ಜಾಲಪ್ಪ, ಪರಮೇಶ್ವರ್ ಮೆಡಿಕಲ್ ಕಾಲೇಜ್, ಮನೆಗಳು, ಕಚೇರಿಗಳ ಮೇಲೆ ಐಟಿ ದಾಳಿ
ಮೈಸೂರು

ಜಾಲಪ್ಪ, ಪರಮೇಶ್ವರ್ ಮೆಡಿಕಲ್ ಕಾಲೇಜ್, ಮನೆಗಳು, ಕಚೇರಿಗಳ ಮೇಲೆ ಐಟಿ ದಾಳಿ

October 11, 2019

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹ ಗೊಂಡ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಪ್ರಕಟಣೆ ಗೊಂಡ ಬೆನ್ನಲ್ಲೇ ಕಾಂಗ್ರೆಸ್‍ನ ಹಿರಿಯ ನಾಯಕರಾದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಆರ್.ಎಲ್‍ಜಾಲಪ್ಪ ಅವರ ಶಿಕ್ಷಣ ಸಂಸ್ಥೆ, ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿತೈಷಿಯಾಗಿ, ಅವರ ಎಲ್ಲಾ ಆಗು ಹೋಗುಗಳ ಬಗ್ಗೆ ಹೊಣೆಗಾರಿಕೆ, ಚುನಾ ವಣಾ ವೆಚ್ಚ ಎಲ್ಲವನ್ನು ಜಾಲಪ್ಪ ಭರಿಸುತ್ತಿದ್ದರು. ಅಷ್ಟೇ ಅಲ್ಲ ಅವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರ ನ್ನಾಗಿಯೂ ಸಿದ್ದರಾಮಯ್ಯವರನ್ನು ನೇಮಕ ಮಾಡಿಕೊಂಡಿದ್ದರು. ಮುಖ್ಯಮಂತ್ರಿಯಾದ ನಂತರ ಅವರು ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಮುಂಜಾನೆಯಿಂದಲೇ ಚೆನ್ನೈ ಮತ್ತು ಗೋವಾದಿಂದ ಬಂದಿದ್ದ 100 ಆದಾಯ ತೆರಿಗೆ ಅಧಿಕಾರಿಗಳು ಉಭಯ ನಾಯಕರ ಕಚೇರಿ, ಶಿಕ್ಷಣ ಸಂಸ್ಥೆಗಳಲ್ಲದೆ, ಅವರ ಸಂಬಂಧಿಕರ ಮನೆ ಸೇರಿದಂತೆ 30 ಕೇಂದ್ರಗಳಲ್ಲಿ, ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ತನಿಖಾ ಧಿಕಾರಿಗಳು ಇವರಿಗೆ ಸಂಬಂಧಪಟ್ಟ ಹಣಕಾಸಿನ ವಹಿವಾಟು ಮತ್ತು ಇತರ ಆಸ್ತಿಪಾಸ್ತಿಗಳ ಬಗ್ಗೆ ತನಿಖೆ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಮುಖಂಡರ ಮೇಲೆ ಆದಾಯ ತೆರಿಗೆ ದಾಳಿ ನಡೆಸಿರುವುದನ್ನು ಆ ಪಕ್ಷದ ಕೆಲವು ನಾಯಕರು ಟೀಕೆ ಮಾಡಿರುವುದಲ್ಲದೆ, ಬಿಜೆಪಿ ಮತ್ತು ಕೇಂದ್ರ ಸರ್ಕಾರ ಪ್ರತಿಪಕ್ಷಗಳನ್ನು ಹತ್ತಿಕ್ಕುವ ಮತ್ತು ಮುಖಂಡರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಪರಮೇಶ್ವರ್ ಅವರ ಸದಾಶಿವ ನಗರ ನಿವಾಸ, ತುಮಕೂರಿನ ಅವರ ಶಿಕ್ಷಣ ಸಂಸ್ಥೆಗಳು, ಕಚೇರಿ ಮತ್ತು ಸಹೋ ದರರು ಮತ್ತು ಆಪ್ತರ ಮನೆಗಳ ಮೇಲೆ ದಾಳಿ ಮುಂದುವರೆದಿದೆ. ದಾಳಿ ಸಂದರ್ಭದಲ್ಲಿ ಡಾ.ಪರಮೇಶ್ವರ್ ನಿವಾಸದಲ್ಲಿರಲಿಲ್ಲ. ಅವರು ತಮ್ಮ ಕೊರಟಗೆರೆ ಕ್ಷೇತ್ರದಲ್ಲಿ ಪ್ರವಾಸದಲ್ಲಿದ್ದರು. ಅಧಿಕಾರಿಗಳು ಅವರನ್ನು ಸಂಪರ್ಕಿಸಿ, ಕರೆಸಿ ಕೊಂಡು ಮನೆಯಲ್ಲೇ ವಿಚಾರಣೆ ನಡೆಸಿದರು.

ವಿಚಿತ್ರವೆಂದರೆ, ಜಾಲಪ್ಪ ಅವರ ಪುತ್ರ ನರಸಿಂಹಸ್ವಾಮಿ ಬಿಜೆಪಿಯ ಶಾಸಕರಾಗಿದ್ದರು. ಇದೀಗ ಅವರು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಎರಡೂ ಪಕ್ಷಗಳ ಕೆಲವು ನಾಯಕರ ಕಚೇರಿ ನಿವಾಸಗಳ ಮೇಲೆ ದಾಳಿ ನಡೆದಿತ್ತು. ಜಾಲಪ್ಪ ಅವರ ಸೋದರಳಿಯ ಜಿ.ಎಚ್.ನಾಗರಾಜ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಚಿಕ್ಕಬಳ್ಳಾಪುರ ವಿಧಾನಸಭೆಗೆ ನಡೆಯುವ ಉಪಚುನಾವಣೆಯಲ್ಲಿ ನಾಗರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದರು. ಇದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದೆ. ಡಾಲರ್ಸ್ ಕಾಲೋನಿಯಲ್ಲಿ ವಾಸವಿರುವ ಜಾಲಪ್ಪನವರನ್ನಾಗಲಿ ಅಥವಾ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿಲ್ಲ. ಆದರೆ ಅವರ ಶಿಕ್ಷಣ ಸಂಸ್ಥೆಯ ನಿರ್ದೇಶಕರು ಮತ್ತು ದೈನಂದಿನ ವ್ಯವಹಾರ ನೋಡಿಕೊಳ್ಳುವ ಪ್ರಮುಖರ ಮೇಲೆ ದಾಳಿ ನಡೆದಿದೆ. ಕೇವಲ ಅಷ್ಟೇ ಅಲ್ಲ ಶಿಕ್ಷಣ ಸಂಸ್ಥೆ ಮತ್ತು ಕಚೇರಿಯ ಸಿಬ್ಬಂದಿಯಿಂದಲೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಸಿದ್ಧಾರ್ಥ ಮತ್ತು ದೇವರಾಜ್ ಅರಸ್ ವೈದ್ಯಕೀಯ ಶಿಕ್ಷಣ ಸಂಸ್ಥೆ, ಖಾಸಗಿ ವಿವಿ ಮಾನ್ಯತೆ ಪಡೆದಿದ್ದಲ್ಲದೆ, ಹೊರಗಿನ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರವೇಶ ವಂತಿಗೆ ವಸೂಲಿ ಮಾಡುತ್ತಾರೆ ಎಂಬ ಆರೋಪವಿದೆ. ಇದರಲ್ಲಿ ಬರುವ ಕಪ್ಪು ಹಣದಿಂದಲೇ ರಾಜಕೀಯ ಮಾಡುತ್ತಾರೆ ಎಂಬ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಐಟಿ ಅಧಿಕಾರಿಗಳೊಂದಿಗೆ ಬೆಂಗಳೂರಿಗೆ ಬಂದ ಡಾ.ಪರಮೇಶ್ವರ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ನನಗೆ ಯಾವುದೂ ಗೊತ್ತಿಲ್ಲ. ನಾನು ನನ್ನ ಕ್ಷೇತ್ರದಲ್ಲಿದ್ದೆ, ಐಟಿ ಅಧಿಕಾರಿಗಳು ಬರೋಕೆ ಹೇಳಿದ್ರು, ಬಂದಿದ್ದೇನೆ. ಏನು ಪ್ರಶ್ನೆ ಕೇಳುತ್ತಾರೊ ಅದಕ್ಕೆ ಉತ್ತರಿಸುವೆ ಎಂದರು. ಕಾಲೇಜು, ನಿವಾಸ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ನಾವೆಲ್ಲ 58 ವರ್ಷದಿಂದ ಸಂಸ್ಥೆ ನಡೆಸುತ್ತಾ ಇದ್ದೇವೆ. ಪ್ರತಿಯೊಂದು ಐಟಿ ರಿಟನ್ರ್ಸ್ ಮಾಡಿದ್ದೇನೆ. ನಮ್ಮ ಶಿಕ್ಷಣ ಸಂಸ್ಥೆಯನ್ನ ನಮ್ಮ ತಂದೆಯವರು ಮಾಡಿದ್ದು ಬಿಟ್ಟರೆ, ನಮ್ಮದು ಯಾವ ಬ್ಯುಸಿನೆಸ್ ಕೂಡ ಇಲ್ಲ ಎಂದ ಅವರು, ರಾಜಕೀಯ ಪ್ರೇರಿತ ದಾಳಿಯೇ ಎಂಬ ಪ್ರಶ್ನೆಗೆ ಉತ್ತರ ನೀಡದೇ ತೆರಳಿದರು.

Translate »