ಮೈಸೂರು ದಸರೆಗೆ ಹೈಟೆಕ್ ಮೊಬೈಲ್ ಕಮಾಂಡ್ ಭದ್ರತೆ
ಮೈಸೂರು, ಮೈಸೂರು ದಸರಾ

ಮೈಸೂರು ದಸರೆಗೆ ಹೈಟೆಕ್ ಮೊಬೈಲ್ ಕಮಾಂಡ್ ಭದ್ರತೆ

October 13, 2018

ಮೈಸೂರು: ಈ ಬಾರಿ ದಸರೆಗೆ ಭಾರೀ ಬಿಗಿ ಭದ್ರತೆ ಮಾಡಿರುವ ಪೊಲೀಸರು, ಮೊದಲ ಬಾರಿಗೆ ಹೈಟೆಕ್ ಮೊಬೈಲ್ ಕಮಾಂಡ್ ಕಣ್ಗಾವಲು ವ್ಯವಸ್ಥೆಯೊಂದಿಗೆ ಕಟ್ಟೆಚ್ಚರ ವಹಿಸಿದ್ದಾರೆ.

ಲಕ್ಷಾಂತರ ಮಂದಿ ಒಂದೆಡೆ ಸೇರುವ ಸ್ಥಳದಲ್ಲಿ ಉಂಟಾಗುವ ಅಹಿತಕರ ಘಟನೆಗಳ ನಿಯಂತ್ರಿಸಿ, ನಿರ್ವಹಣೆ ಮಾಡುವ ಸಲುವಾಗಿ ಕಳೆದ 5 ತಿಂಗಳ ಹಿಂದೆ ಸರ್ಕಾರ ಮೈಸೂರು ನಗರಕ್ಕೆ ಮೊಬೈಲ್ ಕಮಾಂಡ್ ಸೆಂಟರ್ ಹೈಟೆಕ್ ಸಾಧನಗಳನ್ನು ಹೊಂದಿರುವ ವಾಹನವನ್ನು ನೀಡಿದೆ.

ಈ ವಾಹನವು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನದಲ್ಲಿರುತ್ತದೆ. ಗಣ್ಯರ ಸಮಾವೇಶಗಳು, ರಾಜಕೀಯ ಪಕ್ಷಗಳ ಬಹಿರಂಗ ಸಭೆ-ಸಮಾರಂಭಗಳು, ಕೋಮು ಗಲಭೆಯಂತಹ ಘರ್ಷಣೆಗಳು ಸಂಭವಿಸಿದಾಗ ಈ ವಾಹನ ತಕ್ಷಣ ಸ್ಥಳಕ್ಕೆ ಧಾವಿಸಿ ಜನರನ್ನು ನಿಯಂತ್ರಿಸುವ ಜೊತೆಗೆ ಘಟನಾವಳಿಯ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಈ ವಾಹನವನ್ನು ಭದ್ರತೆಗೆಂದೇ ವಿಶೇಷ ಮಾದರಿಯಲ್ಲಿ ಬೆಂಗಳೂರಿನ `MISTRAL’ ಕಂಪನಿಯು ತಯಾರಿಸಿದೆ. ಬೆಂಗಳೂರಲ್ಲಿ 2 ಹಾಗೂ ಹುಬ್ಬಳ್ಳಿಗೆ 1 ವಾಹನ ಪೂರೈಸಿದ್ದು, ಇದೀಗ ಮೈಸೂರು ನಗರದಲ್ಲಿ ಒಂದು ಸೆಂಟರ್ ಕಾರ್ಯ ನಿರ್ವಹಿಸುತ್ತಿದೆ. ಬಸ್ಸಿನ ಟಾಪ್‍ನ ನಾಲ್ಕೂ ಮೂಲೆಗಳಲ್ಲೂ ಒಂದೊಂದು ಫಿಕ್ಸೆಡ್ ಸಿಸಿ ಕ್ಯಾಮರಾ ಅಳವಡಿಸಿದ್ದು, ಅದರ ಮಧ್ಯೆ ಪಿಟಿಝಡ್ 500 ಮೀಟರ್ ದೂರದಿಂದ ಜೂಮ್ ಮಾಡಬಹುದಾದಂತಹ ವಿಶೇಷ ಕ್ಯಾಮರಾ ಸಹ ಇದೆ. 10 ವೈರ್‍ಲೆಸ್ ಕ್ಯಾಮರಾಗಳೂ ಇದ್ದು, ಘಟನಾವಳಿಯ ನೇರ ರಿಲೆ ಮತ್ತು ರೆಕಾರ್ಡಿಂಗ್ ಮಾಡುತ್ತವೆ. ಅವುಗಳ ಜೊತೆಗೆ 4 ಬಾಡಿ ಜಾಕೆಟ್ (ಬಾಡಿ ವೋರ್ನಡ್) ಕ್ಯಾಮರಾಗಳೂ ಲಭ್ಯವಿದ್ದು, ಸಣ್ಣಪುಟ್ಟ ರಸ್ತೆಗಳು, ಗಲ್ಲಿಗಳಲ್ಲಿ ಗಲಾಟೆಗಳಾಗುತ್ತಿದ್ದಾಗ ಅರ್ಧ ಕಿ.ಮೀ. ದೂರದಿಂದಲೂ ಸೆರೆ ಹಿಡಿಯುವ ಸಾಮಥ್ರ್ಯ ಹೊಂದಿದೆ. 1 ಡ್ರೋಣ್ ಕ್ಯಾಮರಾವನ್ನು ಒದಗಿಸಲಾಗಿದೆ. 300 ಮೀಟರ್ ಎತ್ತರದಿಂದ ಸುತ್ತಲಿನ ಸುಮಾರು ಅರ್ಧ ಕಿ.ಮೀ. ವ್ಯಾಪ್ತಿಯ ದೃಶ್ಯವನ್ನು ಸೆರೆ ಹಿಡಿಯುವ ಸಾಮಥ್ರ್ಯವನ್ನು ಈ ಕ್ಯಾಮರಾ ಹೊಂದಿದೆ.

ಮೊಬೈಲ್ ಕಮಾಂಡ್ ಸೆಂಟರ್ ವಾಹನವನ್ನು ಸಿಎಆರ್ ನ ಎಎಸ್‍ಐ ಸರ್ದಾರ್ ಚಾಲನೆ ಮಾಡಲಿದ್ದು, ವಿವಿ ಪುರಂ ಠಾಣೆಯ ಕಾನ್‍ಸ್ಟೇಬಲ್ ನಾಗೇಶ್, ಮಂಡಿ ಠಾಣೆಯ ರಘು ಹಾಗೂ ವಿಜಯನಗರ ಠಾಣೆಯ ಮಾಯಣ್ಣ ಆಪರೇಟರ್‌ಗಳನ್ನಾಗಿ ನಿಯೋಜಿಸಲಾಗಿದೆ.

ಈ ಮೂವರೂ ಪೊಲೀಸ್ ಕಾನ್‍ಸ್ಟೇಬಲ್‍ಗಳಿಗೆ ಮಿಸ್ಟ್ರಲ್ ಕಂಪನಿಯ ಕಂಪ್ಯೂಟರ್ ತಜ್ಞರು ವಾಹನದ ಉಪಕರಣಗಳನ್ನು ಬಳಸುವುದು, ಡ್ರೋಣ್ ಕ್ಯಾಮರಾ ಆಪರೇಟ್ ಮಾಡುವುದೂ ಸೇರಿದಂತೆ ಇದರ ಇನ್ನಿತರೆ ಕಾರ್ಯ ವೈಖರಿ ಬಗ್ಗೆ ತರಬೇತಿ ನೀಡಿದ್ದಾರೆ.

ಸಾವಿರಾರು, ಲಕ್ಷಾಂತರ ಮಂದಿ ಸೇರುವ ರಾಜಕೀಯ ಸಮಾವೇಶಗಳು, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಶ್ರೇಷ್ಠ ವಿಜ್ಞಾನಿಗಳು, ಝಡ್ ಮತ್ತು ಝಡ್ ಪ್ಲಸ್ ಮಾದರಿ ಭದ್ರತೆ ಇರುವ ಗಣ್ಯ ವ್ಯಕ್ತಿಗಳು ಭಾಗವಹಿಸುವ ಸಭೆ- ಸಮಾರಂಭಗಳು ನಡೆಯುವ ಸ್ಥಳದ ಆಯಕಟ್ಟಿನ ಪ್ರದೇಶದಲ್ಲಿ ಮೊಬೈಲ್ ಕಮಾಂಡ್ ಸೆಂಟರ್ ಹಾಜರಿರುತ್ತದೆ. ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಈ ವಾಹನ ಬಳಸಿ ಹೈಟೆಕ್ ಭದ್ರತಾ ವ್ಯವಸ್ಥೆ ಮಾಡಿರುವ ಪೊಲೀಸರು, ಯುವ ಸಂಭ್ರಮ, ಯುವ ದಸರಾ, ವಿಜಯ ದಶಮಿ ಮೆರವಣಿಗೆ, ಪಂಜಿನ ಕವಾಯತು ಪ್ರದರ್ಶನ, ಏರ್ ಷೋ, ಅವುಗಳ ತಾಲೀಮು ಕಾರ್ಯ ಕ್ರಮಗಳಲ್ಲೂ ಕಮಾಂಡ್ ಸೆಂಟರ್ ಅನ್ನು ಬಳಸಿ ಭದ್ರತಾ ವ್ಯವಸ್ಥೆ ಮಾಡುತ್ತಿದ್ದಾರೆ.

Translate »