ಖಾಸಗಿ ದರ್ಬಾರ್‍ಗೆ ಅಂದಗೊಳ್ಳುತ್ತಿದೆ ಅರಮನೆ
ಮೈಸೂರು

ಖಾಸಗಿ ದರ್ಬಾರ್‍ಗೆ ಅಂದಗೊಳ್ಳುತ್ತಿದೆ ಅರಮನೆ

September 20, 2022

ಮೈಸೂರು,ಸೆ.19(ಎಂಟಿವೈ)- ನಾಡಹಬ್ಬ ದಸರಾದ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಖಾಸಗಿ ದರ್ಬಾರ್ ಸೆ.26ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಾಳೆ(ಸೆ.20) ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯೊಳಗೆ ದರ್ಬಾರ್ ಹಾಲ್‍ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಜೋಡಿಸಲಾಗುತ್ತದೆ. ನವರಾತ್ರಿಯ ವೇಳೆ ಯದು ವಂಶದಲ್ಲಿ ಖಾಸಗಿ ದರ್ಬಾರ್ ಒಂದು ಸಂಪ್ರದಾಯವಾಗಿದ್ದು, ಹಲವು ಕಟ್ಟುಪಾಡುಗಳೊಂದಿಗೆ ಒಂಭತ್ತು ದಿನವೂ ರಾಜಪರಂಪರೆ ಯಂತೆ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಶತಮಾನಗಳ ಇತಿಹಾಸವಿರುವ ರತ್ನ ಖಚಿತ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈ ಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಬಾರ್ ಹಾಲ್‍ನಲ್ಲಿ ಸಿಂಹಾ ಸನದ ಜೋಡಣಾ ಪ್ರಕ್ರಿಯೆ ನಡೆಸಲಾಗುತ್ತದೆ.

ಬಿಗಿ ಭದ್ರತೆ: ಅರಮನೆಯ ಸ್ಟ್ರಾಂಗ್ ರೂಂನಲ್ಲಿರುವ ಚಿನ್ನದ ಸಿಂಹಾಸನ ಹಾಗೂ ಬೆಳ್ಳಿಯ ಭದ್ರಾಸನದ ಬಿಡಿಭಾಗ ವನ್ನು ಬಿಗಿ ಭದ್ರತೆಯಲ್ಲಿ ತಂದು ಜೋಡಣೆ
ಮಾಡಲಾಗುತ್ತದೆ. ಬೆಳಗ್ಗೆ 7 ಗಂಟೆಯಿಂದ ಖಾಸಗಿ ದರ್ಬಾರ್ ಹಾಲ್‍ನಲ್ಲಿ ಹೋಮ ನಡೆಸಲಾಗುತ್ತದೆ. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ಹಾಗೂ ಕನ್ನಡಿತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಿಸಲಾಗುತ್ತದೆ. ಅರಮನೆಯ ಒಳಾಂಗಣದಲ್ಲಿರುವ ಎಲ್ಲಾ ಸಿಸಿ ಕ್ಯಾಮರಾಗಳಿಗೆ ಪರದೆ ಮುಚ್ಚಲು ನಿರ್ಧರಿಸಲಾಗಿದೆ. ಬಿಡಿಭಾಗಗಳನ್ನು ತರುವ ಸಿಬ್ಬಂದಿ ಮೇಲೆ ಹದ್ದಿನ ಕಣ್ಣಿಟ್ಟು, ಶಸ್ತ್ರಸಜ್ಜಿತ ಸಿಬ್ಬಂದಿ ಯನ್ನು ಬೆಂಗಾವಲಿಗೆ ನಿಯೋಜಿಸಲು ಉದ್ದೇಶಿಸಲಾಗಿದೆ.

ಹೋಮ ಹವನಗಳು: ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ಜೋಡಣೆಯ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ಅರಮನೆಯ ಪುರೋಹಿತರ ಸಮ್ಮುಖ ದಲ್ಲಿ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ಸೇರಿದಂತೆ ವಿವಿಧ ಪೂಜಾ ವಿಧಾನಗಳು ನಡೆಯಲಿವೆ. ನಂತರ ಪೂರ್ಣಾಹುತಿ ಬಳಿಕ ಧಾರ್ಮಿಕ ಕಾರ್ಯಗಳು ಕೊನೆಗೊಳ್ಳಲಿವೆ.

ಪ್ರವೇಶ ನಿರ್ಬಂಧ: ಸಿಂಹಾಸನ ಜೋಡಣೆಯ ಹಿನ್ನೆಲೆ ಯಲ್ಲಿ ಅರಮನೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾ ಗಿದೆ. ಅರಮನೆಯ ಎಲ್ಲಾ ದ್ವಾರಗಳಲ್ಲಿಯೂ ಪ್ರವೇಶ ನಿರ್ಬಂಧಿ ಸಿರುವ ಬಗ್ಗೆ ಫಲಕ ಹಾಕಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ನವರಾತ್ರಿಗೆ ಅರಮನೆ ಒಳಾಂಗಣದಲ್ಲಿ ಸಿದ್ಧತೆ: ಸೆ.26ರಿಂದ ಖಾಸಗಿ ದರ್ಬಾರ್ ನಡೆಯುವುದರಿಂದ ಅರಮನೆಯ ಒಳಾಂಗಣದಲ್ಲಿ ಅಂತಿಮ ಸಿದ್ಧತೆ ಭರದಿಂದ ಸಾಗುತ್ತಿದೆ. ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ಜೋಡಣೆಯಿಂದಾಗಿ ಕಾರ್ಪೆಟ್ ಹಾಸಲಾಗುತ್ತಿದೆ. ಅಲ್ಲದೆ, ದರ್ಬಾರ್ ಹಾಲ್ ಹಾಗೂ ಕನ್ನಡಿ ತೊಟ್ಟಿ, ಕಲ್ಯಾಣ ಮಂಟಪ ಸೇರಿದಂತೆ ಅರಮನೆ ಒಳಾಂಗಣದಲ್ಲಿ ದೀಪದ ಗೊಂಚಲು ಸರಿಮಾಡುವ, ಧೂಳನ್ನು ಹೊಡೆಯುವ ಕೆಲಸ ಪೂರ್ಣಗೊಂಡಿದೆ.

ಸಜ್ಜಾಗುತ್ತಿದೆ ಅರಮನೆ: ಅರಮನೆಗೆ ಅಳವಡಿಸಿದ್ದ ಬಲ್ಬ್‍ಗಳಲ್ಲಿ ಸುಮಾರು 25 ಸಾವಿರ ಬಲ್ಬ್‍ಗಳು ಹಾಳಾಗಿದ್ದು, ಅವುಗಳನ್ನು ಬದಲಿಸುವ ಕೆಲಸವೂ ಬಿರುಸಾಗಿ ಸಾಗುತ್ತಿದೆ. ಅರಮನೆ ದೀಪಾಲಂಕಾರಕ್ಕೆ ಸಾಮಾನ್ಯ ಬಲ್ಬ್‍ಗಳನ್ನೇ ಬಳಸಲಾಗುತ್ತಿದೆ. ಅರಮನೆಯಲ್ಲದೆ ದಸರಾ ವಸ್ತು ಪ್ರದರ್ಶನ ಮುಖ್ಯ ದ್ವಾರಕ್ಕೂ ಈ ಸಾಮಾನ್ಯ (ಇನ್‍ಕ್ಯಾಂಡಿಲೇಟ್) ಬಲ್ಬ್‍ಗಳನ್ನೇ ಅಳವಡಿಸಲಾಗುತ್ತಿದ್ದು, ಇವು 15 ವೋಲ್ಟ್ ಸಾಮಥ್ರ್ಯದ್ದಾಗಿದೆ. ಸ್ವರ್ಣಾಕಾರದಲ್ಲಿ ಬೆಳಗಲಿರುವ ಈ ಬಲ್ಬ್‍ಗಳು ಅರಮನೆ ಅಂದಕ್ಕೆ ಮತ್ತಷ್ಟು ಮೆರಗು ನೀಡಲಿವೆ. ಈ ಹಿನ್ನೆಲೆಯಲ್ಲಿ ಎಲ್‍ಇಡಿ ಬಲ್ಬ್ ಬದಲು ಪಾರಂಪರಿಕತೆ ಕಾಯ್ದುಕೊಳ್ಳಲಾಗಿದೆ.
ಪ್ರತಿವರ್ಷವೂ ಬದಲಿಸಲಾಗುತ್ತದೆ: `ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಪ್ರತಿ ವರ್ಷ ಕೆಟ್ಟಿರುವ ಬಲ್ಬ್‍ಗಳ ಬದಲಿಸುವುದು ಸಾಮಾನ್ಯ ಪ್ರಕ್ರಿಯೆ. ಅರಮನೆ ಮಂಡಳಿ ವತಿಯಿಂದ ಇ-ಪ್ರಕ್ಯೂರ್‍ಮೆಂಟ್ ಮೂಲಕ ಗುತ್ತಿಗೆ ನೀಡಿ, ಬಲ್ಭ್‍ಗಳ ಬದಲಾವಣೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಕೆಟ್ಟಿರುವ ಬಲ್ಬ್‍ಗಳನ್ನು ಬದಲಿಸಲಾಗುತ್ತದೆ. ಕ್ರೇನ್ ಮೂಲಕ ಅರಮನೆಯ ಡೂಮ್ ಹಾಗೂ ಎತ್ತರದ ಗೋಡೆಗಳಲ್ಲಿ ಅಳವಡಿಸಿರುವ ಬಲ್ಬ್‍ಗಳನ್ನು ಅಳವಡಿಸ ಲಾಗುತ್ತಿದೆ. ದಸರಾ ಮಹೋತ್ಸವಕ್ಕೆ ಅರಮನೆ ಹೊರ ಹಾಗೂ ಒಳಾಂಗಣ ಸಜ್ಜಾಗಿದೆ ಎಂದರು.

Translate »