ಡಿ.ಕೆ.ಶಿವಕುಮಾರ್ ಬಂಧನ
ಮೈಸೂರು

ಡಿ.ಕೆ.ಶಿವಕುಮಾರ್ ಬಂಧನ

September 4, 2019

ನವದೆಹಲಿ, ಸೆ.3-ಕಳೆದ ಎರಡು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡ 8.60 ಕೋಟಿ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ರಾತ್ರಿ ಬಂಧಿಸಿದೆ.

ಇಂದು ಮಧ್ಯಾಹ್ನ 12 ಗಂಟೆಯಿಂದ ಅವರನ್ನು ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಶಿವಕುಮಾರ್ ಅವರಿಗೆ ಮಧ್ಯಾಹ್ನ ಊಟದ ವಿರಾಮಕ್ಕೂ ಅವಕಾಶ ನೀಡಲಿಲ್ಲ. ನಿರಂತರ ವಿಚಾರಣೆಯ ನಂತರ ರಾತ್ರಿ 8.38ರ ವೇಳೆಗೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಯಿತು. ಈ ವೇಳೆ ಇಡಿ ಕಚೇರಿಯ ಮುಂದೆ ನೆರೆದಿದ್ದ ಡಿ.ಕೆ.ಶಿವಕುಮಾರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ದಂಗಾದರು.

ಕೆಲವೇ ನಿಮಿಷಗಳಲ್ಲಿ ಶಿವಕುಮಾರ್ ಅವರನ್ನು ಇಡಿ ಕಚೇರಿಯಿಂದ ವೈದ್ಯಕೀಯ ಪರೀಕ್ಷೆಗೋಸ್ಕರ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದಾಗ ಅಲ್ಲಿ ನೆರೆದಿದ್ದ ಡಿಕೆಶಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದು, ಪ್ರತಿಭಟನೆಗೆ ಮುಂದಾದರು. ಈ ವೇಳೆ ಡಿ.ಕೆ.ಶಿವಕುಮಾರ್ ಇಡಿ ಕಚೇರಿಯಿಂದ ಹೊರ ಬರುತ್ತಿರುವಾಗಲೇ ಕಾರ್ಯಕರ್ತರತ್ತ ಕೈಬೀಸಿ, ತಮ್ಮ ಬಂಧನ ರಾಜಕೀಯ ಪ್ರೇರಿತ. ಈ ಮೂಲಕ ಬಿಜೆಪಿ ಸೇಡು ತೀರಿಸಿಕೊಳ್ಳುತ್ತಿದೆ. ಕಾರ್ಯಕರ್ತರು ಎದೆಗುಂದ ಕೂಡದು. ನಾನು ಯಾವುದಕ್ಕೂ ಹೆದರುವವನಲ್ಲ. ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನಪಡಿಸಲೆತ್ನಿಸಿದರು.

ಕೊನೆಗೆ ಕಾರಿನ ಬಳಿ ಅವರನ್ನು ಕರೆತಂದಾಗ ಕಾರ್ಯಕರ್ತರು ಕಾರಿಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಲಾರಂಭಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತೆರವುಗೊಳಿಸಲು ಹರಸಾಹಸಪಟ್ಟರು. ಅಂತಿಮವಾಗಿ ಕಾರಿನ ಬಾಗಿಲ ಬಳಿ ನಿಂತು ಕಾರ್ಯಕರ್ತರತ್ತ ಕೈಬೀಸಿ, ಕೈಮುಗಿಯುತ್ತಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಒಳಗೆ ಕೂರಿಸಿಕೊಂಡರು. ಕೆಲ ನಿಮಿಷದ ನಂತರ ಭದ್ರತಾ ಸಿಬ್ಬಂದಿ ಕಾರನ್ನು ಸುತ್ತುವರಿದಿದ್ದ ಡಿಕೆಶಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಹರಸಾಹಸ ಪಟ್ಟು ದೂರ ಸರಿಸುತ್ತಿದ್ದಂತೆ ಕಾರು ಮುಂದೆ ಸಾಗಿತು. ಈ ಸಂದರ್ಭದಲ್ಲಿ ಇಡಿ ಕಚೇರಿ ಮುಂದೆ ಭಾರೀ ಗದ್ದಲದ ವಾತಾವರಣ ಉಂಟಾಗಿತ್ತು. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಡಿ.ಕೆ.ಶಿವಕುಮಾರ್ ವೈದ್ಯಕೀಯ ಪರೀಕ್ಷೆ ನಂತರ ಇಡಿ ಅಧಿಕಾರಿಗಳು, ಅವರನ್ನು ಇಂದು ರಾತ್ರಿ ಇಲ್ಲವೇ ನಾಳೆ ಇಡಿ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಾಧ್ಯತೆಗಳಿವೆ. ಡಿ.ಕೆ.ಶಿವಕುಮಾರ್ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆ ಮುಂದೆ ಜಮಾಯಿಸಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಡಿಕೆಶಿ ಇಡಿ ವಿಚಾರಣೆಗೆ ಹಾಜರಾಗಿದ್ದ ಹಿನ್ನೆಲೆಯಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ, ಕುಣಿಗಲ್, ಮಳವಳ್ಳಿ, ಮಾಗಡಿ ಹಾಗೂ ಬೆಂಗಳೂರಿನ ನೂರಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ದೆಹಲಿಗೆ ತೆರಳಿದ್ದು, ಅವರಿಗೆ ಬೆಂಬಲ ಸೂಚಿಸಿದ್ದರು. ಇಂದು ಬಂಧನವಾಗುತ್ತಿದ್ದಂತೆ ದೆಹಲಿಯ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು.

ಆ.30ರಂದು ಅಕ್ರಮ ಹಣ ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಡಿ.ಕೆ.ಶಿವಕುಮಾರ್‍ಗೆ ಸಮನ್ಸ್ ನೀಡಿತ್ತು. ಅಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‍ನಲ್ಲಿ ತಿಳಿಸಿದ್ದರೂ, ಡಿ.ಕೆ.ಶಿವಕುಮಾರ್ ಸಮನ್ಸ್ ರದ್ದತಿಗೆ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಆ ಅರ್ಜಿ ವಜಾಗೊಳ್ಳುತ್ತಿದ್ದಂತೆ ಮಧ್ಯಾಹ್ನದ ವೇಳೆಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿ ಅಂದು ಸಂಜೆ 6 ಗಂಟೆಗೆ ವಿಚಾರಣೆಗೆ ಇಡಿ ಮುಂದೆ ಹಾಜರಾಗಿದ್ದರು. ಅಂದೇ ಸುಮಾರು ಐದೂವರೆ ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು. ಮತ್ತೆ ಶನಿವಾರವೂ ವಿಚಾರಣೆಗೆ ಹಾಜರಾಗಿದ್ದರು. ಭಾನುವಾರ ಮಾತ್ರ ವಿನಾಯಿತಿ ನೀಡಲಾಗಿತ್ತು. ಆದರೆ ಸೋಮವಾರ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ತಮ್ಮ ಹಿರಿಯರಿಗೆ ಧಾರ್ಮಿಕ ವಿಧಿ-ವಿಧಾನದಂತೆ ಎಡೆ ಇಡಬೇಕಾಗಿರುವುದರಿಂದ ವಿನಾಯಿತಿ ನೀಡುವಂತೆ ಇಡಿಗೆ ಮನವಿ ಮಾಡಿದ್ದರು. ಆದರೆ ಮನವಿಯನ್ನು ತಿರಸ್ಕರಿಸಿದ ಇಡಿ ಅಧಿಕಾರಿಗಳು, ಸೋಮವಾರ ವಿಚಾರಣೆಗೆ ಹಾಜರಾಗಲೇಬೇಕೆಂದು ಸಮನ್ಸ್ ನೀಡಿದ್ದರು.

ಅದರಂತೆ ಸೋಮವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವ ಮುನ್ನ ಇಡಿ ಕಾರ್ಯಾ ಲಯದ ಮುಂದೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ತಂದೆ ಕೆಂಪೇಗೌಡ, ತಮ್ಮ ಅಜ್ಜಿ ಸೇರಿದಂತೆ ಕುಟುಂಬದ ಹಿರಿಯರಿಗೆ ಪ್ರತೀ ವರ್ಷ ತಪ್ಪದೇ ಎಡೆ ಇಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆ. ಇಡೀ ನಮ್ಮ ಕುಟುಂಬವೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿತ್ತು. ಆದರೆ ಅದಕ್ಕೂ ನನಗೆ ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಸ್ನೇಹಿತರು ಟೀಕಿಸುತ್ತಿದ್ದಾರೆ ಎಂದು ಭಾವುಕರಾಗಿ ಕಣ್ಣೀರು ಸುರಿಸಿದ್ದರು. ನಿನ್ನೆ ವಿಚಾರಣೆ ನಂತರ ಇಂದು ಮತ್ತೆ ವಿಚಾರಣೆಗೆ ಹಾಜ ರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಇಂದು ಮಧ್ಯಾಹ್ನ 12 ಗಂಟೆಗೆ ತಡವಾಗಿ ವಿಚಾರಣೆಗೆ ಹಾಜರಾದ ಡಿ.ಕೆ.ಶಿವಕುಮಾರ್ ಅವರಿಗೆ ಮಧ್ಯಾಹ್ನದ ಊಟದ ವಿರಾಮವನ್ನೂ ನೀಡದೇ ರಾತ್ರಿವರೆಗೂ ವಿಚಾರಣೆ ನಡೆಸಲಾಯಿತು. ಅಂತಿಮವಾಗಿ ರಾತ್ರಿ 8.38ಕ್ಕೆ ಅವರನ್ನು ಇಡಿ ಬಂಧಿಸಿತು.

ಏನಿದು ಪ್ರಕರಣ?: 2017ರ ಆಗಸ್ಟ್ 2ರಂದು ದೆಹಲಿಯ ಡಿ.ಕೆ.ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿ.ಕೆ.ಶಿವಕುಮಾರ್ ಕೋಟ್ಯಾಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

Translate »