ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವರಿಂದ ಬೈಕ್ ಜಾಥಾಕ್ಕೆ ಚಾಲನೆ
ಮೈಸೂರು

ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವರಿಂದ ಬೈಕ್ ಜಾಥಾಕ್ಕೆ ಚಾಲನೆ

September 4, 2019

ಮಡಿಕೇರಿ, ಸೆ.3- ಜೀವನದಿ ಕಾವೇರಿ ಕಳೆದ 8 ವರ್ಷಗಳಿಂದ ಸಮುದ್ರ ಸೇರುವ ಮೊದಲೇ ಸಂಪೂರ್ಣ ಬತ್ತಿ ಹೋಗುತ್ತಿದೆ. ಇಂತಹ ಪರಿಸ್ಥಿತಿಯನ್ನು ದೇಶದ ಹಲವು ನದಿಗಳು ಎದುರಿಸುತ್ತಿದ್ದು, ಇದನ್ನು ನಿಯಂತ್ರಿಸದಿದ್ದಲ್ಲಿ ದಕ್ಷಿಣ ಭಾರತ ಮಾತ್ರ ವಲ್ಲದೇ ದೇಶಾದ್ಯಂತ ಅಂತರ್ಜಲ ಮಟ್ಟ ಕುಸಿದು ಮಹಾ ಪ್ರಾಕೃತಿಕ ವಿಪತ್ತುಗಳು ಸಂಭವಿಸುವ ಕಾಲ ದೂರವಿಲ್ಲ ಎಂದು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಎಚ್ಚರಿಸಿದ್ದಾರೆ.

ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಕಾವೇರಿ ಕೂಗು ಅಭಿಯಾನ ಬೈಕ್ ಜಾಥಾಕ್ಕೆ ಚಾಲನೆ ನೀಡಿ ದರು. ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‍ಹಾರ್‍ವರೆಗೆ ಸಾಗುವ 1500 ಕಿ.ಮೀ. ಉದ್ದದ “ಕಾವೇರಿ ಕೂಗು” ಅಭಿಯಾನದ ಬೈಕ್ ಜಾಥಾಕ್ಕೆ ತಲಕಾವೇರಿ ಯಲ್ಲಿ ಚಾಲನೆ ನೀಡಿದ ಬಳಿಕ ಸ್ವತಃ ಸದ್ಗುರು ವಾಸುದೇವ್ ಅವರೇ ತಲ ಕಾವೇರಿಯಿಂದ ಬೈಕ್ ಅನ್ನು ಓಡಿಸುವ ಮೂಲಕ ರ್ಯಾಲಿಯಲ್ಲಿ ಮಡಿಕೇರಿವರೆಗೂ ಸಾಗಿ ಬಂದು ಕಾವೇರಿ ಕೂಗು ಮಹತ್ವ ಸಾರಿದರು. ನಗರದಲ್ಲಿ ಆಯೋಜಿಸಲಾ ಗಿದ್ದ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್ ಅವರು, ತನ್ನ ತವರು ಭೂಮಿ ಕರ್ನಾಟಕದಲ್ಲೇ ಕಾವೇರಿ ನದಿ ಸೊರಗಿ ಹೋಗಿದೆ. ಹೀಗಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಆದರೆ ತಮಿಳುನಾಡಿನ ರೈತರು ಮತ್ತು ಜನರು ಕರ್ನಾಟಕದವರು ತಮಿಳುನಾಡಿಗೆ ನೀರು ಹರಿಸದೇ ಎಲ್ಲಾ ನೀರನ್ನು ಕರ್ನಾಟಕದವರೇ ಬಳಸುತ್ತಿದ್ದಾರೆ ಎಂಬ ತಪ್ಪು ಕಲ್ಪನೆಯಲ್ಲಿ ಬದುಕುತ್ತಿದ್ದಾರೆ ಎಂದು ತಿಳಿಸಿದರು. ಕಾವೇರಿ ನದಿ ಹರಿಯುವ ಪ್ರದೇಶಗಳ ವಾಸ್ತವ ಚಿತ್ರಣವೇ ಬೇರೆ ಇದೆ ಎಂದ ಅವರು, ಕಾವೇರಿ ನದಿಯನ್ನೇ ನಂಬಿಕೊಂಡು ಬದುಕುವ ಕರ್ನಾಟಕದ ಶೇ.77, ತಮಿಳುನಾಡಿನ ಶೇ.83 ರಷ್ಟು ರೈತರು ಸಾಲಗಾರರಾಗಿದ್ದಾರೆ. ಇದಕ್ಕೆ ಕಾವೇರಿ ನದಿ ಸೊರಗಿರುವುದೇ ಕಾರಣ ಎಂದು ಪ್ರತಿಪಾದಿಸಿದರು.

ಕಳೆದ 17 ವರ್ಷಗಳಿಂದ ತಮಿಳುನಾಡಿನಲ್ಲೂ, 15 ವರ್ಷಗಳಿಂದ ಕರ್ನಾಟಕದಲ್ಲಿ ಭೀಕರ ಬರ ಕಂಡು ಬಂದಿದೆ. ಕಳೆದ 8 ವರ್ಷಗಳಿಂದ ಕಾವೇರಿ ನದಿ ಸಮುದ್ರ ಸೇರುವ 5 ಕಿಮೀ ಮುನ್ನವೇ ಸಂಪೂರ್ಣ ಬತ್ತುತ್ತಿದೆ. ಪರಿಣಾಮ, ಅಂತರ್ಜಲ ಮಟ್ಟ ಕೂಡ ಪಾತಾಳ ತಲುಪಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ನೀರಿಗಾಗಿ ದೊಂಬಿಗಳು ನಡೆಯುವ ಸಾಧ್ಯತೆಯೂ ಇದ್ದು, ಜನರನ್ನು ನಿಯಂತ್ರಿಸಲು ಕಾನೂನಿಗೂ ಸಾಧ್ಯವಿಲ್ಲದಂತಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾವೇರಿ ಕೂಗು ಅಭಿಯಾನದ ಮೂಲಕ ಅರಣ್ಯ ಕೃಷಿಗೆ ಉತ್ತೇಜನ ನೀಡಿ ಮರಗಳನ್ನು ಬೆಳೆಸುವುದನ್ನು ರೈತರು ತಮ್ಮ ಕೃಷಿಯ ಒಂದು ಭಾಗವನ್ನಾಗಿ ಮಾರ್ಪಡಿಸಿಕೊಳ್ಳಲು ಮನವೊಲಿಸಲಾಗುವುದು. ಆ ಮೂಲಕ ರೈತರು ಆದಾಯ ಗಳಿಸುವ ಬಗ್ಗೆ ಜಾಗೃತಿ ಮೂಡಿಸಿ ಮರಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಅಂತರ್ಜಲ ವೃದ್ಧಿಸುವ ಕಾರ್ಯವನ್ನು ಈಶಾ ಫೌಂಡೇಶನ್ ಮಾಡುತ್ತಿದೆ ಎಂದರು. ಕಾವೇರಿ ನದಿ ಸಂರಕ್ಷಿಸಲು ಪ್ರತಿಯೊಬ್ಬರೂ ಕೈ ಜೋಡಿಸುವಂತೆ ಸದ್ಗುರು ಜಗ್ಗಿ ವಾಸುದೇವ್ ಕರೆ ನೀಡಿದರು.

ಪರಿಸರ ಪೂರಕ ಮರ ನೆಡಬೇಕಿದೆ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾವೇರಿ ನದಿ ಹರಿಯುವ ಪಾತ್ರದಲ್ಲಿ ಕಾವೇರಿ ನದಿ ಬತ್ತುತ್ತಿರುವ ಕೂಗು ಕೇಳಿ ಬರುತ್ತಿದೆ. ಬೆಂಗಳೂರಿಗೆ ವಾರಕ್ಕೆ ಒಂದು ದಿನ ಮಾತ್ರವೇ ಕಾವೇರಿ ನೀರು ಹರಿಸುವಂತಹ ಪರಿಸ್ಥಿತಿ ತಲೆದೋರಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪರಿಸರ ಉಳಿಸಲು ಮರ ನೆಡುವ ಮೊದಲು ಪರಿಸರಕ್ಕೆ ಪೂರಕವಾದ, ಆಳದವರೆಗೆ ಬೇರು ಬಿಡುವ ಉತ್ತಮ ಜಾತಿಯ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಅಕೇಶಿಯಾ, ನೀಲಗಿರಿ ಮರಗಳಿಂದ ಜನ ಜಾನುವಾರುಗಳಿಗೆ ಯಾವುದೇ ಪ್ರಯೋಜನವಿಲ್ಲ. ಸರ್ಕಾರÀ ಕೂಡ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕೆಂದು ಹೇಳಿದರು. ರಾಜ್ಯ ಸರ್ಕಾರ ಈಶಾ ಫೌಂಡೇಶನ್‍ನ ಕಾವೇರಿ ಕೂಗು ಆಂದೋಲನಕ್ಕೆ ಕೈ ಜೋಡಿಸಲಿದ್ದು, ಮರ ನೆಡುವ ಅಭಿಯಾನಕ್ಕೆ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ಮಳೆಗೆ ಕೊಡಗಿನ ಪರಿಸರ ಕಾರಣ: ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೊಡಗಿನ ಜನರು ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಹಸಿರು ನೆಲೆ ನಿಂತಿದೆ. ಪ್ರತಿ ಮುಂಗಾರಿನಲ್ಲೂ ಕೂಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇದಕ್ಕೆ ಇಲ್ಲಿನ ಹಸಿರ ಪರಿಸರವೇ ಕಾರಣ. ಕಳೆದ 40 ವರ್ಷಗಳಿಂದ ಜಿಲ್ಲೆಯಲ್ಲಿ ಭೀಕರ ಬರ ಎದುರಾಗಿಲ್ಲ ಎಂದ ಕೆ.ಜಿ. ಬೋಪಯ್ಯ, ಕಾವೇರಿ ನದಿಯನ್ನು ಸಂರಕ್ಷಿಸುವ ಅಗತ್ಯವೂ ಇದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರÀವೂ ಇದಕ್ಕೆ ಬೆಂಬಲ ನೀಡುತ್ತದೆ ಎಂದರು.

ನದಿಗಳ ಪೂಜ್ಯ ಭಾವನೆಯಿಂದ ಕಾಣಬೇಕು: ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಮಾತನಾಡಿ, ನದಿಗಳನ್ನು ಪೂಜ್ಯ ಭಾವನೆಯಿಂದ ಕಂಡಲ್ಲಿ ಮಾತ್ರ ಅವುಗಳು ಉಳಿಯುತ್ತವೆ. ಇಲ್ಲವಾದಲ್ಲಿ ನದಿಗಳ ಜಲ ಮೂಲಗಳೇ ಬತಿ ್ತಹೋಗುತ್ತವೆ ಇಂತಹ ಹಲವು ಉದಾಹರಣೆಗಳನ್ನು ದೇಶ ಕಂಡಿದೆ. ಇಂತಹ ಪರಿಸ್ಥಿತಿ ಕೊಡಗಿನ ಕಾವೇರಿಗೆ ಬರಬಾರದು. ಇದಕ್ಕಾಗಿ ರೈಲ್ವೆ ಮಾರ್ಗ, ಬೃಹತ್ ಹೆದ್ದಾರಿ ಯೋಜನೆ, ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ನೆಪದಲ್ಲಿ ಪೃಕೃತಿಯ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಪ್ರಾಕೃತಿಕ ವಿಕೋಪ, ಅಂತರ್ಜಲ ಕುಸಿತ, ಕಾಡು ಪ್ರಾಣಿ ಮಾನವ ಸಂಘರ್ಷದಂತಹ ಪರಿಸ್ಥಿತಿಗಳು ತಲೆ ದೋರುತ್ತವೆ. ಈ ಬಗ್ಗೆ ಸದ್ಗುರುಗಳು ಕೇಂದ್ರ ಸರ್ಕಾರಕ್ಕೂ ಮನವಿ ಮಾಡಬೇಕಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಕೂಡ ತಮ್ಮ ಜವಾಬ್ದಾರಿ ಅರಿತು ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು. ಚಿತ್ರನಟ ರಕ್ಷಿತ್ ಶೆಟ್ಟಿ ಮಾತನಾಡಿ, ಈಶಾ ಫೌಂಡೇಶನ್ ಕಾವೇರಿ ಕೂಗು ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. 242 ಕೋಟಿ ಮರಗಳನ್ನು ನೆಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ ಪ್ರತಿಯೊಬ್ಬರೂ ಈ ಕಾರ್ಯಕ್ಕೆ ಕೈಜೋಡಿಸಿದರೆ ಅದು ಕಷ್ಟವಾಗಲಾರದು. ಹೀಗಾಗಿ ತಾವು 1 ಲಕ್ಷ ಗಿಡಗಳನ್ನು ಖರೀದಿಸಿ ಅವುಗಳನ್ನು ನೆಟ್ಟು ಪೋಷಿಸುವುದಾಗಿ ಘೋಷಿಸಿದರು.

ಚಿತ್ರನಟ ದಿಗಂತ್ ಮಾತನಾಡಿ, ಹನಿಹನಿ ಕೂಡಿದರೆ ಹಳ್ಳವೆಂಬಂತೆ ಸದ್ಗುರು ಅವರ ಪ್ರತಿ ಕಾರ್ಯಕ್ಕೂ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ಮಾಜಿ ಅಥ್ಲೇಟ್ ಅಶ್ವಿನಿ ನಾಚಪ್ಪ ಮಾತನಾಡಿ, ಪವಿತ್ರ ಕಾವೇರಿ ನದಿ ಉಳಿಸುವುದು ಕೇವಲ ಸರ್ಕಾರದ ಕರ್ತವ್ಯ ಮಾತ್ರವಲ್ಲ. ಅದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯೂ ಆಗಿದೆ. ಈ ಕಾರ್ಯವನ್ನು ಪುಣ್ಯದ ಕೆಲಸವೆಂದು ಭಾವಿಸಿ ಪ್ರತಿಯೊಬ್ಬರೂ ಕಾವೇರಿ ನದಿಯನ್ನು ಪುನಶ್ಚೇತನಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.

ಬೈಕ್ ಜಾಥಾಕ್ಕೆ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಪರಿಸರ ಪ್ರೇಮಿಗಳು ಕೈ ಜೋಡಿಸಿದ್ದರು. ಸ್ಯಾಂಡಲ್‍ವುಡ್ ನಟರಾದ ರಕ್ಷಿತ್ ಶೆಟ್ಟಿ, ದಿಗಂತ್ ಕೂಡ ಬೈಕ್ ಜಾಥಾದಲ್ಲಿ ಪಾಲ್ಗೊಂಡು ಬೈಕ್‍ನಲ್ಲಿ ಮಡಿಕೇರಿಯವರೆಗೂ ಸಾಗಿ ಬಂದರು. ಮಡಿಕೇರಿ ಸೇರಿದಂತೆ ಕೊಡಗಿನ ಮೂಲೆ ಮೂಲೆಗಳಿಂದ ಸದ್ಗುರು ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Translate »