ಸಾಹಸ ಪ್ರದರ್ಶನ, ಬೆಳಕಿನ ವೈಭವದೊಂದಿಗೆ ದಸರಾಗೆ ತೆರೆ
ಮೈಸೂರು

ಸಾಹಸ ಪ್ರದರ್ಶನ, ಬೆಳಕಿನ ವೈಭವದೊಂದಿಗೆ ದಸರಾಗೆ ತೆರೆ

October 9, 2019

ಮೈಸೂರು, ಅ.8(ಎಸ್‍ಬಿಡಿ)- ಬೆಳಕಿನ ವೈಭವದೊಂದಿಗೆ 2019ರ ಯಶಸ್ವಿ ಮೈಸೂರು ದಸರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ ಬಿದ್ದಿತು.

ಮೈನವಿರೇಳಿಸುವ ಸೈನಿಕರ ಸಾಹಸ, ಪೊಲೀಸ್ ಪ್ರಶಿಕ್ಷಣಾರ್ಥಿಗಳ ರೋಚಕ ಪಂಜಿನ ಕವಾಯತು, ಮನಸೂರೆಗೊಂಡ ಅಶ್ವಾರೋಹಿ ದಳದ ಉರಿ ಗೂಟ ಕೀಳುವ ಕಸರತ್ತು, ಲೇಸರ್ ಶೋ, ಗಮನ ಸೆಳೆದ ವಿವಿಧ ತುಕಡಿಗಳ ಪಥ ಸಂಚಲನ, ಮುದ ನೀಡಿದ ನೃತ್ಯ ಪ್ರದರ್ಶನ, ಸಿಡಿ ಮದ್ದಿನ ಚಿತ್ತಾರದೊಂದಿಗೆ ಬನ್ನಿಮಂಟಪ ಪಂಜಿನ ಕವಾಯತು ಮೈದಾ ನದಲ್ಲಿ ಈ ಬಾರಿಯ ದಸರೆಗೆ ತೆರೆ ಬೀಳುವುದರ ಜೊತೆಗೆ 2020ರ ದಸರಾ ಮಹೋತ್ಸವಕ್ಕೂ ಮುನ್ನುಡಿ ಬರೆಯಲಾಯಿತು.

ಸೈನಿಕರ ಸಾಹಸ: ಹೊಳೆನರಸೀಪುರದ ನಾಯಕ್ ಸುನಿಲ್ ಕುಮಾರ್, ಬೆಳಗಾವಿಯ ನಾಯಕ್ ವಿಶಾಲ್ ಅವರನ್ನೊಳಗೊಂಡ ನಿಶಾಂತ್ ಕೊಠಾರಿ ನೇತೃತ್ವದ 17 ಸೈನಿಕರ `ಡೇರ್ ಡೆವಿಲ್ಸ್’ ತಂಡ ಪ್ರದರ್ಶಿಸಿದ ಬೈಕ್ ಸ್ಟಂಟ್ ನೋಡುಗರ ನಿಬ್ಬೆರಗಾಗಿಸಿತು.

ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಮೊಳಗಿದ ಬಳಿಕ ಬುಲೆಟ್ ಬೈಕ್‍ನಲ್ಲಿ ಓಪನಿಂಗ್ ಕ್ರಾಸಿಂಗ್ ಮೂಲಕ ಮೈದಾನಕ್ಕಿಳಿದು, ಗಣ್ಯರಿಗೆ ವಂದನೆ ಸಲ್ಲಿಸಿದ ಸೈನಿಕರು, ವಿವಿಧ ರೀತಿಯ ಸಾಹಸ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈ ಸಿದರು. ಮುಖಾಮುಖಿ ವೇಗವಾಗಿ ಬೈಕ್ ಚಾಲಿಸುತ್ತಾ ಡಬಲ್ ಕ್ರಾಸಿಂಗ್, ಪ್ಯಾರಲಲ್ ಕ್ರಾಸಿಂಗ್, ಚೈನ್ ಕ್ರಾಸಿಂಗ್, ಸಿಸರ್ ಕ್ರಾಸಿಂಗ್ ಮಾದರಿ ಸಾಗಿದ್ದು ಎದೆ ಝಲ್ ಎನಿಸಿತ್ತು. ಬೈಕ್ ಹ್ಯಾಂಡಲ್ ಹಿಡಿಯದೆ ಸೀಟ್‍ನ ಹಿಂಭಾಗದಲ್ಲಿ, ಟ್ಯಾಂಕ್ ಮೇಲೆ ಹಿಂದಕ್ಕೆ ಮುಖ ಮಾಡಿ ನಿಂತು, ಸೀಟ್ ಮೇಲೆ ಮಲಗಿ ಪತ್ರಿಕೆ ಓದುತ್ತಾ ಹೀಗೆ ವಿಭಿನ್ನ ರೀತಿ ಬೈಕ್ ಚಲಾಯಿಸಿದ್ದು ರೋಚಕ ವಾಗಿತ್ತು. ಹಿಂಭಾಗಕ್ಕೆ ಏಣಿ ಕಟ್ಟಿಕೊಂಡು ಒಂದೊಂದೇ ಮೆಟ್ಟಿಲು ಹತ್ತಿ, ಆ ಏಣಿಯ ಮೂಲಕವೇ ಬೈಕ್ ನಿಯಂತ್ರಿಸಿ, ಸುತ್ತಿಸಿದ್ದು ಎಲ್ಲರನ್ನೂ ರೋಮಾಂಚನಗೊಳಿಸಿತು.

ಏಕ ವ್ಯಕ್ತಿ ಸಾಹಸ ಪ್ರದರ್ಶನದ ಬಳಿಕ ಇಬ್ಬರು, ಮೂವರು, ಐವರು, 10 ಮಂದಿ ಒಟ್ಟಿಗೆ ವಿವಿಧ ಕಸರತ್ತು ನಡೆಸಿದರು. ತ್ರಿಬಲ್ ಸೆಲ್ಯೂಟ್, ಸಿಗ್ನಲ್ ರಥ, ಕಮಾಂಡೋ ರೈಡ್, ಕ್ರಿಸ್‍ಮಸ್ ಟ್ರೀ, ಕಮಲ ಹೂ ಮಾದರಿಯನ್ನು ಕಣ್ಣಿಗೆ ಕಟ್ಟಿ ಸಾಹಸ ಮೆರೆದರು. 7 ಬೈಕ್‍ಗಳಲ್ಲಿ 340 ಸೈನಿಕರು ಪಿರಮಿಡ್ ಮಾದರಿ ಸೃಷ್ಟಿಸಿ, ರಾಷ್ಟ್ರಧ್ವಜ, ಸೈನ್ಯ ಹಾಗೂ ಘಟಕದ ಧ್ವಜ ಹಿಡಿದು ಸುತ್ತು ಹಾಕಿದ್ದು, ಮೈನವಿರೇಳಿಸಿತು. 15 ಮಂದಿಯನ್ನು ಮಲಗಿಸಿ ಅವರ ಮೇಲೆ ಬೈಕ್ ಹಾರಿಸಿದ್ದು, ವೃತ್ತಾಕಾರದ ಬೆಂಕಿ ಜ್ವಾಲೆಯ ನಡುವೆ ಬೈಕ್ ನುಸುಳಿಸಿದಾಗ ನೋಡುಗರು ಆಶ್ಚರ್ಯಚಕಿತರಾದರು. ಶ್ರೀರಾಮ ಹಾಗೂ ರಾವಣನ ವೇಷ ಧಾರಿಗಳಾಗಿ ಯುದ್ಧದ ಪ್ರಸಂಗವನ್ನು ಪ್ರಸ್ತುತಪಡಿಸಿದ್ದು ಈ ಬಾರಿಯ ವಿಶೇಷ ವಾಗಿತ್ತು. ಇನ್ನು ಜೋಕರ್ ಗಳಂತೆ ಕಾಣಿಸಿ ಕೊಂಡ ಇಬ್ಬರು ಸೈನಿಕರೂ ಯಾರಿಗೂ ಕಡಿಮೆ ಇಲ್ಲದಂತೆ ಸಾಹಸ ಪ್ರದರ್ಶಿಸಿ, ಚಪ್ಪಾಳೆ ಗಿಟ್ಟಿಸಿದರು. ನಾಲ್ಕು ದಿಕ್ಕುಗಳಿಂದ ಮುಖಾಮುಖಿ ಬೈಕ್ ಚಲಾಯಿಸಿ ಸಾಹಸಕ್ಕೆ ವಿರಾಮ ನೀಡಿದರು. ಕರಾರು ವಕ್ಕಾದ ಸಮಯ ಪರಿಪಾಲನೆ, ತನ್ಮಯತೆ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸದೊಂದಿಗೆ ಸೈನಿಕರು ಬೈಕ್‍ನಲ್ಲಿ ಪ್ರದರ್ಶಿಸಿದ ಸಾಹಸಕ್ಕೆ ಎಲ್ಲರೂ ಬೆಕ್ಕಸ ಬೆರಗಾದರು.

ಯಶಸ್ವಿ ಟೆಂಟ್ ಪೆಗ್ಗಿಂಗ್‍ಗೆ ಫಿದಾ: ಟೆಂಟ್ ಪೆಗ್ಗಿಂಗ್ ಪ್ರದರ್ಶಿಸಿದ ಮೌಂಟೆಡ್ ಪಡೆಯ 6 ಮಂದಿಯೂ ಯಶಸ್ವಿಯಾಗಿ ಪೂರೈಸಿದ್ದು, ಅವರ ಪರಿಶ್ರಮವನ್ನು ಸಾಬೀತು ಪಡಿಸಿತು. ಅಶ್ವಗಳ ಮೇಲೇರಿ ಬಂದ ಎಂ.ಎಸ್.ಆನಂದ್‍ಸಿಂಗ್, ರುದ್ರಪ್ಪ, ಮಲ್ಲಿಕಾರ್ಜುನಸ್ವಾಮಿ, ಮಧು, ಚಂದ್ರು ಹಾಗೂ ಎಂ.ಆರ್.ಸಂದೇಶ್ ಮಿಂಚಿನ ವೇಗದಲ್ಲಿ ಬಂದು ಭೂಮಿಯಲ್ಲಿ ನೆಟ್ಟಿದ್ದ ಉರಿಗೂಟ(ಪಂಜು)ಗಳನ್ನು ಈಟಿಯಲ್ಲಿ ಕಿತ್ತುಕೊಂಡು ಸಾಗಿದರು. ಪ್ರತ್ಯೇಕವಾಗಿ ಯಶಸ್ವಿಯಾಗಿ ಟೆಂಟ್ ಪೆಗ್ಗಿಂಗ್ ಪೂರೈಸಿದ ಇವರು, ಕಡೆಯಲ್ಲಿ ಒಬ್ಬರ ಹಿಂದೊಬ್ಬರು ವೇಗವಾಗಿ ಬಂದು ಉರಿಗೂಟಗಳನ್ನು ಕಿತ್ತು ಕೊಂಡು ಮುಂದೆ ಸಾಗಿದ್ದು ರೋಮಾಂಚನ ಗೊಳಿಸಿತು.

ಪಂಜು ಬೆಳಕಿನ ವೈಭವ: ಹಾಸನದ ಪೊಲೀಸ್ ತರಬೇತಿ ಕೇಂದ್ರದ 300 ಪ್ರಶಿಕ್ಷಣಾರ್ಥಿಗಳು 600 ಪಂಜುಗಳನ್ನು ಹಿಡಿದು ವಿವಿಧ ಕಸರತ್ತು ಪ್ರದರ್ಶಿಸುವುದರೊಂದಿಗೆ ಬೆಳಕಿನ ವೈಭವವನ್ನೂ ಸೃಷ್ಟಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಬ್ಯಾಂಡ್‍ನ ಲಯಬದ್ದ ವಾದ್ಯ ಹಿಮ್ಮೇಳದಲ್ಲಿ ವಿವಿಧ ದೈಹಿಕ ಕಸರತ್ತು ಪ್ರದರ್ಶಿಸಿದರು. ಕನ್ನಡದಲ್ಲಿ `ಸುಸ್ವಾಗತ’ ಇಂಗ್ಲಿಷ್‍ನಲ್ಲಿ `ಕರ್ನಾಟಕ ಪೊಲೀಸ್’, `ವೆಲ್‍ಕಮ್ ಟು ಆಲ್’, `ಹ್ಯಾಪಿ ದಸರಾ’, `ಜೈ ಚಾಮುಂಡಿ’, `ಸಿ ಯು ಇನ್ 2020’ ಹಾಗೂ `ಜೈ ಹಿಂದ್’ ಅಕ್ಷರ ವಿನ್ಯಾಸವನ್ನು ಸೃಷ್ಟಿಸಿ ಗಮನ ಸೆಳೆದರು. ದೆಹಲಿಯ ಸಂಸತ್ ಭವನ ಹಾಗೂ ತಿರುಗುವ ಚಕ್ರ ಮಾದರಿಯನ್ನೂ ಪಂಜುಗಳಲ್ಲಿ ಕಟ್ಟಿದ್ದು ವಿಶೇಷ ಆಕರ್ಷಣೆಯಾಗಿತ್ತು. ಯುವ ಪೊಲೀಸರ ಮನಮೋಹಕ ಪ್ರದರ್ಶನಕ್ಕೆ ಚಪ್ಪಾಳೆ ಮೂಲಕ ಪ್ರೇಕ್ಷಕರು ಅಭಿನಂದಿಸಿದರು.

ಗತ ವೈಭವ ತಿಳಿಸಿದ ಲೇಸರ್ ಶೋ: ಬೆಂಗಳೂರಿನ ಪ್ರಾಚೀನ್ ಭಾರತ್ ಟೂರಿಸಂ ಟೆಕ್ನಾಲಜೀಸ್ ಸಂಸ್ಥೆಯವರು ಪ್ರಸ್ತುತಪಡಿಸಿದ ಲೇಸರ್ ಶೋ ಮೈಸೂರಿನ ಗತವೈಭವವನ್ನು ಸಾರಿ ಹೇಳುವುದರ ಜೊತೆಗೆ ಸರ್ಕಾರಗಳ ಯೋಜನೆಗಳನ್ನೂ ಪ್ರಚುರಪಡಿಸಿತು. ತಾಯಿ ಚಾಮುಂಡೇಶ್ವರಿ ಮಹಿಷನನ್ನು ಮರ್ದಿಸಿದ್ದು, ಮೈಸೂರು ಸಂಸ್ಥಾನದ ಆರಂಭ, ಬೆಳವಣಿಗೆ, ದಸರಾ ಆಚರಣೆ ಹಿನ್ನೆಲೆ, ಪರಂಪರೆಯನ್ನು ಪರದೆಯಲ್ಲಿ ಲೇಸರ್ ಬೆಳಕಲ್ಲಿ ಮರುಸೃಷ್ಟಿಸಿದಂತೆ ಕಂಡು ಬಂದಿತು. ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಭಾವಚಿತ್ರವನ್ನೂ ಸೃಷ್ಟಿಸಿ, ಸರ್ಕಾರಗಳ ಯೋಜನೆಗಳನ್ನು ಪ್ರಚುರಪಡಿಸಲಾಯಿತು.

ಮನಸೆಳೆದ ನೃತ್ಯ ಪ್ರದರ್ಶನ: ಡಿಎನ್‍ಎ ಎಂಟರ್‍ಟೈನ್‍ಮೆಂಟ್ ಸಂಸ್ಥೆಯ ಕಲಾವಿದರು ತಾಯಿ ಚಾಮುಂಡೇಶ್ವರಿ ಸ್ಮರಣೆಯೊಂದಿಗೆ ನಾಡು-ನುಡಿ, ಸಂಸ್ಕøತಿ ಬಿಂಬಿಸುವ ಅಮೋಘ ನೃತ್ಯ ಪ್ರದರ್ಶಿಸಿ, ಮೆಚ್ಚುಗೆ ಪಡೆದರು. ಮೈಸೂರು ನಗರದ ಪೊಲೀಸ್ ಕಲಾವಿದರ ತಂಡ ರಚಿಸಿದ್ದ 15 ಅಡಿ ಎತ್ತರ ಹಾಗೂ 40 ಅಡಿ ಅಗಲದ ಬೃಹತ್ ಅರಮನೆ ಚಿತ್ರಾಕೃತಿಯನ್ನು ಪ್ರದರ್ಶಿಸಿದ್ದು, ಈ ಬಾರಿಯ ಮತ್ತೊಂದು ವಿಶೇಷವಾಗಿತ್ತು.

ಆಕರ್ಷಕ ಪಥಸಂಚಲನ: ಆರಂಭದಲ್ಲೇ ಅಶ್ವಾರೋಹಿ ಪಡೆ, ಕೆಎಸ್‍ಆರ್‍ಪಿ ತುಕಡಿಗಳು, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕೈಗಾರಿಕಾ ಭದ್ರತೆ ಪಡೆ, ಗೃಹ ರಕ್ಷಕ ದಳ, ಎನ್‍ಸಿಸಿಯ ಭೂದಳ, ನೌಕದಳ, ವಾಯುದಳ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಬಾಲಕಿಯರು, ಸೇವಾದಳ, ಪೊಲೀಸ್ ವಾದ್ಯವೃಂದ ಸೇರಿದಂತೆ 18 ತುಕಡಿಗಳು ಆಕರ್ಷಕ ಪಥ ಸಂಚಲನದೊಂದಿಗೆ ರಾಜ್ಯಪಾಲರಾದ ವಜುಬಾಯ್ ವಾಲಾ ಅವರಿಗೆ ಗೌರವ ವಂದನೆ ಸಲ್ಲಿಸಿದವು. ಇದಕ್ಕೂ ಮುನ್ನ ರಾಜ್ಯಪಾಲರು ತೆರೆದ ವಾಹನದಲ್ಲಿ ನಿಶ್ಚಲ ತುಕಡಿಗಳ ಪರಿವೀಕ್ಷಣೆ ನಡೆಸಿದರು. ಈ ವೇಳೆ ಮೂರು ಹಂತಗಳಲ್ಲಿ ಪೊಲೀಸ್ ಪಡೆಯ ಗನ್ ಸೆಲ್ಯೂಟ್, ರಾಷ್ಟ್ರಗೀತೆ ನಡುವೆ ಒಟ್ಟು 21 ಸುತ್ತು ಕುಶಾಲತೋಪು ಸಿಡಿಸಲಾಯಿತು.

ಚಿತ್ತಾರ ಮೂಡಿಸಿದ ಸಿಡಿಮದ್ದು: ಅಂತಿಮವಾಗಿ ಪಂಜಿನ ಕವಾಯತು ಮೈದಾನದಿಂದ ಸಿಡಿದ ಸಿಡಿಮದ್ದುಗಳು ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ಮೂಲಕ ದಸರೆಗೆ ವರ್ಣರಂಜಿತ ತೆರೆ ಎಳೆಯಲಾಯಿತು. ಜೊತೆಗೆ ಮುಂದಿನ ದಸರೆಗೂ ಈ ಮೂಲಕ ಎಲ್ಲರಿಗೂ ಆಹ್ವಾನ ನೀಡಲಾಯಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಚಿವರಾದ ಸಿ.ಟಿ.ರವಿ. ಮಾಧುಸ್ವಾಮಿ, ವಿ.ಸೋಮಣ್ಣ, ಶಾಸಕ ತನ್ವೀರ್ ಸೇಠ್, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಸೇರಿದಂತೆ ಅನೇಕ ಗಣ್ಯರು, ಸಹಸ್ರಾರು ಪ್ರೇಕ್ಷಕರು ಈ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

Translate »