ನ.1ರಿಂದ ಕನ್ನಡ ಆಡಳಿತ ಭಾಷೆ
ಮೈಸೂರು

ನ.1ರಿಂದ ಕನ್ನಡ ಆಡಳಿತ ಭಾಷೆ

October 23, 2018

ಬೆಂಗಳೂರು: ಕನ್ನಡದ ನುಡಿ ಹಬ್ಬ ರಾಜ್ಯೋತ್ಸವ ಮತ್ತೆ ಬರುತ್ತಿದೆ. ಈ ಸಂದರ್ಭದಲ್ಲೇ ರಾಜ್ಯದಲ್ಲಿನ ಜಾ.ದಳ -ಕಾಂಗ್ರೆಸ್ ಮೈತ್ರಿ ಸರ್ಕಾರವೂ ‘ಆಡಳಿತದಲ್ಲಿ ಕನ್ನಡ’ ಕಡ್ಡಾಯ ಜಾರಿಗೆ ಟೊಂಕ ಕಟ್ಟಿದೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಈ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಲು ಸಜ್ಜಾಗಿದ್ದಾರೆ. ನ.1ರಿಂದ `ಸರ್ಕಾರಿ ಕಚೇರಿಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಕನ್ನಡ ಬಳಕೆ ಕಡ್ಡಾಯ’ ಕಟ್ಟು ನಿಟ್ಟಾಗಿ ಜಾರಿಗೆ ಕಂಕಣ ತೊಟ್ಟಿದ್ದಾರೆ. ಇನ್ನು ಮುಂದೆ (ನ.1ರಿಂದ) ತಮ್ಮ ಮೇಜಿಗೆ ಬರುವ ಆಡಳಿತಾತ್ಮಕ ಕಡತಗಳೆಲ್ಲವೂ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಎಂಬ ಸೂಚನೆಯನ್ನೂ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿಗಳ ಕಚೇರಿಗೆ ಬರುವ ಕಡತ ಗಳೆಲ್ಲವೂ ಕಡ್ಡಾಯವಾಗಿ ಕನ್ನಡದಲ್ಲೇ ಇರುವಂತೆ ನೋಡಿಕೊಳ್ಳಬೇಕು ಎಂದು ಆಯಾಯ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಕಡತಗಳೇನಾದರೂ ಇಂಗ್ಲಿಷ್‍ನಲ್ಲಿದ್ದರೆ ಪರಿಗಣಿಸದೇ ವಾಪಸ್ ಕಳುಹಿಸಿ ಎಂದು ಸಿಬ್ಬಂದಿಗೂ ಸೂಚಿಸಲಾಗಿದೆ. ಈ ಕುರಿತು ಸುತ್ತೋಲೆ ಶೀಘ್ರದಲ್ಲೇ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡದಲ್ಲೇ ಆಡಳಿತ ಎಂದು ಈ ಹಿಂದೆ ಹಲವು ಬಾರಿ ಸುತ್ತೋಲೆಗಳನ್ನು ಹೊರಡಿಸಿದ್ದರೂ ನಿಯಮ ಪರಿಣಾಮ ಕಾರಿಯಾಗಿ ಜಾರಿ ಆಗಿರಲಿಲ್ಲ. ಬಹಳಷ್ಟು ಇಲಾಖೆಗಳ ಕಡತಗಳು ಈಗಲೂ ಇಂಗ್ಲಿಷ್ ನಲ್ಲಿಯೇ ಇರುವುದು ನಡೆದೇ ಇದೆ. ಆದರೆ ಈ ಬಾರಿ ಹಾಗಾಗುವುದಿಲ್ಲ.

ನ.1ರಿಂದ ಇಂಗ್ಲಿಷ್ ಕಡತಗಳಿಗೆ ಮುಖ್ಯಮಂತ್ರಿಗಳ ಅಂಕಿತ ಬೀಳುವುದಿಲ್ಲ. ಇಲಾಖೆಗೇ ವಾಪಸ್ ಕಳಿಸಲಾಗುತ್ತದೆ. ಕನ್ನಡದಲ್ಲಿ ಆಡಳಿತ ನಿಯಮ ಜಾರಿವಿಚಾರದಲ್ಲಿ ಕುಮಾರಸ್ವಾಮಿ ಅವರು ಬಹಳ ಕಟ್ಟುನಿಟ್ಟಾಗಿದ್ದಾರೆ ಎಂದೇ ಆಡಳಿತ ಸೌಧ ದಲ್ಲಿನ ಕನ್ನಡ ಪ್ರಿಯ ಅಧಿಕಾರಿಗಳು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಕನ್ನಡ ಹೋರಾಟಗಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಹಲವು ವರ್ಷಗಳಿಂದ ಕನಸಿನ ಮಾತೇ ಆಗಿರುವ `ಸರ್ಕಾರದ ಆಡಳಿತ ಸಂಪೂರ್ಣ ಕನ್ನಡದಲ್ಲೇ’ ಎಂಬ ನೀತಿಯು ಈ ಬಾರಿಯಾದರೂ ಪರಿಪೂರ್ಣವಾಗಿ ಜಾರಿಗೆ ಬರುವುದೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲು ಕನ್ನಡ ಮಾಸ(ನವೆಂಬರ್) ಕಳೆಯುವವರೆಗೂ ಕಾಯಬೇಕಿದೆ!

Translate »