ಮೈಸೂರು ರಾಜರ ಕೊಡುಗೆ ಕೊಂಡಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮೈಸೂರು

ಮೈಸೂರು ರಾಜರ ಕೊಡುಗೆ ಕೊಂಡಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

October 11, 2019

ಮೈಸೂರು: ಸ್ವತಂತ್ರ ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯೊಂದಿಗೆ ತಮ್ಮ ಸಂಸ್ಥಾನವನ್ನು ಮೊದಲು ವಿಲೀನಗೊಳಿಸಿದ ಕೀರ್ತಿ ಮೈಸೂರು ಮಹಾರಾಜ ಶ್ರೀ ಜಯ ಚಾಮರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಣ್ಣಿಸಿದರು.

ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿರುವ ಅವರು ಗುರು ವಾರ ಅರಮನೆ ದರ್ಬಾರ್ ಹಾಲ್‍ನಲ್ಲಿ ಮೈಸೂರು ಸಂಸ್ಥಾನದ ಕೊನೆಯ ಅರಸ ಶ್ರೀ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತ ನಾಡಿದರು. ಸ್ವತಂತ್ರ ಪೂರ್ವದಲ್ಲಿ ನಮ್ಮ ದೇಶದಲ್ಲಿ ಅನೇಕ ಸಂಸ್ಥಾನಗಳಿದ್ದವು. ಮೈಸೂರು ಸಂಸ್ಥಾನದ ಶ್ರೀ ಜಯಚಾಮ ರಾಜ ಒಡೆಯರ್ ರಾಜರು ಮಾತ್ರವಲ್ಲ ಪ್ರಜಾಪ್ರಭುತ್ವ ವಾದಿಯೂ ಆಗಿದ್ದರು. ಸ್ವಾತಂತ್ರ್ಯ ಸಿಕ್ಕ ಬಳಿಕ ದೂರದೃಷ್ಟಿತ್ವ ದಿಂದ ಮೊದಲಿಗೆ ತಮ್ಮ ಸಂಸ್ಥಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯೊಂದಿಗೆ ವಿಲೀನಗೊಳಿಸಿದ ದೇಶದ ಮೊದಲ ರಾಜ. ವಿಲೀನಕ್ಕೆ ಸಿದ್ಧವೆಂದು 1947ರ ಆ.9ರಂದು ಸಲ್ಲಿಸಿದ್ದ ಪ್ರಸ್ತಾವನೆ ಆ.16ರಂದು ಅನುಮೋದನೆಗೊಂಡಿತ್ತು. ಆ ಸಂಬಂಧ ಸಂಸ್ಥಾನದ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ, ತೀರ್ಮಾನ ಕೈಗೊಳ್ಳುವ ಮೂಲಕ ತಾವೊಬ್ಬ ಪ್ರಜಾಪ್ರಭುತ್ವ ವಾದಿ ಎಂಬುದನ್ನು ಸಾಬೀತುಪಡಿಸಿದರು. ನಾಡಿಗೆ ಸ್ಮರಣೀಯ ಕೊಡುಗೆ ನೀಡಿರುವ ಮೈಸೂರು ಅರಸರ ತತ್ವಾದರ್ಶಗಳನ್ನು ನಾವೂ ಅಳವಡಿಸಿಕೊಂಡರೆ ಅವರಿಗೆ ನಿಜವಾಗಿ ಗೌರವ ಸಲ್ಲಿಸಿ ದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಅನ್ಯ ದೇಶದ ಪರಿಕಲ್ಪನೆಯಲ್ಲ. 12ನೇ ಶತಮಾನದಲ್ಲೇ ಬಸವಣ್ಣನವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಬಸವಣ್ಣನವರಂತೆ ಜಯಚಾಮರಾಜ ಒಡೆಯರ್ ಅವರೂ ಪ್ರಜಾಪ್ರಭುತ್ವವಾದಿಯಾಗಿ ಸದಾ ಜನರ ಪರವಾಗಿದ್ದರು. ಗಾಂಧೀಜಿ ಅವರಂತೆ ಜಯಚಾಮರಾಜ ಒಡೆಯರ್ ಋಗ್ವೇದದಿಂದ ಪ್ರಭಾವಿತರಾಗಿದ್ದರು. ಜಯಚಾಮ ರಾಜ ಒಡೆಯರ್ ಅವರ ಆಡಳಿತ ವೈಖರಿಯನ್ನು ಗಾಂಧೀಜಿ ಕೊಂಡಾಡಿದ್ದರು. ಹಾಗೆಯೇ ಹಿಂದಿನ ರಾಷ್ಟ್ರಾಧ್ಯಕ್ಷ ಡಾ.ಎಸ್. ರಾಧಾಕೃಷ್ಣನ್ ಸಹ `ಸಾಧಕ್ ಮತ್ತು ಆರಾಧಕ್’ ಎಂದು ಒಡೆಯರ್ ಅವರನ್ನು ಬಣ್ಣಿಸಿದ್ದನ್ನು ಸ್ಮರಿಸಬಹುದು ಎಂದರು.

ಮೈಸೂರು ಮಹಾರಾಜರು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಚೆಲುವಾಂಬ ಮ್ಯಾನ್‍ಷನ್ ಕೊಡುಗೆ ನೀಡುವ ಮೂಲಕ ಮೈಸೂರಿನಲ್ಲಿ ಸಿಎಫ್‍ಟಿಆರ್‍ಐ ಸ್ಥಾಪನೆಗೆ ಅವಕಾಶ ನೀಡಿದರು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸ್ಥಾಪನೆಗೂ ಕಾರಣಕರ್ತರಾದರು. ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರ್‍ಕ್ರಾಫ್ಟ್‍ಗೆ ಅಡಿಗಲ್ಲು ಹಾಕಿದರು. ಇದು 2ನೇ ಮಹಾಯುದ್ಧದ ಸಂದರ್ಭದಲ್ಲಿ ರಾಷ್ಟ್ರದ ಸೇನಾಪಡೆಗೆ ಶಕ್ತಿ ತುಂಬಿತು. ನಂತರದಲ್ಲಿ ಈ ಸಂಸ್ಥೆ ಎಚ್‍ಎಎಲ್ ಆಗಿ ಪ್ರಸಿದ್ಧಿಯೂ ಆಯಿತು. ಭಗವದ್ಗೀತೆಯ ಅನೇಕ ಸಂಸ್ಕøತ ಶ್ಲೋಕಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಯುವ ಜನತೆಗೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸವನ್ನೂ ಮಾಡಿದ್ದರು. ಹೀಗೆ ನಾಡಿನ ಅಭಿವೃದ್ಧಿ ಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜಯಚಾಮ ರಾಜ ಒಡೆಯರ್ ಅವರ ಸೊಸೆಯಾದ ಪ್ರಮೋದಾದೇವಿ ಅವರು ರಾಜಭಕ್ತಿ, ಸಂಸ್ಕøತಿ, ಪರಂಪರೆಯನ್ನು ಮುಂದುವರೆಸುತ್ತಿರುವುದು ಶ್ಲಾಘನೀಯ ಎಂದರು.

ಜಯಚಾಮರಾಜ ಒಡೆಯರ್ ಮಹಾರಾಜರಾಗಿ, ಓರ್ವ ರಾಜಕೀಯ, ಸಂಗೀತ ತಜ್ಞರಾಗಿ, ಸಾಮಾಜಿಕ ಕಳಕಳಿಯುಳ್ಳ ಜ್ಞಾನಿಯಾಗಿ ಸಾರ್ಥಕ ಜೀವನ ನಡೆಸಿ ದರು. ಉದಾರತೆ ಹಾಗೂ ದೂರದೃಷ್ಟಿತ್ವ ಹೊಂದಿದ್ದ ಅವರು ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತದ ಜೊತೆಗೆ ಆಧುನಿಕ ಸಂಗೀತಕ್ಕೂ ಪ್ರಾಧಾನ್ಯತೆ ನೀಡುವ ಮೂಲಕ ಸಂಗೀತ ಕ್ಷೇತ್ರಕ್ಕೂ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ತಂದೆ ನರಸಿಂಹರಾಜ ಒಡೆಯರ್ ನಿಧನ ರಾದ 5 ತಿಂಗಳಲ್ಲೇ ಚಿಕ್ಕಪ್ಪ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊನೆಯುಸಿರೆಳೆದರು. ಆವರೆಗೆ ಯುವರಾಜರಾಗಿದ್ದ ಜಯಚಾಮರಾಜ ಒಡೆಯರ್ ತಮ್ಮ 21ನೇ ವಯಸ್ಸಿಗೆ ಮಹಾರಾಜರಾಗಿ ಅಧಿಕಾರಕ್ಕೆ ಬಂದು ಅಷ್ಟೇ ಸಮರ್ಥ ವಾಗಿ ಆಡಳಿತ ನಡೆಸಿದರು. ವಿಲೀನಕ್ಕೆ ಯಾವ ರಾಜರೂ ಮುಂದೆ ಬಾರದ ಸಂದರ್ಭದಲ್ಲಿ ಜಯಚಾಮರಾಜ ಒಡೆಯರ್ ಮೊದಲಿಗರಾಗಿ ತಮ್ಮ ಸಂಸ್ಥಾನವನ್ನು ವಿಲೀನ ಗೊಳಿಸಿದ ಬಳಿಕವೂ ಅವರು ರಾಜಪ್ರಮುಖರಾಗಿ, ನಂತರ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದು ಶ್ಲಾಘನೀಯ ಎಂದು ರಾಮನಾಥ್ ಕೋವಿಂದ್ ಕೊಂಡಾಡಿದರು.

ಶಿಲಾನ್ಯಾಸ-ಗ್ರಂಥ ಬಿಡುಗಡೆ: ಇದೇ ಸಂದರ್ಭ ದಲ್ಲಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮೈಸೂರು ವಿಶ್ವವಿದ್ಯಾ ನಿಲಯಕ್ಕೆ ಜಯಚಾಮರಾಜ ಒಡೆಯರ್ ಅವರು ನೀಡಿರುವ 22 ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾನಿಲಯ ನಿರ್ಮಿಸುತ್ತಿರುವ `ಜಯಚಾಮರಾಜ ಒಡೆಯರ್ ಸೆಂಟರ್ ಫಾರ್ ಹೈಯರ್ ಲರ್ನಿಂಗ್’ ಉನ್ನತ ಶಿP್ಷÀಣ ಸಂಸ್ಥೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶಿಲಾನ್ಯಾಸ ನೆರವೇರಿಸಿದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಂಸ್ಮರಣಾ ಗ್ರಂಥಮಾಲಾ ಶ್ರೇಣಿಯಲ್ಲಿ ಹಾಗೂ ಚಿತ್ ಸ್ಮಿತಾನಂದ ವಿಭಾಗದ ಪ್ರಥಮ ಪ್ರಸ್ತುತಿಯಾಗಿ ಜಯಚಾಮರಾಜ ಒಡೆಯರ್ ಕೃತಿಗಳ ಸಂಗ್ರಹ `ಶ್ರೀ ವಿದ್ಯಾ ಸಂಕೀರ್ತನ ಸುಧಾ ಲಹರಿ’ ಗ್ರಂಥವನ್ನು ರಾಜ್ಯಪಾಲ ವಾಜು ಬಾಯ್ ಆರ್.ವಾಲಾ ಬಿಡುಗಡೆ ಗೊಳಿಸಿ, ಮೊದಲ ಪ್ರತಿಯನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪತ್ನಿ ಶ್ರೀಮತಿ ಸವಿತಾ ಕೋವಿಂದ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಪ್ರಮೋದಾದೇವಿ ಒಡೆಯರ್, ಟ್ರಸ್ಟಿಗಳಾದ ಕಾಮಾಕ್ಷಿದೇವಿ, ಇಂದ್ರಾಕ್ಷಿ ದೇವಿ, ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್‍ಕುಮಾರ್ ವೇದಿಕೆಯಲ್ಲಿ ದ್ದರು. ಪ್ರಮೋದಾದೇವಿ ಅವರು ಗಣ್ಯರನ್ನು ಸ್ವಾಗತಿಸಿ, ಅಭಿನಂದಿಸಿದರು. ಜಯ ಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶಿಸಿದ ರಾಷ್ಟ್ರಪತಿ ಕೋವಿಂದ್ ಅವರನ್ನು ಅಶ್ವದಳದ ಗೌರವ ರಕ್ಷೆಯೊಂದಿಗೆ ಬರಮಾಡಿ ಕೊಳ್ಳಲಾಯಿತು. ಪೊಲೀಸ್ ವಾದ್ಯವೃಂದ ನುಡಿಸಿದ ರಾಷ್ಟ್ರಗೀತೆಯೊಂ ದಿಗೆ ಕಾರ್ಯಕ್ರಮ ಆರಂಭವಾಯಿತು. ಸಭಾ ಕಾರ್ಯಕ್ರಮ ಮುಗಿಸಿ, ರಾಷ್ಟ್ರಪತಿಗಳು ಅಲ್ಲಿಂದ ತೆರಳಿದ ಬಳಿಕ ಕರ್ನಾಟಕ ಪೊಲೀಸ್ ಬ್ಯಾಂಡ್ ಹಾಗೂ ಮದ್ರಾಸ್‍ನ ಮಿಲಿಟರಿ ಬ್ಯಾಂಡ್‍ನ ಜುಗಲ್ ಬಂದಿ ನೆರೆದಿದ್ದವರ ಮನತಣಿಸಿತು. ರಾಜವಂಶಸ್ಥರ ನೂರಾರು ಸಂಬಂಧಿಗಳು, ಆಹ್ವಾನಿತರು ಭಾಗಿಯಾಗಿದ್ದರು. ಅಲ್ಲದೆ ದಸರಾ ಕಾರ್ಯ ಕ್ರಮಕ್ಕಾಗಿ ಅರಮನೆ ಆವರಣದಲ್ಲಿ ವ್ಯವಸ್ಥೆ ಮಾಡಿದ್ದ ಆಸನಗಳಲ್ಲೂ ನೂರಾರು ಸಾರ್ವಜನಿಕರು ಪರದೆ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.

Translate »