ಮೈಸೂರು: ರೈತರ ಆತ್ಮಹತ್ಯೆ ಪ್ರಕರಣ ಕುರಿತಂತೆ ಕೆಡಿಪಿ ಸಭೆಗೆ ಲಿಖಿತ ತಪ್ಪು ಮಾಹಿತಿ ಒದಗಿಸಿದ್ದ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ಕಿಡಿಕಾರಿದ ಪ್ರಸಂಗ ಇಂದು ನಡೆಯಿತು.
ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರಿಗೆ ಮೈಸೂರು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಕೇವಲ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕೃಷಿ ಇಲಾಖೆ, ಲಿಖಿತ ಮಾಹಿತಿ ನೀಡಿದ್ದರಿಂದ ಅದರ ಬಗ್ಗೆ ವಿವರಿಸುವಂತೆ ಸೂಚಿಸಿದಾಗ ಪ್ರಸಕ್ತ ಸಾಲಿನಲ್ಲಿ ಒಟ್ಟು 12 ಮಂದಿ ರೈತರು ಸಾವನ್ನಪ್ಪಿದ್ದಾರೆ ಎಂದು ಕೃಷಿ ಜಂಟಿ ನಿರ್ದೇಶಕ ಮಹಂತೇಶಪ್ಪ ತಿಳಿಸಿದರು.
ಆದರೆ ಇಲಾಖೆಯಿಂದ ನೀಡಿದ್ದ ಲಿಖಿತ ಅಂಕಿ ಅಂಶದ ಪ್ರಕಾರ ಏಪ್ರಿಲ್ 1ರಿಂದ ಸೆಪ್ಟೆಂಬರ್ 24ರವರೆಗೆ ತಿ. ನರಸೀಪುರ, ಕೆ.ಆರ್.ನಗರದಲ್ಲಿ ತಲಾ ಓರ್ವ ರೈತ ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು.
ಇದರಿಂದ ಅಚ್ಚರಿಗೊಂಡ ಸಚಿವರು, ಕೃಷಿ ಜಂಟಿ ನಿರ್ದೇಶಕ ಮಹಂತೇಶಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಎಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದೇ ಸರಿಯಾಗಿ ಗೊತ್ತಿಲ್ಲದ ನೀವು ಸರ್ಕಾರಕ್ಕೆ ಹೇಗೆ ನಿಖರ ಮಾಹಿತಿ ನೀಡಲು ಸಾಧ್ಯ. ಪರಿಹಾರ ಒದಗಿಸುವು ದಾದರೂ ಹೇಗೆ ಎಂದು ಕಿಡಿಕಾರಿದರು.
ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಮಹಜರು ಮಾಡಿ ಪ್ರಕರಣ ದಾಖಲಿಸಬೇಕು. ತಾಲೂಕು ತಹಸೀಲ್ದಾರರು ಇಂಕ್ವೆಸ್ಟ್ ಮಾಡುತ್ತಾರೆ. ವೈದ್ಯರು ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಕೃಷಿ ಇಲಾಖೆಯವರೂ ಹೋಗಿ ಮಾಹಿತಿ ಕಲೆ ಹಾಕಿ ಕುಟುಂಬಕ್ಕೆ ಪರಿಹಾರ ಕೊಡಿಸಲು ಸಮಿತಿಗೆ ಮಂಡಿಸುತ್ತಾರೆ. ಇಷ್ಟೆಲ್ಲಾ ಪ್ರಕ್ರಿಯೆ ಆದ ಮೇಲೆ ಎಷ್ಟು ಮಂದಿ ಸಾವನ್ನಪ್ಪಿದ್ದಾರೆಂಬ ಮಾಹಿತಿಯನ್ನೇ ನೀವು ಕೆಡಿಪಿ ಸಭೆಗೆ ತಪ್ಪಾಗಿ ಕೊಟ್ಟರೆ ನೀವು ಹೇಗೆ ಕೆಲಸ ಮಾಡುತ್ತಿದ್ದೀರೆಂದು ತಿಳಿಯುತ್ತದೆ ಎಂದು ಜಿಟಿಡಿ ಕೆಂಡಾಮಂಡಲವಾದರು.
ತಕ್ಷಣವೇ ಪ್ರತಿಕ್ರಿಯೆ ನೀಡಿದ ಮಹಂತೇಶಪ್ಪ, ಸರ್, ಈಗ ನಾವು ಮಾಹಿತಿಯನ್ನು ಅಪ್‍ಡೇಟ್ ಮಾಡಿದ್ದೇವೆ. ಜಿಲ್ಲೆಯಲ್ಲಿ ಒಟ್ಟು 12 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕುವಾರು ಮಾಹಿತಿಯನ್ನು ಇಂದೇ ಕೊಡಿಸುತ್ತೇನೆ ಎಂದರು.
ಇನ್ನು ಮುಂದೆ ರೈತರ ಆತ್ಮಹತ್ಯೆ ಪ್ರಕರಣಗಳ ಸಂಬಂಧ ಸರಿಯಾಗಿ ಮಾಹಿತಿ ಒದಗಿಸಬೇಕು. ತಪ್ಪಿದರೆ ಕೃಷಿ, ಕಂದಾಯ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಮಳೆ ವಿವರ ಕುರಿತು ಜಿಲ್ಲೆಯಲ್ಲಿ ವಾಡಿಕೆ ಮಳೆ ಚೆನ್ನಾಗಿ ಆಗಿದೆ. ಎಲ್ಲೂ ಬರದ ಪರಿಸ್ಥಿತಿ ಇಲ್ಲ. ಮುಂಗಾರು-ಹಿಂಗಾರು ಬೆಳೆಗೆ ತೊಂದರೆ ಆಗಿಲ್ಲ ಎಂದೂ ಕೃಷಿ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದಾಗಲೂ ಕಸಿವಿಸಿಯಾದ ಜಿ.ಟಿ. ದೇವೇಗೌಡರು ‘ಅಲ್ಲಪ್ಪಾ ನಮ್ಮ ಜಿಲ್ಲೆಯಲ್ಲಿ ನಿಗದಿತ ಪ್ರಮಾಣದ ಮಳೆಯೇ ಆಗಿಲ್ಲ. ಕೆಲವೆಡೆ ನೀರಿಲ್ಲದೆ ಬೆಳೆಗಳೇ ಒಣಗಿವೆ. ನೀವು ಈ ಬಾರಿ ಚೆನ್ನಾಗಿ ಮಳೆ ಆಗಿದೆ ಎಂದು ಹೇಳುತ್ತೀದ್ದೀರಿ’ ಎಂದು ಮತ್ತೆ ಪ್ರಶ್ನಿಸಿದರು.
ಸರ್, ನಮಗೆ ಮಳೆಮಾಪನ ಕೇಂದ್ರದಿಂದ ಬಂದಿರುವ ಅಂಕಿ ಅಂಶಗಳ ಆಧಾರದಲ್ಲಿ ಈ ಮಾಹಿತಿ ನೀಡಿದ್ದೇವೆ ಎಂದು ಉತ್ತರಿಸಿದ ಮಹಂತೇಶಪ್ಪ ಅವರಿಗೆ, ನೀವು ರೈತರ ಜಮೀನುಗಳಿಗೆ ಹೋಗಿ ನೋಡಿದ್ದೀರಾ, ಅಧಿಕಾರಿಗಳು ಫೀಲ್ಡ್‌ನಲ್ಲಿ ಕೆಲಸ ಮಾಡಿದರೆ ನೈಜ ವಿಚಾರ ತಿಳಿಯುತ್ತದೆ ಎಂದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಡಿಸಿ ಅಭಿರಾಮ್ ಜಿ. ಶಂಕರ್ ಅವರು, ಹೋಬಳಿವಾರು ಮಳೆ ಪ್ರಮಾಣದ ಮಾಹಿತಿ ನೋಡಿದರೆ ಸರಿಯಾದ ಮಾಹಿತಿ ದೊರೆಯುತ್ತದೆ. ಕೆಲ ಹೋಬಳಿಗಳಲ್ಲಿ ಕಡಿಮೆ ಮಳೆಯಾಗಿದೆ ಎಂದರು.
ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣ, ಬೇಸಾಯದ ಬಗ್ಗೆ ತರಬೇತಿಯನ್ನು ಕಾಲ ಕಾಲಕ್ಕೆ ನೀಡಿ ಮಾರ್ಗದರ್ಶನ ನೀಡಬೇಕು. ನಾವು ದಸರಾದಲ್ಲಿ ಬ್ಯುಸಿಯಾಗಿದ್ದೇವೆ. ನಂತರ ಶಾಸಕರೊಂದಿಗೆ ಹೋಬಳಿ ಮಟ್ಟದಲ್ಲಿ ಪರಿಶೀಲನೆ ನಡೆಸುತ್ತೇವೆ. ಅಲ್ಲಿ ನೀವು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ಜಿ.ಟಿ. ದೇವೇಗೌಡರು ಖಡಕ್ ಎಚ್ಚರಿಕೆ ನೀಡಿದರು.
ತಮ್ಮ ಕ್ಷೇತ್ರದಲ್ಲಿ ಕೃಷಿ ಹೊಂಡ ತೆಗೆಸುವ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆ ದಿದೆ ಎಂದು ಆರೋಪಿಸಿದ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಅವರು, ಅದರ ಬಗ್ಗೆ ತನಿಖೆ ಮಾಡಿಸಬೇಕೆಂದು ಇದೇ ಸಂದರ್ಭ ಒತ್ತಾಯಿಸಿದರು.
ಶಾಸಕರಾದ ಎಲ್. ನಾಗೇಂದ್ರ, ಡಾ.ಯತೀಂದ್ರ, ಕೆ.ಮಹದೇವ್, ಅಶ್ವಿನ್‍ಕುಮಾರ್, ಅನಿಲ್ ಚಿಕ್ಕಮಾದು, ಜಿಪಂ ಅಧ್ಯಕ್ಷೆ ಶ್ರೀಮತಿ ನಯೀಮಾ ಸುಲ್ತಾನ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾ.ರಾ. ನಂದೀಶ್, ಅಚ್ಯುತರಾವ್, ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ ಮಮತ, ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್, ಎಡಿಸಿ ಟಿ.ಯೋಗೇಶ್, ಜಿಪಂ ಸಿಇಓ ಕೆ.ಜ್ಯೋತಿ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.