ಬೆಂಗಳೂರಿಂದ ಬೈಕಲ್ಲೇ ಸುತ್ತೂರು ಮಠಕ್ಕೆ ಬಂದ ಇಶಾ ಫೌಂಡೇಷನ್ ಸದ್ಗುರು ಜಗ್ಗಿ ವಾಸುದೇವ್
ಮೈಸೂರು

ಬೆಂಗಳೂರಿಂದ ಬೈಕಲ್ಲೇ ಸುತ್ತೂರು ಮಠಕ್ಕೆ ಬಂದ ಇಶಾ ಫೌಂಡೇಷನ್ ಸದ್ಗುರು ಜಗ್ಗಿ ವಾಸುದೇವ್

March 26, 2021

ಮೈಸೂರು, ಮಾ.25(ಆರ್‍ಕೆಬಿ)- ಕೊಯ ಮತ್ತೂರಿನ ಇಶಾ ಫೌಂಡೇಷನ್ ಸಂಸ್ಥಾ ಪಕ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಗುರುವಾರ ಮೈಸೂರಿನ ಚಾಮುಂಡಿಬೆಟ್ಟ ಪಾದದ ಬಳಿಯ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು.
ಕಪ್ಪು ಪ್ಯಾಂಟ್, ನೀಲಿ ಪೂರ್ಣ ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದ ಜಗ್ಗಿ ವಾಸುದೇವ್ ತಮ್ಮ ದುಕಾಟಿ ಬೈಕ್‍ನಲ್ಲಿ ಬೆಂಗಳೂರಿನಿಂದ ಮುಂಜಾನೆ 5 ಗಂಟೆಗೆ ಹೊರಟು, ಬೆಳಿಗ್ಗೆ 8.20ರ ವೇಳೆಗೆ ಸುತ್ತೂರು ಮಠಕ್ಕೆ ಆಗ ಮಿಸಿದರು. ಸುತ್ತೂರು ಶ್ರೀಗಳೊಂದಿಗೆ ಕೆಲ ಹೊತ್ತು ಉಭಯಕುಶಲೋಪರಿ ನಡೆಸಿ, ಅಲ್ಲಿಯೇ ಉಪಾಹಾರ ಸೇವಿಸಿದರು.

ಈ ಸಂದರ್ಭದಲ್ಲಿ ತುಮಕೂರು ಸಿದ್ಧ ಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಜಯರಾಜೇಂದ್ರ ಸ್ವಾಮೀಜಿ, ಚುಂಚನಹಳ್ಳಿ ಸ್ವಾಮೀಜಿ ಉಪಸ್ಥಿತರಿದ್ದರು. ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸುತ್ತೂರು ಮಠಕ್ಕೆ ನನ್ನ ಸೌಜನ್ಯದ ಭೇಟಿ ಇದು. ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಸ್ವಾಮೀಜಿ ಅವ ರನ್ನು ಭೇಟಿ ಮಾಡಲು ಸಾಧ್ಯವಾಗಿರ ಲಿಲ್ಲ. ಹಾಗಾಗಿ ಬೆಂಗಳೂರಿನಿಂದ ಕೊಯಮತ್ತೂರಿಗೆ ಹೋಗುವ ಮಾರ್ಗ ಮಧ್ಯೆ ಶ್ರೀಗಳನ್ನು ಭೇಟಿ ಮಾಡಿ ತೆರಳು ತ್ತಿರುವುದಾಗಿ ತಿಳಿಸಿದರು.

ತಾವು ನಡೆಸಿದ ಕಾವೇರಿ ಕೂಗು ಅಭಿ ಯಾನಕ್ಕೆ ಕರ್ನಾಟಕ ಮತ್ತು ತಮಿಳು ನಾಡು ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷ ರೈತರು ಮತ್ತು ತಮ್ಮ ಫೌಂಡೇಷನ್‍ನ ಕಾರ್ಯಕರ್ತರು ಒಟ್ಟಾಗಿ ಕೂಡಿ ಎರಡೂ ರಾಜ್ಯಗಳ ರೈತರ ಜಮೀನುಗಳಲ್ಲಿ 1.5 ಕೋಟಿ ಸಸಿಗಳನ್ನು ನೆಟ್ಟಿದ್ದಾರೆ. ಮುಂದಿನ ವರ್ಷ ರೈತರ ಜಮೀನುಗಳಲ್ಲಿ 3.5 ಕೋಟಿ ಸಸಿಗಳನ್ನು ನೆಡುವ ಯೋಜನೆ ಇಟ್ಟುಕೊಂಡಿದ್ದೇವೆ ಎಂದು ಅವರು ಹೇಳಿದರು.

Translate »