ಮೈತ್ರಿ ಸರ್ಕಾರ ಪತನ, ದೇವೇಗೌಡರ ಕುಟುಂಬದ ಕಣ್ಣೀರಿಗೆ ಸಾ.ರಾ.ಮಹೇಶ್ ಕಾರಣ ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್
ಮೈಸೂರು

ಮೈತ್ರಿ ಸರ್ಕಾರ ಪತನ, ದೇವೇಗೌಡರ ಕುಟುಂಬದ ಕಣ್ಣೀರಿಗೆ ಸಾ.ರಾ.ಮಹೇಶ್ ಕಾರಣ ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್

September 16, 2019

ಮೈಸೂರು, ಸೆ.15(ಎಂಟಿವೈ)-ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಇಂದು ಕಣ್ಣೀರಿನಲ್ಲಿ ಕೈತೊಳೆಯಲು ಶಾಸಕ ಸಾ.ರಾ.ಮಹೇಶ್ ರಂತಹ ದುರಹಂಕಾರಿ ಸ್ನೇಹಿತರೇ ಕಾರಣ ಎಂದು ಮಾಜಿ ಸಚಿವ, ಅನರ್ಹ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ.

ಕೆ.ಆರ್.ನಗರದ ತಮ್ಮ ನಿವಾಸದಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಹಾಗೂ ಇಂದು ದೇವೇಗೌಡರ ಕುಟುಂಬ ಕಣ್ಣೀರಡಲು ಸಾ.ರಾ.ಮಹೇಶ್ ನೇರ ಕಾರಣ. ದುರಹಂ ಕಾರದ ವರ್ತನೆಯಿಂದ ತಪ್ಪು ಮಾಹಿತಿ ನೀಡುವ ಮೂಲಕ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಅಪಕೀರ್ತಿಗೆ ಸಾ.ರಾ.ಮಹೇಶ್ ಕಾರಣ ಎಂದು ರಾಜ್ಯದ ಜನತೆಗೆ ತಿಳಿದಿದೆ. ಆದರೆ ಜನರನ್ನು ತಪ್ಪು ದಾರಿಗೆ ಎಳೆಯುವ ನಿಟ್ಟಿನಲ್ಲಿ ಪ್ರಯತ್ನಿಸಲು ಸುಳ್ಳು ಆರೋಪ ಮಾಡುವಲ್ಲಿ ಹೀರೋ ತರಹ ಆಗಿದ್ದಾರೆ ಎಂದು ಅವರು ಕಿಡಿಕಾರಿದರು.

ಮೂಲೆಗುಂಪಾಗಿದ್ದವರನ್ನು ಶಾಸಕನಾಗಿ ಮಾಡಿದೆ ಎಂದು ಪದೇ ಪದೆ ಹೇಳುತ್ತಿ ದ್ದಾರೆ. 40 ವರ್ಷದ ರಾಜಕಾರಣದಲ್ಲಿ ಅಧಿಕಾರ ಇರಲಿ, ಇಲ್ಲದೇ ಇರಲೀ, ಸೋತಾ ಗಲೂ, ಗೆದ್ದಾಗಲೂ, ಜನರ ನಡುವೆ ಇದ್ದು ಹೋರಾಟ ಮಾಡಿಕೊಂಡು ಬಂದವನು ನಾನು. ಯಾವುದೇ ಕಾರಣಕ್ಕೂ ಮೂಲೆಗುಂಪಾದವನು ನಾನಾಗಿರಲಿಲ್ಲ. ಶಾಸಕ ಸಾ.ರಾ.ಮಹೇಶ್ ಸುಳ್ಳು ಹೇಳುವ ಮೂಲಕ ಸಹಾನುಭೂತಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸು ತ್ತಿರುವುದನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು. ದೇವೇಗೌಡರ ಮೇಲೆ ನನಗೆ ಇಂದಿಗೂ ಅಪಾರವಾದ ಗೌರವ, ಅಭಿಮಾನ, ಕೃತಜ್ಞತೆ ಇದೆ. ಆದರೆ ಸರ್ಕಾರ ಪತನವಾಗಲು ನಾವು ಕಾರಣರಲ್ಲ. ಮುಖ್ಯ ಮಂತ್ರಿಯಾಗಿದ್ದ ಕುಮಾರಸ್ವಾಮಿಗೆ ಪರಮಾಪ್ತನಾಗಿದ್ದ ಕೆ.ಆರ್. ನಗರದ ಶಾಸಕ ಸಾ.ರಾ. ಮಹೇಶ್ ದುರ್ವರ್ತನೆಯೇ ಕಾರಣವಾಗಿದೆ. ಇಂತಹವರ ವರ್ತನೆಗೆ 4 ಜನ ಒಕ್ಕಲಿಗ ಶಾಸಕರು ಸಿಡಿದೆದ್ದು ಹೊರ ಬಂದಿದ್ದಾರೆ. ದೇವೇಗೌಡರ ಕುಟುಂಬದ ಮೇಲೆ ಗೌರವ ಕಡಿಮೆಯಾಗುವಂತೆ ಸಾ.ರಾ.ಮಹೇಶ್ ಮಾಡಿದ್ದಾರೆ ಎಂದು ದೂರಿದರು.

ಲೆಕ್ಕ ಪತ್ರ ಬಿಡುಗಡೆ ಮಾಡಿ: ಕೆ.ಆರ್.ನಗರಕ್ಕೆ 700 ಕೋಟಿ ರೂ. ಅನುದಾನ ತಂದಿದ್ದೆ. ಅದನ್ನು ಹಿಂಪಡೆಯಲಾಗಿದೆ ಎಂದು ಕೆ.ಆರ್.ನಗರದಾದ್ಯಂತ ಶಾಸಕ ಸಾ.ರಾ.ಮಹೇಶ್ ಹೇಳಿಕೊಂಡು ತಿರುಗಾಡುತ್ತಿದ್ದಾರೆ. 700 ಕೋಟಿ ರೂ. ಬಿಡುಗಡೆಯಾಗಿದ್ದರೆ ಇಡೀ ಕೆ.ಆರ್.ನಗರ ತಾಲೂಕನ್ನು ಅಭಿವೃದ್ಧಿ ಮಾಡುವುದರೊಂದಿಗೆ ನೆನೆಗುದಿಗೆ ಬಿದ್ದಿರುವ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಬಹುದಿತ್ತು. ಈ ಹಿಂದೆ ಸಚಿವರಾಗಿದ್ದ ವೇಳೆ ಶ್ರೀರಾಮ ಸಕ್ಕರೆ ಕಾರ್ಖಾನೆಯ ಭೂಮಿಯನ್ನು ಅಡವಿಟ್ಟು 14 ಕೋಟಿ ರೂ.ಗಳನ್ನು ಸುಮ್ಮನೆ ಕೂತಿದ್ದವರಿಗೆ ಸಂಬಳವಾಗಿ ನೀಡಿದಿರಿ. ಅದೇ 14 ಕೋಟಿ ರೂ.ನಲ್ಲಿ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಿ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ತಾಲೂಕಿನ ರೈತರಿಗೆ ನೆರವಾಗಬಹುದಾಗಿತ್ತು. ಆದರೆ ನಿಮಗೆ ರೈತರ ಮೇಲೆ ಕಾಳಜಿ ಇಲ್ಲ. ಪದೇ ಪದೆ ಪಾದಯಾತ್ರೆ ಮಾಡುವ ಮೂಲಕ ರೈತರನ್ನು ತಪ್ಪು ದಾರಿಗೆ ಎಳೆದರಲ್ಲದೆ, ರಾಜಕೀಯ ಲಾಭ ಮಾಡಿಕೊಳ್ಳುವು ದಕ್ಕೆ ಮಾತ್ರ ನಿಮ್ಮ ಆಸಕ್ತಿ ಇತ್ತು ಎಂದು ಛೇಡಿಸಿದರು.

ಕೆಲವರನ್ನು ಮರ್ಜಿನಲ್ಲಿಟ್ಟುಕೊಂಡು ಸುಳ್ಳು ಹೇಳುತ್ತಾ ಸಾಗುತ್ತಿದ್ದೀರಿ. ನಾನು ಅಧಿಕಾರ ದಲ್ಲಿದ್ದಾಗ 2004ರವರೆಗೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಮುಂದುವರೆಸಿಕೊಂಡು ಬಂದಿದ್ದೆ. ರೈತರಿಗಾಗಲೀ, ಸಿಬ್ಬಂದಿಗಳಿಗಾಗಲೀ ಒಂದು ಪೈಸೆ ಬಾಕಿ ಇಲ್ಲದಂತೆ ಕಾರ್ಖಾನೆ ನಡೆಯಲು ಕ್ರಮ ಕೈಗೊಂಡಿದ್ದೆ. 12 ಕೋಟಿ ರೂ. ಬಡ್ಡಿ ರಹಿತ ಸಾಲ ದೊರಕಿಸಲು ಶ್ರಮಿಸಿದ್ದೆ. ಕೆ.ಆರ್.ನಗರ ತಾಲೂಕಿಗೆ ನಾನು ನೀಡಿದ ಕೊಡುಗೆ ಅಪಾರ. ನೀವೇನು ಕೊಡುಗೆ ನೀಡಿದ್ದೀರಿ, 700 ಕೋಟಿ ರೂ. ಬಿಡುಗಡೆ ಮಾಡಿಸಿದ್ದೇ ಆಗಿದ್ದಲ್ಲಿ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು. ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಶಾಲೆಗಳ ಸ್ಥಿತಿ ಉತ್ತಮಪಡಿಸಿದ್ದೇನೆ. ನಾನು ಸಚಿವನಾಗಿದ್ದಾಗ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲು 1.20 ಲಕ್ಷ ಮಂದಿ ಅಡುಗೆ ತಯಾರಕರಿಗೆ ಜೀವನ ಕಟ್ಟಿಕೊಟ್ಟಿದ್ದೇನೆ. ಗ್ರಾಮ ಪಂಚಾಯ್ತಿಗೆ ಒಂದರಂತೆ 2700 ಗ್ರಂಥಾಲಯ ಕೊಡುಗೆ ನೀಡಿದ್ದೇನೆ. ಕೆ.ಆರ್.ನಗರ ತಾಲೂಕಿನಲ್ಲಿ ಮುಚ್ಚಲ್ಪಟ್ಟಿದ್ದ 33 ಕೋ-ಆಪರೇಟಿವ್ ಸೊಸೈಟಿಗಳನ್ನು ಪುನರಾರಂಭಿಸಿ ಅದಕ್ಕೆ ಚೈತನ್ಯ ತುಂಬಿದ್ದೇನೆ. ಆ ಸೊಸೈಟಿಗಳು ಇಂದಿಗೂ ಸುಸ್ಥಿತಿಯಲ್ಲಿ ನಡೆಯುತ್ತಿದೆ ಎಂದು ಅವರು ವಿವರಿಸಿದರು.

 

Translate »