ಕಳೆದ ಮಾರ್ಚ್ 3ರ ಸಂಪುಟ ಸಭೆಯಲ್ಲಿ ಸಿದ್ದಾರ್ಥನಗರ, ಕೆಸಿ, ಜೆಸಿ ನಗರ ‘ಬಿ’  ಖರಾಬಿನಿಂದ ಕೈಬಿಡುವ ನಿರ್ಧಾರವಾದರೂ ಕಾರ್ಯಾನುಷ್ಠಾನಗೊಳಿಸದ ಅಧಿಕಾರಿ ವರ್ಗ
ಮೈಸೂರು

ಕಳೆದ ಮಾರ್ಚ್ 3ರ ಸಂಪುಟ ಸಭೆಯಲ್ಲಿ ಸಿದ್ದಾರ್ಥನಗರ, ಕೆಸಿ, ಜೆಸಿ ನಗರ ‘ಬಿ’ ಖರಾಬಿನಿಂದ ಕೈಬಿಡುವ ನಿರ್ಧಾರವಾದರೂ ಕಾರ್ಯಾನುಷ್ಠಾನಗೊಳಿಸದ ಅಧಿಕಾರಿ ವರ್ಗ

October 2, 2018

ಮೈಸೂರು:  ‘ದೇವರು ಕೊಟ್ಟರೂ ಪೂಜಾರಿ ಕೊಡಲೊಲ್ಲ’ ಎಂಬ ಗಾದೆ ಮಾತಿನಂತಿದೆ ನಮ್ಮ ಆಡಳಿತ ವ್ಯವಸ್ಥೆ. ಏಳು ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಕುರುಬಾರ ಹಳ್ಳಿ ಸರ್ವೆ ನಂ. 4ರ ಸಿದ್ದಾರ್ಥನಗರ, ಕೆ.ಸಿ. ನಗರ ಹಾಗೂ ಜೆ.ಸಿ. ನಗರ ಬಡಾವಣೆಗಳ ‘ಬಿ’ ಖರಾಬಿನಿಂದ ಕೈಬಿಡುವ ಸಂಬಂಧ ತೆಗೆದುಕೊಂಡಂತಹ ನಿರ್ಣಯ ಇನ್ನೂ ಕಾರ್ಯಾನುಷ್ಠಾನಗೊಳ್ಳದೇ ಇರುವುದು ನಮ್ಮ ಜನಪ್ರತಿ ನಿಧಿಗಳ ಜನಪರ ಚಿಂತನೆ, ಅಧಿಕಾರಿ ವರ್ಗದ ದಕ್ಷತೆ ಹಾಗೂ ಸಮಯ ಪಾಲನೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ.

ಈ ವರ್ಷದ ಮಾರ್ಚ್ 3ರ ಶನಿವಾರ ಸಂಜೆ 6 ಗಂಟೆಗೆ ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 109 ವಿಷಯ ಪ್ರಸ್ತಾಪವಾಗಿತ್ತು. ಅದರಲ್ಲಿ ಕ್ರಮ ಸಂಖ್ಯೆ 78ರಲ್ಲಿ (ವಿಷಯ ಸಂಖ್ಯೆ ಸಿ. 230/2018) ಮೈಸೂರು ತಾಲೂಕು ಕಸಬಾ ಹೋಬಳಿ ಕುರುಬಾರ ಹಳ್ಳಿ ಸರ್ವೆ ನಂ. 4ರ ಸಿದ್ಧಾರ್ಥ ಬಡಾವಣೆ 205. 09ಳಿ ಎಕರೆ, ಕೆ.ಸಿ. ಬಡಾವಣೆಯ 105 ಎಕರೆ ಮತ್ತು ಜೆಸಿ ಬಡಾ ವಣೆಯ 44.20 ಎಕರೆ ಸೇರಿ ಒಟ್ಟು 354.29ಳಿ ಪ್ರದೇಶ ವನ್ನು ‘ಬಿ’ ಖರಾಬು ಶೀರ್ಷಿಕೆಯಿಂದ ವಿಹಿತಗೊಳಿಸಿ (ಮುಕ್ತ ಗೊಳಿಸಿ) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರು ಮಾಡುವ ಬಗ್ಗೆ ಚರ್ಚೆ ನಡೆದು, ಸದರಿ ಭೂಮಿಯನ್ನು ‘ಬಿ’ ಖರಾಬಿನಿಂದ ವಿಹಿತಗೊಳಿಸಿ, ಈ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಉಚಿತವಾಗಿ ಮಂಜೂರು ಮಾಡಬೇಕೆಂಬ ಮಾರ್ಪಾಡಿನೊಂದಿಗೆ ಸಂಪುಟ ಸಭೆ ಅನುಮೋದನೆ ನೀಡಿತ್ತು.

ಹೀಗೆ ಸಂಪುಟ ಸಭೆಯಲ್ಲಿ ಕೈಗೊಂಡಂತಹ ನಿರ್ಣಯವನ್ನು, ಈಗಾಗಲೇ ಈ ಸರ್ವೆ ನಂಬರ್‌ನ ಭೂಮಿ ವಿಚಾರ ರಾಜ್ಯ ಹೈಕೋರ್ಟ್ ಕಟಕಟೆಯಲ್ಲಿರುವುದರಿಂದ ಅಡ್ವೋಕೇಟ್ ಜನರಲ್ ಮೂಲಕ ರಾಜ್ಯ ಹೈಕೋರ್ಟ್ ಗಮನಕ್ಕೆ ತಂದು ಆದೇಶ ಹೊರಡಿಸುವುದೆಂದು ಸಭೆಯಲ್ಲಿ, ಕಂದಾಯ ಇಲಾಖೆ ಸಚಿವರು ಹಾಗೂ ಅಧಿಕಾರಿ ವರ್ಗಕ್ಕೆ ಸೂಚನೆ ಸಹ ನೀಡಲಾಗಿತ್ತು.

ಅಂದು ಸಂಪುಟ ಸಭೆಯಲ್ಲಿ ತೆಗೆದುಕೊಂಡಂತಹ ಈ ನಿರ್ಣಯವನ್ನು ಏಳು ತಿಂಗಳಾದರೂ ಅನುಷ್ಠಾನಕ್ಕೆ ತರುವ ಕನಿಷ್ಠ ಕಾಳಜಿಯನ್ನು ಸಂಬಂಧಿಸಿದ ಇಲಾಖಾ ಸಚಿವರು, ಅಧಿಕಾರಿ ವರ್ಗ ತೋರಿಸಿಲ್ಲ. ಚುನಾವಣೆ ಬಂದಿದ್ದರಿಂದ ಕಂದಾಯ ಇಲಾಖಾ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ, ತಮ್ಮ ಮುಂದಿನ ರಾಜಕೀಯ ಭವಿಷ್ಯ ನೋಡಿಕೊಳ್ಳುವುದರತ್ತ ಗಮನ ಹರಿಸಿದರೆ, ಅಧಿಕಾರಿ ವರ್ಗ ಮುಂದೆ ನೋಡಿದರಾಯಿತು ಎಂದು ಕಡತ ಬಂದ್ ಮಾಡಿದ್ದಾರೆ.

ಚುನಾವಣೆ ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಮೈತ್ರಿ ಸರ್ಕಾರವೂ 4 ತಿಂಗಳಾದರೂ ಹಿಂದಿನ ಸಂಪುಟ ಸಭೆಯಲ್ಲಿ ಕೈಗೊಂಡಂತಹ ನಿರ್ಣಯಗಳತ್ತ ಹಾಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸಹ ಇನ್ನು ಗಮನವನ್ನೇ ಹರಿಸಿಲ್ಲ ಎಂಬಂತೆ ಕಂಡು ಬರುತ್ತಿದೆ. ಹಾಗಾಗಿ ಅಧಿಕಾರಿಗಳು ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದು ಆದೇಶ ಹೊರಡಿಸುವ ಸಂಬಂಧ ಏನೂ ಕ್ರಮ ಕೈಗೊಂಡಿಲ್ಲ.

ಇಂದೋ, ನಾಳೆಯೋ ಪರಿಹಾರ ದೊರೆಯಲಿದೆ ಎಂದು ಕುರುಬಾರಹಳ್ಳಿ ಸರ್ವೆ ನಂಬರ್ 4ರ ಸಿದ್ದಾರ್ಥನಗರ, ಆಲನಹಳ್ಳಿ ಸರ್ವೆ ನಂಬರ್ 41ರ ಕೆಸಿ ನಗರ, ಜೆಸಿ ನಗರದ ಸಾವಿರಾರು ನಿವಾಸಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂತಹ ಗಂಭೀರ ವಿಷಯಗಳಲ್ಲಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸದಿದ್ದರೆ ಅವರ ಮಹತ್ವದ ‘ಜನಸ್ಪಂದನಾ’ ಜನಪ್ರಿಯ ಕಾರ್ಯಕ್ರಮ ಯಶಸ್ವಿಯಾಗದು.

ಈ ವಿಚಾರವನ್ನೇ ತೆಗೆದುಕೊಂಡರೆ ಹಿಂದಿನ ಡಿಸಿ ಸಿ. ಶಿಖಾ ಕುರುಬಾರಹಳ್ಳಿ ಸರ್ವೆ ನಂ. 4, ಆಲನಹಳ್ಳಿ ಸರ್ವೇ ನಂ. 41 ಹಾಗೂ ಚಾಮುಂಡಿ ಬೆಟ್ಟ ತಪ್ಪಲ ಇನ್ನಿತರೆ ಭೂಮಿ ‘ಬಿ’ ಖರಾಬು ಎಂದು ಆದೇಶ ಹೊರಡಿಸಿದ ನಂತರ ಕಳೆದ 4 ವರ್ಷಗಳಿಂದ ಕುರುಬಾರ ಹಳ್ಳಿ ಸರ್ವೇ ನಂ. 4 ಹಾಗೂ ಆಲನಹಳ್ಳಿ ಸರ್ವೆ ನಂ. 41ರಲ್ಲಿ ಸಿಐಟಿಬಿ ಮತ್ತು ಮುಡಾ ಅಭಿವೃದ್ಧಿಪಡಿಸಿರುವ ಸಿದ್ಧಾರ್ಥನಗರ, ವಿದ್ಯಾನಗರ, ಕೆಸಿ ನಗರ, ಜೆಸಿ ನಗರ ಬಡಾವಣೆಗಳಲ್ಲಿನ ಸಾವಿರಾರು ನಿವಾಸಿಗಳು ತಮ್ಮ ಮನೆ, ನಿವೇಶನಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪಡೆಯಲಾಗದೇ ತೀವ್ರ ಸಂಕಷ್ಟ ಪರಿಸ್ಥಿತಿಗೆ ಗುರಿಯಾಗಿದ್ದಾರೆ. ಆಸ್ತಿ ಇದ್ದರೂ ಅದನ್ನು ಮಾರಾಟ ಮಾಡಲಾಗದೇ, ಪರಭಾರೆ ಮಾಡಲಾಗದೇ ಇಲ್ಲವೇ ನಿವೇಶನದಲ್ಲಿ ಮನೆ ನಿರ್ಮಿಸಲು ನಕ್ಷೆ ಅನುಮೋದನೆ ಆಗದೇ, ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂಬಂಧ ಹಲವಾರು ಹೋರಾಟಗಳನ್ನು ನಡೆಸಿದರೂ ಫಲ ಸಿಕ್ಕಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ ಕೊನೆಗೆ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಅದಕ್ಕೆ ಅನುಮೋದನೆಯನ್ನು ದೊರಕಿಸಿಕೊಟ್ಟಿದ್ದರೂ ಅಧಿಕಾರಿ ವರ್ಗದ ಬೇಜವಾಬ್ದಾರಿ ಹಾಗೂ ವಿಳಂಬ ಧೋರಣೆಯಿಂದಾಗಿ ಸಾವಿರಾರು ನಿವಾಸಿಗಳಿಗೆ ಇನ್ನೂ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

Translate »