ಅದ್ಧೂರಿ ಜಂಬೂಸವಾರಿ
ಮೈಸೂರು

ಅದ್ಧೂರಿ ಜಂಬೂಸವಾರಿ

October 9, 2019

ಮೈಸೂರು, ಅ. 8(ಆರ್‍ಕೆ)- ನವರಾತ್ರಿ ಉತ್ಸವದ ಅಂತಿಮ ಘಟ್ಟವೂ ಆದ ವಿಶ್ವ ಪ್ರಸಿದ್ಧ ವಿಜಯದಶಮಿ ಮೆರವಣಿಗೆ ಇಂದು ವಿಜೃಂಭಣೆ ಹಾಗೂ ಯಶಸ್ವಿಯಾಗಿ ನೆರವೇರಿತು. ಮಳೆಯ ಚಿಂತೆ ಇಲ್ಲ, ಬಿಸಿಲು ಹೆಚ್ಚಿರದೇ ಹಿತಕರ ವಾತಾವರಣದಲ್ಲಿ ಜಗದ್ವಿಖ್ಯಾತ ದಸರಾ ಜಂಬೂ ಸವಾರಿ ಮೆರ ವಣಿಗೆಯನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಯನ್ನು ಹೊತ್ತ ಅರ್ಜುನನ ರಾಜಗಾಂಭೀರ್ಯ ನಡಿಗೆಯಿಂದ ಸಾಗುತ್ತಿದ್ದರೆ ಪುಳಕಿತರಾದ ಜನಸ್ತೋಮ ಭಕ್ತಿಪರವಶರಾಗಿ ರಾಜಮಾರ್ಗ ದುದ್ದಕ್ಕೂ ಕೈಮುಗಿದು ನಮಿಸುತ್ತಿದ್ದ ದೃಶ್ಯ ಅವಿಸ್ಮರಣೀಯ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅರಮನೆಯ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಧ್ಯಾಹ್ನ 2.20ಕ್ಕೆ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆಯೇ ಅರಮನೆ ಮುಂಭಾಗದಿಂದ ನಾಡಿನ ಕಲೆ, ಸಂಸ್ಕøತಿ, ಪರಂಪರೆ ಬಿಂಬಿಸುವ ಕಲಾತಂಡಗಳ ಪ್ರದರ್ಶನ ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭವಾಯಿತು.

ನಂತರ ಎಡಬದಿ ಕಾವೇರಿ ಮತ್ತು ಬಲಬದಿ ವಿಜಯಾ ಕುಮ್ಕಿ ಆನೆಗಳ ಮಧ್ಯೆ ಚಿನ್ನದ ಅಂಬಾರಿಯನ್ನು ಹೊತ್ತು ಬಂದ ಅರ್ಜುನನ ಮೇಲೆ ವಿರಾಜ ಮಾನಳಾಗಿದ್ದ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ಮಧ್ಯಾಹ್ನ 4.20 ಗಂಟೆ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿ ಭಕ್ತಿಯಿಂದ ನಮಿಸಿದರು.

ಈ ವೇಳೆ ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಉಪಸ್ಥಿತರಿದ್ದು, ತಾವೂ ಚಿನ್ನದ ಅಂಬಾರಿಯಲ್ಲಿದ್ದ ದೇವಿಗೆ ಪುಷ್ಪಾರ್ಚನೆ ನೆರವೇರಿಸಿದರು.

ಈ ಸಂದರ್ಭ ಅರಮನೆ ದಕ್ಷಿಣ ಭಾಗದಿಂದ 21 ಕುಶಾಲ ತೋಪುಗಳನ್ನು ಸಿಡಿಸಲಾಯಿತು. ಇದೇ ವೇಳೆ ರಾಷ್ಟ್ರಗೀತೆ ನುಡಿಸಲಾಯಿತು. ಈ ವೇಳೆ ಇಡೀ ಅರಮನೆ ಆವರಣದಲ್ಲಿ ನೆರೆದಿದ್ದ ಸಾವಿರಾರು ಮಂದಿ ಎದ್ದು ನಿಂತು ಗೌರವ ಸಮರ್ಪಿಸಿದರು. ಈ ಅವಿಸ್ಮರಣೀಯ ಘಟನೆಗೆ ನಾಡಿನ ಜನತೆ ಸಾಕ್ಷೀಭೂತರಾದರು. ಚಿನ್ನದ ಅಂಬಾರಿ ಹಿಂದೆ ನಾದಸ್ವರ, ಕೆಎಸ್‍ಆರ್‍ಪಿ ಮೌಂಟೆಡ್ ಕಂಪನಿಯ ಇಂಗ್ಲಿಷ್ ಬ್ಯಾಂಡ್, ಅಶ್ವದಳ, ಅಗ್ನಿಶಾಮಕ ತಂಡಗಳು ಮೆರವಣಿಗೆಯಲ್ಲಿ ಸಾಗಿದವು.

ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಒಳಗೊಂಡ ಚಿನ್ನದ ಅಂಬಾರಿಯನ್ನು ಹೊತ್ತು ಕಾವೇರಿ ಮತ್ತು ವಿಜಯಾಳೊಂದಿಗೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅರ್ಜುನ, ಅರಮನೆ ಆವರಣದಿಂದ ಸುಮಾರು ಐದೂವರೆ ಕಿಲೋಮೀಟರ್ ರಾಜಮಾರ್ಗದಲ್ಲಿ ಸಾಗಿ ಸಂಜೆ ಸುಮಾರು 6.45 ಗಂಟೆ ವೇಳೆಗೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿ, ಸೈ ಎನಿಸಿಕೊಂಡು 8ನೇ ಬಾರಿ ತನ್ನ ಕರ್ತವ್ಯವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈ ಅವಿಸ್ಮರಣೀಯ ದೃಶ್ಯವನ್ನು ಅರಮನೆ ಆವರಣ, ಚಾಮರಾಜ ವೃತ್ತ, ಕೆ.ಆರ್.ಸರ್ಕಲ್, ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್, ಹಳೇ ಆರ್‍ಎಂಸಿ ಸರ್ಕಲ್, ಹೈ ವೇ ಸರ್ಕಲ್ ಹಾಗೂ ಬನ್ನಿಮಂಟಪದವರೆಗೆ ಹೀಗೆ ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ನಾಡಿನ ದೇವತೆಯನ್ನು ಕಣ್ತುಂಬಿಕೊಂಡು ಭಕ್ತಿಪರವಶರಾದರು.

ಐರಾವತದಲ್ಲಿ ಬಂದ ಸಿಎಂ ಬಳಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಸೇರಿದಂತೆ ಸಚಿವ ಸಂಪುಟದ ಹಲವು ಸದಸ್ಯರು ಕೆಎಸ್‍ಆರ್‍ಟಿಸಿ ಐರಾವತ ಬಸ್‍ನಲ್ಲಿ ಮಧ್ಯಾಹ್ನ 2 ಗಂಟೆಗೆ ಅರಮನೆ ಪೂರ್ವ ಗೇಟ್‍ನ ಮೂಲಕ ಅರಮನೆ ಆವರಣ ಪ್ರವೇಶಿಸಿದರು. ನಂತರ ಮತ್ತೊಂದು ಐರಾವತ ಬಸ್‍ನಲ್ಲಿ ಗಣ್ಯರು ಮತ್ತು ಅತೀ ಗಣ್ಯರ ಕುಟುಂಬದವರು ಆಗಮಿಸಿದಾಗ ನೆರೆದಿದ್ದ ಜನರು ಕರತಾಡನದ ಮೂಲಕ ಸ್ವಾಗತಿಸಿದರು. ನಂದೀಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣರೊಂದಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ತೆರೆದ ಜೀಪಿನಲ್ಲಿ ಅರಮನೆ ಆವರಣಕ್ಕೆ ಆಗಮಿಸಿದಾಗಲೂ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು.

ಮೆರಗು ನೀಡಿದ ಕಲಾ ಪ್ರದರ್ಶನ: ನಾಡಿನ ಕಲೆ, ಸಂಸ್ಕøತಿ, ಪರಂಪರೆಯನ್ನು ಸಾರುವ ಜಾನಪದ ಕಲಾ ಪ್ರದರ್ಶನಗಳು, ಜಂಬೂ ಸವಾರಿ ಮೆರವಣಿಗೆಗೆ ಮೆರಗು ನೀಡಿದವು. ನಂದೀಧ್ವಜ, ವೀರಗಾಸೆ ಕುಣಿತ, ಚಾಮರವನ್ನು ಹೊತ್ತ ಅಲಂಕೃತ ನಿಶಾನೆ ಆನೆಗಳಾದ ಬಲರಾಮ, ಗೋಪಿ, ದುರ್ಗಾ ಪರಮೇಶ್ವರಿ, ಅಭಿಮನ್ಯು, ಗೋಪಾಲಸ್ವಾಮಿ, ಧನಂಜಯ ಹಾಗೂ ವಿಕ್ರಮರ ಗಂಭೀರ ನಡಿಗೆ ನೋಡುಗರ ಕಣ್ಮನ ಸೂರೆಗೊಂಡವು. ಪೊಲೀಸ್ ವಾದ್ಯವೃಂದ, ಕೊಂಬು ಕಹಳೆ, ಬೀಸು ಕಂಸಾಳೆ, ಪಟ ಕುಣಿತ, ಕೀಲು ಕುದುರೆ, ಚಿಟ್‍ಮೇಳ, ಹೆಜ್ಜೆ ಮೇಳ, ಕರಗ ನೃತ್ಯ, ಸುಗ್ಗಿ ಕುಣಿತ, ತಮಟೆ ವಾದನ, ಪೂಜಾ ಕುಣಿತ, ಕೋಲಾಟ, ಹಗಲುವೇಷ, ಜಾರ್ಖಂಡ್‍ನ ಗೋಮರ್ ಮತ್ತು ಚಾವ್ ನೃತ್ಯ, ಚಂಡೇ ಮೇಳ, ಮರಗಾಲು ಕುಣಿತ, ದೊಣ್ಣೆ ವರಸೆ, ಜಗ್ಗಲಗೆ ಮೇಳ, ನಾಸಿಕ್ ಡೋಲು, ಕಂಗೀಲು ನೃತ್ಯ, ಕಾವಡಿ ಕುಣಿತ, ಕರಡಿ ಮಜಲು, ಲಂಬಾಣಿ ಕುಣಿತ ಪ್ರದರ್ಶನ ಮನಮೋಹಕವಾಗಿತ್ತು.

ಹುಲಿ ವೇಷ, ಗೊಂಬೆ ಕುಣಿತ, ಬಾಗಲಕೋಟೆಯ ಝಾಂಜ್ ಪಥಕ್, ಕೇರಳದ ಸಿಂಗಾರಿಮೇಳಂ, ಆಂಧ್ರಪ್ರದೇಶದ ತಪ್ಪಾಟಗುಲ್ಲು, ಗೊರವರ ಕುಣಿತ, ಡೊಳ್ಳು ಕುಣಿತ, ಸೋಮನ ಕುಣಿತ, ಮಹಾರಾಷ್ಟ್ರದ ಪುಣೇರಿ ಡೋಲ್ ಸೇರಿದಂತೆ 40ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಜಂಬೂ ಸವಾರಿಯ ಮೆರಗು ಹೆಚ್ಚಿಸಿದವಲ್ಲದೇ, ಕರ್ನಾಟಕ ಸೇರಿದಂತೆ ನೆರೆಹೊರೆಯ ರಾಜ್ಯದ ಸಂಸ್ಕøತಿಯ ಅನಾವರಣ ಮಾಡಿದವು.

39 ಸ್ತಬ್ಧಚಿತ್ರಗಳ ಅನಾವರಣ: ಆಯುಷ್ಮಾನ್ ಭಾರತ, ಮೈಸೂರು ವಿಶ್ವವಿದ್ಯಾನಿಲಯ, ಮೆಮೊ ರೈಲು, 10 ಪಥದ ರಸ್ತೆ, ಮೈಸೂರು ವಿಮಾನ ನಿಲ್ದಾಣ, ವಾಯು ದಾಳಿ, ಹೆಣ್ಣು ಭ್ರೂಣ ಹತ್ಯೆ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನಪ್ರಿಯ ಯೋಜನೆಗಳೂ ಸೇರಿದಂತೆ ನಾಡಿನ ಸಂಸ್ಕøತಿ ಬಿಂಬಿಸುವ ಒಟ್ಟು 39 ಸ್ತಬ್ಧಚಿತ್ರಗಳು ಇಂದು ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಸಾಗಿ ಜನಮನ ಸೂರೆಗೊಂಡವು.

ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮಶತಮಾನೋತ್ಸವ ಆಚರಣೆ, ತುಮಕೂರು ಜಿಲ್ಲೆಯ ಶಿಶಿಲ ಬೆಟ್ಟ, ಹಂಪಿ ವಾಸ್ತುಶಿಲ್ಪ ಕಲಾವೈಭವ, ಸ್ವಚ್ಛತೆಯ ಕಡೆಗೆ ನಮ್ಮ ನಡಿಗೆ, ಫಸಲ್ ಭೀಮಾ ಯೋಜನೆ, ಹುಲಿ ಸಂತೃಪ್ತ ತಾಣ, ಅತಿವೃಷ್ಟಿ, ಭಾರತದ ಅತೀ ದೊಡ್ಡ ಪೆಟ್ರೋಲಿಯಂ ಘಟಕ, ಜೆಎಸ್‍ಎಸ್ ಮಠದಿಂದ ಸಮಾಜಕ್ಕೆ ನೀಡಿರುವ ಕೊಡುಗೆಗಳು, ಉಡುಪಿ ಶ್ರೀ ಕೃಷ್ಣ ಮಠದ ಗೋಪುರ, ಕೊಡಗಿನ ಗುಡ್ಡ ಕುಸಿತ ಜಾಗೃತಿ, ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠ, ಗವಿಸಿದ್ದೇಶ್ವರ ಮಠ, ಫಿಟ್ ಇಂಡಿಯಾ, ಕದಂಬ, ಬನವಾಸಿ ಮಧುಕೇಶ್ವರ ದೇವಸ್ಥಾನ, ಅಂಬಿಗರ ಚೌಡಯ್ಯ, ನಡೆದಾಡುವ ದೇವರು ಶ್ರೀ ಶಿವಕುಮಾರಸ್ವಾಮೀಜಿ, ಸಾಮಾಜಿಕ ನ್ಯಾಯ ಪರಿಕಲ್ಪನೆಯ ಡಾ. ಬಿ.ಆರ್. ಅಂಬೇಡ್ಕರ್, ಪ್ರಧಾನಮಂತ್ರಿ ಪಿಂಚಣಿ ಯೋಜನೆ, ಕಾವೇರಿ ನೀರಾವರಿ ನಿಗಮ, ಅಂತರಗಂಗೆ, ಅತಿವೃಷ್ಟಿ ಪ್ರವಾಹದಿಂದ ನಲುಗಿದ ಬೆಳಗಾವಿ, ಹಾಸನದ ಎತ್ತಿನಹೊಳೆ ಯೋಜನೆ, ಪ್ರಧಾನಮಂತ್ರಿಗಳ ಭೇಟಿ ಪಡಾವೊ-ಭೇಟಿ ಬಜಾವೋ, ಇಸ್ರೋ ಚಂದ್ರಯಾನ-2 ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಸಾರುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

ಜನಸಾಗರ: ಈ ವೈಭವಯುತ ವಿಜಯದಶಮಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಇಂದು ಜನಸಾಗರವೇ ಸೇರಿತ್ತು. ಅರಮನೆ ಆವರಣಕ್ಕೆ ತೆರಳಲು ಗೋಲ್ಡ್ ಕಾರ್ಡ್, ಗಣ್ಯರ ಪಾಸ್ ಹಾಗೂ ಟಿಕೆಟ್‍ಗಳನ್ನು ಹೊಂದಿದ ಜನರು ಅರಮನೆಯ ಎಲ್ಲಾ ದ್ವಾರಗಳಲ್ಲಿ ಕಿಕ್ಕಿರಿದು ನೆರೆದಿದ್ದರಿಂದ ನಿರೀಕ್ಷೆಯಂತೆ ನೂಕು ನುಗ್ಗಲು ಉಂಟಾಗಿತ್ತು. ಪೊಲೀಸರು ಟಿಕೆಟ್ ಹಾಗೂ ಪಾಸ್‍ವುಳ್ಳವರನ್ನು ಭದ್ರತೆ ದೃಷ್ಟಿಯಿಂದ ಪ್ರತಿಯೊಬ್ಬರ ತಪಾಸಿಸಿ ಒಳಗೆ ಬಿಡುವಲ್ಲಿ ಹರಸಾಹಸಪಟ್ಟರು. ಉಳಿದಂತೆ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ ಸೇರಿದಂತೆ ರಾಜಮಾರ್ಗದ ಇಕ್ಕೆಲಗಳಲ್ಲಿ ಸಹಸ್ರಾರು ಮಂದಿ ಜನರು ನೆರೆದಿದ್ದು, ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾದರು.

ಸಂಜೆ ಬನ್ನಿಮಂಟಪದ ಟಾರ್ಚ್‍ಲೈಟ್ ಪರೇಡ್ ಮೈದಾನದಲ್ಲಿ ನಡೆದ ಆಕರ್ಷಕ ಪಂಜಿನ ಕವಾಯತು ಪ್ರದರ್ಶನವನ್ನು ರಾಜ್ಯಪಾಲ ವಜೂಭಾಯಿ ಆರ್. ವಾಲಾ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮೇಯರ್ ಪುಷ್ಪಲತಾ ಜಗನ್ನಾಥ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಪಂಜಿನ ಕವಾಯತು ವೀಕ್ಷಿಸಿದರಲ್ಲದೇ, ಸಹಸ್ರಾರು ಮಂದಿ ಈ ಸಾಹಸ ಕ್ಷಣಗಳ ಸವಿದರು. ಈ ಮೂಲಕ ಸೆಪ್ಟೆಂಬರ್ 29ರಿಂದ ಆರಂಭವಾದ ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಪ್ರಾರಂಭಕ್ಕೆ ಶಾಂತಿಯುತ ಹಾಗೂ ಯಶಸ್ವಿ ತೆರೆ ಬಿದ್ದಂತಾಗಿದೆ.

ಗತವೈಭವವನ್ನು ಸಾರುವ ನಾಡಹಬ್ಬದ ಕಡೇ ದಿನವಾದ ವಿಜಯದಶಮಿ ಮೆರವಣಿಗೆಗೆ ಮಳೆರಾಯನು ಅನುವು ಮಾಡಿಕೊಟ್ಟಿದ್ದಲ್ಲದೇ, ಅಧಿದೇವತೆ ತಾಯಿ ಚಾಮುಂಡೇಶ್ವರಿ ಕೃಪೆಯಿಂದಾಗಿ ಯಾವುದೇ ಅಹಿತಕರ ಘಟನೆಗಳು ಇಲ್ಲದಂತೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪೊಲೀಸ್ ಭದ್ರತೆಯೊಡನೆ ನವರಾತ್ರಿ ಉತ್ಸವ ಶಾಂತಿಯುತವಾಗಿ ಮುಗಿದಿದೆ. ದೇಶ, ವಿದೇಶಗಳಿಂದ ಆಗಮಿಸಿದ್ದ ಜನರು ಈ ಅವಿಸ್ಮರಣೀಯ ದೃಶ್ಯ ಕಂಡು ಆನಂದ ಪರವಶರಾದರು.

Translate »