ರೈತರ ಸಾಲ ಮನ್ನಾಕ್ಕೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಮ್ಮತಿ
ಮೈಸೂರು

ರೈತರ ಸಾಲ ಮನ್ನಾಕ್ಕೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಮ್ಮತಿ

October 23, 2018

ಬೆಂಗಳೂರು:  ರಾಜ್ಯ ಸರ್ಕಾ ರದ ಒತ್ತಡಕ್ಕೆ ಮಣಿದ ರಾಷ್ಟ್ರೀಕೃತ ಬ್ಯಾಂಕ್‍ಗಳು ರೈತರ ಬೆಳೆ ಸಾಲ ಮನ್ನಾಕ್ಕೆ ಕೊನೆಗೂ ಸಮ್ಮತಿಸಿವೆ. 15 ರಾಷ್ಟ್ರೀಕೃತ ಬಾಂಕ್‍ಗಳು 10 ಲಕ್ಷ ರೈತರು ಪಡೆದಿರುವ ಸಾಲದ ಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿವೆ. ಉಳಿದ ಬೆರಳೆಣಿಕೆಯಷ್ಟು ಬಾಂಕ್ ಗಳು ರೈತರು ಸಾಲ ಪಡೆದ ಮಾಹಿತಿ ನೀಡಬೇಕಿದೆ. ಸರ್ಕಾರಕ್ಕೆ ಲಭ್ಯವಿರುವ ಮಾಹಿತಿ ಅನ್ವಯ ಕೃಷಿ ಸಾಲಗಳನ್ನು ಮನ್ನಾ ಮಾಡಲು ಅರ್ಜಿ ನಮೂನೆ ರೂಪಿಸಿದೆ. ಮುದ್ರಾಂಕ ಮತ್ತು ಶುಲ್ಕ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ವಿಶೇಷ ಕೋಶ ಆರಂಭಿಸಲಾಗಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿ ಕೃಷಿ ಸಾಲ ಮನ್ನಾ ಮಾಡಲು ಸ್ಥಳೀಯವಾಗಿ ಹೇಗೆ ರೈತರು ಅರ್ಜಿಗಳನ್ನು ಸಲ್ಲಿಸಿದರೋ ಅದೇ ಮಾದರಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕೃಷಿ ಸಾಲ ಪಡೆದ ರೈತರು ಸಿದ್ಧಪಡಿಸಿರುವ ಅರ್ಜಿಯನ್ನು ಏಕಗವಾಕ್ಷಿ ಕೋಶಕ್ಕೆ ಸಲ್ಲಿಸಬೇಕು.

ರೈತರ ಈ ಅರ್ಜಿಗಳನ್ನು ಉನ್ನತ ಮಟ್ಟದ ಸಮಿತಿ ಪರಿಶೀಲಿಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, 2 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ ಮಾಡಿ ಅನ್ನದಾತನ ಮನೆಗೆ ಋಣಮುಕ್ತ ಪತ್ರ ತಲುಪಿಸಲಿದೆ. ಕೃಷಿ ಸಾಲ ಮನ್ನಾ ಎಲ್ಲವೂ ಸರ್ಕಾರದ ನಿಬಂಧನೆಗೆ ಒಳಪಟ್ಟಿರುತ್ತದೆ. ರಾಷ್ಟ್ರೀ ಕೃತ ಬ್ಯಾಂಕ್‍ಗಳಲ್ಲಿ ರೈತರು ಒಟ್ಟಾರೆ 22,545 ಕೋಟಿ ರೂ. ಸಾಲ ಪಡೆದಿದ್ದು, ಈ ಪೂರ್ಣ ಹಣವನ್ನು ರಾಜ್ಯ ಸರ್ಕಾರ 5 ಕಂತುಗಳಲ್ಲಿ ಮರುಪಾವತಿಸ ಲಿದೆ. ಸರ್ಕಾರ ಬ್ಯಾಂಕ್‍ಗೆ ಖಾತ್ರಿ ಪತ್ರ ನೀಡಿದ ತಕ್ಷಣವೇ ರೈತ ಸಾಲದಿಂದ ಋಣಮುಕ್ತನಾಗು ತ್ತಾನೆ, ಮುಂದೆ ಯಾವುದೇ ಕಾರಣಕ್ಕೂ ಈ ಹಣಕಾಸು ಸಂಸ್ಥೆಗಳು ರೈತರಿಗೆ ಕಿರುಕುಳ ನೀಡುವಂತಿಲ್ಲ.

ಸಾಲ ಮರುಪಾವತಿಗೆ 6,600 ಕೋಟಿ ರೂ.ಗಳನ್ನು ಮೊದಲ ಕಂತಿನ ಮೊತ್ತವಾಗಿ ಈಗಾಗಲೇ ಮೀಸಲಿರಿಸಿದೆ. ಸಾಲ ಮನ್ನಾಕ್ಕೆ ಈ ಮೊದಲು ಸಮ್ಮತಿಸದ ಆರ್‍ಬಿಐ, ಈಗ ಒಪ್ಪಿಗೆ ಸೂಚಿಸಿದ ನಂತರ ರಾಷ್ಟ್ರೀಕೃತ ಬ್ಯಾಂಕ್ ಗಳು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲು ಮುಂದಾಗಿವೆ.

ರೈತರಿಗೆ ನೀಡಿದ ಭರವಸೆಯಂತೆ ಕೃಷಿ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾದರೂ ರಾಷ್ಟ್ರೀ ಕೃತ ಬ್ಯಾಂಕ್‍ಗಳು ಸಹಕರಿಸುತ್ತಿಲ್ಲ ಎಂದಿದ್ದ ಮುಖ್ಯ ಮಂತ್ರಿ ಕುಮಾರಸ್ವಾಮಿ, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಗುರುತರ ಆರೋಪ ಮಾಡಿದ್ದರು. ಮುಖ್ಯಮಂತ್ರಿ ಅವರ ಹೇಳಿಕೆ ಹೊರ ಬೀಳುತ್ತಿದ್ದಂತೆ ಎಚ್ಚೆತ್ತ ಬ್ಯಾಂಕ್‍ಗಳು ಸಾಲ ಮನ್ನಾ ಕುರಿತ ಸಭೆಯಲ್ಲಿ ನೀಡಿದ ಮಾತಿನಂತೆ ಒಂದು ಬಾರಿಗೆ ಅನ್ವಯ ಆಗುವಂತೆ ಕೃಷಿ ಸಾಲದ ಮೇಲಿನ ಬಡ್ಡಿ, ಚಕ್ರಬಡ್ಡಿ ಮನ್ನಾ ಮಾಡಿ ಅಸಲು ಕಟ್ಟಿಸಿ ಕೊಳ್ಳಲು ಮುಂದಾಗಿವೆ. ಈಗಾಗಲೇ ಸಹಕಾರಿ ಬ್ಯಾಂಕ್ ಗಳಲ್ಲಿ 10 ಲಕ್ಷಕ್ಕೂ ಹೆಚ್ಚು ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭಗೊಂಡು ಒಂದು ಹಂತಕ್ಕೆ ಬಂದಿದೆ.

Translate »