ರೌಡಿಶೀಟರ್ಸ್, ಮಟ್ಕಾ ದಂಧೆಕೋರರೊಂದಿಗೆ ಸಂಪರ್ಕ  ಕಾನ್ಸ್‍ಟೇಬಲ್ ಸಸ್ಪೆಂಡ್
ಮೈಸೂರು

ರೌಡಿಶೀಟರ್ಸ್, ಮಟ್ಕಾ ದಂಧೆಕೋರರೊಂದಿಗೆ ಸಂಪರ್ಕ ಕಾನ್ಸ್‍ಟೇಬಲ್ ಸಸ್ಪೆಂಡ್

September 22, 2022

ಮೈಸೂರು, ಸೆ.21-ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಅಪರಾಧ ಚಟುವಟಿಕೆ ಗಳನ್ನು ಹತ್ತಿಕ್ಕುವ ಮೂಲಕ ಅಪರಾಧ ಕೃತ್ಯ ಎಸಗುವವರಿಗೆ ಸಿಂಹ ಸ್ವಪ್ನವಾಗಿರಬೇಕಾದ ಪೊಲೀಸ್ ಕಾನ್ಸ್ ಟೇಬಲ್, ಸ್ವತಃ ಮಟ್ಕಾ ದಂಧೆ ಕೋರರ ಜೊತೆ ಕೈಜೋಡಿಸಿರುವುದು ಬೆಳಕಿಗೆ ಬಂದಿದ್ದು, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು, ಕಾನ್ಸ್ ಟೇಬಲ್‍ನನ್ನು ಅಮಾನತುಪಡಿಸಿದ್ದಾರೆ.

ಜಯಲಕ್ಷ್ಮೀಪುರಂ ಠಾಣೆಯ ಕಾನ್ಸ್‍ಟೇಬಲ್ ಸುರೇಶ್ ಅಮಾನತಿಗೊಳಪಟ್ಟವನಾಗಿದ್ದು, ಈತ ಮಟ್ಕಾ ದಂಧೆ ಗಳಲ್ಲಿ ಪ್ರಮುಖ ಬುಕ್ಕಿಯಾಗಿರುವ ಹಾಗೂ ಅಪ ರಾಧ ಪ್ರಕರಣಗಳಲ್ಲಿ ಭಾಗಿಯಾಗಿ ರುವ ಆರೋಪಿ ಅಬ್ದುಲ್ ಜಮೀರ್ ಎಂಬಾತನ ಜೊತೆ ಸಂಪರ್ಕ ವಿಟ್ಟುಕೊಂಡು, ಪೊಲೀಸ್ ಇಲಾಖೆಯ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ವ್ಯಕ್ತಿಗಳೊಂದಿಗೆ ಕೈಜೋಡಿಸಿ ಕರ್ತವ್ಯದಲ್ಲಿ ದುರ್ನಡತೆ ಪ್ರದರ್ಶಿಸಿರು ವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆ ಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಕಾನ್ಸ್‍ಟೇಬಲ್ ಸುರೇಶ್ ನನ್ನು ಅಮಾನತುಪಡಿಸಿರುವುದಾಗಿ ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಇದೇ ಮೊದಲಲ್ಲ: ಕಾನ್ಸ್‍ಟೇಬಲ್ ಸುರೇಶ್ ಅಪ ರಾಧ ಹಿನ್ನೆಲೆಯುಳ್ಳವರೊಂದಿಗೆ ಕೈಜೋಡಿ ಸುತ್ತಿ ರುವುದು ಇದೇ ಮೊದಲಲ್ಲ ಎಂಬುದು ನಗರ ಪೊಲೀಸ್ ಆಯುಕ್ತರು ನೀಡಿರುವ ಆದೇಶ ದಿಂದ ಕಂಡು ಬಂದಿದೆ.

ಈಗ ಅಮಾನತುಪಡಿಸಲ್ಪಟ್ಟಿರುವ ಕಾನ್ಸ್‍ಟೇಬಲ್ ಸುರೇಶ್ ಈ ಹಿಂದೆ ಮೈಸೂರು ನಗರ ವಿಶೇಷ ವಿಭಾಗ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆಗ ಈತನ ಬಗ್ಗೆ ಹಲವಾರು ಆರೋಪಗಳು ಬಂದ ಹಿನ್ನೆಲೆಯಲ್ಲಿ ಈತನನ್ನು 2021ರ ಡಿಸೆಂಬರ್ 22ರಂದು ಮೈಸೂರು ನಗರ ವಿಶೇಷ ವಿಭಾಗದಿಂದ ಜಯಲಕ್ಷ್ಮೀ ಪುರಂ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಶಿಕ್ಷೆ ರೂಪ ದಲ್ಲಿ ವರ್ಗಾವಣೆಯಾದರೂ, ತಿದ್ದಿಕೊಳ್ಳದ ಸುರೇಶ, ರೌಡಿಶೀಟರ್‍ಗಳೊಂದಿಗೆ ಸಂಪರ್ಕವಿಟ್ಟು ಕೊಂಡು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ ರುವುದು ಕಂಡು ಬಂದಿದೆ ಎಂಬುದನ್ನೂ ಕೂಡ ಆಯು ಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಕಾನ್ಸ್‍ಟೇಬಲ್‍ನ ಕೃಪಾಕಟಾಕ್ಷವಿದ್ದುದರಿಂದಲೋ ಏನೋ ಮೈಸೂರು ನಗರದಲ್ಲಿ ಅವ್ಯಾಹತವಾಗಿ ಮಟ್ಕಾ ದಂಧೆ ನಡೆಯುತ್ತಿದ್ದರೂ ಯಾವುದೇ ಠಾಣೆಯ ಪೊಲೀಸರೂ ಕೂಡ ಈ ದಂಧೆಯನ್ನು ಪತ್ತೆ ಮಾಡಿರಲಿಲ್ಲ. ಅಥವಾ ಅವರ ಗಮನಕ್ಕೆ ಬಂದಿರಲಿಲ್ಲ ಎಂದೆನಿಸುತ್ತದೆ. ಆದರೆ ಸಿಸಿಬಿ ಪೊಲೀಸರು ಇದೇ ತಿಂಗಳಲ್ಲಿ ನಿನ್ನೆ (ಮಂಗಳವಾರ) ಸೇರಿದಂತೆ ಮೂರು ದಾಳಿಗಳನ್ನು ನಡೆಸಿ ಮಟ್ಕಾ ದಂಧೆಕೋರರನ್ನು ಬಂಧಿಸಿದ್ದಾರೆ. ಸೆ.12ರಂದು ಮಂಡಿ ಮೊಹಲ್ಲಾದ ಪುಲಿಕೇಶಿ ರಸ್ತೆಯಲ್ಲಿರುವ ಕರ್ನಾಟಕ ಆಟೋ ಕುಷನ್ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ಓರ್ವನನ್ನು ಬಂಧಿಸಿ ಮಟ್ಕಾ ದಂಧೆಯಲ್ಲಿ ಆತ ಸಂಗ್ರಹಿಸಿದ್ದ 70 ಸಾವಿರ ರೂ. ನಗದು ಹಾಗೂ 4 ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದರು. ನಂತರ ಸೆ.15ರಂದು ಕೆ.ಎನ್.ಪುರ ಟೆಂಟ್ ರಸ್ತೆಯಲ್ಲಿರುವ ಆರ್.ಜೆ. ಟೀ ಸ್ಟಾಲ್ ಮೇಲೆ ದಾಳಿ ನಡೆಸಿ ಓರ್ವನನ್ನು ಬಂಧಿಸಿ 20 ಸಾವಿರ ರೂ. ನಗದು ಹಾಗೂ 4 ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿ ದ್ದರು. ನಿನ್ನೆ (ಮಂಗಳವಾರ) ಎನ್.ಆರ್.ಠಾಣಾ ಸರಹದ್ದಿನ ಬಜಾರ್ ರಸ್ತೆಯಲ್ಲಿರುವ ಹಂಸಾ ಟೀ ಸ್ಟಾಲ್ ಮುಂಭಾಗ ಮಟ್ಕಾ ದಂಧೆ ನಡೆಸುತ್ತಿದ್ದ ಗೌಸಿಯಾನಗರ ನಿವಾಸಿ ಕೈಸರ್ ಪಾಷಾ ಅಲಿಯಾಸ್ ಶಾಕೀರ್ ಎಂಬಾತನನ್ನು ಬಂಧಿಸಿ 40 ಸಾವಿರ ರೂ. ನಗದು ಹಾಗೂ 6 ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ಸತತವಾಗಿ ದಾಳಿ ನಡೆಸಿ ಮಟ್ಕಾ ದಂಧೆಕೋರರನ್ನು ಬಂಧಿಸುತ್ತಿದ್ದಂತೆಯೇ ಈ ದಂಧೆಯ ಪ್ರಮುಖ ಬುಕ್ಕಿ ಅಬ್ದುಲ್ ಜಮೀರ್ ಜೊತೆ ಕಾನ್ಸ್‍ಟೇಬಲ್ ಸುರೇಶ್ ನಿಕಟ ಸಂಪರ್ಕ ಹೊಂದಿರುವುದು ಬಯಲಾಗಿದ್ದು, ತಕ್ಷಣವೇ ಆತನನ್ನು ಪೊಲೀಸ್ ಆಯುಕ್ತರು ಅಮಾನತುಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »