ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲಿರುವ ಸವಾರಿ ತೊಟ್ಟಿಯಲ್ಲಿ ಸೋಮವಾರ ನಡೆದ ಮೈನವಿರೇಳಿಸುವ ಜೆಟ್ಟಿಗಳ ಕಾಳಗ ಆರಂಭವಾದ ಒಂದೂವರೆ ನಿಮಿಷದಲ್ಲಿಯೇ ಚಾಮರಾಜನಗರದ ಜೆಟ್ಟಿಯ ತಲೆ, ಕೆನ್ನೆಯಿಂದ ರಕ್ತ ಚಿಮ್ಮುವ ಮೂಲಕ ಅಂತ್ಯಗೊಂಡಿತು.
ಸಂಪ್ರದಾಯದಂತೆ ಜಂಬೂಸವಾರಿಯ ದಿನ ಜೆಟ್ಟಿ ಕಾಳಗ ನಡೆಯಬೇಕಾಗಿತ್ತು. ಆದರೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ಪುಟ್ಟ ರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಜೆಟ್ಟಿ ಕಾಳಗವನ್ನು ಅರಮನೆಯ ಪುರೋಹಿ ತರ ಸಲಹೆ ಮೇರೆಗೆ ಇಂದು ನಡೆಸಲಾಯಿತು. ಕಾಳಗಕ್ಕಾಗಿ ಸವಾರಿ ತೊಟ್ಟಿಯಲ್ಲಿ ಸಿದ್ಧಪಡಿಸಿದ್ದ ಅಖಾಡದಲ್ಲಿ ನಾಲ್ವರು ಜೆಟ್ಟಿ ಗಳು ತೊಡೆತಟ್ಟಿ, ಪ್ರವೇಶಿಸಿದರು. ಈ ಮೊದಲೇ ಜೋಡಿ ಕಟ್ಟಿದ್ದಂತೆ ಮೈಸೂರಿನ ಮಂಜುನಾಥ ಜೆಟ್ಟಿ ಮತ್ತು ಚೆನ್ನಪಟ್ಟಣ ವಿದ್ಯಾಧರ ಜೆಟ್ಟಿ ಹಾಗೂ ಬೆಂಗಳೂರಿನ ರಾಘವೇಂದ್ರ ಜೆಟ್ಟಿ ಹಾಗೂ ಚಾಮರಾಜನಗರದ ಪುರುಷೋತ್ತಮ ಜೆಟ್ಟಿ ನಡುವೆ ವಜ್ರಮುಷ್ಠಿ ಕಾಳಗ ನಡೆಯಿತು.
ಕಾಳಗ ಆರಂಭಕ್ಕೂ 20 ನಿಮಿಷ ಮುನ್ನವೇ ನಾಲ್ವರೂ ಜೆಟ್ಟಿಗಳು ಆಖಾಡಕ್ಕೆ ಬಂದು, ಇದೇ ವೇಳೆ ಪೂಜೆಗೆ ಅರಮನೆಯ ಕಲ್ಯಾಣ ಮಂಟಪ ದಲ್ಲಿ ವಿವಿಧ ಪೂಜಾ ಕೈಂಕರ್ಯದಲ್ಲಿ ನಿರತರಾಗಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕೈ ಮುಗಿ ಯುತ್ತಾ ನಿಂತಿದ್ದರು. ಪೂಜಾ ಕಾರ್ಯ ಗಳು ಪೂರ್ಣಗೊಂಡು ಕಾಳಗಕ್ಕೆ ಸೂಚನೆ ನೀಡುತ್ತಿದ್ದಂತೆ
ಅಬ್ಬರಿಸಿದ ಜೆಟ್ಟಿಗಳು ಬಲಗೈ ಬೆರಳುಗಳಿಗೆ ಧರಿಸಿಕೊಂಡಿದ್ದ ವಜ್ರಮುಷ್ಠಿಯಿಂದ ಒಬ್ಬೊರ ತಲೆಗೆ ಮತ್ತೊಬ್ಬರು ಹೊಡೆಯುವುದಕ್ಕೆ ಮುಂದಾದರು. ಭಾರೀ ಕುತೂಹಲ ಕೆರಳಿಸಿದ ಕಾಳಗದಲ್ಲಿ ಬೆಂಗಳೂರಿನ ರಾಘವೇಂದ್ರ ಜೆಟ್ಟಿ, ಚಾಮರಾಜನಗರದ ಪುರುಷೋತ್ತಮ ಜೆಟ್ಟಿಯ ಕೆನ್ನೆ, ಭುಜಕ್ಕೆ ವಜ್ರಮುಷ್ಠಿಯಿಂದ ಹೊಡೆದರು. ಪುರುಷೋತ್ತಮ ಜೆಟ್ಟಿ ಅವರ ದೇಹದಿಂದ ರಕ್ತ ಚಿಮ್ಮತೊಡಗಿತ್ತು. ಆದರೂ 20 ಸೆಕೆಂಡ್‍ವರೆಗೂ ಕಾಳಗ ಮುಂದುವರಿಯಿತು.
ರಕ್ತ ಸುರಿಯುತ್ತಿರುವುದನ್ನು ಗಮನಿಸಿದ ಉಸ್ತಾದ್ ಬಾಲಾಜಿ ಜೆಟ್ಟಿ ಅವರು ಕಾಳಗವನ್ನು ನಿಲ್ಲಿಸಿದರು. ಪುರುಷೋತ್ತಮ ಜೆಟ್ಟಿ ಅವರಿಂದ ರಕ್ತ ಸೋರುತ್ತಲೇ ಇತ್ತು. ರಕ್ತ ಬರುವಂತೆ ಮುಷ್ಠಿ ಕಾಳಗ ನಡೆಸಿದ ಬೆಂಗಳೂರಿನ ರಾಘವೇಂದ್ರ ಜೆಟ್ಟಿ ಅವರು ಕೈಮುಗಿದು ಬೀಗಿದರು. ನಂತರ ಕಲ್ಯಾಣಮಂಟಪದಿಂದ ಸವಾರಿ ತೊಟ್ಟಿಯ ಬಾಗಿಲಿಗೆ ಬಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಎದುರಾಳಿಯ ದೇಹದಿಂದ ರಕ್ತ ಸೋರುತ್ತಿರುವುದನ್ನು ತೋರಿಸಿದರು. ಇದೇ ವೇಳೆ ಕಾಳಗಕ್ಕೆ ಅಖಾಡಕ್ಕಿಳಿದಿದ್ದ ನಾಲ್ವರು ಜೆಟ್ಟಿಗಳಿಗೂ ಯದುವೀರ್ ಅವರು ಭಕ್ಷೀಸ್ ನೀಡಿದರು.
ವೀಕ್ಷಕರು ವಿರಳ: ಇಂದು ನಡೆದ ವಜ್ರಮುಷ್ಠಿ ಕಾಳಗಕ್ಕೆ ವೀಕ್ಷಕರ ಸಂಖ್ಯೆ ಕಡಿಮೆಯಿತ್ತು. ಇದುವರೆಗೂ ವಜ್ರಮುಷ್ಠಿ ಕಾಳಗ ನೋಡಲು ಜನ ಮುಗಿಬೀಳುತ್ತಿದ್ದರು. ನಾಲ್ವರೂ ಜಗಜೆಟ್ಟಿಗಳು ಕಾದಾಟ ನಡೆಸಿ ನೆರೆದಿದ್ದವರು ರೋಮಾಂಚನಗೊಳ್ಳುವಂತೆ ಮಾಡಿದರು.
ರೋಷಾವೇಷ: ಕಾಳಗಕ್ಕೂ ಮುನ್ನವೇ ಜೆಟ್ಟಿಗಳು ರೋಷಾವೇಷ ಪ್ರದರ್ಶಿಸುತ್ತಿದ್ದರು. ಕಣ್ಣು ಮಿಟುಕಿಸದೆ ದಿಟ್ಟಿಸುತ್ತಾ ಕಾಳಗದ ಕುತೂಹಲ ಹೆಚ್ಚಿಸಿದ್ದರು. ಬೆಂಗಳೂರಿನ ಜೆಟ್ಟಿ ರಾಘವೇಂದ್ರ ಅವರು ಎತ್ತರವಾಗಿದ್ದರಿಂದ ಕಾಳಗ ಆರಂಭವಾದ ಒಂದೇ ನಿಮಿಷ ದಲ್ಲಿ ತನಗಿಂತ ಕುಳ್ಳಕ್ಕೆ ಇದ್ದ ಚಾಮರಾಜನಗರದ ಜೆಟ್ಟಿಗೆ ಮುಷ್ಠಿಯಿಂದ ಬಡಿದು ರಕ್ತ ಚಿಮ್ಮುವಂತೆ ಮಾಡಿದರು. ಆದರೆ ಮತ್ತೊಂದು ಜೋಡಿ ಜೆಟ್ಟಿಗಳು ರಕ್ಷಣಾತ್ಮಕ ವಾಗಿ ಕಾಳಗ ನಡೆಸಿದ್ದರಿಂದ ಇಬ್ಬರಿಗೂ ಗಾಯವೂ ಆಗಲಿಲ್ಲ, ರಕ್ತವೂ ಬರಲಿಲ್ಲ!