್ನು ವಿಶ್ವವಿದ್ಯಾನಿಲಯವನ್ನಾಗಿ ಮಾರ್ಪಡಿಸುವುದಕ್ಕೆ ಸಂಬಂಧಿಸಿ ದಂತೆ ಚರ್ಚಿಸಲು ನಾರಾಯಣಮೂರ್ತಿ ಅವರು ನನ್ನನ್ನು ಭೇಟಿಯಾಗಿದ್ದರು. ಎನ್‍ಐಇ ಸಂಸ್ಥೆಯನ್ನು ವಿಶ್ವವಿದ್ಯಾನಿಲಯವನ್ನಾಗಿ ಮಾಡುವುದಕ್ಕೆ ಸಂಬಂಧಿಸಿದಂತೆ ನನ್ನ ಕಚೇರಿಗೆ ಪ್ರಸ್ತಾವನೆಯನ್ನು ಈ ಹಿಂದೆಯೇ ಸಲ್ಲಿಸಿದ್ದರು. ಇಂದು ಪ್ರಸ್ತಾವನೆ ಕುರಿತು ವಿವರ ನೀಡಿದರು. ಇದಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದ್ದೇನೆ. ಅವರು ನೀಡಿರುವ ಪ್ರಸ್ತಾವನೆ ಅಧಿವೇಶನದಲ್ಲಿ ಚರ್ಚೆಯಾಗಬೇಕಿದೆ. ನಂತರವಷ್ಟೇ ವಿಶ್ವವಿದ್ಯಾನಿಲಯವಾಗಿ ಮಾಡಲು ಸರ್ಕಾರ ಅನುಮತಿ ನೀಡಲಿದೆ ಎಂದರು.

ಇನ್‍ಫೋಸಿಸ್ ಸಂಸ್ಥೆಯಲ್ಲಿನ ಸಂಪನ್ಮೂಲವನ್ನು ಇಂಜಿನಿಯರ್ ವಿದ್ಯಾರ್ಥಿಗಳಿಗೆ ಒದಗಿಸುವ ಮೂಲಕ ಅತ್ಯುತ್ತಮ ಇಂಜಿನಿಯರ್‍ಗಳನ್ನು ರೂಪಿಸಲು ನಾರಾಯಣ ಮೂರ್ತಿ ಅವರು ಉದ್ದೇಶಿಸಿದ್ದು, ಇದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಹಿನ್ನೆಲೆ ಯಲ್ಲಿ ಅವರಿಗೆ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದು ಸಚಿವರು ಹೇಳಿದರು.

Translate »