ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

September 17, 2019

ಮೈಸೂರು, ಸೆ.16(ಎಂಕೆ) ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ರಂಗಶಂಕರ ಸಭಾಂಗಣದಲ್ಲಿ ವಿಪ್ರ ಜಾಗೃತಿ ವೇದಿಕೆಯ 5ನೇ ವಾರ್ಷಿ ಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ವೇಳೆ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 60 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಬಳಿಕ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳನ್ನು ಪಡೆದರೆ ಸಾಲದು. ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು. ಇಂದು ಬ್ರಾಹ್ಮಣ ಸಮುದಾಯ ಒಂದಾಗುತ್ತಿದ್ದು, ನಿರಂತರ ಸಂಘಟನೆಯಲ್ಲಿ ತೊಡಗಿಕೊಂಡಿದೆ. ನಮ್ಮ ಸಂಘಟನೆಯನ್ನು ನೋಡಿ ಇತರೆ ಸಮುದಾಯಗಳು ಪ್ರಾರಂಭಿಸಿವೆ. ನೂರಾರು ವರ್ಷ ದಿಂದ ನಮ್ಮನ್ನು ಕಡೆಗಣಿಸಲಾಗಿದ್ದು, ಸಂಘಟಿತರಾಗುತ್ತಿದ್ದಂತೆ ಎಲ್ಲಾ ಬಗೆಯ ಸೌಲಭ್ಯ ಗಳು ದೊರಕುತ್ತಿವೆ. ಆದ್ದರಿಂದ ಎಲ್ಲರೂ ಸಂಘಟನೆಯಲ್ಲಿ ಪಾಲ್ಗೊಳ್ಳಿ ಎಂದರು.

ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ವಿಪ್ರ ಜಾಗೃತಿ ವೇದಿಕೆ ಕಳೆದ 5 ವರ್ಷದಿಂದ ಕ್ರಿಯಾಶೀಲವಾಗಿ ಕಾರ್ಯ ನಡೆಸುತ್ತಿದೆ. ಬ್ರಾಹ್ಮಣರು ಮೊದಲು ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಆದರೆ, ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಜಾತಿಯ ಕೀಳರಿಮೆಯನ್ನು ಬಿಟ್ಟು ಸಮಾನತೆಯಿಂದ ಕಾಯಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು. ವೆಂಗೀಪುರ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ, ವಿಪ್ರ ಮುಖಂಡ ಹೆಚ್.ವಿ. ರಾಜೀವ್, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಸ್.ಚಂದ್ರಶೇಖರ್, ಉಮೇಶ್ ಶರ್ಮ, ನಂಜುಂಡ ಸ್ವಾಮಿ, ಎಸ್.ವಸಂತ್, ಎನ್.ಸುರೇಶ್, ಎಂ.ಆರ್.ಬಾಲಕೃಷ್ಣ ಮತ್ತಿತರರು ಇದ್ದರು.

Translate »