ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೇ  ನಂ.41 ಸಮಸ್ಯೆ ನಿವಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿಗೆ ನಿವಾಸಿಗಳ ಮನವಿ
ಮೈಸೂರು

ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೇ ನಂ.41 ಸಮಸ್ಯೆ ನಿವಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿಗೆ ನಿವಾಸಿಗಳ ಮನವಿ

December 8, 2018

ಮೈಸೂರು: ‘ಬಿ’ ಖರಾಬು (ಸರ್ಕಾರಿ ಭೂಮಿ) ವರ್ಗೀಕರಣದಿಂದ ಕೈಬಿಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಮೈಸೂರಿನ ಕುರುಬಾರಹಳ್ಳಿ ಸರ್ವೇ ನಂಬರ್ 4 ಮತ್ತು ಆಲನಹಳ್ಳಿ ಸರ್ವೇ ನಂಬರ್ 41ರ ವ್ಯಾಪ್ತಿಯ ನಿವಾಸಿಗಳು ಇಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರನ್ನು ಅವರ ವಿಜಯನಗರದ ನಿವಾಸದಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದರು.

ಹಿಂದಿನ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿ (ಸಿಐಟಿಬಿ), ಈಗಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಬಡಾವಣೆಗಳ ನಿವಾಸಿಗಳಾದ ಎಸ್. ಪ್ರಸನ್ನಕುಮಾರ್, ಉಮೇಶ್, ವಿಜಯಕುಮಾರ್, ಲಿಂಗಣ್ಣ, ಶಿವಕುಮಾರ್, ಮಣಿಕಂಠಸ್ವಾಮಿ ಹಾಗೂ ಇತರರು, ಕಾರ್ಪೋರೇಟರ್‍ಗಳಾದ ಅಶ್ವಿನಿ ಅನಂತು ಹಾಗೂ ರೂಪಾ ಯೋಗೇಶ್ ನೇತೃತ್ವದಲ್ಲಿ ಸಚಿವ ಜಿ.ಟಿ.ದೇವೇಗೌಡರನ್ನು ಭೇಟಿ ಮಾಡಿದರು. ಕುರುಬಾರಹಳ್ಳಿ ಸರ್ವೇ ನಂಬರ್ 4 ಮತ್ತು ಆಲನಹಳ್ಳಿ ಸರ್ವೇ ನಂಬರ್ 41 ವ್ಯಾಪ್ತಿಯಲ್ಲಿ ಬರುವ ಸಿದ್ದಾರ್ಥ ನಗರ, ಕೆ.ಸಿ.ನಗರ, ಜೆ.ಸಿ.ನಗರ, ಕುರುಬಾರಹಳ್ಳಿ ಬಡಾವಣೆಗಳನ್ನು ‘ಬಿ’ ಖರಾಬಿನಿಂದ ಕೈಬಿಟ್ಟು ತಮ್ಮ ಆಸ್ತಿಗಳ ಖಾತೆ-ಕಂದಾಯ, ಪರಭಾರೆಯಂತಹ ಪ್ರಕ್ರಿಯೆ ನಡೆಸಲು ಅನುವು ಮಾಡಿಕೊಡುವಂತೆ ಒತ್ತಾ ಯಿಸಿದರು. ಮನವಿ ಪತ್ರ ಸ್ವೀಕರಿಸಿದ ಜಿ.ಟಿ.ದೇವೇ ಗೌಡರು, ಈ ವಿಷಯ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದ್ದು, ತಾವು ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಕಂದಾಯ ಇಲಾಖೆ ಕಾರ್ಯದರ್ಶಿ ರಾಜಕುಮಾರ್ ಖತ್ರಿಯೊಂದಿಗೆ ಮತ್ತೊಮ್ಮೆ ಸಭೆ ನಡೆಸು ತ್ತೇನೆ ಎಂದರು. ತಮ್ಮನ್ನು ಭೇಟಿ ಮಾಡಿದ ನಿವಾಸಿಗಳ ಸಮ್ಮುಖದಲ್ಲೇ ರಾಜಕುಮಾರ್ ಖತ್ರಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ ಸಚಿವರು, ಕುರುಬಾರಹಳ್ಳಿ ಸರ್ವೇ ನಂಬರ್ 4 ಮತ್ತು ಆಲನಹಳ್ಳಿ ಸರ್ವೇ ನಂಬರ್ 41ರ ಭೂಮಿ ಸಂಬಂಧ ಅಡ್ವೋಕೇಟ್ ಜನರಲ್ ರಿಂದ ಪ್ರಸ್ತುತ ಸ್ಥಿತಿ ಬಗ್ಗೆ ಮಾಹಿತಿ ಪಡೆದು ಸಭೆಗೆ ಮಂಡಿಸುವಂತೆ ಸೂಚಿಸಿದರು. ಹಲವು ವರ್ಷ ಗಳಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಯನ್ನು ನಿವಾಸಿಗಳು ಹಾಗೂ ಆಸ್ತಿ ಮಾಲೀಕರ ಹಿತದೃಷ್ಟಿ ಯಿಂದ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಲು ಕ್ರಮವಹಿಸುವಂತೆ ಸಚಿವರು ಕಂದಾಯ ಇಲಾಖೆ ಕಾರ್ಯದರ್ಶಿಗಳಿಗೆ ತಿಳಿಸಿದರು.
2018ರ ಮಾರ್ಚ್ 3ರಂದು ಸಚಿವ ಸಂಪುಟ ಸಭೆಯಲ್ಲಿ ಮುಡಾ ಬಡಾವಣೆಗಳನ್ನು ‘ಬಿ’ ಖರಾಬು ವರ್ಗ B-Kharab classification) ದಿಂದ ಕೈಬಿಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿವಾಸಿ ಗಳು ಜಿ.ಟಿ.ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟರು.

ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 354.291 ಎಕರೆ (ಸಿದ್ದಾರ್ಥನಗರದ 205.091/2 ಎಕರೆ, ಕೆಸಿ ಬಡಾವಣೆಯ 105 ಎಕರೆ ಹಾಗೂ ಜೆಸಿ ನಗರ ಬಡಾವಣೆಯ 44.20 ಎಕರೆ) ಪ್ರದೇಶವನ್ನು ‘ಬಿ’ ಖರಾಬಿನಿಂದ ಕೈಬಿಡಲು ತೀರ್ಮಾನಿಸಲಾಗಿತ್ತು.
‘ಬಿ’ ಖರಾಬಿನಿಂದ ಕೈಬಿಟ್ಟ ನಂತರ ಸದರಿ ಭೂಮಿ ಯನ್ನು ಮುಡಾಗೆ ಹಸ್ತಾಂತರಿಸುವಂತೆಯೂ ಸಚಿವ ಸಂಪುಟ ಸಭೆ ನಿರ್ಣಯಿಸಿತ್ತು. ನಿರ್ಧಾರ ಕೈಗೊಂಡು 9 ತಿಂಗಳು ಕಳೆದರೂ
ಸಂಬಂಧಪಟ್ಟ ಅಧಿಕಾರಿಗಳು ನಿರ್ಣಯವನ್ನು ಜಾರಿಗೆ ತರುವ ಆಸಕ್ತಿ ತೋರುತ್ತಿಲ್ಲ. ಇದರಿಂದ ಆ ಬಡಾವಣೆಗಳಲ್ಲಿ ವಾಸಿಸುತ್ತಿರುವ 25,000ಕ್ಕೂ ಅಧಿಕ ಮಂದಿಗೆ ಅನುಕೂಲವಾಗುತ್ತದೆ ಎಂದು ನಿವಾಸಿಗಳು ಸಚಿವ ಜಿ.ಟಿ.ದೇವೇಗೌಡರಿಗೆ ತಿಳಿಸಿದರು.
1970ರಲ್ಲಿ ಮುಡಾದಿಂದ ಜಾಗವನ್ನು ಖರೀದಿಸಿದ್ದಾರೆ. ಕಾನೂನು ಬದ್ಧ ಮಾಲೀಕರಾಗಿದ್ದರೂ, ಅವರಿಗೆ ದಾಖಲಾತಿಗಳು ಸಿಕ್ಕಿಲ್ಲ. ಇದರಿಂದ ಆಸ್ತಿಯನ್ನು ಮಾರಾಟ ಮಾಡುವುದಾಗಲೀ, ಹೆಚ್ಚುವರಿ ಮಹಡಿ ಕಟ್ಟುವುದಕ್ಕೆ ಕಳೆದ ಮೂರು ವರ್ಷಗಳಿಂದ ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ಸಚಿವರ ಮುಂದೆ ಅಳಲು ತೋಡಿಕೊಂಡರು. ಕ್ಯಾಬಿನೆಟ್ ನಿರ್ಣಯ ಅನುಷ್ಠಾನಕ್ಕೆ ಅಡ್ವೊಕೇಟ್ ಜನರಲ್ ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿಗಳು ಕ್ರಮವಹಿಸಬೇಕಾಗಿದ್ದರೂ, ಈವರೆಗೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲವಾದ್ದರಿಂದ ತಾವು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಮುಡಾ ಮತ್ತು ಪಾಲಿಕೆ ಅಧಿಕಾರಿಗಳಿಗೆ ಸೂಕ್ತ ಆದೇಶ ಹೊರಡಿಸಬೇಕೆಂದು ಅವರು ಸಚಿವರಿಗೆ ಮನವಿ ಮಾಡಿಕೊಂಡರು. ಅವರ ಮನವಿಯನ್ನು ಸಾವಧಾನದಿಂದ ಕೇಳಿದ ಜಿ.ಟಿ.ದೇವೇಗೌಡರು, ಕೆಲ ತಾಂತ್ರಿಕ ಹಾಗೂ ಕಾನೂನಿನ ತೊಡಕುಗಳಿವೆ. ನ್ಯಾಯಾಲಯ ದಲ್ಲಿ ಬಾಕಿ ಇರುವ ಕೆಲ ಪ್ರಕರಣಗಳ ಬಗ್ಗೆ ಹೈಕೋರ್ಟ್‍ನಲ್ಲಿ ಇತ್ಯರ್ಥಗೊಳಿಸಿ, ಕಳೆದ ಸಚಿವ ಸಂಪುಟದಲ್ಲಿ ಕೈಗೊಂಡಿದ್ದ ನಿರ್ಣಯದೊಂದಿಗೆ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಅಡ್ವೊಕೇಟ್ ಜನರಲ್‍ಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವಿಷಯದ ಸಂಬಂಧ ‘ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು ವಾರದ ಹಿಂದಷ್ಟೇ ನನಗೆ ಮನವಿ ನೀಡಿದ್ದಾರೆ. ಅದನ್ನು ಕಂದಾಯ ಇಲಾಖೆ ಕಾರ್ಯದರ್ಶಿ ರಾಜಕುಮಾರ್ ಖತ್ರಿ ಅವರಿಗೆ ರವಾನಿಸಿ, ಸೂಕ್ತ ಕ್ರಮವಹಿಸುವಂತೆ ನಿರ್ದೇಶನ ನೀಡಿದ್ದೇನೆ. ಅಲ್ಲದೆ, ಈ ಕುರಿತು ಅಡ್ವೊಕೇಟ್ ಜನರಲ್ ಜೊತೆಯೂ ಮಾತನಾಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಇದೇ ವೇಳೆ ತಮ್ಮನ್ನು ಭೇಟಿ ಮಾಡಿದ ನಿವಾಸಿಗಳಿಗೆ ತಿಳಿಸಿದರು.
ಕುರುಬಾರಹಳ್ಳಿ ಸರ್ವೇ ನಂಬರ್ 4ರ 1,543 ಎಕರೆ ಪೈಕಿ 710.17 ಎಕರೆ ಭೂಮಿ ಮತ್ತು ಆಲನಹಳ್ಳಿ ಸರ್ವೇ ನಂಬರ್ 41ರ 175 ಎಕರೆ ಪೈಕಿ 74 ಎಕರೆ ಪ್ರದೇಶವನ್ನು 2015ರ ಮೇ 26ರಂದು ಅಂದಿನ ಜಿಲ್ಲಾಧಿಕಾರಿಗಳು ‘ಬಿ’ ಖರಾಬು ಎಂದು ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »