ಬಯಲು ರಂಗಮಂದಿರದಲ್ಲಿ ನಾಳೆಯಿಂದ ಸೆ.26ರವರೆಗೆ ಯುವ ಸಂಭ್ರಮ
Uncategorized

ಬಯಲು ರಂಗಮಂದಿರದಲ್ಲಿ ನಾಳೆಯಿಂದ ಸೆ.26ರವರೆಗೆ ಯುವ ಸಂಭ್ರಮ

September 16, 2019

ಮೈಸೂರು: ಪ್ರಸಕ್ತ ಸಾಲಿನ ನಾಡ ಹಬ್ಬ ದಸರಾ ಮಹೋತ್ಸವದ ಮೊಟ್ಟ ಮೊದಲ ಕಾರ್ಯ ಕ್ರಮ ಯುವ ಸಂಭ್ರಮ ಸೆ.17ರಿಂದ ಆರಂಭವಾಗಿ ಸೆ.26ರವರೆಗೆ ನಡೆಯಲಿದ್ದು, ಮೈಸೂರು ವಿಶ್ವವಿದ್ಯಾ ನಿಲಯದ ಬಯಲು ರಂಗ ಮಂದಿರದಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.

ದಸರಾ ಮಹೋತ್ಸವದ ಸಂಭ್ರಮಕ್ಕೆ ಕಳೆಗಟ್ಟಲಿ ರುವ ಯುವ ಸಂಭ್ರಮ-2019ರಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 250ಕ್ಕೂ ಹೆಚ್ಚು ಕಾಲೇಜು ಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕಲಾ ಪ್ರಾಕಾರಗಳನ್ನು ಅನಾವರಣಗೊಳಿಸಲಿದ್ದಾರೆ. ಸೆ.17 ರಂದು 20 ಕಾಲೇಜುಗಳ ತಂಡ, ಸೆ.18ರಂದು 25 ಕಾಲೇಜು, ಸೆ.19ರಂದು 26 ಕಾಲೇಜು, ಸೆ.20ರಂದು 27 ಕಾಲೇಜು, ಸೆ.21ರಂದು 27 ಕಾಲೇಜು, ಸೆ.22ರಂದು 27 ಕಾಲೇಜು, ಸೆ.23ರಂದು 27 ಕಾಲೇಜು, ಸೆ.24 ರಂದು 26 ಕಾಲೇಜು, ಸೆ.25ರಂದು 27 ಕಾಲೇಜು, ಸೆ.26ರಂದು 28 ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿ ದ್ದಾರೆ. ಜಾನಪದ, ಪರಿಸರ, ಕನ್ನಡ ಮತ್ತು ಸಂಸ್ಕೃತಿ, ಅರಣ್ಯ ಸಂರಕ್ಷಣೆ, ಮಾನವ ನಿರ್ಮಿತ ಆಪತ್ತು, ಪೌರಾ ಣಿಕ, ರಾಷ್ಟ್ರೀಯ ಭಾವೈಕ್ಯತೆ, ಪಾರಂಪರಿಕ ಆಸ್ತಿಗಳ ಸಂರಕ್ಷಣೆ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ, ವಿಷ್ಣುವಿನ ದಶಾವತಾರ, ರಾಮಾಯಣ, ಮಹಿಳಾ ಸಬಲೀಕರಣ ಮತ್ತು ಸಮನ್ವಯತೆ, ಶಿವ ತಾಂಡವ, ದೇಶಭಕ್ತಿ, ಮಹಿಷಾಸುರ ಮರ್ಧಿನಿ, ಜೈ ಜವಾನ್, ಸೈನಿಕರ ಜೀವನ, ಆಹಾರ ವ್ಯರ್ಥ ಮಾಡಿ ಬೇಡಿ-ಹಸಿವು ನೀಗಿಸಿ, ಬಲರಾಮ ನೃತ್ಯ ರೂಪಕ, ಪೂಜಾ ಕುಣಿತ ಮಹಿಳಾ ದೌರ್ಜನ್ಯ, ಲಂಕಾ ದಹನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ 8ರಿಂದ 10 ನಿಮಿಗಳವರೆಗೆ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅನಾವರಣ ಮಾಡಲಿದ್ದಾರೆ.

ಸೆ.17ರಂದು ಸಂಜೆ 6ಕ್ಕೆ ಬಯಲು ರಂಗ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಯುವ ಸಂಭ್ರಮದ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಎಲ್.ನಾಗೇಂದ್ರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಸಂಸದರಾದ ಪ್ರತಾಪ ಸಿಂಹ, ವಿ.ಶ್ರೀನಿವಾಸಪ್ರಸಾದ, ಸುಮಲತಾ ಅಂಬರೀಶ್, ಶಾಸಕರಾದ ತನ್ವೀರ್ ಸೇಠ್, ಸಾ.ರಾ.ಮಹೇಶ್, ಜಿ.ಟಿ.ದೇವೇ ಗೌಡ, ಎಸ್.ಎ.ರಾಮದಾಸ್, ಡಾ. ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್ ಕುಮಾರ್, ಅನಿಲ್ ಕುಮಾರ್, ಕೆ.ಮಹದೇವ, ಹರ್ಷವರ್ಧನ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಯುವ ಸಂಭ್ರಮದ ತಾರಾ ಮೆರುಗು ಕಾರ್ಯ ಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಯುವ ಸಂಭ್ರಮ ಕಾರ್ಯಕ್ರಮ ಪ್ರತೀ ದಿನ ಸಂಜೆ 5.30ರಿಂದ ಆರಂಭವಾಗಿ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ದಿನಾ ಅತ್ಯುತ್ತಮ ಪ್ರದರ್ಶನ ನೀಡುವ ಕಾಲೇಜು ತಂಡವನ್ನು ಆಯ್ಕೆ ಮಾಡಿ ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅವಕಾಶ ಮಾಡಿಕೊಡಲಾಗುತ್ತದೆ.

Translate »