ಇಂದಿನಿಂದ ರೈತರ ಸಾಲಮನ್ನಾಕ್ಕೆ ಚಾಲನೆ
ಮೈಸೂರು

ಇಂದಿನಿಂದ ರೈತರ ಸಾಲಮನ್ನಾಕ್ಕೆ ಚಾಲನೆ

December 8, 2018

ಮಂಡ್ಯ: ಕೊಟ್ಟ ಮಾತಿನಂತೆ ಶನಿವಾರದಿಂದ(ಡಿ.8) ರೈತರ ಸಾಲ ಮನ್ನಾ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದೇವೆ. ನನ್ನ ರೈತರು ಯಾವುದೇ ಆತಂಕ ಪಡುವುದು ಬೇಡ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಪಾಂಡವಪುರ ತಾಲೂಕಿನ ಸೀತಾಪುರದ ಗದ್ದೆಯಲ್ಲಿ ಕಳೆದ 3 ತಿಂಗಳ ಹಿಂದೆ ತಾವೇ ನಾಟಿ ಮಾಡಿದ್ದ ಭತ್ತದ ಕಟಾವು ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಸಾಲ ಮನ್ನಾ ಬಗ್ಗೆ ಪದೇ ಪದೆ ಸ್ಪಷ್ಟೀಕರಣ ನೀಡಿದ್ದೇನೆ. ಇನ್ನಾವ ರೀತಿ ಗಿಳಿಪಾಠ ಮಾಡಬೇಕೊ ಗೊತ್ತಾಗ್ತಿಲ್ಲ. ಸಾಲಮನ್ನಾ ವಿಚಾರದಲ್ಲಿ ದೊಡ್ಡ ಬಳ್ಳಾಪುರದಲ್ಲಿ ಏನು ಘೋಷಣೆ ಮಾಡಿದ್ದೆನೋ ಅದೀಗ ಕೊನೆಯ ಹಂತಕ್ಕೆ ಬಂದಿದೆ. ನಾಳೆ(ಶನಿವಾರ) ದೊಡ್ಡಬಳ್ಳಾಪುರ ಹಾಗೂ ಸೇಡಂನಲ್ಲಿ ರೈತರ ಸಾಲ ಮನ್ನಾಕ್ಕೆ ಚಾಲನೆ ನೀಡು ತ್ತಿದ್ದೇನೆ ಎಂದರು. ಸಹಕಾರಿ ಬ್ಯಾಂಕ್‍ನ ರೈತರ ಸಾಲ 9,458 ಕೋಟಿ ರೂ. ಸಾಲ ಮನ್ನಾ ಆಗಲಿದೆ. ರೈತರು ಮಾಡಿ ರುವ ಸಾಲ 10,300 ಕೋಟಿ ರೂ. ಮಾತ್ರ ಇದಕ್ಕೆ ಹಣದ ಕೊರತೆಯೇನೂ ಇಲ್ಲ್ಲ. ಈ ಸರ್ಕಾರದಲ್ಲಿ ನಿಮಗೆ ನಾನು ಕೊಟ್ಟಿರುವ ಕಾಣಿಕೆ ಇದು. 21 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ದ್ದಾರೆ. 2.80 ಲಕ್ಷ ರೈತರ ಖಾತೆ ಎನ್‍ಪಿಎ ಆಗಿದೆ. ಬ್ಯಾಂಕ್‍ಗಳವರೇ ಬಡ್ಡಿ ಮನ್ನಾ ಮಾಡ್ತಿದ್ದಾರೆ. ಆದರೂ ಈಗ ರಾಷ್ಟ್ರೀಕೃತ ಬ್ಯಾಂಕ್‍ನವರು ಚೆಲ್ಲಾಟ ವಾಡುತ್ತಿದ್ದಾರೆ. ಬಿಜೆಪಿಯ ಕೆಲ ನಾಯಕರ ಕುತಂತ್ರದಿಂದ ಹೀಗೆಲ್ಲಾ ಆಡುತ್ತಿದ್ದಾರೆ. ಸಾಲ ತೀರಿಸದ 17 ಲಕ್ಷ ರೈತ ಕುಟುಂಬ ಗಳಿಗೆ ಮೊದಲ ಕಂತು ಹಣವನ್ನು ನಾಳೆಯಿಂದ ಭರ್ತಿ ಮಾಡುವ ಕಾರ್ಯ ಶುರುವಾಗಲಿದೆ ಎಂದರು.

ಸಾಲ ಮನ್ನಾ ಸರ್ಟಿಫಿಕೇಟ್ ಮನೆ ಮನೆಗೆ ತಲುಪಲಿದೆ. ನನ್ನ ಮತ್ತು ಜನರ ಮಧ್ಯೆ ಅಪನಂಬಿಕೆ ಸೃಷ್ಟಿಸುವ ಕೆಲಸ ನಡೆಯುತ್ತಿದೆ. 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡದೇ ಹೋದರೆ ರಾಜಕೀಯದಲ್ಲಿ ಮುಂದುವರೆಯೋದಿಲ್ಲ ಅಂತಾ ಈಗಾಗಲೇ ಹೇಳಿದ್ದಾನೆ. ನಿಮ್ಮ ಋಣ ತೀರಿಸಲು ಬದ್ಧನಾಗಿದ್ದೇನೆ. ಯಾವುದೇ ಸಂದೇಹ ಬೇಡ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಭತ್ತ ಖರೀದಿ ಕೇಂದ್ರ ಆರಂಭ: ಇಡೀ ರಾಜ್ಯದಲ್ಲಿ ಭತ್ತಕ್ಕೆ ಖರೀದಿ ಕೇಂದ್ರ ಗಳನ್ನು ಆರಂಭಿಸುತ್ತೇವೆ. 1,750 ರೂ. ಕೇಂದ್ರದ್ದು ಹಾಗೂ ರಾಜ್ಯ ಸರ್ಕಾರದ 100 ರೂ. ಸೇರಿ 1850 ರೂ. ಕ್ವಿಂಟಾಲ್‍ಗೆ ಸಿಗಲಿದೆ. ಇನ್ಮುಂದೆ ಮಧ್ಯವರ್ತಿಗಳಿಗೆ ಭತ್ತ ಮಾರಾಟ ಮಾಡಬೇಡಿ.

ಮಧ್ಯವರ್ತಿಗಳು ನಾವೇ ಹೆಚ್ಚು ಹಣ ಕೊಡುತ್ತೇವೆ ಅಂತಾ ರೈತರ ಮುಂದೆ ದುಂಬಾಲು ಬೀಳುವ ಕಾಲ ದೂರದಲ್ಲಿಲ್ಲ. ರೈತರಲ್ಲಿ ಒಗ್ಗಟ್ಟು ಇರದಿದ್ದರೆ ಮಧ್ಯವರ್ತಿಗಳು ಲಾಭ ಮಾಡಿಕೊಳ್ತಾರೆ. ರೈತರು ಮುಂದೆ ಸಾಲ ಮಾಡಬಾರದು ಎಂದರು.

ಬೆಳೆ ಬೆಳೆಯಲಿಕ್ಕೆ ಸರ್ಕಾರವೇ ಆರ್ಥಿಕ ಬೆಂಬಲ ನೀಡಲಿದೆ. ರೈತರು ಮುಂದೆ ಕೃಷಿ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ರಸಾಯನಿಕ ಬಿಟ್ಟು ಜಮೀನಿನಲ್ಲೇ ಸಿಗುವ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿ, ಇದಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಬೆಂಬಲ ಸಿಗಲಿದೆ. ಏನೇ ಕಷ್ಟ ಬಂದರು ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ, ನಾನು ನಿಮ್ಮೊಂದಿಗಿದ್ದೇನೆ ಎಂದರು.

ಡಿಸ್ನಿಲ್ಯಾಂಡ್ ಶತ ಸಿದ್ಧ: ಕೆಆರ್‍ಎಸ್‍ನಲ್ಲಿ ಡಿಸ್ನಿಲ್ಯಾಂಡ್ ಮಾಡಲು ಹೊರಟಿರುವುದಕ್ಕೆ ಈಗ ಮಾರ್ಗ ಮಧ್ಯೆ ಹೊಂಗಳ್ಳಿ ಬಳಿ ರೈತರು ಅಹವಾಲು ನೀಡಿದ್ದಾರೆ. ನಮ್ಮ ಹಿರಿಯರು ಶ್ರಮಿಸಿ ಕಟ್ಟಿರುವ ಕೆಆರ್‍ಎಸ್ ಒಡೆದು ಏನಾದರೂ ಸಾಧನೆ ಮಾಡಲಿಕ್ಕೆ ಸಾಧ್ಯವಿದೆಯೇ. ಹಾಗೆ ಮಾಡಿ ನಾವು ಬದುಕಲು ಸಾಧ್ಯವೇ, ಆ ಯೋಜನೆ ತರಲು ಹೊರಟಿರೋದು ಮೈಸೂರು, ಮಂಡ್ಯ ಭಾಗದ ರೈತರ ಮಕ್ಕಳಿಗೆ 50 ಸಾವಿರ ಮಂದಿಗೆ ಉದ್ಯೋಗ ಸಿಗಲಿ ಅಂತಾ 2 ಲಕ್ಷ ಕುಟುಂಬಗಳು ಸಣ್ಣ ಸಣ್ಣ ಅಂಗಡಿ ತೆರೆದು ವ್ಯಾಪಾರ ಮಾಡಿದರೆ ಆರ್ಥಿಕವಾಗಿ ಸಬಲರಾಗ್ತಾರೆ. ನನ್ನದು ದೂರದೃಷ್ಟಿಯ ಯೋಜನೆ. ಹೀಗಾಗಿ ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಜನರ ಸುರಕ್ಷತೆಗೆ ಆದ್ಯತೆ: ಜಿಲ್ಲೆಯಲ್ಲಿ ನಾಲೆ ದುರಂತ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಜಿಲ್ಲೆಯ ಎಲ್ಲಾ ನಾಲೆಗಳ ಬಳಿ ಸುರಕ್ಷಿತ ಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ. ನಾಲೆಗಳ ಬಳಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ತಡೆ ಗೋಡೆ ನಿರ್ಮಾಣ ಸಂಬಂಧ ಈಗಾಗಲೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.

ಮಾಧ್ಯಮಗಳ ವಿರುದ್ಧ ಕಿಡಿ: ಕೆಲವು ಟಿ.ವಿ.ಮಾಧ್ಯಮಗಳು ಪ್ರತಿದಿನ ನಮ್ಮ ಸರ್ಕಾರ ಇವತ್ತು ಹೋಗುತ್ತೋ ನಾಳೆ ಹೋಗುತ್ತೋ ಅನ್ನೋದನ್ನು ಬಿಂಬಿಸುತ್ತಿದ್ದಾರೆ. ಆದರೆ ನಮ್ಮದು ಸುಭದ್ರ ಸರ್ಕಾರವಾಗಿದೆ. ನಮ್ಮ ಸರ್ಕಾರ ರೈತಪರ ಸರ್ಕಾರವಾಗಿದೆ. ಸಾಲ ಮನ್ನಾದ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿಗಳಲ್ಲೆ ಸ್ಪಷ್ಟತೆ ಇಲ್ಲವೆಂದು ಬಿಂಬಿಸ್ತಿವೆ. ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಮಾಧ್ಯಮಗಳ ವದಂತಿಗಳಿಗೆ ಕಿವಿಕೊಡಬೇಡಿ ಎಂದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಶ್ರೀಕಂಠೇಗೌಡ, ಅಪ್ಪಾಜಿಗೌಡ ಹಾಗೂ ಇತರೆ ಗಣ್ಯರು ಭಾಗವಹಿಸಿದ್ದರು.

Translate »