ಯಶಸ್ವಿ ಜಂಬೂಸವಾರಿಯ ರೂವಾರಿ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ
ಮೈಸೂರು

ಯಶಸ್ವಿ ಜಂಬೂಸವಾರಿಯ ರೂವಾರಿ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ

October 11, 2019

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು, ಯಶಸ್ವಿ ಜಂಬೂ ಸವಾರಿ ರೂವಾರಿಗಳಾಗಿ, ನಂತರ ಅರ ಮನೆ ಆವರಣದಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಅರ್ಜುನ ನೇತೃತ್ವದ ಗಜಪಡೆ ಗುರುವಾರ ಮಧ್ಯಾಹ್ನ ಸ್ವಸ್ಥಾನಗಳಿಗೆ ಪ್ರಯಾಣ ಬೆಳೆಸಿತು.

ದಸರಾದಲ್ಲಿ ಪಾಲ್ಗೊಳ್ಳಲು ವಿವಿಧ ಶಿಬಿರಗಳಿಂದ ಎರಡು ತಂಡಗಳಲ್ಲಿ ಬಂದಿದ್ದ 13 ಆನೆಗಳಲ್ಲಿ ಮೂರು ಆನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ಜಯಪ್ರಕಾಶನನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಚೌಡಳ್ಳಿ ಬಳಿ ಇಬ್ಬರನ್ನು ಬಲಿ ಪಡೆದ ಹುಲಿ ಸೆರೆ ಕಾರ್ಯಾ ಚರಣೆಗೆ ಬುಧವಾರವೇ ಕಳುಹಿಸಿಕೊಡಲಾಗಿತ್ತು. ಉಳಿದ 10 ಆನೆಗಳನ್ನು ಅರಮನೆ ಆವರಣದಲ್ಲಿ ಬೀಳ್ಕೊಡಲಾಯಿತು. ಕಳೆದ 40 ದಿನಗಳಿಂದ ಅರ ಮನೆಯ ಅಂಗಳದಲ್ಲಿ ಬೀಡುಬಿಟ್ಟಿದ್ದ ದಸರಾ ಆನೆಗಳು, ಅವುಗಳ ಮಾವುತರು, ಕಾವಾಡಿಗಳು ಕುಟುಂಬದ ಸದಸ್ಯರೊಂದಿಗೆ ತಮ್ಮ ಕ್ಯಾಂಪ್‍ಗಳಿಗೆ ತೆರಳಿದರು.

ಬೀಳ್ಕೊಡುಗೆ: ಅರಮನೆಯ ಆವರಣದಲ್ಲಿ ಇಂದು ಬೆಳಿಗ್ಗೆ 9.30ಕ್ಕೆ ಸಂದ ಅಭಿಜಿನ್ ಲಗ್ನದಲ್ಲಿ ಅರ್ಜುನ ನೇತೃತ್ವದ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಎಸ್.ವಿ.ಪ್ರಹ್ಲಾದರಾವ್ ಎಲ್ಲಾ ಆನೆಗಳ ಪಾದ ತೊಳೆದು ಹರಿಶಿನ, ಕುಂಕುಮ, ಗಂಧ ಹಚ್ಚಿ, ವಿವಿಧ ಹೂವನ್ನು ಸಮರ್ಪಿಸಿ ಸಂಕಲ್ಪ ಮಾಡಿ, ಶೋಡ ಷೋಪಚಾರ ಪೂಜೆ, ಗಣಪತಿ ಪೂಜೆ, ಮಂತ್ರಪುಷ್ಪ, ಅರ್ಚನೆ ಮಾಡಿ, ನೈವೇದ್ಯ ಸಮರ್ಪಿಸಿದರು. ಬಳಿಕ ಪಂಚಫಲ, ಕಬ್ಬು, ಬೆಲ್ಲ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ಆನೆಗಳಿಗೆ ನೀಡಿದರು. ಸಿಸಿಎಫ್ ಟಿ.ಹೀರಾಲಾಲ್, ಡಿಸಿಎಫ್ ಅಲೆಗ್ಸಾಂಡರ್, ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಆನೆಗಳಿಗೆ ಹಣ್ಣುಗಳನ್ನು ನೀಡಿ ಶುಭ ಕೋರಿದರು.

ಎಲ್ಲಿಗೆ: ಬೆಳಿಗ್ಗೆ 10.45ಕ್ಕೆ ಒಂದೊಂದೇ ಆನೆಯನ್ನು ಲಾರಿಗೆ ಹತ್ತಿಸುವ ಕಾರ್ಯ ಆರಂಭಿಸಲಾಯಿತು. 8 ಆನೆಗಳು ಸರಾಗವಾಗಿ ಲಾರಿ ಹತ್ತಿದವು. ಹೊಸ ಆನೆ ಈಶ್ವರ ಅರ್ಧ ಗಂಟೆ ಸತಾಯಿ ಸಿದ. ಈಶ್ವರನ ಮಾವುತ, ಕಾವಾಡಿ ಹಾಗೂ ಇತರೆ ಆನೆಗಳ ಮಾವುತರು, ವಿಶೇಷ ಮಾವುತರು ಎಷ್ಟೇ ಪ್ರಯತ್ನಿಸಿದರೂ ಈಶ್ವರ ಮಾತ್ರ ಜಗ್ಗಲಿಲ್ಲ. ಸತತ ಪ್ರಯತ್ನದಿಂದ ಕೊನೆಗೂ ಈಶ್ವರ ಲಾರಿ ಹತ್ತಿದ. ಇದ ರಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಯಿತು. ಅರ್ಜುನ, ದುರ್ಗಾಪರಮೇಶ್ವರಿ ಯನ್ನು ಹೊರತುಪಡಿಸಿ ಎಲ್ಲಾ ಆನೆಗಳು ಲಾರಿಯ ಮೇಲೆ ನಿಂತಿದ್ದವು. ಈ ವೇಳೆ ಹೊಸ ಆನೆ 19 ವರ್ಷದ ಲಕ್ಷ್ಮೀ ಲಾರಿ ಹತ್ತಲು ಚಂಡಿ ಹಿಡಿದಿದ್ದು ಎಲ್ಲರನ್ನು ಸುಸ್ತು ಮಾಡಿಸಿತು. ಎಲ್ಲಾ ಆನೆಗಳು ಲಾರಿ ಹತ್ತಿದ ನಂತರವಷ್ಟೇ ಮಧ್ಯಾಹ್ನ 2.10ರಲ್ಲಿ ಜಯರ್ಮಾ ತಾಂಡ ಗೇಟ್‍ನಿಂದ ಆನೆಗಳಿದ್ದ ಲಾರಿಗಳು ಅರಮನೆಯಿಂದ ಹೊರ ಹೊರಟವು. ಹಾರ್ಡಿಂಗ್ ವೃತ್ತ ಬಳಸಿಕೊಂಡು ಗನ್‍ಹೌಸ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಸಾಗಿ ವಿವಿಧ ಕ್ಯಾಂಪ್‍ಗಳತ್ತ ಪ್ರಯಾಣ ಬೆಳೆಸಿದವು. ಗಜಪಡೆಯ ನಾಯಕ ಅರ್ಜುನ ಬಳ್ಳೆ ಆನೆ ಕ್ಯಾಂಪ್‍ಗೆ ತೆರಳಿದರೆ, ಮತ್ತಿಗೋಡು ಆನೆ ಕ್ಯಾಂಪ್‍ಗೆ ಬಲರಾಮ, ದುಬಾರೆ ಆನೆ ಕ್ಯಾಂಪ್‍ಗೆ ಕಾವೇರಿ, ವಿಜಯ, ಈಶ್ವರ ವಿಕ್ರಮ, ಗೋಪಿ, ಧನಂಜಯ, ಬಂಡೀ ಪುರದ ರಾಂಪುರ ಕ್ಯಾಂಪ್‍ಗೆ ಲಕ್ಷ್ಮೀ ಹಾಗೂ ಚಾಮರಾಜನಗರದ ಕೆ.ಗುಡಿ ಕ್ಯಾಂಪ್‍ಗೆ ದುರ್ಗಾಪರಮೇಶ್ವರಿ ತೆರಳಿದವು.

ಉಪಹಾರ: ಜಿಲ್ಲಾಡಳಿತ ಇಂದು ದಸರಾ ಆನೆಗಳ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಪಹಾರ ಕೂಟ ಏರ್ಪಡಿಸಿತ್ತು. ಪೊಂಗಲ್, ಕಟ್ಟಾ ಮೀಟ, ವಡೆ ಬಡಿಸಲಾಯಿತು.

ಗೌರವ ಧನ: ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ, ವಿಶೇಷ ಮಾವುತರಿಗೆ ಅರಮನೆ ಮಂಡಳಿಯಿಂದ ತಲಾ 10 ಸಾವಿರ ರೂ, ಗೌರವಧನ ನೀಡಿ, ಗೌರವಿಸಲಾಯಿತು.

ಇಷ್ಟು ದಿನ: ಆ.22ರಂದು ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿಯಿಂದ 6 ಆನೆಗಳ ಮೊದಲ ತಂಡ ಮೈಸೂರಿನ ಅಶೋಕ ಪುರಂನ ಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಿತ್ತು. ಆ.26ರಂದು ಅರಮನೆಯ ಅಂಗಳ ಪ್ರವೇಶಿಸಿದ್ದವು. ಆ.28ರಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭಿಸಿದ್ದವು. ಸೆ.9ರಂದು ಎರಡನೇ ಏಳು ಆನೆಗಳನ್ನು ಕರೆತರಲಾಗಿತ್ತು. ಮೊದಲ ತಂಡದಲ್ಲಿದ್ದ ವರಲಕ್ಷ್ಮಿ ಗರ್ಭಿಣಿಯಾಗಿದ್ದರಿಂದ, ಆಕೆಯನ್ನು 20 ದಿನಗಳ ಹಿಂದಷ್ಟೇ ವಾಪಸ್ಸು ಕಳುಹಿಸಲಾಗಿತ್ತು.ಅದರ ಬದಲಾಗಿ ಗೋಪಾಲಸ್ವಾಮಿಯನ್ನು ಕರೆತರಲಾಗಿತ್ತು. 40 ದಿನಗಳ ಕಾಲ ಅರಮನೆಯ ಅಂಗಳದಲ್ಲಿ ಬೀಡು ಬಿಟ್ಟಿದ್ದ ಆನೆಗಳು ಇಂದು ಕಾಡಿಗೆ ತೆರಳುವಾಗ ನೆರೆದಿದ್ದ ಅಪಾರ ಸಂಖ್ಯೆಯ ಜನರು ತಮಗರಿವಿಲ್ಲದಂತೆ ಭಾವುಕರಾದರು. ಅವರ ಕಂಗಳಲ್ಲಿ ನೀರಾ ಡಿತು. ಈ ಸಂದರ್ಭದಲ್ಲಿ ಆರ್‍ಎಫ್‍ಎ ಸುರೇಂದ್ರ ಕೆ.ದಾಸ್, ಡಿಆರ್‍ಎಫ್‍ಒ ಮಂಜು, ಪಶುವೈದ್ಯ ಡಾ.ಡಿ.ಎನ್.ನಾಗರಾಜು, ಆನೆಯ ಉಸ್ತುವಾರಿ ಗಳಾದ ರಂಗರಾಜು, ಅಕ್ರಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎರಡು ತಾಸು ಸತಾಯಿಸಿದ ಲಕ್ಷ್ಮಿ…!

ಇದೇ ಮೊದಲ ಬಾರಿಗೆ ಆಗಮಿಸಿದ್ದ 19 ವರ್ಷದ ಲಕ್ಷ್ಮೀ ಸ್ವಸ್ಥಾನಕ್ಕೆ ಹೋಗಲು ಲಾರಿ ಹತ್ತಲು ಹಿಂದೇಟು ಹಾಕಿ ಸಿಬ್ಬಂದಿಯ ಬೆವರಿಳಿಸಿದಳು. ಬೆಳಿಗ್ಗೆ 11.15ಕ್ಕೆ ಲಾರಿ ಹತ್ತಿಸುವ ಪ್ರಯತ್ನ ಆರಂಭಿಸಿದರೂ, ಭಾರೀ ಪ್ರತಿರೋಧ ತೋರಿದಳು. ಕಡೆಗೆ ಪ್ರಯಾಸಪಟ್ಟು ಮಧ್ಯಾಹ್ನ 1.55ಕ್ಕೆ ಲಾರಿ ಹತ್ತಿಸಲಾಯಿತು. ಗಜಪಡೆಯಲ್ಲೇ ಅತ್ಯಂತ ಕಿರಿಯವಳಾಗಿರುವ ಲಕ್ಷ್ಮಿ ಮೈಸೂರಿಗೆ ಬರುವಾಗ ಮೊದಲ ಬಾರಿಗೆ ಲಾರಿ ಹತ್ತಿದ ಅನುಭವ ಪಡೆದಿದ್ದಳು. ಮರಳಿ ಶಿಬಿರಕ್ಕೆ ಹೋಗಲು ಲಾರಿ ಹತ್ತಿಸುವ ವೇಳೆ ಭಯದಿಂದ ಹಿಂದೇಟು ಹಾಕಿದಳು.

ಒಂದು ತಾಸು ಮಾವುತರು, ಕಾವಾಡಿ ಹಾಗೂ ಇತರೆ ಆನೆಗಳ ಮಾವುತರು, ವಿಶೇಷ ಮಾವುತರು ತಮಗಿರುವ ಅನುಭವದ ಎಲ್ಲಾ ಮಜಲನ್ನು ಪ್ರಯೋಗಿಸಿ ಲಾರಿಗೆ ಹತ್ತಿಸುವ ಪ್ರಯತ್ನ ಮಾಡಿದರೂ ಲಕ್ಷ್ಮೀ ಮಾತ್ರ ಜಪ್ಪಯ್ಯ ಎನ್ನಲಿಲ್ಲ. ನಂತರ ಗೋಪಿ ಆನೆಯನ್ನು ಕರೆತಂದು ಲಾರಿಗೆ ಹತ್ತಿಸಲು ಪ್ರಯತ್ನ ಮಾಡಲಾಯಿತು. 30 ನಿಮಿಷ ಗೋಪಿ ಮಾಡಿದ ಪ್ರಯತ್ನ ವಿಫಲವಾಯಿತು. ಹಿಂಬದಿಯಿಂದ ನೂಕಿದರೂ ಲಕ್ಷ್ಮಿ ಲಾರಿ ಏರಲಿಲ್ಲ. ನಂತರ ಸರಪಳಿಯನ್ನು ಕಿತ್ತ್ತುಕೊಂಡು ಓಡಿ ಅರಮನೆ ಆನೆಗಳ ನಡುವೆ ರಕ್ಷಣೆ ಪಡೆಯಿತು. ಬಳಿಕ ಲಕ್ಷ್ಮಿ ಕೊರಳಿಗೆ ಹಗ್ಗ ಬಿಗಿದು ಗೋಪಿಯಿಂದ ಎಳೆಸಿಕೊಂಡು ಲಾರಿ ಬಳಿ ಬರುತ್ತಿದ್ದಂತೆ ಮತ್ತೆ ಲಕ್ಷ್ಮೀ ಗೋಪಿಯನ್ನೇ

ಹಿಂದಕ್ಕೆ ಎಳೆದುಕೊಂಡು ಓಡಿತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಲಾರಿ ಏರಿದ್ದ ವಿಕ್ರಮನ್ನು ಕೆಳಗಿಳಿಸಿ ಗೋಪಿಯೊಂದಿಗೆ ಲಕ್ಷ್ಮಿಯನ್ನು ಲಾರಿಗೆ ನೂಕಲು ಬಳಸಿಕೊಳ್ಳಲಾಯಿತು. 2 ಆನೆಗಳು ತಳ್ಳುತ್ತಿದ್ದರೂ ಲಕ್ಷ್ಮಿ ಮಾತ್ರ ಇಬ್ಬರಿಗೂ ಚಳ್ಳೆ ಹಣ್ಣು ತಿನ್ನಿಸಿ, ಓಡಿ ಹೋಗುತ್ತಿತ್ತು. ಇದಾದ ಬಳಿಕ ಅರ್ಜುನ ಹಾಗೂ ದುರ್ಗಾಪರಮೇಶ್ವರಿ ಆನೆಯನ್ನು ಕರೆತಂದು ಲಕ್ಷ್ಮಿಯನ್ನು ಲಾರಿಗೆ ಹತ್ತಿಸುವ ಪ್ರಯತ್ನ ಮಾಡಲಾಯಿತು. ಬಲಿಷ್ಟನಾಗಿರುವ ಅರ್ಜುನನಿಗೂ ಲಕ್ಷ್ಮೀ ಜಗ್ಗಲಿಲ್ಲ. ಅಂತಿಮವಾಗಿ 2 ಖಾಲಿ ಲಾರಿಯನ್ನು ಪಕ್ಕದಲ್ಲಿ ನಿಲ್ಲಿಸಿ, ವಿಶ್ರಾಂತಿ ಪಡೆಯುತ್ತಿದ್ದ ಗೋಪಿಯ ನೆರವು ಪಡೆದು ಮಧ್ಯಾಹ್ನ 1.55ಕ್ಕೆ ಲಕ್ಷ್ಮಿಯನ್ನು ಲಾರಿಗೆ ಹತ್ತಿಸಿ ನಿಟ್ಟುಸಿರು ಬಿಟ್ಟರು.

Translate »