ಮೈಸೂರು: ರಾಜಮಾತೆ ಪ್ರಮೋದಾದೇವಿ ಒಡೆಯರ್ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ವಿಜಯಯಾತ್ರೆ ಹಾಗೂ ಶಮಿ ಪೂಜೆಯನ್ನು ಸೋಮವಾರ ವಿಧಿವಿಧಾನದಂತೆ ಅರಮನೆಯ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿದರು.
ಅ.18-19ರಂದು ಅರಮನೆ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ, ವಿಜಯ ಯಾತ್ರೆ ಹಾಗೂ ಶಮಿಪೂಜೆ ನೆರವೇರಿಸಬೇಕಾಗಿತ್ತು. ಆದರೆ ರಾಜಮನೆತನದ ಪ್ರಮುಖರಿಬ್ಬರ ಸಾವಿನ ಹಿನ್ನೆಲೆಯಲ್ಲಿ ರಾಜಪುರೋ ಹಿತರ ಸೂಚನೆಯ ಮೇರೆಗೆ ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು 3 ದಿನ ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 9.20 ಗಂಟೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಅರಮನೆಯಲ್ಲಿ ನಡೆದವು.
ಆಯುಧಪೂಜೆ: ಅರಮನೆಯಲ್ಲಿ ಮೊದಲು ಶುದ್ಧೀಕರಣ ಮಾಡಲಾಯಿತು. ನಂತರ ಕನ್ನಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮುಂಡೇಶ್ವರಿ ಪೂಜೆ ನೆರವೇರಿಸಿದರು. ಬಳಿಕ ರಾಯಾಯಣ ಪಾರಾಯಣ ಮಾಡಿದರು. ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ, ಉತ್ತರ ಪೂಜೆ ಮಾಡಿದರು. ಅರಮನೆಯ ಧರ್ಮಾ ಧಿಕಾರಿ ಜನಾರ್ಧನ್ ಭಟ್ಟರು ಹಾಗೂ ಅರ ಮನೆಯ ಪುರೋಹಿತರಾದ ಶ್ಯಾಮ್ ಜೋಯಿ ಸರು, ಕುಮಾರಸ್ವಾಮಿ, ನರಸಿಂಹಶಾಸ್ತ್ರಿ, ಹರಿ ಹಾಗೂ ಇನ್ನಿತರರು ಧಾರ್ಮಿಕ ಕಾರ್ಯಗಳ ಪೌರೋಹಿತ್ಯ ವಹಿಸಿದ್ದರು.
ವಿಜಯಯಾತ್ರೆ: ಆಯುಧಪೂಜೆ, ವಜ್ರಮುಷ್ಠಿ ಕಾಳಗ ಮುಗಿದ ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಜಯಯಾತ್ರೆ ಕೈಗೊಂಡರು. ಅರ ಮನೆಯ ಮುಂಭಾಗ ಚಿನ್ನದ ಅಡ್ಡಪಲ್ಲಕ್ಕಿ ಯಲ್ಲಿ ಪಟ್ಟದ ಕತ್ತಿಯನ್ನು ಇಟ್ಟು ವಿಜಯ ಯಾತ್ರೆಯಲ್ಲಿ ಕೊಂಡೊಯ್ಯಲಾಯಿತು. ಪೊಲೀಸ್ ಬ್ಯಾಂಡ್, ಮಂಗಳವಾದ್ಯ, ಛತ್ರಿ, ಛಾಮರದವರು, ಹೊಗಳುಭಟರು, ದೀವಟಿಗೆ ಯವರು, ಪಟ್ಟದ ಆನೆ ವಿಕ್ರಮ, ನಿಶಾನೆ ಆನೆ ಗೋಪಿ, ಅರಮನೆಯ ಆನೆಗಳಾದ ಸೀತಾ, ರೂಬಿ, ಚಂಚಲ, ಪ್ರೀತಿ ಆನೆಗಳು, ಪಟ್ಟದ ಹಸು, ಪಟ್ಟದ ಕುದುರೆ, ಒಂಟೆಗಳು ವಿಜಯಯಾತ್ರೆಯಲ್ಲಿ ಸಾಗಿದವು.
ಯದುವೀರ್ ಅವರು ಕಾರಿನಲ್ಲಿ ಸಾಗಿದರು. ಅರಮನೆಯಿಂದ ಭುವನೇಶ್ವರಿ ದೇವಾಲಯ ದವರೆಗೆ ವಿಜಯಯಾತ್ರೆ ನಡೆಸಿದರು.
ಶಾಸ್ತ್ರೋಕ್ತವಾಗಿ ಶಮಿ ಪೂಜೆ ನೆರವೇರಿಸಿ ಅವರು ನೆರೆದಿದ್ದವರಿಗೆ ಪ್ರಸಾದ ವಿತರಿಸಿದರು. ನಂತರ ಮತ್ತೆ ಅರಮನೆಯವರೆಗೂ ವಿಜಯ ಯಾತ್ರೆ ಕೈಗೊಂಡರು. ಬಳಿಕ ಕನ್ನಡಿ ತೊಟ್ಟಿ ಯಲ್ಲಿ ಚಾಮುಂಡೇಶ್ವರಿ ಪೂಜೆ ಮಾಡುವ ಮೂಲಕ ಈ ಸಾಲಿನ ದಸರಾ ಮಹೋ ತ್ಸವದ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು.