ಮೈಸೂರು ನೆರೆ ಹಾನಿ ತುರ್ತು ಕಾಮಗಾರಿಗೆ 27 ಕೋಟಿ ಬಿಡುಗಡೆ
ಮೈಸೂರು

ಮೈಸೂರು ನೆರೆ ಹಾನಿ ತುರ್ತು ಕಾಮಗಾರಿಗೆ 27 ಕೋಟಿ ಬಿಡುಗಡೆ

September 4, 2019

ಮೈಸೂರು, ಸೆ.3(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗಿರುವ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಒಟ್ಟು 82 ಕೋಟಿ ರೂ. ಅಗತ್ಯವಿದ್ದು, ತುರ್ತು ಕಾರ್ಯಕ್ಕೆ ಈಗಾಗಲೇ 27 ಕೋಟಿ ರೂ. ಬಿಡು ಗಡೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರ್ಜೋಳ ತಿಳಿಸಿದರು.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಂಗಳ ವಾರ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆ ಸಿದ ಅವರು, ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆ ಹಾಗೂ ಸಾರ್ವಜನಿಕ ಕಟ್ಟಡಗಳ ಕಾಮಗಾರಿಗೆ 8 ಸಾವಿರ ಕೋಟಿ ರೂ. ಬೇಕಿದ್ದು, ತುರ್ತು ದುರಸ್ತಿಗೆ 500 ಕೋಟಿ ರೂ. ಬಿಡುಗಡೆಯಾಗಿದೆ. ಹಾಗೆಯೇ ಮೈಸೂರು ಜಿಲ್ಲೆಯ ಕಾಮಗಾರಿಗೆ 82 ಕೋಟಿ ರೂ. ಅಗತ್ಯವಿದ್ದು, 27 ಕೋಟಿ ರೂ. ಬಿಡುಗಡೆ ಯಾಗಿದೆ. ಈಗಾಗಲೇ ತುರ್ತು ಕಾಮಗಾರಿ ಪ್ರಗತಿ ಯಲ್ಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮೈಸೂರು ವಿಭಾಗದಲ್ಲಿ 2 ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು, ಸೇತುವೆಗಳ ಕಾಮಗಾರಿಗೆ, ಚಾಮುಂಡೇಶ್ವರಿ ಕ್ಷೇತ್ರಕ್ಕೆ 3.80 ಕೋಟಿ ರೂ., ತಿ.ನರಸೀಪುರ ಕ್ಷೇತ್ರಕ್ಕೆ 1.52 ಕೋಟಿ ರೂ., ವರುಣಾ ಕ್ಷೇತ್ರಕ್ಕೆ 6.48 ಕೋಟಿ ರೂ. ಸೇರಿದಂತೆ ಒಟ್ಟು 40 ಕೋಟಿ ರೂ. ಬೇಕಾಗಿದೆ. ಹುಣಸೂರು ವೃತ್ತದಲ್ಲಿ 24 ಸೇತುವೆಗಳು ಹಾಗೂ ರಸ್ತೆಗಳ ಕಾಮಗಾರಿಗೆ ಒಟ್ಟು 42 ಕೋಟಿ ರೂ. ಅಗತ್ಯವಿದೆ ಎಂದು ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ಗಳು ಮಾಹಿತಿ ನೀಡಿದರು. ನಂಜನಗೂಡು ಮಾರ್ಗ ದಲ್ಲಿ ಹೆಚ್ಚು ಸಮಸ್ಯೆಯಾಗಿದ್ದು, ರಸ್ತೆಯನ್ನು ಎತ್ತರಿ ಸಬೇಕು. ತಿ.ನರಸೀಪುರ ಮಾರ್ಗದ ಕಾಮಗಾರಿಗೆ 8 ಕೋಟಿ ರೂ., ಪಿರಿಯಾಪಟ್ಟಣ ವ್ಯಾಪ್ತಿ ರಸ್ತೆಗೆ 9.5 ಕೋಟಿ ರೂ. ಬೇಕೆಂದು
ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್ ತಿಳಿಸಿದರು. ಮೈಸೂರಿನ ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 15 ಕೋಟಿ ರೂ. ಅಂದಾಜು ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಶಾಸಕ ಎಲ್.ನಾಗೇಂದ್ರ ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ ಅವರು, ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರಲ್ಲದೆ, ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಿಂಗ್ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಕೌಶಲ್ಯ ಅಭಿವೃದ್ಧಿ-ಶಿಕ್ಷಣಕ್ಕೆ ಆದ್ಯತೆ: ಸಿಎಂ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಕೌಶಲ್ಯ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಿ, ಸೂಕ್ತ ಮಾರ್ಗದರ್ಶನ ನೀಡಿದರೆ ನಿರುದ್ಯೋಗ ಸಮಸ್ಯೆ ತಗ್ಗಿಸಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ತರಬೇತಿ ನೀಡಬೇಕು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅನಾರೋಗ್ಯಕ್ಕೆ ತುತ್ತಾಗಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯದೆ, ಅವರ ಪೋಷಕರನ್ನು ಕರೆಸಿ, ಅವರೊಂದಿಗೆ ಕಳುಹಿಸಿದ್ದ ಓರ್ವ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಸೂಚಿಸಿದ್ದೇನೆ. ಮಕ್ಕಳಿಗೆ ಆರೋಗ್ಯ ಸರಿಯಿಲ್ಲ ಎಂದರೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಉತ್ತಮ ಆಹಾರ ವಿತರಣೆ ಮಾಡಬೇಕೆಂದು ಎಚ್ಚರಿಕೆ ನೀಡಿದರು.

ಅನುದಾನ ನೀಡಲು ಸಿದ್ಧ: ಜಿಲ್ಲೆಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 3382 ಮಕ್ಕಳಿಗೆ ಅವಕಾಶವಿದ್ದು, 2044 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಆದರೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಹೆಚ್ಚು ಬೇಡಿಕೆಯಿದೆ. 3137 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಈಗಾಗಲೇ 3603 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇನ್ನೂ ದಾಖಲಾತಿ ಮುಂದುವರೆದಿದೆ. 14 ನೂತನ ಹಾಸ್ಟೆಲ್‍ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಬಿಂದ್ಯಾ ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ ಅವರು, ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಅತ್ಯಂತ ಶ್ರೀಮಂತ ಇಲಾಖೆಯಾಗಿದ್ದು, ಹಣದ ಕೊರತೆಯಿಲ್ಲ. ಸ್ಥಳೀಯ ಶಾಸಕರು ಹಾಸ್ಟೆಲ್‍ಗೆ ನಿವೇಶನ ಕೊಡಿಸಿದರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಸಿದ್ಧ ಎಂದರಲ್ಲದೆ, ಕಾಮಗಾರಿ ಅರ್ಧಕ್ಕೆ ನಿಂತಿರುವ ಭವನಗಳ ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದರು.

ಸ್ಮಶಾನ ಅಭಿವೃದ್ಧಿ: ಎಲ್ಲಾ ಊರುಗಳ ಸ್ಮಶಾನ ಅಭಿವೃದ್ಧಿಗೆ ಜಿಲ್ಲಾಡಳಿತ ಹಣ ನೀಡಬೇಕು. ಜಾಗದ ಅಗತ್ಯವಿದ್ದರೆ ಖರೀದಿ ಮಾಡಬೇಕು. ನಗರ ಪ್ರದೇಶದಲ್ಲಿ ಹೆಚ್ಚು ಬೆಲೆ ಎಂಬ ಕಾರಣಕ್ಕೆ ಕೈ ಕಟ್ಟಿ ಕುಳಿತುಕೊಳ್ಳಬೇಡಿ. ತುರ್ತು ಸಂದರ್ಭದಲ್ಲಿ ಕಡ್ಡಾಯ ಭೂಸ್ವಾಧೀನ ಮಾಡಿಕೊಂಡು, ಕೂಡಲೇ ಪರಿಹಾರ ನೀಡಿ, ಆ ಜಾಗದಲ್ಲಿ ಸ್ಮಶಾನ ಅಭಿವೃದ್ಧಿಪಡಿಸಿ ಎಂದು ಸಚಿವರು ತಿಳಿಸಿದರು. ಇನ್ನು ಜಿಲ್ಲಾಧಿಕಾರಿಗಳ ನೂತನ ಕಟ್ಟಡ ಸಂಪೂರ್ಣ ವಾಗಿದ್ದರೂ ಏಕೆ ಕಚೇರಿಗಳ ಸ್ಥಳಾಂತರವಾಗಿಲ್ಲ ಎಂದು ಪ್ರಶ್ನಿಸಿದ ಅವರು, ಸಾರ್ವ ಜನಿಕರಿಗೆ ಎಲ್ಲಾ ಇಲಾಖೆಗಳ ಕಚೇರಿಯೂ ಒಂದೇ ಸೂರಿನಡಿ ಲಭ್ಯವಾಗಲೆಂದೇ ಕಟ್ಟಡ ನಿರ್ಮಿಸಲಾಗಿದೆ. ಕಚೇರಿಗಳ ಸ್ಥಳಾಂತರ ಮಾಡದಿದ್ದರೆ ಕಟ್ಟಡವನ್ನು ಜಿಲ್ಲಾಡಳಿ ತಕ್ಕೆ ಹಸ್ತಾಂತರಿಸಿ ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಅಶ್ವಿನ್‍ಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್, ಮುಖ್ಯ ಇಂಜಿನಿಯರ್ ರಮೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಬಳಿಕ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಐರಾವತ ಯೋಜನೆಯಡಿ 5 ಟ್ಯಾಕ್ಸಿಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು. ಇದೇ ವೇಳೆ ಶಾಸಕ ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದ ಕೀರ್ತಿ ಸ್ತ್ರೀ ಶಕ್ತಿ ಮಹಿಳಾ ಸಂಘ ಹಾಗೂ ಸಿದ್ದರಾಮೇಶ್ವರಿ ಮಹಿಳಾ ಸಂಘದ ಸದಸ್ಯರಿಗೆ `ಮಿಶ್ರ ಚಟುವಟಿಕೆ’ ಯೋಜನೆಯಡಿ 1.25 ಲಕ್ಷ ರೂ ಚೆಕ್ ವಿತರಿಸಿದರು.

Translate »