ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡರ ಆಗ್ರಹ
- ಉದ್ಯಮಿಗಳಿಗೆ ಕೇಳಿದ ಕೂಡಲೇ ದಾಖಲೆ ನೀಡುವ ನೀವು ರೈತರಿಗೆ ಅಗತ್ಯ ದಾಖಲೆ ನೀಡಲು ಮೀನಾಮೇಷ ಸರಿಯೇ
- ರೈತನ ಇಡೀ ಭೂಮಿ ಕಸಿದುಕೊಂಡರೆ ಅವನ ಪಾಡೇನಾಗ ಬೇಕು? ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲು, ಕನ್ನೇಗೌಡನಕೊಪ್ಪಲು ರೈತರ ಪಾಡೇನಾಗಿದೆ ಗೊತ್ತೆ?
- ವಿಧಾನಸಭೆ ಯಲ್ಲಿ ಎಳೆ ಎಳೆಯಾಗಿ ರೈತರ ಸಂಕಷ್ಟ ವಿವರಿಸಿದ ಜಿಟಿಡಿ
ಬೆಂಗಳೂರು,ಮಾ.೨೩-ನಗರ ಪ್ರದೇ ಶದ ೧೦ ಕಿ.ಮೀ. ವ್ಯಾಪ್ತಿಯಲ್ಲಿ ರೈತರಿಗೆ ಸಾಗುವಳಿ ಪತ್ರ ನೀಡದೆ ಇರುವ ಕಂದಾಯ ಇಲಾಖೆ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಚಾಮುಂ ಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ತಲತಲಾಂತರದಿAದ ಉಳುಮೆ ಮಾಡುತ್ತಿರುವ ರೈತನಿಗೆ ನಗರ ಪ್ರದೇಶ ದಲ್ಲೂ
ಸಾಗುವಳಿ ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದಿನ ಹಳ್ಳಿಗಳು ಈಗ ನಗರಗಳಾಗಿವೆ. ೬ ತಿಂಗಳ ಹಿಂದೆ ಗ್ರಾಮ ಪಂಚಾಯಿತಿಯಾಗಿದದ್ದು, ಈಗ ನಗರಸಭೆಯಾಗಿದೆ. ಆ ಮಾತ್ರಕ್ಕೆ ಅಲ್ಲಿನ ರೈತರಿಗೆ ಸಾಗುವಳಿ ಪತ್ರ ಕೊಡುವುದಿಲ್ಲ ಅಂದರೆ ಏನರ್ಥ ಎಂದು ಪ್ರಶ್ನಿಸಿದರು. ಉದಾಹರಣೆಗೆ ಮೈಸೂರಿನ ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಕನ್ನೇಗೌಡನ ಕೊಪ್ಪಲು ಈ ಹಿಂದೆ ಹಳ್ಳಿಗಳಾಗಿದ್ದವು. ಈಗ ಅವು ನಗರದೊಳಗೆ ಸೇರ್ಪಡೆಯಾಗಿವೆ. ಅಲ್ಲಿನ ಭೂಮಿಯನ್ನು ತಲಾತಲಾಂತರದಿಂದ ರೈತರು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಈಗ ಉಳುಮೆ ಮಾಡುತ್ತಿರುವ ರೈತನ ತಂದೆ ಮತ್ತು ತಾತಾ ಸದರಿ ಜಮೀನನ್ನು ಉಳುಮೆ ಮಾಡುತ್ತಿದ್ದ. ಆ ರೈತನಿಗೆ ಸಾಗುವಳಿ ಪತ್ರ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದೀರಿ. ಯಾರೋ ಕೈಗಾರಿಕೋದ್ಯಮಿ ಬಂದರೆ ಉಳುಮೆ ಮಾಡುತ್ತಿರುವ ರೈತನನ್ನು ಜಮೀನಿನಿಂದ ಹೊರಗೆ ಹಾಕಿ, ಅವನಿಗೆ ೧೦ಎಕರೆ ಭೂಮಿ ಕೊಡುತ್ತೀರಿ. ಶಾಲೆ ಹಾಗೂ ಕಾರ್ಖಾನೆ ಕಟ್ಟಲು ಕೈಗಾರಿಕೋದ್ಯಮಕ್ಕೆ ಭೂಮಿ ನೀಡುತ್ತೀರಿ. ಅದೇ ರೈತನಿಗೆ ಸಾಗುವಳಿ ಪತ್ರ ಕೊಡಲು ಹಿಂದೆ ಮುಂದೆ ನೋಡುತ್ತೀರಿ, ಸತಾಯಿಸುತ್ತೀರಾ. ಹಾಗಾದರೆ, ರೈತ ಅನ್ನ ತಿನ್ನಬಾರದೇ ಎಂದು ಪ್ರಶ್ನಿಸಿದ ಅವರು, ರೈತ ೫ ಎಕರೆ ಸಾಗುವಳಿ ಮಾಡುತ್ತಿದ್ದರೇ ಆತನಿಗೆ ೨.೫ ಎಕರೆ ಕೊಡಿ, ಉಳಿದ ೨.೫ ಎಕರೆಯನ್ನು ಸರ್ಕಾರ ಉಳಿಸಿಕೊಂಡು ಸ್ಮಶಾನ ಹಾಗೂ ಆಟದ ಮೈದಾನಕ್ಕೆ ಬಳಕೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ ಜಿಟಿಡಿ, ನಗರ ಪ್ರದೇಶದ ೧೦ ಕಿ.ಮೀ. ವ್ಯಾಪ್ತಿಯಲ್ಲಿ ಸಾಗುವಳಿ ಪತ್ರ ಕೊಡುವುದಿಲ್ಲ ಎಂಬ ಕಾಯ್ದೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದರು.
ರೈತನಿಗೆ ನಿರಂತರ ೭ ಗಂಟೆ ವಿದ್ಯುತ್ ಕೊಡಿ: ರೈತನ ಜಮೀನಿಗೆ ಹಗಲು ವೇಳೆ ೭ ಗಂಟೆ ನಿರಂತರ ಸಮರ್ಪಕ ವಿದ್ಯುತ್ ಕೊಡಿ ಎಂದು ಆಗ್ರಹಿಸಿದ ಜಿಟಿಡಿ, ಹಗಲು ೩ ಗಂಟೆ ಹಾಗೂ ರಾತ್ರಿ ೪ ಗಂಟೆ ಸೇರಿ ಒಟ್ಟು ೭ ಗಂಟೆಗಳ ಕಾಲ ವಿದ್ಯುತ್ ಕೊಡುವುದರಿಂದ ಏನೂ ಪ್ರಯೋಜನ. ನೀವು ರಾತ್ರಿ ವೇಳೆ ವಿದ್ಯುತ್ ಕೊಟ್ಟರೆ ರೈತ ನಾಟಿ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಹೆಸರಿಗೆ ಮಾತ್ರ ರೈತ ಸರ್ಕಾರ ಆಗಬಾರದು: ರೈತರ ಸರ್ಕಾರ ಎಂದು ಹೇಳಿಕೊಳ್ಳುತ್ತೇವೆ. ಆದರೆ, ರೈತನ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಕೊಡುತ್ತಿಲ್ಲ. ರೈತ ನಿದ್ದೆಯೂ ಮಾಡದೇ ರಾತ್ರಿಯೆಲ್ಲಾ ಕಾಯ್ದು ಜಮೀನಿಗೆ ನೀರು ಹಾಯಿಸಬೇಕಾದ ಪರಿಸ್ಥಿತಿ ಇದೆ. ಇಂತಹ ಲೋಪಗಳಿಂದ ಸಾಲಗಾರನಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ದಯವಿಟ್ಟು ರೈತನನ್ನು ಉಳಿಸಿ, ಇನ್ನು ಮುಂದೆ ಸೋಲಾರ್ ಮೂಲಕವಾದರೂ ಸರಿ ರೈತನ ಪಂಪ್‌ಸೆಟ್‌ಗೆ ೧೫ ಗಂಟೆ ವಿದ್ಯುತ್ ನೀಡುವಂತಹ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.
ಕಂದಾಯ ಸಚಿವರ ನಿರ್ಧಾರಕ್ಕೆ ಶ್ಲಾಘನೆ: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಕಂದಾಯ ಸಚಿವರು ಹಮ್ಮಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿ.ಟಿ.ದೇವೇಗೌಡ, ಮೈಸೂರು ತಾಲೂಕು ಇಲವಾಲ ಹೋಬಳಿಯ ದಡದಕಲ್ಲಹಳ್ಳಿ ಗ್ರಾಮದಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಜಿಲ್ಲಾಧಿಕಾರಿಗಳು, ನಾವು ಎಲ್ಲಾ ಸೇರಿ ಪ್ರತಿಯೊಬ್ಬ ರೈತನಿಗೆ ಪಹಣಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಒಂದು ಮ್ಯಾಪ್ ಕೊಟ್ಟಿದ್ದೇವೆ. ಇದರಿಂದ ರೈತರಿಗೆ ಸಂತೋಷವಾಗಿದೆ. ಈ ಹಿಂದೆ ಆರ್‌ಟಿಸಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಕಚೇರಿಗಳಿಗೆ ಅಲೆಯಬೇಕಾಗಿತ್ತು. ಈಗ ಅಲೆದಾಟ ತಪ್ಪಿ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎಂದರು.
ಜಿಟಿಡಿ ಸಾಧನೆ ಸಾಕ್ಷಾತ್ಕಾರ: ತಾವು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯ ೨೩೫ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿ ೨೩೫೨ ಹಳ್ಳಿಗಳಿಗೆ ಭೇಟಿ ನೀಡಿದ್ದೆವು. ಆಗ ಬಂದ ೧.೨೩ಲಕ್ಷ ಅರ್ಜಿಗಳ ಪೈಕಿ ೮೪ ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಗ್ರಾಮ ವಾಸ್ತವ್ಯ ಮಾಡಿದ್ದರು ಎಂದ ಜಿಟಿಡಿ, ಈಗ ಕಂದಾಯ ಸಚಿವರು ಜಾರಿಗೆ ತಂದಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ’ ಎಂಬ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.