ದೇಶದ ಪ್ರಗತಿಗೆ   ಸಂಕಲ್ಪ ಮಾಡೋಣ
ಮೈಸೂರು

ದೇಶದ ಪ್ರಗತಿಗೆ ಸಂಕಲ್ಪ ಮಾಡೋಣ

December 31, 2018

ನವದೆಹಲಿ: ಹಳೆಯ 2018 ವರ್ಷ ಅಂತ್ಯಗೊಳ್ಳು ತ್ತಿದ್ದು, 2019ನೇ ಹೊಸ ವರ್ಷ ಆರಂಭವಾಗುತ್ತಿದೆ. ಹೊಸ ವರ್ಷದಲ್ಲಿ ದೇಶ ಹಾಗೂ ಸಮಾಜದ ಪ್ರಗತಿಗೆ ಕೊಡುಗೆ ನೀಡುತ್ತೇವೆಂದು ಸಂಕಲ್ಪ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಕರೆ ನೀಡಿದರು.

ವರ್ಷದ ಕೊನೆಯ `ಮನ್ ಕಿ ಬಾತ್’ನಲ್ಲಿ ದೇಶದ ಜನತೆ ಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಕಳೆದ ವರ್ಷದ ಕುರಿತು ಚರ್ಚೆಗಳು ನಡೆಯುವುದು ಸಾಮಾನ್ಯ. ಹೊಸ ವರ್ಷ ಬರುತ್ತಿದ್ದು, ಸಂಕಲ್ಪ ಮಾಡುವ ಸಮಯ ಕೂಡ ಹತ್ತಿರ ಬಂದಿದೆ. ನಮ್ಮ ಜೀವನವನ್ನು ನಾವು ಬದಲಿಸಿ ಕೊಳ್ಳಬೇಕು. ದೇಶ ಹಾಗೂ ಸಮಾಜದ ಪ್ರಗತಿಗಾಗಿ ಕೊಡುಗೆ ನೀಡುತ್ತೇವೆ ಎಂದು ಸಂಕಲ್ಪ ಮಾಡಬೇಕು ಎಂದರು.

ಧನಾತ್ಮಕ ಚಿಂತನೆಗಳು: ಋಣಾತ್ಮಕ ವಿಚಾರಗಳು ಹೆಚ್ಚು ಪ್ರಚಾರಗೊಳ್ಳುತ್ತವೆ ಮತ್ತು ಬೇಗನೆ ಹರಡುತ್ತವೆ. ಅದರಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆಯಾದ್ದರಿಂದ ನಾವು ಋಣಾ ತ್ಮಕ ವಿಚಾರಗಳನ್ನು ಹರಡುವುದು ಬೇಡ. ಯಾವುದೇ ಕೆಟ್ಟ ವಿಚಾರ ಬೇಗನೆ ವೈರಲ್ ಆಗುತ್ತೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ. ಅದರ ಬದಲು ಧನಾತ್ಮಕವಾದ ಉತ್ತಮ ವಿಚಾರಗಳನ್ನು ಹೆಚ್ಚು ಹರಡೋಣ. ಜನರಿಗೆ ಧನಾತ್ಮಕ ಚಿಂತನೆಯನ್ನು ಪಸರಿಸೋಣ ಎಂದು ಕರೆ ನೀಡಿದರು.

ಇದೇ ವೇಳೆ ಸರ್ಕಾರದ ಸಾಧನೆಗಳ ಕುರಿತಂತೆ ಮಾತ ನಾಡಿದ ಮೋದಿ, ದೇಶ ಇಂದು ಪ್ರಗತಿಯತ್ತ ಸಾಗಲು ಜನತೆಯೇ ಪ್ರಮುಖ ಕಾರಣ. 2018ರಲ್ಲಿ ವಿಶ್ವದ ಅತೀ ದೊಡ್ಡ ಆರೋಗ್ಯ ಯೋಜನೆ `ಆಯುಷ್ಮಾನ್ ಭಾರತ್’ ಯೋಜನೆ ಯನ್ನು ಜಾರಿಗೆ ತರಲಾಗಿದೆ. ಸ್ಟ್ಯಾಚ್ಯು ಆಫ್ ಯೂನಿಟಿ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿ ಧನಾತ್ಮಕವಾಗಿದೆ. ಉತ್ತಮ ವಾಗಿ ಸಾಗುತ್ತಿದೆ. ನಮ್ಮೆಲ್ಲರ ಪರಿಶ್ರಮದಿಂದ ದೇಶ ಪ್ರಗತಿ ಕಾಣುತ್ತಿದೆ. ಹೀಗಾಗಿ 2019ರಲ್ಲೂ ಅದನ್ನೇ ನಿರೀಕ್ಷಿ ಸೋಣ. ದೇಶದ ಪ್ರಗತಿಗೆ ಹೆಗಲು ಕೊಡೋಣ. ಮತ್ತಷ್ಟು ಸಾಧನೆಗೈಯ್ಯಲು ನಿಮ್ಮ ಸಹಕಾರ ಸದಾ ಕಾಲ ಇರಲಿ ಎಂದು ಮನವಿ ಮಾಡಿದರು. ಭಾರತೀಯ ಅಥ್ಲೀಟ್ ಗಳನ್ನು ಕೊಂಡಾಡಿರುವ ಪ್ರಧಾನಿ, ಏಷ್ಯನ್ ಗೇಮ್ಸ್‍ನಲ್ಲಿ ಭಾರತ ಸಾಕಷ್ಟು ಪದಕಗಳನ್ನು ಗೆದ್ದುಕೊಂಡಿದೆ. ಪ್ಯಾರಾ ಏಷ್ಯನ್ ಗೇಮ್ಸ್‍ನಲ್ಲೂ ಭಾರತ ಉತ್ತಮ ಪ್ರದರ್ಶನವನ್ನು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

Translate »