ಅಲ್ಪ ದೂರ ದಸರಾ ಆನೆಗಳ ತಾಲೀಮಿನಲ್ಲಿ ಸಾಗಿದ ವಿಂಟೇಜ್ ಕಾರುಗಳು
ಮೈಸೂರು

ಅಲ್ಪ ದೂರ ದಸರಾ ಆನೆಗಳ ತಾಲೀಮಿನಲ್ಲಿ ಸಾಗಿದ ವಿಂಟೇಜ್ ಕಾರುಗಳು

October 2, 2018

ಮೈಸೂರು:  ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದ ವಿಂಟೇಜ್ ಕಾರುಗಳು ಸೋಮವಾರ ದಸರಾ ಆನೆಗಳ ತಾಲೀಮಿನಲ್ಲಿ ಅರಮನೆ ಆವರಣದಿಂದ ಕೆ.ಆರ್.ವೃತ್ತದವರೆಗೆ ಪಾಲ್ಗೊಂಡು ಗಮನ ಸೆಳೆದವು.

ಈ ಹಿಂದೆ ನಿಗದಿಯಾಗಿದ್ದ ಸಮಯಕ್ಕಿಂತ ಒಂದು ಗಂಟೆ ತಡವಾಗಿ 12 ವಿಂಟೇಜ್ ಕಾರುಗಳು ಅರಮನೆಗೆ ಆಗಮಿಸಿದವು. ಎಂದಿನಂತೆ 7.30ಕ್ಕೆ ತಾಲೀಮಿಗೆ ಹೊರಡ ಬೇಕಾಗಿದ್ದ ಆನೆಗಳು ವಿಂಟೇಜ್ ಕಾರು ಗಳ ಆಗಮನಕ್ಕಾಗಿ ಕಾಯುತ್ತ ಅರಮನೆಯ ಆವರಣದಲ್ಲಿಯೇ ನಿಂತಿದ್ದವು. ಅಂತಿಮವಾಗಿ ಒಂದು ಗಂಟೆ ತಡವಾಗಿ ಬಲರಾಮ ದ್ವಾರದಿಂದ ಆರು ವಿಂಟೇಜ್ ಕಾರುಗಳ ಹಿಂದೆ ಆನೆಗಳು ಹೊರ ಬಂದವು. ಆನೆಗಳ ಹಿಂದೆ ಮತ್ತೆ ಆರು ವಿಂಟೇಜ್ ಕಾರುಗಳು ಅರಮನೆಯಿಂದ ಹೊರ ಬಂದವು. ನಿಧಾನವಾಗಿ ಪಹರೆ ಮಾದರಿಯಲ್ಲಿ ಆನೆಗಳ ಹಿಂದೆ ಮತ್ತು ಮುಂದೆ ಸಾಗಿದ ವಿಂಟೇಜ್ ಕಾರುಗಳು ಕೆ.ಆರ್. ವೃತ್ತಕ್ಕೆ ಬರುತ್ತಿದ್ದಂತೆಯೇ ಪಕ್ಕಕ್ಕೆ ಸರಿದವು.

ಈ ಹಿಂದೆ ಅಧಿಕಾರಿಗಳು ಘೋಷಿಸಿದ್ದಂತೆ ಅರಮನೆಯಿಂದ ಆನೆಗಳೊಂದಿಗೆ ವಿಂಟೇಜ್ ಕಾರುಗಳು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೂ ತೆರಳಬೇಕಾಗಿತ್ತು. ಆದರೆ ವಿಂಟೇಜ್ ಕಾರುಗಳು ಕೆ.ಆರ್.ವೃತ್ತದವರೆಗೆ ಮಾತ್ರ ಬಂದು ವಾಪಸ್ಸಾದವು. ಇದರಿಂದ ಆನೆ ಗಳೊಂದಿಗೆ ವಿಂಟೇಜ್ ಕಾರುಗಳ ಸೌಂದರ್ಯ ವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಹಲವರು ನಿರಾಸೆ ಅನುಭವಿಸಿದರು. ಕೆಲವರು ತಮ್ಮ ತಮ್ಮ ಮಕ್ಕಳನ್ನು ಕರೆ ತಂದು ಬನ್ನಿಮಂಟಪದಲ್ಲಿ ರಸ್ತೆ ಬದಿ ನಿಂತಿದ್ದ ದೃಶ್ಯವೂ ಕಂಡು ಬಂತು. ಅಂತಿಮವಾಗಿ ವಿಂಟೇಜ್ ಕಾರುಗಳು ಬರದೆ ಬೇಸರದಿಂದ ವಾಪಸ್ಸಾದರು.

ಆರ್‌ಎಂಸಿ ವೃತ್ತಕ್ಕೆ ತಾಲೀಮು ಅಂತ್ಯ: ವಿಂಟೇಜ್ ಕಾರುಗಳಿಗೆ ಕಾದು ಒಂದು ಗಂಟೆ ತಡವಾಗಿ ಆನೆಗಳನ್ನು ತಾಲೀಮಿಗೆ ಕರೆತರಲಾಯಿತು. ಅರಮನೆಯಿಂದ ಆನೆಗಳು ಹೊರಡುತ್ತಿದ್ದಂತೆ ಬಿಸಿಲಿನ ಪ್ರಮಾಣ ಹೆಚ್ಚಾಯಿತು. ಕೆ.ಆರ್.ವೃತ್ತ ದಾಟಿ ಆಯುರ್ವೇದ ಆಸ್ಪತ್ರೆಗೆ ಆನೆಗಳು ಆಗಮಿಸುತ್ತಿದ್ದಂತೆಯೇ ಬಿಸಿಲು ಮತ್ತಷ್ಟು ಹೆಚ್ಚಾದ್ದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳ ತಾಲೀಮನ್ನು ಆರ್‌ಎಂಸಿ ವೃತ್ತಕ್ಕೆ ಅಂತ್ಯಗೊಳಿಸಿ, ಮತ್ತೆ ಆನೆಗಳನ್ನು ಅರಮನೆಗೆ ಕರೆತಂದು ನೀರು ಕುಡಿಸಿ ಉಪಚರಿಸಲಾಯಿತು.

ಬೇಸರ ವ್ಯಕ್ತಪಡಿಸಿದ ಮಾವುತರು, ಕಾವಾಡಿಗಳು: ವಿಂಟೇಜ್ ಕಾರುಗಳಿಗಾಗಿ ಒಂದು ಗಂಟೆ ಆನೆಗಳ ಕಾಯಿಸಿದ್ದಕ್ಕೆ ಮಾವುತರು ಬೇಸರ ವ್ಯಕ್ತಪಡಿಸಿದರು. ತಡವಾಗಿ ಬಂದರೂ ಕಾರುಗಳು ಕೇವಲ ಕೆ.ಆರ್.ವೃತ್ತದವರೆಗೂ ಬಂದು ವಾಪಸ್ಸಾಗಿದ್ದು, ಅವರಿಗೆ ಮತ್ತಷ್ಟು ಬೇಸರ ತಂದಿದೆ. ಆನೆಗಳು ಬಿಸಿಲಿನಿಂದ ಬಳಲುತ್ತವೆ ಎಂಬ ಅರಿವು ಇರಬೇಕು. ಅಲ್ಲದೆ ಕಾಂಕ್ರೀಟ್ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಸಿಲು ಹೆಚ್ಚಾದರೆ ಆನೆಗಳ ಪಾದ ಸುಡುತ್ತವೆ. ಇದರಿಂದಾಗಿ ನಮ್ಮ ಆನೆಗಳ ಹಿತ ಕಾಪಾಡು ವುದಕ್ಕೆ ಆರ್‌ಎಂಸಿಯಿಂದ ಆನೆಗಳನ್ನು ವಾಪಸ್ಸು ಕರೆತಂದಿದ್ದೇವೆ ಎಂದು ಮಾವುತರು ಬೇಸರ ವ್ಯಕ್ತಪಡಿಸಿದರು.

Translate »