ಮೈಸೂರು,ಸೆ.16(ಆರ್‍ಕೆ)-ವಸತಿ ಬಡಾವಣೆಗಾಗಿ ಬಲ್ಲಹಳ್ಳಿ ಸುತ್ತಲಿನ ಗ್ರಾಮಗಳ ಜಮೀನು ಸ್ವಾಧೀನಪಡಿಸಿ ಕೊಳ್ಳಲುದ್ದೇಶಿಸಿರುವ ಕ್ರಮ ಖಂಡಿಸಿ ರೈತರು ಮೈಸೂ ರಿನ ಜೆಎಲ್‍ಬಿ ರಸ್ತೆಯಲ್ಲಿರುವ ಮುಡಾ ಕಚೇರಿ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು `ಬಲ್ಲಹಳ್ಳಿ ಉಳಿಸಿ ಹೋರಾಟ ಸಮಿತಿ’ ಸಂಯುಕ್ತಾಶ್ರಯದಲ್ಲಿ ಧರಣಿ ನಡೆಸುತ್ತಿರುವ 100ಕ್ಕೂ ಹೆಚ್ಚು ರೈತರು, ಬಲ್ಲಹಳ್ಳಿ ಸುತ್ತಲಿನ ರಾಮನಹುಂಡಿ, ಬೀರಿಹುಂಡಿ, ಕೆ.ಸಾಲುಂಡಿ, ಗೋವಳ್ಳಿ, ಕುಮಾರ ಬೀಡು, ಬಡಗಲಹುಂಡಿ, ಮರಟಿಕ್ಯಾತನಹಳ್ಳಿಯ ಫಲ ವತ್ತಾದ ಜಮೀನುಗಳನ್ನು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಮುಡಾ ಅಧಿಕಾರಿಗಳು ಅತಿಕ್ರಮ ವಾಗಿ ವಶಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರು. ಬಲ್ಲಹಳ್ಳಿ ವಸತಿ ಯೋಜನೆಗಾಗಿ ಶೇ.50:50ರ ಅನುಪಾತದ ನೆಪದಲ್ಲಿ ಬೆಳೆ ಬೆಳೆಯುವ ಜಮೀನನ್ನು ಕಿತ್ತುಕೊಳ್ಳಲು ಅಧಿಸೂಚನೆ ಹೊರಡಿಸಿ ರುವುದು ಸರಿಯಲ್ಲ, ಜಮೀನಿನಲ್ಲಿ ನಮ್ಮ ಮೂಲ ಕೃಷಿ ಕಸುಬು ಮಾಡಿಕೊಂಡು ಆಹಾರ ಧಾನ್ಯ ಬೆಳೆದು ಜೀವನ ಸಾಗಿಸುತ್ತಿರುವ ನಮ್ಮ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ಧರಣಿ ನಿರತರು ದೂರಿದರು.
ಜಮೀನನ್ನೇ ನಂಬಿರುವ ನಾವು ಭೂಮಿ ಕಳೆದು ಕೊಂಡರೆ ಮನೆ ಮಂದಿ ಎಲ್ಲಾ ಬೀದಿಗೆ ಬೀಳಬೇಕಾ ಗುತ್ತದೆ. ಆದ್ದರಿಂದ ಪ್ರಾಣ ಹೋದರೂ ಸರಿ, ಜಮೀನು ನೀಡುವುದಿಲ್ಲ ಎಂದಿರುವ ರೈತರು, ತಕ್ಷಣವೇ ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನ ಕೈಬಿಡಬೇಕು. ಅಲ್ಲಿಯ ವರೆಗೂ ಅಹೋರಾತ್ರಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಸೇರಿ ದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿ ಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜನ ಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ನಮ್ಮ ಭೂಮಿ ಉಳಿಸುತ್ತೇವೆಂದು ಭರವಸೆ ನೀಡುವವರೆಗೂ ಧರಣಿ ನಡೆಸುತ್ತೇವೆ ಎಂದಿದ್ದಾರೆ.
ಗುರುಪ್ರಸಾದ್, ಶಿವಕುಮಾರ್, ಶಿವಲಿಂಗೇಗೌಡ, ಶಿವಮಾದೇಗೌಡ, ತಿಮ್ಮೇಗೌಡ, ದ್ಯಾವಶೆಟ್ಟಿ, ಶಿವಣ್ಣ, ಬಸವರಾಜು, ನಿಂಗಣ್ಣ, ನಾಗರಾಜು ಸೇರಿದಂತೆ ಹಲವು ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.