ಮೈಸೂರು

ಗೂಗಲ್ ಗುರುವಿನ ಸ್ಥಾನ ತುಂಬದು

August 29, 2018

ಮೈಸೂರು: ವಿಶ್ವಕ್ಕೇ ಮಾದರಿಯಾಗಿದ್ದ ಗುರುಕುಲ ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿ ಮರು ಸ್ಥಾಪಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲೆ, ಸುತ್ತೂರು ಶ್ರೀಕ್ಷೇತ್ರ ದಲ್ಲಿ ಇಂದು ಆಯೋಜಿಸಿದ್ದ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇ ಜಯಂತಿ ಮಹೋ ತ್ಸವ ಹಾಗೂ ಶ್ರೀ ಚೆನ್ನವೀರ ದೇಶಿಕೇಂದ್ರ ಗುರುಕುಲ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಗುರು ಕುಲ ಮಾದರಿ ಶಿಕ್ಷಣ ಹಾಸುಹೊಕ್ಕಾಗಿತ್ತು. ಸಂಸ್ಕೃತಿ, ಸಂಸ್ಕಾರ, ಪರಂಪರೆ, ಸಂಪ್ರ ದಾಯಗಳು ಸಮೃದ್ಧಿಯಾಗಿದ್ದರಿಂದ ಹಿರಿ ಯರಿಗೆ ಗೌರವ, ಗುರುಗಳಿಗೆ ವಂದನೆ ಗಳು ಪ್ರತಿಯೊಬ್ಬ ಶಿಷ್ಯನಲ್ಲಿ ಮೂಡುತ್ತಿದ್ದವು. ಅದಕ್ಕಾಗಿಯೇ ಭಾರತದ ಗುರುಕುಲ ಶಿಕ್ಷಣ ಪದ್ಧತಿ ಇಡೀ ವಿಶ್ವಕ್ಕೇ ಮಾದರಿಯಾಗಿತ್ತು ಎಂದರು. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿ ಬಂದು ನಮ್ಮ ಹಣ ಮತ್ತು ಮನಸ್ಸನ್ನು ಲೂಟಿ ಮಾಡಿವೆ (ಮಾಡುತ್ತಿವೆ). ಭಾರತದ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದಾ ದರೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದು ವಿಷಾದನೀಯ ಎಂದು ವೆಂಕಯ್ಯ ನಾಯ್ಡು ಅವರು ಇದೇ ಸಂದರ್ಭ ನುಡಿದರು.ಆದರೆ ಸುತ್ತೂರು ಮಹಾ ಸಂಸ್ಥಾನವು ಗುರುಕುಲ ಮಾದರಿಯ ಶಿಕ್ಷಣವನ್ನು ಮುಂದುವರಿಸಿಕೊಂಡು ಬಂದು ‘ವಿಶ್ವ ಗುರು’ ಎಂಬ ಕಲ್ಪನೆಯನ್ನು ಜೀವಂತವಾಗಿರಿಸಿ ದೆಯಲ್ಲದೆ, ನಮ್ಮ ಭವ್ಯ ಸಂಸ್ಕೃತಿಯನ್ನು ರಕ್ಷಿಸಿದೆ. ಅದೇ ಜೆಎಸ್‍ಎಸ್ ಮಠದ ಮರೆಯ ಲಾರದ ಕೊಡುಗೆ ಎಂದರು.

ನಮ್ಮ ಮಠಮಾನ್ಯಗಳು, ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳು, ಶಿಕ್ಷಣ ತಜ್ಞರು ವಿಶ್ವಕ್ಕೇ ಮಾದರಿಯಾದ ಗುರುಕುಲ ಮಾದರಿ ಶಿಕ್ಷಣವನ್ನು ಭಾರತದಲ್ಲಿ ಮರು ಸ್ಥಾಪಿಸಲು ಮುಂದಾದರೆ ಮಾತ್ರ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ ಎಂದು ಉಪರಾಷ್ಟ್ರಪತಿಗಳು ಅಭಿಪ್ರಾಯಪಟ್ಟರು.

ಶಿಕ್ಷಣದ ಜೊತೆಗೆ ಆರೋಗ್ಯ, ಗ್ರಾಮೀಣಾಭಿವೃದ್ಧಿ, ವಸತಿನಿಲಯಗಳು ಸೇರಿದಂತೆ ಹಲವು ಜನಪರ, ಬಡವರ ಹಾಗೂ ಅಗತ್ಯ ಉಳ್ಳ ಸಾಮಾನ್ಯ ಜನರಿಗೆ ಮೂಲ ಸೌಲಭ್ಯ ಒದಗಿಸುವ ಮೂಲಕ ಸುತ್ತೂರು ಮಹಾಸಂಸ್ಥಾನವು ನಗರ ಮತ್ತು ಗ್ರಾಮೀಣ ಪ್ರದೇಶದ ಸೇತುವೆಯಂತೆ ಕೆಲಸ ಮಾಡಿ ದೇಶ ಕಟ್ಟುವ ಸತ್ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಇದೇ ವೇಳೆ ಮುಕ್ತ ಕಂಠದಿಂದ ಪ್ರಶಂಸಿಸಿದರು. ಕಾಯಕವೇ ಕೈಲಾಸ, ಮಾನವ ಸೇವೆ-ಮಾಧವ ಸೇವೆ ಕಲ್ಪನೆಯೊಂದಿಗೆ ಸಂಸ್ಥೆಯ ದೇಶದಲ್ಲಷ್ಟೇ ಅಲ್ಲದೇ ವಿಶ್ವದಾದ್ಯಂತ ವಿವಿಧತೆಯಲ್ಲಿ ಏಕತೆ ಸಾರುತ್ತಿದೆ. ಕೃಷಿಕರಿಗೆ, ಕಾರ್ಮಿಕರಿಗೆ, ಬಡವರ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದೆ ಎಂದ ವೆಂಕಯ್ಯನಾಯ್ಡು, ಆಧ್ಯಾತ್ಮದ ಮೂಲಕ ಸರ್ವ ಜನರ ಹಿತ ಕಾಯುತ್ತಿರುವುದು ಇಡೀ ದೇಶಕ್ಕೇ ಮಾದರಿ ಎಂದರು.

ಮಾಜಿ ಪ್ರಧಾನಿ ದೇವೇಗೌಡರ ಗುಣಗಾನ

ಮೈಸೂರು: ಪ್ರಧಾನಿಯಂತಹ ಅತ್ಯುನ್ನತ ಸ್ಥಾನಕ್ಕೇರಿದ್ದರೂ ಹೆಚ್.ಡಿ.ದೇವೇಗೌಡರು ಜನ್ಮಭೂಮಿಯನ್ನು ಮರೆಯಲಿಲ್ಲ ಎಂದು ಭಾರತದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಇಂದಿಲ್ಲಿ ಬಣ್ಣನೆ ಮಾಡಿದರು. ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಾತನಾಡಿದ ಅವರು, ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಜನ್ಮ ನೀಡಿದ ಭೂಮಿಯನ್ನು ಮರೆಯಬಾರದು ಎಂದ ಅವರು, ಭಾರತ ಕಂಡ ಅಪರೂಪದ ರಾಜಕಾರಣಿ ಹೆಚ್.ಡಿ. ದೇವೇಗೌಡರು ದೇಶದ ಪ್ರಧಾನಮಂತ್ರಿ ಹುದ್ದೆಗೇರಿದರೂ ತಾವು ಹುಟ್ಟಿದ ಹಾಸನ ಜಿಲ್ಲೆಯನ್ನು ಮರೆತಿಲ್ಲ. ಈಗಲೂ ಜನ್ಮ ಭೂಮಿ ಬಗ್ಗೆ ಪ್ರೀತಿ ಇರಿಸಿಕೊಂಡಿದ್ದಾರೆ. ಜನ್ಮವಿತ್ತ ನೆಲದ ಋಣ ತೀರಿಸಬೇಕೆಂದು ನಿರಂತರ ಪ್ರಯತ್ನಿಸುತ್ತಿದ್ದಾರೆ. ನಮಗೆ ಜನ್ಮ ನೀಡಿದ ತಾಯಿ, ಜನಿಸಿದ ಭೂಮಿ, ತಾಯಿನಾಡು, ಭಾಷೆ ಹಾಗೂ ವಿದ್ಯೆ ನೀಡಿದ ಗುರುವನ್ನು ನಾವು ಎಂದಿಗೂ ಮರೆಯಬಾರದು. ಗುರು ಮಾರ್ಗದರ್ಶಿಯಾಗುತ್ತಾರೆ, ತಾಯಿ ನಾಡು ನೆಲೆ ನೀಡುತ್ತದೆ, ಭಾಷೆ ಜೀವನ ಶೈಲಿ ಕಲಿಸುತ್ತದೆ, ಜನ್ಮಭೂಮಿ ಆಶ್ರಯ ನೀಡುತ್ತದೆ ಹಾಗೂ ತಾಯಿ ಜನ್ಮ ನೀಡುತ್ತಾಳೆ. ಆದ್ದರಿಂದ ಅವುಗಳನ್ನು ನಾವೆಂದೂ ಮರೆಯಬಾರದು ಎಂದು ಉಪರಾಷ್ಟ್ರಪತಿಗಳು ನೀತಿ ಪಾಠ ಹೇಳಿದರು.

Translate »