ಮೈಸೂರು ಮಹಾನಗರ ಪಾಲಿಕೆಯಿಂದಅದ್ಧೂರಿ ಮನೆ ಮನೆ ದಸರಾ
ಮೈಸೂರು

ಮೈಸೂರು ಮಹಾನಗರ ಪಾಲಿಕೆಯಿಂದಅದ್ಧೂರಿ ಮನೆ ಮನೆ ದಸರಾ

September 20, 2022

ಮೈಸೂರು, ಸೆ.19(ಎಸ್‍ಬಿಡಿ)- ಮೈಸೂರು ದಸರಾ ಮಹೋತ್ಸವದ ಅಂಗ ವಾಗಿ `ಮನೆ ಮನೆ ದಸರಾ’ ಆಯೋ ಜನೆಗೆ ಪ್ರತಿ ವಾರ್ಡ್‍ಗೆ 2 ಲಕ್ಷ ರೂ. ಅನುದಾನ ನೀಡುವುದಾಗಿ ನಗರ ಪಾಲಿಕೆ ವಿಶೇಷ ಕೌನ್ಸಿಲ್ ಸಭೆಯಲ್ಲಿ ಮೇಯರ್ ಶಿವಕುಮಾರ್ ಘೋಷಿಸಿದರು.
ಮೈಸೂರು ದಸರಾ ಮಹೋತ್ಸವ ಸಂಬಂಧ ಚರ್ಚೆ ನಡೆಸಲು ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಸೋಮವಾರ ನಿಗದಿಪಡಿಸಿದ್ದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಬಹುತೇಕ ಸದಸ್ಯರು, ಮನೆ ಮನೆ ದಸರಾ ನಡೆಸಲು ಪ್ರತಿ ವಾರ್ಡ್‍ಗೆ 5 ಲಕ್ಷ ರೂ., ರಸ್ತೆ ಗುಂಡಿ ಮುಚ್ಚುವುದು, ಪಾರ್ಕ್‍ಗಳ ಸೌಂದರ್ಯೀ ಕರಣ ಸೇರಿದಂತೆ ವಿವಿಧ ಕಾಮಗಾರಿ ಗಳಿಗಾಗಿ ತಲಾ 25 ಲಕ್ಷ ರೂ. ಅನುದಾನ ನೀಡಬೇಕು, ವಾರ್ಡ್‍ಗಳ ಪ್ರಮುಖ ವೃತ್ತ ಹಾಗೂ ರಸ್ತೆಗಳಿಗೆ ವಿದ್ಯುತ್ ದೀಪಾ ಲಂಕಾರ ಮಾಡಬೇಕೆಂದು ಆಗ್ರಹಿಸಿದರು.

ದಸರಾ ವಿಶೇಷ ಹಾಗೂ ತಮ್ಮ ಮೊದಲ ಕೌನ್ಸಿಲ್ ಸಭೆಯಲ್ಲಿ ಸದಸ್ಯರ ಸಲಹೆ ಸ್ವೀಕರಿಸಿದ ಮೇಯರ್ ಶಿವಕುಮಾರ್, 2 ವರ್ಷಗಳ ಹಿಂದೆ ಮನೆ ಮನೆ ದಸರಾ ಗಾಗಿ ವಾರ್ಡ್‍ಗೆ 1 ಲಕ್ಷ ರೂ. ನೀಡಲಾ ಗಿತ್ತು. ಈ ಬಾರಿಯೂ ಅಷ್ಟೇ ಅನುದಾನ ನೀಡಬಹುದೆಂಬುದು ಪಾಲಿಕೆ ಆಯುಕ್ತರ ಅಭಿಪ್ರಾಯ. ಆದರೆ 1 ಲಕ್ಷ ರೂ. ಹಣ ಖಂಡಿತವಾಗಿ ಸಾಕಾಗುವುದಿಲ್ಲ ಎಂದು 2 ಲಕ್ಷ ರೂ. ಅನುದಾನ ನೀಡಲು ತೀರ್ಮಾ ನಿಸಲಾಗಿದೆ. ಹಾಗಾಗಿ ಮನೆ ಮನೆ ದಸರಾ ಆಯೋಜನೆಗೆ ಪ್ರತಿ ವಾರ್ಡ್‍ಗೆ ಜಿಎಸ್‍ಟಿ ಹೊರತುಪಡಿಸಿ 2 ಲಕ್ಷ ರೂ. ಅನುದಾನ ನೀಡಲಾ ಗುವುದು ಎಂದು ತಿಳಿಸಿದರು. ಜಂಬೂಸವಾರಿ ಸಾಗುವ ರಾಜಮಾರ್ಗ ದಲ್ಲಿ ಕೆ.ಆರ್.ವೃತ್ತದಿಂದ ಮಿಲೇನಿಯಂ ವೃತ್ತದವರೆಗೂ ಫುಟ್‍ಪಾತ್ ಅತಿಕ್ರಮಿಸಿ ಕೊಳ್ಳಲಾಗಿದೆ. ರೈಲ್ವೆ ನಿಲ್ದಾಣದ ಸಮೀಪ ಒಂದೆರಡು ಗೂಡಂಗಡಿಗಳಿಗೆ ಪರವಾನಗಿ ನೀಡಿರಬಹುದು. ಆದರೆ ಅಲ್ಲಿ 25-30 ಪೆಟ್ಟಿಗೆ ಅಂಗಡಿ ಗಳಿವೆ. ಫಾಸ್ಟ್‍ಫುಡ್ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರವನ್ನೂ ನಡೆಸುತ್ತಿದ್ದಾರೆ. ಅರಮನೆ ಸುತ್ತಲಿನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಹೀಗಿರುವಾಗ ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಹೇಗೆ ಆಹ್ವಾನಿಸುತ್ತೀರಿ?. ಪ್ರವಾಸಿಗರು ಈ ಅವ್ಯವಸ್ಥೆಯನ್ನು ಕಂಡು ಮೈಸೂರಿನ ಬಗ್ಗೆ ಯಾವ ರೀತಿಯಲ್ಲಿ ಭಾವಿಸುತ್ತಾರೆ? ಎಂದು ಮಾಜಿ ಮೇಯರ್ ಅಯೂಬ್‍ಖಾನ್ ಪ್ರಶ್ನಿಸಿದರು. ಈ ಬಗ್ಗೆ ಸಭೆಯ ಕೊನೆಯಲ್ಲಿ ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್, ಆಯುಕ್ತರೊಂದಿಗೆ ಚರ್ಚೆ ಮಾಡಿ ಕೆ.ಆರ್.ವೃತ್ತದಿಂದ ಮಿಲೇನಿಯಂ ವೃತ್ತದವರೆಗೂ ಫುಟ್‍ಪಾತ್ ವ್ಯಾಪಾರ ಹಾಗೂ ಅತಿಕ್ರಮಣವನ್ನು ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಗುಂಡಿ ಮುಚ್ಚುತ್ತೇವೆ: ಶಾಸಕರ ಅನುದಾನ ಹಾಗೂ ಹಿಂದಿನ ಮೇಯರ್ ಅನುದಾನದಲ್ಲಿ ಹಲವು ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಕಾರ್ಯಾದೇಶವೂ ಆಗಿತ್ತು. ಆದರೆ ಮಳೆ ಅಡ್ಡಿಯಿಂದ ಕೆಲಸ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ. ಈ ಸಂಬಂಧ ಕಳೆದ ವಾರ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿ ಹವಾಮಾನ ವರದಿ ಪ್ರಕಾರ ಒಂದು ವಾರ ಮಳೆ ಇಲ್ಲವೆಂದು ತಿಳಿದಿದ್ದರಿಂದ ತಕ್ಷಣ ಕೆಲಸ ಆರಂಭಿಸಲಾಯಿತು. ಇದಕ್ಕೆ ಹೊರತಾಗಿ ರುವ ರಸ್ತೆಗಳ ದುರಸ್ತಿ ಬಗ್ಗೆ ಸಮೀಕ್ಷೆ ಮಾಡಿ ಡಿಪಿಆರ್ ಸಿದ್ಧಪಡಿಸಿ ದಸರಾ ವೇಳೆಗೆ ಗುಂಡಿ ಮುಚ್ಚಲು ಕ್ರಮ ವಹಿಸುವುದಾಗಿ ಮೇಯರ್ ಭರವಸೆ ನೀಡಿದರು.

ತ್ಯಾಜ್ಯ ವಿಲೇವಾರಿ ಅಭಿಯಾನ: ದಸರಾ ಸಂದರ್ಭದಲ್ಲಿ ನಗರದಲ್ಲಿ ಕಟ್ಟಡ ತ್ಯಾಜ್ಯ (ಡರ್ಬೀಸ್) ತೆರವು ಮಾಡಲಾಗುತ್ತಿತ್ತು. ಅದರಂತೆ ಈ ಬಾರಿಯೂ ಎಲ್ಲಾ ವಾರ್ಡ್‍ಗಳಲ್ಲೂ ತ್ಯಾಜ್ಯ ಸ್ವಚ್ಛತಾ ಅಭಿಯಾನ(ಡರ್ಬೀಸ್ ಕ್ಲೀನಿಂಗ್ ಡ್ರೈವ್) ಆರಂಭಿಸಲಾಗುವುದು.

`ಗೋಲ್ಡ್ ಕಾರ್ಡ್’ ಖಚಿತ: ಸಭೆಯಲ್ಲಿ ದಸರಾ ಪಾಸ್ ಬಗ್ಗೆ ಸುದೀರ್ಘ ಚರ್ಚೆ ಯಾಯಿತು. ಬಹುತೇಕ ಎಲ್ಲಾ ಸದಸ್ಯರೂ ಹಿಂದಿನ ವರ್ಷಗಳಲ್ಲಾದ ಗೊಂದಲವನ್ನು ಪಸ್ತಾಪಿಸಿ ಈ ಬಾರಿಯೂ ಅದು ಮರುಕಳಿಸದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು. ಸರಿಯಾದ ರೀತಿಯಲ್ಲಿ, ಸೂಕ್ತ ಸಮಯದೊಳಗೆ ಪಾಸ್ ನೀಡುವುದಾದರೆ ನೀಡಲಿ ಇಲ್ಲವಾದರೆ ಪಾಸ್ ಕೊಡುವುದೇ ಬೇಡ ಎಂದು ಅಭಿಪ್ರಾಯಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್, ಪಾಲಿಕೆಯ ಎಲ್ಲಾ ಸದಸ್ಯರಿಗೂ `ದಸರಾ ಗೋಲ್ಡ್ ಕಾರ್ಡ್’ ವ್ಯವಸ್ಥೆ ಮಾಡಿ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿ ಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತರುತ್ತೇನೆ. ಒಟ್ಟಾರೆ ಹೋರಾಟ ಮಾಡಿಯಾದರೂ `ಗೋಲ್ಡನ್ ಕಾರ್ಡ್’ ಪಡೆಯುವುದಾಗಿ ಹೇಳಿದರು.

ಮೇಯರ್‍ಗೆ ಅಗೌರವ ಸಲ್ಲದು: ಮಾಜಿ ಮೇಯರ್ ಅಯೂಬ್ ಖಾನ್ ಮಾತನಾಡಿ, 2-3 ವರ್ಷಗಳಿಂದ ನಾಡಹಬ್ಬ ದಸರಾ ಯಾರೋ ಒಬ್ಬರ ಆಸೆ, ಅಭಿಲಾಷೆಯಂತೆ ನಡೆಯುತ್ತಿದೆ. ಒಂದಿಬ್ಬರ ಫ್ಯಾಮಿಲಿ ದಸರಾ ಆಗಿಬಿಟ್ಟಿದೆ. ಕಳೆದ ವರ್ಷ ಅರಮನೆ ವೇದಿಕೆಯಲ್ಲಿ ಮೇಯರ್‍ಗೆ ಆಸನ ಕಲ್ಪಿಸಿರಲಿಲ್ಲ. ಮೇಯರ್ ಗೌನ್ ಧರಿಸಿದ್ದ ಸುನಂದಾ ಪಾಲನೇತ್ರ ಅವರು ಹಿಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರು. ಅದು ಮೇಯರ್‍ಗೆ ಮಾತ್ರವಲ್ಲ, ಇಡೀ ಮೈಸೂರು ಜನತೆಗೆ ಅಪಮಾನವಾದಂತಾಯಿತು. ಇದು ಮುಂದುವರೆದರೆ ನಾವು ಸಹಿಸುವುದಿಲ್ಲ. ಮೈಸೂರಿನ ಪ್ರಥಮ ಪ್ರಜೆ ಮೇಯರ್ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಎಚ್ಚರಿಸಿದರು.

Translate »