ರಾಷ್ಟ್ರ ಮಟ್ಟದಲ್ಲಿ ಭರವಸೆ ಮೂಡಿಸಿರುವ ಮೈಸೂರು ಕುಸ್ತಿ ಪಟು ರಾಕೇಶ್ ಚಕ್ರವರ್ತಿ
ಮೈಸೂರು

ರಾಷ್ಟ್ರ ಮಟ್ಟದಲ್ಲಿ ಭರವಸೆ ಮೂಡಿಸಿರುವ ಮೈಸೂರು ಕುಸ್ತಿ ಪಟು ರಾಕೇಶ್ ಚಕ್ರವರ್ತಿ

December 12, 2018

ಮೈಸೂರು:  ಕಳೆದ ತಿಂಗಳಷ್ಟೇ ಹರಿಯಾಣದ ಬಿವಾನಿಯಲ್ಲಿ ನಡೆದ ಆಲ್ ಇಂಡಿಯಾ ವಿಶ್ವವಿದ್ಯಾನಿಲಯ ಕುಸ್ತಿ ಪಂದ್ಯಾ ವಳಿಯಲ್ಲಿ ಕಂಚಿನ ಪದಕ ಗಳಿಸಿದ್ದ ಮೈಸೂರಿನ ಯುವ ಪ್ರತಿಭೆ, 2019ರ ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ಕೆಲೊ ಇಂಡಿಯಾ ಕುಸ್ತಿ ಪಂದ್ಯಾ ವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿ ಸುತ್ತಿದ್ದು, ಇದಕ್ಕಾಗಿ ದೇಹ ಕಸರತ್ತಿನಲ್ಲಿ ತೊಡಗಿದ್ದಾರೆ.

ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಪದಕ ಗಳಿಸುವ ಮೂಲಕ ಮೈಸೂರಿನ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿರುವ ಬಸುದೇವ ಸೋಮಾನಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಎಸ್.ರಾಕೇಶ್ ಚಕ್ರವರ್ತಿರವರು ದೆಹಲಿಯಲ್ಲಿ ನಡೆ ಯುವ ಕೆಲೊ ಇಂಡಿಯಾ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಇವರಿಗೆ ಗುರು ಗಳಾಗಿ ಅಂತರರಾಷ್ಟ್ರ ಮಟ್ಟದ ಕುಸ್ತಿ ಕೋಚ್ ಎಲ್. ಮಂಜಪ್ಪರವರು ತರಬೇತಿ ನೀಡುತ್ತಿದ್ದಾರೆ.

ಇವರು ಮೈಸೂರಿನ ಸುಣ್ಣದಕೇರಿ ನಿವಾಸಿ, ಮೈಸೂರು ನಗರ ಸಶಸ್ತ್ರ ಮೀಸಲು ಪಡೆ(ಸಿಎಆರ್) ಮುಖ್ಯ ಪೇದೆ, ಕುಸ್ತಿ ಪಟು ಬಿ.ಶಂಕರ್ ಚಕ್ರವರ್ತಿ ಮತ್ತು ಜೆ.ಲತಾ ಅವರ ಪುತ್ರರಾಗಿದ್ದು, ಸಹೋದರ ಸಂಜಯ್, ಸಹೋದರಿ ಮೋನಿಕಾ ಇದ್ದಾರೆ.

ಸಿಎಆರ್ ಮುಖ್ಯಪೇದೆ ಶಂಕರ್ ಚಕ್ರವರ್ತಿರವರು ಕುಸ್ತಿಪಟುವಾಗಿದ್ದು, ರಾಜ್ಯ, ರಾಷ್ಟ್ರಮಟ್ಟ ಹಾಗೂ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ದಸರಾ ಕೇಸರಿ, ದಸರಾ ಕಂಠೀರವ ಸೇರಿದಂತೆ ಹಲವು ಪ್ರಶಸ್ತಿ, ಬಹುಮಾನಗಳನ್ನು ಪಡೆದಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿ ಸಲು ಸಾಧ್ಯವಾಗಲಿಲ್ಲ. ಹಾಗಾಗಿ ಆ ಸ್ಥಾನವನ್ನು ಪುತ್ರ ಭರ್ತಿ ಮಾಡಬೇಕೆಂದು 2013ರಲ್ಲಿ ಮರಿಮಲ್ಲಪ್ಪ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಸ್.ರಾಕೇಶ್ ಚಕ್ರವರ್ತಿ ಅವರಿಗೆ ಅಂತರರಾಷ್ಟ್ರ ಮಟ್ಟದ ಕುಸ್ತಿ ಕೋಚ್ ಎಲ್.ಮಂಜಪ್ಪ ಅವರ ಬಳಿ ತರಬೇತಿಗೆ ಸೇರಿಸುತ್ತಾರೆ. ಅಲ್ಲಿಂದ ರಾಕೇಶ್ ಚಕ್ರವರ್ತಿಯ ಕುಸ್ತಿ ಜರ್ನಿ ಆರಂಭವಾಗುತ್ತದೆ.

6 ತಿಂಗಳ ಬಳಿಕ ಮೈಸೂರು ಜಿಲ್ಲಾ ಮಟ್ಟದ ಕುಸ್ತಿ, ಬೆಂಗಳೂರು ದೇವನಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಯಲ್ಲಿ ಭಾಗವಹಿಸುತ್ತಾರೆ. ಆದರೆ, ಬಹುಮಾನಗಳು ಬರುವುದಿಲ್ಲ. ಇದರಿಂದ ಬೇಸರಗೊಂಡ ರಾಕೇಶ್, ಮತ್ತಷ್ಟು ತರಬೇತಿ ಪಡೆದು ಅತೀ ಕಡಿಮೆ ಅವಧಿಯಲ್ಲಿ ಅಂದರೆ, 5 ವರ್ಷದಲ್ಲಿ 10ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದಾರೆ.

ಸಾಧನೆ ಪಟ್ಟಿ: 2015ರಲ್ಲಿ ಜಾರ್ಖಂಡ್‍ನಲ್ಲಿ ನಡೆದ ಸಬ್ ಜೂನಿಯರ್ ರಾಷ್ಟ್ರಮಟ್ಟದ ಕುಸ್ತಿ, 2016ರಲ್ಲಿ ಮಧ್ಯ ಪ್ರದೇಶದಲ್ಲಿ ನಡೆದ 17 ವರ್ಷದೊಳಗಿನ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಭಾಗವಹಿಸಿದ್ದಾರೆ. 2017ರಲ್ಲಿ ಏಷಿಯನ್ ಗೇಮ್ಸ್ ಮತ್ತು ವಲ್ರ್ಡ್ ಗೇಮ್ಸ್ ಕುಸ್ತಿ ಪಂದ್ಯಾವಳಿಗೆ ಆಯ್ಕೆಯ ತರಬೇತಿ ಗಾಗಿ 2 ತಿಂಗಳು ಕಾಲ ಹರಿಯಾಣದಲ್ಲಿ ಭಾರತೀಯ ಕುಸ್ತಿ ಕ್ಯಾಂಪ್ ನಲ್ಲಿ ಕೆಲಸ ಮಾಡಿದ್ದಾರೆ.

2017ರಲ್ಲಿ ದೆಹಲಿಯಲ್ಲಿ ನಡೆದ 19 ವರ್ಷದೊಳ ಗಿನ ರಾಷ್ಟ್ರಮಟ್ಟದ ಕುಸ್ತಿ ಹಾಗೂ 2017ರಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಸಬ್ ಜೂನಿಯರ್ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ. 2017ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕೆಂಪೇಗೌಡ ಪ್ರಶಸ್ತಿ ಕುಸ್ತಿ ಪಂದ್ಯಾವಳಿಯ 97ಕೆಜಿ ವಿಭಾಗದಲ್ಲಿ ಹಾಗೂ 2018ರಲ್ಲಿ ದೆಹಲಿಯಲ್ಲಿ ನಡೆದ 19 ವರ್ಷ ದೊಳಗಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

2017 ಮತ್ತು 2018ರಲ್ಲಿ ನಡೆದ ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯ 97 ಕೆ.ಜಿ ವಿಭಾಗದಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ ಪದಕ. 2018ರ ನವೆಂಬರ್‍ನಲ್ಲಿ ಹರಿಯಾಣದ ಬಿವಾನಿಯಲ್ಲಿ ನಡೆದ ಆಲ್ ಇಂಡಿಯಾ ವಿಶ್ವವಿದ್ಯಾನಿಲಯ ಕುಸ್ತಿ ಪಂದ್ಯಾವಳಿ 97 ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಇವರಿಗೆ ತಂದೆ ಬಿ.ಶಂಕರ್ ಚಕ್ರವರ್ತಿ, ತಾಯಿ ಜೆ.ಲತಾ, ಸಹೋದ್ಯೋಗಿ ಅಕ್ಷಯ್ ಕುಮಾರ್, ಕ್ಯಾತಮಾರನಹಳ್ಳಿ ಜೆ.ವೆಂಕಟೇಶ್ ಹಾಗೂ ಪೈ.ಬಿ.ಮಹೇಶ್ ಪಂಡಿತ್ ಸಹಕಾರ ನೀಡುತ್ತಿದ್ದಾರೆ.

ತರಬೇತಿ: ಎಲ್.ಮಂಜಪ್ಪ ಅವರು ಮೈಸೂರು ವಿವಿಯ ಯುವರಾಜ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ 40ಕ್ಕೂ ಹೆಚ್ಚು ಮಕ್ಕಳಿಗೆ ಕುಸ್ತಿ ತರಬೇತಿ ನೀಡುತ್ತಿದ್ದಾರೆ.

Translate »