ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ದಸರಾ ಫಲಪುಷ್ಪ ಪ್ರದರ್ಶನ
ಮೈಸೂರು

ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ದಸರಾ ಫಲಪುಷ್ಪ ಪ್ರದರ್ಶನ

October 2, 2018

ಮೈಸೂರು: ದಸರಾ ಹಿನ್ನೆಲೆಯಲ್ಲಿ ಮೈಸೂರಿನ ಕುಪ್ಪಣ್ಣ ಪಾರ್ಕ್‍ನಲ್ಲಿ ಅ.10ರಿಂದ 21ರವರೆಗೆ ನಡೆಯಲಿರುವ ದಸರಾ ಫಲಪುಷ್ಪ ಪ್ರದರ್ಶನ ಬಗೆ ಬಗೆಯ ಹೂವಿನ ಗಿಡಗಳು ಕಣ್ಮನ ಸೆಳೆಯುವುದರೊಂದಿಗೆ ಹೂವಿನಿಂದಲೇ ತಯಾರಿಸಿರುವ ಅಶೋಕ ಸ್ತಂಭ, ಪೆಂಗ್ವಿನ್, ಫಿರಂಗಿ, ಅಮರ್ ಜವಾನ್ ಸ್ತಂಭ ಸೇರಿದಂತೆ ವಿವಿಧ ಆಕೃತಿಗಳು ಮುದ ನೀಡಲಿವೆ. ನವರಾತ್ರಿಯ ಆರಂಭಕ್ಕೆ ಕೇವಲ 10 ದಿನಗಳು ಬಾಕಿ ಉಳಿದಿದ್ದು, ಎಲ್ಲೆಡೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿದೆ.

ಈ ನಡುವೆ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೀಯ ಕೇಂದ್ರ ಬಿಂದುವಾದ ಫಲಪುಷ್ಪ ಪ್ರದರ್ಶನಕ್ಕಾಗಿ ಕುಪ್ಪಣ್ಣ ಪಾರ್ಕ್ ಸಿದ್ಧಗೊಳ್ಳುತ್ತಿದ್ದು, ಸುಮಾರು 45 ತಳಿಗಳ 85 ಸಾವಿರ ಹೂವಿನ ಕುಂಡಗಳಲ್ಲಿ ಬೆಳೆಸಲಾಗಿರುವ ಹೂವಿನ ಗಿಡಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಲಾಗುತ್ತಿದೆ.

ಈ ನಡುವೆ ಪೂರ್ಣಗೊಂಡಿರುವ ಗಾಜಿನ ಮನೆಯಲ್ಲಿ ದೆಹಲಿ ಯಲ್ಲಿರುವ ಲೋಟಸ್ ಟೆಂಪಲ್ ಅನ್ನು ಗುಲಾಬಿ ಹೂವುಗಳಿಂದ ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಆಕರ್ಷಣೆಯೊಂದಿಗೆ ಫಲಪುಷ್ಪ ಪ್ರದರ್ಶನದಲ್ಲಿ 12 ಆಕೃತಿಗಳನ್ನು ಗುಲಾಬಿ ಹಾಗೂ ಇನ್ನಿತರ ಹೂವುಗಳಿಂದ ರಚಿಸುವ ಮೂಲಕ ಸಸ್ಯ ಕಾಶಿಯನ್ನು ನೋಡಲು ಬರುವ ಪ್ರವಾಸಿಗರು ಸಂತೋಷಗೊಳ್ಳುವಂತೆ ಮಾಡಲು ತೋಟಗಾರಿಕಾ ಇಲಾಖೆ ಕಾರ್ಯಕ್ರಮ ರೂಪಿಸಿದೆ.

ಮುದ ನೀಡಲಿವೆ ಆಕೃತಿಗಳು: ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆ ಗಾಜಿನ ಮನೆಯಲ್ಲಿ ಗುಲಾಬಿಯಿಂದ ಅರಳಲಿರುವ ಲೋಟಸ್ ಟೆಂಪಲ್ ಆಗಿದೆ. ಈ ನಡುವೆ ಸಂಗೀತ ಕಾರಂಜಿ ಬಳಿ ಹೂವುಗಳಿಂದ ಅರಮನೆಯ ದ್ವಾರ, ಅಶೋಕ ಸ್ತಂಭ ತಲೆ ಎತ್ತಿ ನಿಲ್ಲಲಿದೆ.

ಅಲ್ಲದೆ ಪಾರ್ಕ್‍ನ ವಿವಿಧೆಡೆ ಆಯಕಟ್ಟಿನ ಸ್ಥಳದಲ್ಲಿ ಹೂವಿನಿಂದಲೇ ಸಿದ್ಧಪಡಿಸಲಾಗುವ ಪೆಂಗ್ವಿನ್, ಅಮರ್‍ಜವಾನ್ ಸ್ತಂಭ, ಫಿರಂಗಿ, ಡಾಲ್ಫಿನ್, ಟಿ ಕಪ್ಪು, ಸಾಸರ್, ಜಗ್ಗು, ಟ್ರೀ ಹೌಸ್, ಡೋರ್ಮೋನ್, ಹೆಲ್ಪಿಂಗ್ ಹ್ಯಾಂಡ್, ಡ್ಯಾನ್ಸಿಂಗ್ ಡಾಲ್ಸ್, ಕುಂಬಾರಿಕೆ ಕಲೆ ಸೇರಿದಂತೆ ವಿವಿಧ ಆಕೃತಿ ಗಳು ನೋಡುಗರ ಮನಸೂರೆಗೊಳ್ಳಲಿವೆ.

ಆಟಿಕೆಗಳು: ಫಲಪುಷ್ಪ ಪ್ರದರ್ಶನದಲ್ಲಿ ಹೂವಿಗಳಿಗೆ ಮನಸೋತವರು ವಿವಿಧ ಆಟಿಕೆಗಳಲ್ಲಿ ಮೈಮರೆತು ಸಂಭ್ರಮಿಸುವುದಕ್ಕೆ ಬೇಕಾಗುವ ಬಗೆ ಬಗೆಯ ಆಟಿಕೆಗಳಿ ರುವ ಅಮ್ಯೂಸ್‍ಮೆಂಟ್ ಪಾರ್ಕ್ ಸಿದ್ಧಪಡಿಸಲಾಗು ತ್ತಿದೆ.

ಮಕ್ಕಳಿಂದ ಹಿರಿಯರು ಪಾಲ್ಗೊಂಡು ಸಂಭ್ರ ಮಿಸಬಹುದಾದ ಟೈಟಾನಿಕ್ ಬೋಟ್, ಬ್ರೇಕ್ ಡಾನ್ಸ್, ಮಕ್ಕಳಿಗೆ ಬೋಟಿಂಗ್, ಸನ್‍ಮೂನ್ ಸೇರಿದಂತೆ ವಿವಿಧ ಆಟಿಕೆಗಳನ್ನು ಗುಜರಾತ್‍ನಿಂದ ತರುತ್ತಿರುವು ದಾಗಿ ಗುತ್ತಿಗೆ ಪಡೆದಿರುವ ಅಲಿಫ್ ಟ್ರೇಡರ್ಸ್ ಸಂಸ್ಥೆಯ ಸುಹೈಲ್ ಮತ್ತು ರಾಜೇಶ್ ತಿಳಿಸಿದ್ದು, 50 ಸ್ಟಾಲ್‍ಗಳಲ್ಲಿ ಡೆಲ್ಲಿ ಅಪ್ಪಳ, ಬಜ್ಜಿ, ದಾವಣೆಗೆರೆ ದೋಸೆ, ರಾಜಸ್ತಾನ್ ಚಾಟ್ಸ್ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಮಾರಾಟ ಮಾಡುವ ಮಳಿಗೆ ಗಳನ್ನು ಸ್ಥಾಪಿಸಲಾಗುತ್ತಿದೆ.

ಈ ಬಾರಿ ವಿಶ್ವ ಬ್ರಾಹ್ನಿನ್ ಕೆಫೆಯ ಮಳಿಗೆಯೂ ಫಲಪುಷ್ಪ ಪ್ರದರ್ಶನದಲ್ಲಿ ಇರುತ್ತದೆ. ಆಟಿಕೆಗಳ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ವೀಕ್ಷಕರ ಸುರಕ್ಷತೆಗೆ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಅವರು ಹೇಳಿದರು.

Translate »