ಬಡವರಿಗೆ ಮನೆ ಕಟ್ಟಿಸಲು ಭೂಮಿ ಗುರುತಿಸಿ
ಮೈಸೂರು

ಬಡವರಿಗೆ ಮನೆ ಕಟ್ಟಿಸಲು ಭೂಮಿ ಗುರುತಿಸಿ

October 2, 2018

ಮೈಸೂರು:  ಬಡವರಿಗೆ ಮನೆ ಕಟ್ಟಿಸಿಕೊಡಲು ಅಗತ್ಯ ವಾದ ಭೂಮಿ ಗುರುತಿಸಲು ಸಮಿತಿ ರಚಿಸುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು, ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ನಿವೇಶನ ಹಾಗೂ ಮನೆಯಿಲ್ಲದವರ ಅಂಕಿಅಂಶ ಪಡೆದ ಅವರು, ತಹಶೀಲ್ದಾರ್‍ಗಳು ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ(ಇಓ)ಗಳು ಜಂಟಿಯಾಗಿ ಪರಿ ಶೀಲನೆ ನಡೆಸಿ, ಭೂಮಿ ಗುರುತಿಸದಿದ್ದರೆ, ಬಡವರಿಗೆ ಮನೆ ನೀಡುವುದು ಹೇಗೆ? ಎಂದು ಪ್ರಶ್ನಿಸಿದರಲ್ಲದೆ, ಈ ನಿಟ್ಟಿನಲ್ಲಿ ತಹಶೀಲ್ದಾರ್, ಇಓ, ನೋಡಲ್ ಅಧಿಕಾರಿ, ಭೂಮಾಪಕರನ್ನೊಳಗೊಂಡ ಸಮಿತಿ ಯೊಂದನ್ನು ರಚಿಸುವಂತೆ ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದರು. ಅಲ್ಲದೆ ಗ್ರಾಮ ಪಂಚಾಯ್ತಿ ಮಟ್ಟದ ಸಮಿತಿ ರಚನೆ ಮಾಡಿ, ಭೂಮಿ ಗುರುತಿಸಲು ಗಡುವು ನೀಡಬೇಕು. ತಹ ಶೀಲ್ದಾರ್‍ಗಳು ಗ್ರಾಮ ಪಂಚಾಯ್ತಿ ಮಟ್ಟ ದಲ್ಲಿ ಸಭೆ ನಡೆಸಿದರೆ, ಸ್ಥಳೀಯ ಮುಖಂಡರೂ ಭಾಗಿಯಾಗುತ್ತಾರೆ. ಸರ್ಕಾರಿ ಭೂಮಿಯಿದ್ದರೆ ಅವರೇ ತಿಳಿಸುತ್ತಾರೆ. ಇಲ್ಲವಾದರೆ ಸೂಕ್ತ ಖಾಸಗಿ ಜಮೀನು ಖರೀದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಫಲಾನುಭವಿಗಳ ಪಟ್ಟಿಯನ್ನು ಅಂತಿಮ ಗೊಳಿಸಿ, ಪ್ರಸ್ತಾವನೆ ಸಿದ್ಧಪಡಿಸಬಹುದು. ಇದೇ ಸಂದರ್ಭದಲ್ಲಿ ಸ್ಮಶಾನಕ್ಕೂ ಭೂಮಿ ಗುರುತಿಸಿ ಎಂದು ಜಿಟಿಡಿ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಮೈಸೂರು ತಾಲೂಕಿನಲ್ಲಿ 21789 ನಿವೇಶನ ರಹಿತರು ಹಾಗೂ 3940 ಮನೆ ಇಲ್ಲದವರಿದ್ದಾರೆ.

ಹೆಚ್.ಡಿ.ಕೋಟೆಯಲ್ಲಿ 3680 ಹಾಗೂ 15350, ಪಿರಿಯಾಪಟ್ಟಣದಲ್ಲಿ 968 ಹಾಗೂ 8610, ಹುಣಸೂರಿನಲ್ಲಿ 1884 ಹಾಗೂ 7708, ತಿ.ನರಸೀಪುರದಲ್ಲಿ 4433 ಹಾಘೂ 9602, ನಂಜನಗೂಡಿನಲ್ಲಿ 5464 ಹಾಗೂ 9022, ಕೆ.ಆರ್.ನಗರ ತಾಲೂಕಿನಲ್ಲಿ 2841 ಹಾಗೂ 9054 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 41 ಸಾವಿರ ನಿವೇಶನ ರಹಿತರು ಹಾಗೂ 63 ಸಾವಿರ ಮನೆ ಇಲ್ಲದವರನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಎಲ್ಲಾ ಅಧಿಕಾರಿಗಳಿರಬೇಕು: ಪ್ರತಿ ಸೋಮವಾರ ಗ್ರಾಮ ಪಂಚಾಯ್ತಿ ಪ್ರಧಾನ ಕಚೇರಿಯಲ್ಲಿ ಅಭಿವೃದ್ಧಿ ಅಧಿಕಾರಿ, ರೆವಿನ್ಯೂ ಇನ್ಸ್‍ಪೆಕ್ಟರ್, ಗ್ರಾಮ ಲೆಕ್ಕಿಗ ಸೇರಿದಂತೆ ಎಲ್ಲಾ ಅಧಿಕಾರಿಗಳಿರಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಇದನ್ನು ಹಿಂದೆಯೇ ಹೇಳಿದ್ದೆ. ಆದರೆ ಅದು ಕಾರ್ಯರೂಪಕ್ಕೆ ಬಂದಂತಿಲ್ಲ. ಆದ್ದರಿಂದ ಈ ಸಂಬಂಧ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಜಿಟಿಡಿ, ಪ್ರತಿ ಸೋಮವಾರ ಎಲ್ಲಾ ಅಧಿಕಾರಿಗಳು ಗ್ರಾಮ ಪಂಚಾಯ್ತಿಗಳಲ್ಲಿ ಇದ್ದಾರೆಯೇ ಎಂಬುದನ್ನು ತಾಲೂಕು ಕಚೇರಿ ಇಓ ಹಾಗೂ ತಹಶೀಲ್ದಾರ್‍ಗಳು ಮೇಲ್ವಿಚಾರಣೆ ಮಾಡುವಂತೆ ತಿಳಿಸಿದರು.

ಎತ್ತಿನ ಗಾಡಿಯಲ್ಲಿ ಮರಳು: ಬಡವರಿಗೆ ನಿವೇಶನ ನೀಡುತ್ತೀರಿ, ಆದರೆ ಅವರು ಮನೆ ನಿರ್ಮಾಣಕ್ಕೆ ಬೇಕಾದ ಮರಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸುವುದಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್, ಜಿಟಿಡಿ ಅವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಟಿಡಿ, ಸ್ಥಳೀಯವಾಗಿ ಸಿಗುವ ಮರಳನ್ನು ಮನೆ ನಿರ್ಮಾಣಕ್ಕಾಗಿ ಎತ್ತಿನ ಗಾಡಿಯಲ್ಲಿ ಸಾಗಿಸುವವರಿಗೆ ತೊಂದರೆ ನೀಡದಂತೆ ಸರ್ಕಾರವೇ ಸೂಚನೆ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಸ್ವಚ್ಛತೆಯ ಪಾಠ ಹೇಳಿದ ಜಿಟಿಡಿ: ದಸರಾ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಜಿಟಿಡಿ ಹೇಳಿದಾಗ, ರಾಮಕೃಷ್ಣ ಪರಮಹಂಸ ವೃತ್ತದ ಬಳಿಯಿರುವ ನಗರ ಯೋಜನೆ ಕಚೇರಿಗೆ ಭೇಟಿ ನೀಡಿದರೆ ಸ್ವಚ್ಛತೆ ಗಮನಕ್ಕೆ ಬರುತ್ತದೆ ಎಂದು ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಜಿಟಿಡಿ ಕೆಲ ನಿಮಿಷಗಳ ಕಾಲ ಸ್ವಚ್ಛತೆ ಬಗ್ಗೆ ಪಾಠ ಮಾಡಿದರು.

ನೀವೆಲ್ಲಾ ಕಚೇರಿಗೆ ಬರುವಾಗ ಶ್ಯಾಂಪು, ಸೋಪು ಹಾಕಿ, ಸ್ನಾನ ಮಾಡಿಕೊಂಡೇ ಬರುತ್ತೀರಿ ಅಲ್ಲವೇ?. ಹಾಗೆಯೇ ತಾವು ಕೆಲಸ ಮಾಡುವ ಸ್ಥಳವನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ನಾನು ಸಹಕಾರ ಮಂಡಲದಲ್ಲಿ ಕಡತಗಳನ್ನು ತಿಪ್ಪೆಯಂತೆ ಗುಡ್ಡೆ ಮಾಡುತ್ತಿದ್ದರು. ನಾನು ಅಧ್ಯಕ್ಷನಾಗಿದ್ದಾಗ ಕಡತ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ತಂದಿದ್ದೆ. ಗೃಹ ಮಂಡಳಿ ಅಧ್ಯಕ್ಷನಾಗಿದ್ದಾಗಲೂ ಇದೇ ಕ್ರಮ ವಹಿಸಿದ್ದೆ. ಈಗ ಉನ್ನತ ಶಿಕ್ಷಣ ಇಲಾಖೆ ಸಚಿವಾಲಯದಲ್ಲೂ ಅದೇ ಪರಿಸ್ಥಿತಿ ಇದೆ ಎಂಬುದು ಗಮನಕ್ಕೆ ಬಂದಿದೆ. ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಉದ್ದೇಶಿತ ಕಾಮಗಾರಿಗೆ ಬಳಸಲಾಗದ ಅನುದಾನವನ್ನು ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ವಾಪಸ್ಸು ಕಳುಹಿಸಬೇಡಿ. ಚೇಂಜ್ ಆಫ್ ವರ್ಕ್ ಇದ್ದರೆ ಕ್ಷೇತ್ರದ ಶಾಸಕರ ಗಮನಕ್ಕೆ ತನ್ನಿ. ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಅನುದಾನ ಬಳಕೆಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಇಲಾಖಾ ಅಧಿಕಾರಿಗಳಿಗೆ ಜಿಟಿಡಿ ತಿಳಿಸಿದರು.

Translate »