ಅ. 10 ಇಲ್ಲವೇ 12 ರಂದು  ಮಂತ್ರಿಮಂಡಲ ವಿಸ್ತರಣೆ
ಮೈಸೂರು

ಅ. 10 ಇಲ್ಲವೇ 12 ರಂದು  ಮಂತ್ರಿಮಂಡಲ ವಿಸ್ತರಣೆ

October 2, 2018

ಬೆಂಗಳೂರು: ಮಂತ್ರಿ ಮಂಡಲವನ್ನು ಅಕ್ಟೋಬರ್ 10 ಇಲ್ಲವೆ 12 ರಂದು ವಿಸ್ತರಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಪ್ರಕಟಿಸಿದ್ದಾರೆ.

ಸಂಪುಟದಲ್ಲಿ ಖಾಲಿ ಇರುವ ಏಳು ಸ್ಥಾನಗಳನ್ನು ಭರ್ತಿ ಮಾಡಿ ಕೆಲ ಸಚಿವರ ಖಾತೆಗಳನ್ನು ಮರು ವಿಂಗಡಣೆ ಮಾಡು ವುದಾಗಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈತ್ರಿ ಸರ್ಕಾರಕ್ಕಿದ್ದ ಎಲ್ಲ ಗೊಂದಲಗಳು ನಿವಾರಣೆಯಾಗಿವೆ. ತಮ್ಮ ಸರ್ಕಾರ ಪತನಗೊಳಿಸಲು ಬಿಜೆಪಿ ವಿಫಲವಾಗಿ ಇದೀಗ ಕೈ ಚೆಲ್ಲಿ ಕುಳಿತಿದೆ.

ಆಡಳಿತದ ಹಿತದೃಷ್ಟಿಯಿಂದ ಮಂತ್ರಿ ಮಂಡಲ ವಿಸ್ತರಿಸಿ, ಹೊಸಬರಿಗೆ ಅವಕಾಶ ಕೊಡಲಾಗುವುದು. ಸರ್ಕಾರದ ಪಾಲು ದಾರ ಪಕ್ಷ ಕಾಂಗ್ರೆಸ್‍ನಿಂದ ಆರು ಹಾಗೂ ನಮ್ಮ ಪಕ್ಷ ಜೆಡಿಎಸ್‍ನಿಂದ ಖಾಲಿ ಇರುವ ಒಂದು ಸ್ಥಾನವನ್ನು ಭರ್ತಿ ಮಾಡಲಾಗು ವುದು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ತಮ್ಮ ಪಕ್ಷದಿಂದ ಯಾರ ಹೆಸರನ್ನು ಸೂಚಿಸುತ್ತಾರೋ ಅವರನ್ನು ಮಂತ್ರಿಮಂಡ ಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇನೆ. ತಮ್ಮ ಪಕ್ಷದ ಪಾಲಿನ ಉಳಿದಿರುವ ಒಂದು ಸ್ಥಾನಕ್ಕೆ ಯಾರನ್ನು ತೆಗೆದುಕೊಳ್ಳಬೇಕೆನ್ನುವ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ನಿರ್ಧರಿಸಲಿದ್ದಾರೆ. ಮಂತ್ರಿ ಮಂಡಲ ಪೂರ್ಣ ಪ್ರಮಾಣದಲ್ಲಿ ರಚನೆಯಾಗುವುದರಿಂದ ಬಹುತೇಕ ಜಿಲ್ಲೆಗಳಿಗೂ ಪ್ರಾತಿನಿಧ್ಯ ಮತ್ತು ಎಲ್ಲ ಜಾತಿ ಜನಾಂಗಗಳಿಗೂ ಸರ್ಕಾರದಲ್ಲಿ ಅವಕಾಶ ದೊರೆಯಲಿದೆ ಎಂದರು.

ವಿಸ್ತರಣೆ ಕುರಿತು ಎಲ್ಲಾ ತಯಾರಿಗಳು ಹಾಗೂ ವಿವಿಧ ಹಂತದ ಚರ್ಚೆಗಳು ನಡೆಯುತ್ತಿವೆ. ಸಮನ್ವಯ ಸಮಿತಿ ತೀರ್ಮಾ ನದಂತೆ ಸೆಪ್ಟೆಂಬರ್ ಅಂತ್ಯದೊಳಗೆ ಸಂಪುಟ ವಿಸ್ತರಣೆ ಆಗಬೇಕಿತ್ತು. ಆದರೆ, ಸಿದ್ದ ರಾಮಯ್ಯನವರ ವಿದೇಶ ಪ್ರವಾಸ, ಬೆಳಗಾವಿ ಕಾಂಗ್ರೆಸ್‍ನಲ್ಲಿ ಉಂಟಾದ ಭಿನ್ನಮತ, ನಂತರ ಬಿಜೆಪಿ ಪಕ್ಷ ನಡೆಸಿದ ಆಪರೇಷನ್ ಕಮಲದ ಗೊಂದಲದಿಂದ ಇದು ನೆನೆಗುದಿಗೆ ಬಿದ್ದಿತ್ತು. ಕಾಂಗ್ರೆಸ್ ವರಿಷ್ಠರು ಸಮ್ಮತಿ ನೀಡಿ ದರೆ ನಿಗಮ ಮಂಡಳಿಗಳ ನೇಮಕಾತಿ ಕಾರ್ಯವು ಇದೇ ವೇಳೆ ಪೂರ್ಣಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಖ್ಯಮಂತ್ರಿಯವರು ಮಂತ್ರಿಮಂಡಲ ವಿಸ್ತರಿಸುವ ಬಗ್ಗೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ ತರುವಾಯ ಗೃಹ ಕಚೇರಿ ಕೃಷ್ಣಾದಲ್ಲಿ ಕಾಂಗ್ರೆಸ್‍ನ ಹಿರಿಯ ಸಚಿವ ರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಲವರ ಜೊತೆ ಖಾಸಗಿಯಾಗಿ ಚರ್ಚೆ ಮಾಡಿದ್ದಾರೆ. ಈ ಮಧ್ಯೆ ನಾಗ್ಪುರದಲ್ಲಿ ನಡೆಯುತ್ತಿರುವ ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯ ಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದ ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೆರಳಲಿದ್ದಾರೆ. ಕಾರ್ಯ ಕಾರಣಿ ಸಭೆ ಮುಗಿದ ನಂತರ ರಾಹುಲ್ ಜೊತೆ ಉಭಯ ನಾಯಕರು ಮಂತ್ರಿಮಂಡ ಲಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳ ಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ, ಪಟ್ಟಿ ಸಿದ್ಧಗೊಳಿಸುವ ಸಾಧ್ಯತೆ ಇದೆ.

Translate »