ದಸರಾ ಯುವ ಸಂಭ್ರಮದಲ್ಲಿ ಪರಿಸರ ಸಂರಕ್ಷಣೆ, ದೇಶಪ್ರೇಮದ ಹೊಳೆ
ಮೈಸೂರು

ದಸರಾ ಯುವ ಸಂಭ್ರಮದಲ್ಲಿ ಪರಿಸರ ಸಂರಕ್ಷಣೆ, ದೇಶಪ್ರೇಮದ ಹೊಳೆ

October 2, 2018

ಮೈಸೂರು: ಇಳಿ ಸಂಜೆಯ ಮಬ್ಬಿನಲಿ ಬಣ್ಣ-ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆಯಲ್ಲಿ ವಿವಿಧ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳು ಹಸಿರೆ ಉಸಿರು, ಗಿಡ ನಕ್ಕರೆ ಜಗ ನಗುತ್ತದೆ, ಗಿಡ ಅಳಿದರೆ ಜಗ ಅಳಿಯುತ್ತದೆ, ಮರ ಬೆಳೆಸಿ-ಬರ ಅಳಿಸಿ-ತಾಪ ಇಳಿಸಿ, ರೈತರೇ ಆತ್ಮಹತ್ಯೆ ಬೇಡ. ಆತ್ಮಸ್ಥೈರ್ಯ ಬೇಕು ಎಂಬಿತ್ಯಾದಿ ಸಂದೇಶಗಳನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು.

ಮೈಸೂರು ಮಾನಸಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ದಸರಾ ‘ಯುವ ಸಂಭ್ರಮ’ದ 2ನೇ ದಿನವಾದ ಸೋಮವಾರ ಮರಗಳ ಚಿತ್ರಣವುಳ್ಳ ಬ್ಯಾನರ್ ಹಿಡಿದು ವೇದಿಕೆಗೆ ಆಗಮಿಸಿದ ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, `ಅಡವಿ ದೇವಿಯ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ’… ಎಂಬ ಕಾಡು ಜನರನ್ನು ಬಿಂಬಿಸುವ ನೃತ್ಯ ಪ್ರದರ್ಶಿಸಿ ಪರಿಸರ ಸಂರಕ್ಷಣೆ, ಕಾಳಜಿಯನ್ನು ಎತ್ತಿ ಹಿಡಿದು ಹಸಿರೇ ಉಸಿರು. ಮರ ಬೆಳೆಸಿ-ಬರ ಅಳಿಸಿ. ತಾಪ ಇಳಿಸಿ ಸಂದೇಶವನ್ನು ಸಾರಿದರು.

ನಂತರ ವೇದಿಕೆ ಹಂಚಿಕೊಂಡ ಕುಶಾಲನಗರ ಮಹಾತ್ಮಗಾಂಧಿ ಸ್ಮಾರಕ ಪದವಿ ಕಾಲೇಜಿನ ವಿದ್ಯಾರ್ಥಿ ಗಳು, ಕನ್ನಡ ನಾಡು-ನುಡಿ ಕುರಿತ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು’, `ಭಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’ ಹಾಡಿಗೆ ಮನೋಜ್ಞವಾಗಿ ನೃತ್ಯ ಪ್ರದರ್ಶಿಸಿ ಕನ್ನಡ ಕಂಪನ್ನು ಪ್ರೇಕ್ಷಕರಿಗೆ ಉಣಬಡಿಸುವ ಜೊತೆಗೆ ತನಗಿಂತ ತಾಯ್ನಾಡು ಮುಖ್ಯ ಎಂದು ಪ್ರಾಣ ತೆತ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಬ್ರಿಟಿಷರ ನಡುವಿನ ಕಾಳಗದಲ್ಲಿ ಬ್ರಿಟಿಷರು ರಾಯಣ್ಣನನ್ನು ಗಲ್ಲಿಗೇರಿಸುವ ದೃಶ್ಯವಂತೂ ಕನ್ನಡಿಗರ ಎದೆಯಲ್ಲಿ ಕಿಚ್ಚು ಹಚ್ಚಿಸುವಂತಿತ್ತು.

ಪಿರಿಯಾಪಟ್ಟಣ ಸರ್ವೇಶ್ವರ ಕಾಲೇಜಿನ ವಿದ್ಯಾರ್ಥಿ ಗಳು ದೇಶಕ್ಕಾಗಿ ಪ್ರಾಣತೆತ್ತ ಭಗತ್‍ಸಿಂಗ್ ಕುರಿತ ನೃತ್ಯ ಪ್ರದರ್ಶನದಲ್ಲಿ ಬ್ರಿಟಿಷರು ಭಗತ್‍ಸಿಂಗ್‍ನನ್ನು ಗಲ್ಲಿಗೇರಿಸಲು ಕರೆದೊಯ್ಯುವಾಗ ಅಮ್ಮ ಕಣ್ಣೀರು ಹಾಕುತ್ತಾಳೆ. ಈ ವೇಳೆ ಭಗತ್‍ಸಿಂಗ್, ಕಣ್ಣೀರು ಹಾಕಬೇಡಮ್ಮ. ನನ್ನೊಬ್ಬನನ್ನು ಗಲ್ಲಿಗೇರಿಸಿದರೇನಂತೆ ಭಾರತಾಂಬೆಯ ಮಡಿಲಲ್ಲಿ ಸಾವಿರಾರು ಮಂದಿ ಭಗತ್‍ಸಿಂಗರು ಇದ್ದಾರೆ. ಇನ್ನೊಂದು ಜನ್ಮವಿದ್ದರೆ ಈ ಮಣ್ಣಿನಲ್ಲೇ ಹುಟ್ಟುತ್ತೇನೆ ಅಮ್ಮ ಎಂದು ನೇಣಿಗೆ ಕೊರಳೊಡ್ಡುವ ಸನ್ನಿವೇಶಗಳು ನೆರೆದಿದ್ದ ಸಭಿಕರ ಕಣ್ಣುಗಳನ್ನು ಒದ್ದೆಯಾಗಿಸಿದವು.

ಆನಂತರ ವೇದಿಕೆ ಹಂಚಿಕೊಂಡ ತಿಲಕ್ ನಗರದ ವಿಶೇಷ ಚೇತನ ಮಕ್ಕಳು ಹುತಾತ್ಮ ಯೋಧರನ್ನು ಕುರಿತ ನೃತ್ಯ ಪ್ರದರ್ಶಿಸಿದರೆ, ಮಂಡ್ಯ ಸರ್ಕಾರಿ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು ನೃತ್ಯದ ಮೂಲಕ ರೈತ, ಯೋಧ, ಶಿಕ್ಷಣ ಕಲಿಸಿದ ಗುರುಗಳ ಕಣ್ಣಲ್ಲಿ ನೀರು ಹಾಕಿಸಬಾರದು. ರೈತ ದೇಶದ ಬೆನ್ನೆಲುಬು. ಇಂದು ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ರೈತರೆ ಆತ್ಮಹತ್ಯೆ ಬೇಡ. ಆತ್ಮಸ್ಥೈರ್ಯ ಬೇಕು’ ಎಂಬ ಸಂದೇಶವನ್ನು ಸಾರುವ ಜೊತೆಗೆ ದೇಶ ಕಾಯುವ ಸೈನಿಕ, ರೈತ ಮತ್ತು ಗುರುಗಳಿಗೆ ಅಭಿನಂದನೆ ಸಲ್ಲಿಸಿದರು. ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಚೇತನ ಸಂಯುಕ್ತ ಪಿಯು ಕಾಲೇಜಿನ ವಿದ್ಯಾರ್ಥಿಗಳು ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಅಂಬಾರಿಯನ್ನು ಕಳವು ಮಾಡಲು ಸಂಚು ರೂಪಿಸಿದವರನ್ನು ತಾಯಿ ಚಾಮುಂಡೇಶ್ವರಿ ಹೇಗೆ ಸದೆ ಬಡಿಯುತ್ತಾಳೆ ಎಂಬುದನ್ನು `ನವಗ್ರಹ’ ಚಿತ್ರದ ಹಾಡಿಗೆ ನೃತ್ಯ ಪ್ರದರ್ಶಿಸಿದರು. ನಾಗಮಂಗಲ ಆದಿ ಚುಂಚನಗಿರಿ ಕ್ಷೇತ್ರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಾನಪದ ಕಲೆ ಕುರಿತು ನೃತ್ಯ ಪ್ರದರ್ಶಿಸಿದರೆ, ಬಿಳಿಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಮೈತ್ರಿ ಚಾರಿಟಬಲ್ ಟ್ರಸ್ಟ್‍ನ ವಿಶೇಷಮಕ್ಕಳು ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು.

ರಿಲ್ಯಾಕ್ಸ್ ಮೂಡಲ್ಲಿ ಜಿಟಿಡಿ: ಸಚಿವ ಜಿ.ಟಿ.ದೇವೇಗೌಡರು ರಾಜಕೀಯ ಜಂಜಾಟದ ನಡುವೆಯೂ ಬಿಡುವು ಮಾಡಿಕೊಂಡು ಕೆಲ ಸಮಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು. ಕನ್ನಡ ನಾಡು-ನುಡಿ ಕುರಿತ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು’, ಭಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’ ಹಾಡಿಗೆ ಯುವ ಸಮೂಹ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ, ಎಂಜಾಯ್ ಮಾಡಿದರು.

Translate »