ಮೈಸೂರಿಗರ ಮನ ಸೆಳೆದ   ಹಸಿರು ಸಂತೆ-ಚಿತ್ರ ಸಂತೆ
ಮೈಸೂರು

ಮೈಸೂರಿಗರ ಮನ ಸೆಳೆದ ಹಸಿರು ಸಂತೆ-ಚಿತ್ರ ಸಂತೆ

December 31, 2018

ಮೈಸೂರು: ಹೊಸ ವರ್ಷದ ಸಂಭ್ರಮಾಚರಣೆ ಹಾಗೂ ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ನಡೆದ ಹಸಿರು ಹಾಗೂ ಚಿತ್ರ ಸಂತೆ ನೂರಾರು ಗ್ರಾಹಕರ ಮನ ಸೆಳೆಯಿತು.

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಇದೇ ಮೊದಲ ಬಾರಿಗೆ ಓಪನ್ ಸ್ಟ್ರೀಟ್ ಫೆಸ್ಟಿ ವಲ್ ಮಾದರಿಯಲ್ಲಿ ಆಯೋಜಿಸಿದ್ದ ಹಸಿರು ಸಂತೆ ಹಾಗೂ ಚಿತ್ರ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇಂದು ಬೆಳಗ್ಗೆ 9.30ಕ್ಕೆ ಆರಂಭ ವಾದ ಸಂತೆ ಸಂಜೆ 5 ಗಂಟೆವರೆಗೂ ನಡೆಯಿತು. ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಪ್ರಾಚ್ಯ ವಸ್ತು ಸಂಶೋಧನಾಲಯ (ಓರಿಯಂಟಲ್ ರಿಸರ್ಚ್ ಸೆಂಟರ್)ದ ಬಳಿಯಿಂದ ಮಹಾ ರಾಜ ಕಾಲೇಜಿನ ವಿದ್ಯಾರ್ಥಿನಿಲಯದವರೆಗೂ ರಸ್ತೆಯ ಎರಡೂ ಬದಿಯಲ್ಲಿ ಒಂದು ಕಡೆ ಹಸಿರು ಸಂತೆ, ಮತ್ತೊಂದು ಬದಿಯಲ್ಲಿ ಚಿತ್ರ ಸಂತೆ ಆಯೋಜಿಸಲಾಗಿತ್ತು. ಚಿತ್ರ ಸಂತೆಗಿಂತ ಹಸಿರು ಸಂತೆಗೆ ಬೇಡಿಕೆ ಕಂಡು ಬಂದಿತು.

ಹಸಿರು ಸಂತೆಯಲ್ಲಿ: ಮೈಸೂರು, ಮಂಡ್ಯ, ಚಾಮ ರಾಜನಗರ, ಕೊಡಗು ಸೇರಿದಂತೆ ವಿವಿಧ ಜಿಲ್ಲೆ ಗಳಿಂದ ಸಾವಯವ ಪದ್ಧತಿಯಲ್ಲಿ ರೈತರ ಬೆಳೆದ ವಿವಿಧ ದವಸ ಧಾನ್ಯ, ಹಣ್ಣು-ತರಕಾರಿ, ಸೊಪ್ಪು, ಸಿರಿಧಾನ್ಯ ಸೇರಿದಂತೆ ವಿವಿಧ ಪದಾರ್ಥಗಳನ್ನು ಹಸಿರು ಸಂತೆಗೆ ತಂದು ಗ್ರಾಹಕರಿಗೆ ಮಾರಾಟ ಮಾಡಿದರು.

ಸಂತೆಯಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆದ ರಾಗಿ, ಭತ್ತ, ಅವರೇಕಾಳು, ಅವರೇ ಕಾಯಿ, ಹಲಸಂದೆ, ಬೀನಿಸ್, ಪರಂಗಿಹಣ್ಣು, ಬಾಳೆಹಣ್ಣು, ಕುಂಬಳಕಾಯಿ, ಸೌತೇಕಾಯಿ, ಎಳನೀರು, ಹೂಮಾಲೆ ಗೆಣಸು, ಕಾಡುಗೆಣಸು, ಮರಗೆಣಸು, ಸಿಹಿಗೆಣಸು, ಗಾಂಧರಿ ಸೊಪ್ಪು, ನಂಜುಬೀಜ, ಅರಿಗೆಂಬಿಜೆ, ದೋಂದೆ ಸೊಪ್ಪು, ಬೆಳ್ಳೆ ಸೊಪ್ಪು, ಗೋಣಿಸೊಪ್ಪು, ಕುಂಬಳ ಸೊಪ್ಪು, ನವಣೆ, ಸಾಮೆ ಸೇರಿದಂತೆ ಇನ್ನಿತರ ಔಷಧೀಯ ಗುಣವುಳ್ಳ ಪದಾರ್ಥಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು. ಇದರೊಂದಿಗೆ ಗಾಣದಲ್ಲಿ ತಯಾರಿಸಿ ಹರಳೆಣ್ಣೆ, ಕೊಬ್ಬರಿಯೆಣ್ಣೆ, ಕಡಲೆಕಾಯಿ ಎಣ್ಣೆ, ನಾಟಿ ಹಸುವಿನ ಬೆಣ್ಣೆ, ತುಪ್ಪ, ಕಪ್ಪು ಬೆಲ್ಲ, ವಿವಿಧ ಪಾನೀಯ, ಬೆಟ್ಟದ ನಲ್ಲಿಕಾಯಿ, ಸಾಂಬರ್ ಪೌಡರ್, ಪುಳಿಯೊಗರೆ ಹಾಗೂ ವಾಂಗಿಬಾತ್ ಪುಡಿ ಸೇರಿದಂತೆ ಇನ್ನಿತರ ಮನೆಯಲ್ಲಿ ಮಾಡಿದ ತಿನಿಸುಗಳು ಸಂತೆಯಲ್ಲಿ ದೊರೆಯುತ್ತಿತ್ತು. ಅಲ್ಲದೆ, ಉತ್ತರ ಕರ್ನಾಟಕದ ಮಂಡಕ್ಕಿ, ಗಿರ್‍ಮಿಟ್, ಪಾಯಸವೂ ಗ್ರಾಹಕರ ನಾಲಿಗೆ ತಣಿಸಿದವು.

ಚಿತ್ರಸಂತೆಯಲ್ಲಿ: ಮಾಗಿ ಉತ್ಸವದ ಚಿತ್ರಸಂತೆಯಲ್ಲಿ ಕಾವಾ, ರವಿವರ್ಮ, ಶ್ರೀಕಲಾನಿಕೇತನ ಶಾಲೆಯ ಹಲವಾರು ಕಲಾ ವಿದ್ಯಾರ್ಥಿಗಳು ತಾವು ಚಿತ್ರಿಸಿದ, ರಚಿಸಿದ ವಿವಿಧ ಮಾದರಿಯ ಚಿತ್ರಕಲೆಯನ್ನು ಪ್ರದರ್ಶನಕ್ಕಿಟ್ಟಿದ್ದರು. ವಾಟರ್ ಪೇಂಟ್, ಕ್ಯಾನ್‍ವಾಸ್ ಮೇಲೆ ಬರೆದ ಚಿತ್ರ, ಕುಸುರಿ ಕಲೆ, ತ್ರಿಡಿ ಸೇರಿದಂತೆ ಬಗೆ ಬಗೆಯ ಚಿತ್ರಗಳನ್ನು ಸಂತೆಯಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕಿಟ್ಟಿದ್ದರು.

ಸ್ಥಳದಲ್ಲಿಯೇ ಮುಖ ಚಹರೆ ಬರೆಯುವುದು, ಮುಖದ ಮೇಲೆ ವಿವಿಧ ಚಿತ್ರವನ್ನು ಬರೆಯುವ ಕಲಾವಿದರು ತಮ್ಮ ಕೈ ಚಳಕದಿಂದ ಗಮನ ಸೆಳೆದರು. ಅಲ್ಲದೆ, ಕಲಾವಿದ ಶಿವರಂಜನ್ ರಸ್ತೆಯ ಮೇಲೆ ತ್ರಿಡಿ ಕಾಗೆ ಚಿತ್ರ ಬರೆದಿದ್ದು, ಸಂತೆಗೆ ಬಂದವರ ಆಕರ್ಷಣೀಯ ಕೇಂದ್ರ ಬಿಂದುವಾಗಿತ್ತು. ಮಕ್ಕಳು ತ್ರಿಡಿ ಕಾಗೆ ಚಿತ್ರದ ಮುಂದೆ ಕುಳಿತು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

ಸಂತೆಯಿಂದ ದೂರವುಳಿದ ಯುವ ಪಡೆ: ನಾಡಹಬ್ಬ ದಸರೆಯ ವೇಳೆ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ನಡೆದ ಓಪನ್ ಸ್ಟ್ರೀಟ್ ಫೆಸ್ಟಿವಲ್‍ಗೆ ಯುವ ಸಮುಹ ಸಾಗರೋಪಾದಿಯಲ್ಲಿ ಹರಿದು ಬಂದಿತ್ತು. ಮಿತಿ ಮೀರಿದ ಸಂಖ್ಯೆಯಲ್ಲಿ ಬಂದಿದ್ದ ಜನ ಸಮೂಹ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಇಂದು ಓಪನ್ ಸ್ಟ್ರೀಟ್ ಫೆಸ್ಟಿವಲ್ ಮಾದರಿಯಲ್ಲಿಯೇ ನಡೆದ ಹಸಿರು ಹಾಗೂ ಚಿತ್ರ ಸಂತೆಯಿಂದ ಯುವ ಸಮೂಹ ಅಂತರ ಕಾಯ್ದುಕೊಂಡಂತೆ ಭಾಸವಾಯಿತು. ಬೆಳಗ್ಗಿನಿಂದ ಸಂಜೆವರೆಗೆ ಸಂತೆಗೆ ಬಂದ ಜನರಲ್ಲಿ ಬಹುತೇಕ ಮಂದಿ ಹಿರಿಯ ನಾಗರೀಕರು, ಮಹಿಳೆಯರು ಹಾಗೂ ವಯಸ್ಕರೇ ಆಗಿದ್ದರು. ಯುವಕರು ಸಂತೆಗೆ ಬಂದಿದ್ದಾರಾದರೂ ವಯಸ್ಕರ ಸಂಖ್ಯೆ ಮುಂದೆ ಗೌಣವಾದರು.

ಬಿಗಿ ಭದ್ರತೆ: ದಸರಾ ಮಹೋತ್ಸವದ ವೇಳೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಅಹಿತಕರ ಘಟನೆ ನಡೆದಿದೆ ಎಂದು ಕೆಲವರು ಆರೋಪಿಸಿದ್ದರು. ಇದರಿಂದ ಇಂದು ಪೊಲೀ ಸರು ಎಚ್ಚೆತ್ತುಕೊಂಡಿದ್ದರು. ಯಾವುದೇ ಸಂದರ್ಭದಲ್ಲಿಯೂ ನೂಕುನುಗ್ಗಲು ಉಂಟಾಗ ದಂತೆ ಮುನ್ನಚ್ಚರಿಕೆ ಕೈಗೊಳ್ಳಲಾಗಿತ್ತು. ಅಲ್ಲದೆ ರಸ್ತೆಯ ಮದ್ಯಭಾಗದಲ್ಲಿರುವ ವಿಭಜಕದ ಪಾರ್ಕ್‍ನಲ್ಲಿ ರುವ ಮರಗಳಿಗೆ ಸುಮಾರು 30ಕ್ಕೂ ಸಿಸಿ ಹೆಚ್ಚು ಕ್ಯಾಮರಾ ಅಳವಡಿಸ ಲಾಗಿತ್ತು. ಮೊಬೈಲ್ ಕಮಾಂಡೋ ಪಡೆಯ ವಾಹನದಲ್ಲಿನ ಸಿಸಿ ಕ್ಯಾಮರಾಗಳಲ್ಲಿಯೂ ಸಂತೆಗೆ ಬಂದವರ ಮೇಲೆ ಹದ್ದಿನ ಕಣ್ಣಿತ್ತು. ಮೊಬೈಲ್ ಕಮಾಂಡೋ ಪಡೆಯ ಸಿಬ್ಬಂದಿ ಡ್ರೋನ್ ಕ್ಯಾಮರಾ ಮೂಲಕವೂ ಸಂತೆಗೆ ಬಂದವರ ಚಲನ ವಲನವನ್ನು ಚಿತ್ರೀಕರಿಸುತ್ತಿದ್ದರು. ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬಹುದು ಎಂದು ನಿರೀಕ್ಷಿಸಿ ಪೊಲೀಸ್ ಇಲಾಖೆ ಜಿಲ್ಲಾಡಳಿ ತದ ಸೂಚನೆ ಮೇರೆಗೆ ಹೆಜ್ಜೆ ಹೆಜ್ಜೆಗೂ ಪಹರೆಗಾಗಿ ಪೊಲೀಸರನ್ನು ನಿಯೋಜಿಸಿದ್ದರು. ಸಿಸಿಬಿ ಪೊಲೀಸರು ಮಫ್ತಿಯಲ್ಲಿ ಸಂತೆಯಲ್ಲಿ ಓಡಾಡುತ್ತಾ, ಸಂತೆಯಲ್ಲಿ ಅನುಮಾನಾ ಸ್ಪದವಾಗಿ ಯಾರಾದರು ಕಂಡಬಂದರೆ, ಅಂತವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

Translate »