ಇನ್‍ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ಈ ಬಾರಿ ಮೈಸೂರು ದಸರಾಗೆ ಚಾಲನೆ
ಮೈಸೂರು

ಇನ್‍ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ಈ ಬಾರಿ ಮೈಸೂರು ದಸರಾಗೆ ಚಾಲನೆ

August 29, 2018

ಮೈಸೂರು:  ಈ ಬಾರಿ ಪ್ರವಾಸೋದ್ಯಮ ಕೇಂದ್ರಿತ, ಸಾಂಪ್ರದಾಯಿಕ ದಸರಾ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಸಾಮಾಜಿಕ ಕಳಕಳಿ ಹೊಂದಿರುವ ಲೇಖಕಿ, ಶಿಕ್ಷಣ ತಜ್ಞೆ ಹಾಗೂ ಇನ್‍ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರನ್ನು ಆಹ್ವಾನಿಸಲಾಗುವುದು ಎಂದರು.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಂಗಳವಾರ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2018ರ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಹಾವಳಿಯಿಂದ ಕೊಡಗು ಜಿಲ್ಲೆಯಲ್ಲಿ ಅನಾಹುತ ಸಂಭವಿಸಿ, ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಅನಾವೃಷ್ಟಿಗೆ ಒಳಗಾಗಿರುವ ರಾಜ್ಯದ ಸುಮಾರು 66 ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವೈಭವೀಕರಣವಿಲ್ಲದ, ಪ್ರವಾಸಿಗರ ಆಕರ್ಷಣೆಗೆ ಲೋಪವಾಗದ ರೀತಿಯಲ್ಲಿ ದಸರಾ ನಡೆಸಲಾಗು ವುದು. ಸಾರ್ವಜನಿಕ ಭಾವನೆಯಂತೆ ನಾಡಹಬ್ಬ ದಸರಾ ಮಹೋತ್ಸವವನ್ನು ಉತ್ತಮ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು. ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಲೇಖಕಿ, ಶಿಕ್ಷಣ ತಜ್ಞೆ ಡಾ.ಸುಧಾಮೂರ್ತಿ ಅವರನ್ನು ದಸರಾ ಮಹೋತ್ಸವ ಚಾಲನೆಗೆ ಆಹ್ವಾನಿಸಲು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರವಾಸಿಗರಿಗೆ ನಿರಾಸೆಯಾಗದು: ವೈಭವೀಕರಣದ ದಸರಾ ಅಲ್ಲದಿದ್ದರೂ ಪ್ರವಾಸಿಗರಿಗೆ ಯಾವುದೇ ರೀತಿಯಲ್ಲೂ ನಿರಾಸೆ ತರುವುದಿಲ್ಲ. ಗ್ರಾಮೀಣ ಭಾಗದ ಜಾನಪದ ಕಲಾ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೂಚನೆ ನೀಡಲಾಗುವುದು. ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಪ್ರಮಾಣ ಪತ್ರವನ್ನು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪರಿಗಣಿಸುವ ಸಂಬಂಧ ಚರ್ಚೆ ನಡೆಸಿ, ತೀರ್ಮಾನಿಸಲಾಗುವುದು. ಹಿಂದಿನಂತೆಯೇ ಸಾಂಪ್ರದಾಯಿಕ ದಸರಾ ಮಹೋತ್ಸವ ಆಚರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಆರ್ಥಿಕ ಸಮಸ್ಯೆಯಿಲ್ಲ: ದಸರಾ ಸಿದ್ಧತೆಗೆ ಯಾವುದೇ ಆರ್ಥಿಕ ಸಮಸ್ಯೆಯಿಲ್ಲ. ಕಳೆದ ವರ್ಷದ ಆಚರಣೆಗೆ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಬಾಕಿಯಿದ್ದ 7.10 ಕೋಟಿ ರೂ. ಹಣವನ್ನೂ ಈಗ ಸಂದಾಯ ಮಾಡಲಾಗುವುದು. ದೇಶ, ವಿದೇಶಗಳ ಗಣ್ಯರೂ ದಸರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಂಬೂ ಸವಾರಿ ವೀಕ್ಷಣೆಗೆ ಹೆಚ್ಚಿನ ಆಸನ ವ್ಯವಸ್ಥೆ ಮಾಡಲಾಗುವುದು. ಜಂಬೂ ಸವಾರಿ ಸಾಗುವ ಮಾರ್ಗದುದ್ದಕ್ಕೂ ಜನರು ಕಿಕ್ಕಿರಿದಿರುತ್ತಾರೆ. ನೂಕು ನುಗ್ಗಲು ನಿಯಂತ್ರಿ ಸುವುದು ಹಾಗೂ ಆರಂಭದಿಂದಲೂ ಮೆರವಣಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ನಿಗದಿತ ಸ್ಥಳಗಳಲ್ಲಿ ಬೃಹತ್ ಎಲ್‍ಇಡಿ ಪರದೆಗಳನ್ನು ಅಳವಡಿಸಿ, ನೇರ ಪ್ರಸಾರದ ವ್ಯವಸ್ಥೆ ಮಾಡಲಾಗುವುದು. ಈ ಬಾರಿ ಏರ್ ಶೋ ನಡೆಸುವ ಬಗ್ಗೆಯೂ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ಮೊಬೈಲ್ ಶೌಚಾಲಯ ವ್ಯವಸ್ಥೆ ಸೇರಿದಂತೆ ಸ್ವಚ್ಛತೆಗೂ ಆದ್ಯತೆ ನೀಡಲಾಗುತ್ತದೆ. ಪ್ರವಾಸಿ ವಾಹನಗಳ ಮೇಲಿನ ಪ್ರವೇಶ ಶುಲ್ಕ(ಎಂಟ್ರಿ ಟ್ಯಾಕ್ಸ್) ರಿಯಾಯಿತಿಗೂ ಚಿಂತನೆ ನಡೆದಿದೆ. ಪ್ರಸ್ತುತ ವಿದ್ಯುಚ್ಛಕ್ತಿ ಕೊರತೆಯಿಲ್ಲದ ಕಾರಣ ವಿಶೇಷ ರೀತಿಯ ವಿದ್ಯುತ್ ದೀಪಾಲಂಕಾರಕ್ಕೂ ಸೂಚಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ವಿವರಿಸಿದರು.

ಶಾಶ್ವತ ಪ್ರಾಧಿಕಾರ ರಚನೆ?: ಬಹಳ ವರ್ಷಗಳಿಂದ ಪ್ರತ್ಯೇಕ ದಸರಾ ಪ್ರಾಧಿಕಾರ ರಚನೆಗೆ ಆಗ್ರಹವಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಈ ವಿಚಾರ ಪ್ರಸ್ತಾಪಿಸಿ, ಶಾಶ್ವತ ಪ್ರಾಧಿಕಾರ ರಚನೆ ಬಗ್ಗೆ ಸಭೆಯಲ್ಲಿ ಅನೇಕರು ಸಲಹೆ ನೀಡಿದ್ದಾರೆ. ಕೇವಲ 10 ದಿನಗಳಿಗೆ ಮಾತ್ರ ದಸರಾ ಉತ್ಸವ ಸೀಮಿತವಾಗಬಾರದು. ಸಾಂಸ್ಕೃತಿಕ, ಐತಿಹಾಸಿಕ ನಗರ ಮೈಸೂರು, ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಶಾಶ್ವತ ಕಾರ್ಯಕ್ರಮಗಳನ್ನು ರೂಪಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರವಾಸೋದ್ಯಮ ದಿಂದ 100 ಕೋಟಿ ಆದಾಯ ನಿರೀಕ್ಷೆ ಸಚಿವ ಸಾ.ರಾ.ಮಹೇಶ್ ಅವರಲ್ಲಿದೆ. ದಸರಾ ವಸ್ತು ಪ್ರದರ್ಶನವನ್ನು ಒಂದಿಷ್ಟು ದಿನಗಳಿಗೆ ಸೀಮಿತಗೊಳಿಸದೆ, ಮಹಾರಾಜ ವಂಶಸ್ಥರ ಕೊಡುಗೆ, ಸಾಧನೆ ಸೇರಿದಂತೆ ಮೈಸೂರಿನ ಐತಿಹಾಸಿಕ ಮಾಹಿತಿ ಸಾರುವಂತೆ ವರ್ಷವಿಡೀ ಪ್ರದರ್ಶನ ಏರ್ಪಡಿಸಲು ಚರ್ಚೆ ನಡೆಸಲಾಗುವುದು. ಇದೆಲ್ಲದರ ಬಗ್ಗೆ ಇನ್ನೊಂದು ತಿಂಗಳಲ್ಲಿ ಕ್ರಮ ಕೈಗೊಳ್ಳುವುದು ಅಸಾಧ್ಯ. ಆದರೆ ಈ ಎಲ್ಲಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಶಾಶ್ವತ ಪ್ರಾಧಿಕಾರ ರಚನೆಗೆ ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪರಿಹಾರಕ್ಕೆ ಮನವಿ: ನೆರೆ ಪ್ರವಾಹಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಗೆ 3 ಸಾವಿರ ಕೋಟಿ ರೂ. ಮಧ್ಯಂತರ ಪರಿಹಾರ ನೀಡುವಂತೆ ಕೋರಿ ಕೇಂದ್ರದ ಗೃಹ ಸಚಿವ ರಾಜನಾಥಸಿಂಗ್ ಅವರಿಗೆ ಆ.30ರಂದು ಮನವಿ ಸಲ್ಲಿಸಲಾಗುವುದು ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್, ಶಾಸಕರಾದ ಅಶ್ವಿನ್‍ಕುಮಾರ್, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಪ್ರಾದೇಶಿಕ ಆಯುಕ್ತೆ ಕಾವೇರಿ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಉಪಸ್ಥಿತರಿ ದ್ದರು. ಇದಕ್ಕೂ ಮುನ್ನ ನಡೆದ ದಸರಾ ಉನ್ನತ ಸಮಿತಿ ಸಭೆಯಲ್ಲಿ ಸಣ್ಣ ನೀರಾ ವರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಆರ್.ನರೇಂದ್ರ, ಮೇಯರ್ ಬಿ.ಭಾಗ್ಯವತಿ, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ನಿರೀಕ್ಷಿತ ಕಾರ್ಯಕ್ರಮಗಳು: ಗಜ ಪಯಣಕ್ಕೆ ಅದ್ದೂರಿ ಸ್ವಾಗತ. ಪ್ಯಾಲೇಸ್ ಆನ್ ವೀಲ್ಸ್ ಮಾದರಿಯಲ್ಲಿ ಮ್ಯೂಸಿಯಂ ಆನ್ ವೀಲ್ಸ್ ಆಯೋಜನೆ. ಹೆರಿಟೇಜ್ ಟೂರ್. 3ಡಿ ಪ್ರೊಜೆಕ್ಷನ್, ಚುಂಚನಕಟ್ಟೆ, ಸೋಮನಾಥಪುರ ಇನ್ನಿತರ ಸ್ಥಳಗಳಲ್ಲಿ ದಸರಾ ವಿಶೇಷ ಕಾರ್ಯಕ್ರಮ. ದಸರಾ ಉದ್ಯೋಗ ಮೇಳ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ನಿರೀಕ್ಷೆಯಿದೆ.

ವರ್ಷವಿಡೀ ಜಾನಪದ ಜಾತ್ರೆ: ಗ್ರಾಮೀಣ ಪ್ರದೇಶದ ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ 12 ವರ್ಷಗಳ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ `ಜಾನಪದ ಜಾತ್ರೆ’ ಕಾರ್ಯಕ್ರಮ ಆರಂಭಿಸಿದ್ದೆ. ನಂತರದಲ್ಲಿ ಅದು ಸ್ಥಗಿತಗೊಂಡಿತು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಾನಪದ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ 365 ದಿನಗಳಲ್ಲೂ `ಜಾನಪದ ಜಾತ್ರೆ’ ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುವುದು.

ಸೆ.2ರಿಂದ ದಸರಾ ಗಜ ಪಯಣ

ಮೈಸೂರು: ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೆ.2ರಂದು ಗಜ ಪಯಣ ಆರಂಭವಾಗಲಿದೆ. ಮೈಸೂರಿನಲ್ಲಿ ಮಂಗಳವಾರ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಸಭೆಯ ಬಳಿಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಧ್ಯಮ ಗಳಿಗೆ ತಿಳಿಸಿದರು. ಹುಣಸೂರು ತಾಲೂಕಿನ ವೀರನಹೊಸಳ್ಳಿ ಬಳಿಯಿರುವ ನಾಗಾಪುರ ಆಶ್ರಮ ಶಾಲೆ ಬಳಿಯಿಂದ ಅಂದು ಅರ್ಜುನ ಆನೆ ನೇತೃತ್ವದಲ್ಲಿ ಮೊದಲ ತಂಡದ ಗಜ ಪಯಣ ಆರಂಭವಾಗ ಲಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಈ ಹಿಂದೆ ಆ.23ರಂದು ಆರಂಭವಾಗಬೇಕಿದ್ದ ಗಜ ಪಯಣವನ್ನು, ಉನ್ನತ ಮಟ್ಟದ ಸಮಿತಿ ಸಭೆ ನಡೆಯದ ಹಿನ್ನೆಲೆಯಲ್ಲಿ ಆ.29ಕ್ಕೆ ಮುಂದೂಡಲಾಗಿತ್ತು. ಆದರೆ ಅಂತಿಮವಾಗಿ ಇಂದಿನ ಸಭೆಯಲ್ಲಿ ಸೆ.2ಕ್ಕೆ ಮಹೂರ್ತ ನಿಗದಿಯಾಗಿದೆ.

Translate »