ಕುರುಬಾರಹಳ್ಳಿ ಸರ್ವೇ ನಂ.4ರ ಆಸ್ತಿ ಮಾಲೀಕರಿಂದ ಪ್ರತಿಭಟನೆಯ ಎಚ್ಚರಿಕೆ
ಮೈಸೂರು

ಕುರುಬಾರಹಳ್ಳಿ ಸರ್ವೇ ನಂ.4ರ ಆಸ್ತಿ ಮಾಲೀಕರಿಂದ ಪ್ರತಿಭಟನೆಯ ಎಚ್ಚರಿಕೆ

December 12, 2018

ಮೈಸೂರು:  ಮುಡಾ ಬಡಾವಣೆಗಳಾದ ಸಿದ್ದಾರ್ಥ ಬಡಾವಣೆ, ಕೆ.ಸಿ.ನಗರ, ಜೆ.ಸಿ.ನಗರ ಸಮಸ್ಯೆ ನಿವಾರಿಸುವುದಕ್ಕೆ ಮುಂದಾಗಿರುವಂತೆ ಕುರುಬಾರಹಳ್ಳಿ ಸರ್ವೇ ನಂ. 4ರ ಇನ್ನಿತರೆ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಮೈಸೂರು-ಬೆಂಗಳೂರು ಮುಖ್ಯ ರಸ್ತೆಯ ಜಂಕ್ಷನ್‍ನಲ್ಲಿ ರಸ್ತೆ ತಡೆ ನಡೆಸಲು ಚಾಮುಂಡಿಬೆಟ್ಟ ತಪ್ಪಲಿನ ಭೂ ಮಾಲೀಕರ ಸಂಘದ ಸದಸ್ಯರು ನಿರ್ಧರಿಸಿದ್ದಾರೆ.

ಜಿಲ್ಲಾಡಳಿತ, ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೇ ನಂ.41 ಹಾಗೂ ಚೌಡಹಳ್ಳಿ ಸರ್ವೇ ನಂ.39ರ ವ್ಯಾಪ್ತಿಯ ಪ್ರದೇಶವನ್ನು ಬಿ-ಖರಾಬು ಎಂದು ಘೋಷಿಸಿ, ದಾಖಲೆಗಳ ವಿಲೇವಾರಿಯನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಇಂಡಸ್ ವ್ಯಾಲಿ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ನಡೆದ ಭೂ ಮಾಲೀಕರ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ದಾಖಲೆಗಳಲ್ಲಿ ನಮೂದಿಸಿರುವ `ಬಿ-ಖರಾಬು’ ಪದವನ್ನು ತೆಗೆದು ಹಾಕಿ, ಅನುಭವ ದಾರರಿಗೆ ನೆರವಾಗುವಂತೆ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸವಿವರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ 35ಕ್ಕೂ ಹೆಚ್ಚು ಭೂ ಮಾಲೀಕರು ವಿವಿಧ ಸಲಹೆ ನೀಡಿದರು.

ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಸಮಸ್ಯೆ ಇತ್ಯರ್ಥ ಪಡಿಸುವಂತೆ ಕೋರುವುದರೊಂದಿಗೆ, ದಾಖಲೆ ವಿಲೇ ವಾರಿಗೆ ಮುಂದಾಗಬೇಕು. ನಿರ್ದಿಷ್ಟ ಗಡುವಿನೊಳಗೆ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಮೈಸೂರು-ಬೆಂಗಳೂರು ಮುಖ್ಯ ರಸ್ತೆ ಯಲ್ಲಿ ರಸ್ತೆ ತಡೆ ನಡೆಸುವ ಮೂಲಕ ಉಗ್ರ ಸ್ವರೂಪದ ಹೋರಾಟ ನಡೆಸಲು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.

ಈ ಕುರಿತು ಚಾಮುಂಡಿ ತಪ್ಪಲಿನ ಭೂ ಮಾಲೀಕರ ಸಂಘದ ಕಾರ್ಯದರ್ಶಿ ಕೆ.ಮನು ಮಾತನಾಡಿ, ಕೆಲ ವರ್ಷಗಳ ಹಿಂದೆ ಜಿಲ್ಲಾಡಳಿತ ಚಾಮುಂಡಿಬೆಟ್ಟದ ತಪ್ಪಲಿನ ಮೂರು ಸರ್ವೇ ನಂಬರ್‍ಗಳಲ್ಲಿರುವ ಬಡಾವಣೆ ಸೇರಿದಂತೆ ಇನ್ನಿತರೆ ಭೂಮಿಯ ದಾಖಲೆಯಲ್ಲಿ ಸರ್ಕಾರಿ ಬಿ-ಖರಾಬು ಎಂದು ನಮೂದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ತಪ್ಪಲಿನ ಭೂ ಮಾಲೀಕರ ಮುಂದಿನ ನಡೆ ಬಗ್ಗೆ ಚರ್ಚಿಸಲು ಇಂದು ಪ್ರಾಥಮಿಕ ಹಂತದ ಸಭೆ ನಡೆಸಲಾಗಿದೆ.

ಈ ಸಭೆಯಲ್ಲಿ ಜಿಲ್ಲಾ ಮಂತ್ರಿ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಳಿ ನಿಯೋಗವೊಂದನ್ನು ಕರೆದೊಯ್ದು ಅಧಿಕಾರಿಗಳು ನಿಯಮ ಉಲ್ಲಂಘಿಸಿ ಬಿ-ಖರಾಬು ಎಂದು ನಮೂದಿಸಿದ್ದಾರೆ ಎಂದು ಮಾಹಿತಿ ನೀಡಲು ನಿರ್ಧರಿಸಲಾಯಿತು. ಮನವಿಗೆ ಸ್ಪಂದಿಸದಿದ್ದರೆ ಮೈಸೂರು-ಬೆಂಗಳೂರು ರಸ್ತೆ ತಡೆ ಮಾಡುವು ದರೊಂದಿಗೆ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲು ಸಮ್ಮತಿಸಲಾಯಿತು ಎಂದರು.

ಸಭೆಯಲ್ಲಿ ಭೂ ಮಾಲೀಕರಾದ ಚೇತನ್, ಅಚ್ಚಯ್ಯ, ಮಹೇಶ್ವರನ್, ಕೋದಂಡರಾಮು, ಸತೀಶ್ ಬರ್ಗಿ, ವಕೀಲ ಶಶಿಕಿರಣ್, ರಾಘವೇಂದ್ರ ಮೂರ್ತಿ, ಎ.ವಿ.ಅಶೋಕ್, ಹಸ್ಮಿ ಬಾನು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »