ಇಬ್ಬರು ಚೋರರ ಸೆರೆ; 8 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನ ವಶ
ಮೈಸೂರು

ಇಬ್ಬರು ಚೋರರ ಸೆರೆ; 8 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನ ವಶ

February 12, 2021

ಮೈಸೂರು, ಫೆ.11(ವೈಡಿಎಸ್)- ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿ ಗಳನ್ನು ಉದಯಗಿರಿ ಪೊಲೀಸರು ಬಂಧಿಸಿ, 8 ಲಕ್ಷ ರೂ. ಮೌಲ್ಯದ ವಿವಿಧ ಕಂಪೆನಿಗಳ 8 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ಕೆ.ಎನ್.ಪುರ 4ನೇ ಕ್ರಾಸ್ ನಿವಾಸಿ ಮೊಹಮ್ಮದ್ ಶೋಹೆಬ್(19) ಮತ್ತು ಕೆ.ಎನ್.ಪುರ ಹರೀಶ್ಚಂದ್ರ ಘಾಟ್ ರಸ್ತೆ ನಿವಾಸಿ ಅರ್ಬಾಜ್ ಖಾನ್ @ ಗೋರು(19) ಬಂಧಿತರು.

ರಾಜೀವ್ ನಗರದ ಮೊಹಮ್ಮದ್ ಸಲ್ಮಾನ್ ಎಂಬವರು ಜ.31ರ ರಾತ್ರಿ ಅಪಾಚೆ(ಕೆಎ55 ಜೆ4902) ಮೋಟಾರ್‍ಬೈಕನ್ನು ಮನೆ ಮುಂದೆ ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ ನೋಡಿದಾಗ ದ್ವಿಚಕ್ರವಾಹನ ಕಳವಾಗಿತ್ತು. ಈ ಕುರಿತು ಮೊಹಮ್ಮದ್ ಸಲ್ಮಾನ್ ಫೆ.6ರಂದು ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ವಾಹನ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು.

ಉದಯಗಿರಿ ಪೊಲೀಸರು ಫೆ.11ರ ಗುರುವಾರ ಬೆಳಗ್ಗೆ 6.15ರ ವೇಳೆ ಉದಯಗಿರಿ ಅಲಿ ಪಾರ್ಕ್ ಬಳಿ ಗಸ್ತಿನಲ್ಲಿದ್ದಾಗ ಬೈಕ್‍ನಲ್ಲಿ ಬರುತ್ತಿದ್ದ ಶೋಹೆಬ್ ಮತ್ತು ಅರ್ಬಾಜ್‍ಖಾನ್‍ನನ್ನು ತಡೆದು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇಬ್ಬರೂ ಉದಯ ಗಿರಿ, ಎನ್.ಆರ್.ಮೊಹಲ್ಲಾ, ವಿಜಯನಗರ, ನಜರಬಾದ್, ಸರಸ್ವತಿಪುರಂ, ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ರಾಯಲ್ ಎನ್‍ಫೀಲ್ಡ್, 2 ಕೆಟಿಎಂ ಬೈಕ್, 3 ಯಮಹಾ ಆರ್‍ಎಕ್ಸ್, 1 ಅಪಾಚೆ, 1 ಹೋಂಡಾ ಆಕ್ಟೀವಾ ಸ್ಕೂಟರ್ ಕಳವು ಮಾಡಿ ರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರು ನೀಡಿದ ಮಾಹಿತಿ ಮೇರೆಗೆ ಹಾಸನದಲ್ಲಿ 1 ಬೈಕ್ ಹಾಗೂ 7 ದ್ವಿಚಕ್ರ ವಾಹನಗಳನ್ನು ಮೈಸೂರು ನಗರದಲ್ಲಿಯೇ ವಿವಿಧೆಡೆಯಿಂದ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಇಬ್ಬರೂ ಆರೋಪಿಗಳು ಶೋಕಿಗಾಗಿ ಬೈಕ್ ಕಳ್ಳತನಕ್ಕೆ ಇಳಿದಿದ್ದು, ನಕಲಿ ಕೀಲಿಕೈ ಬಳಸಿ ಹಾಗೂ ಕಾಲಿನಿಂದ ಬೈಕ್ ಹ್ಯಾಂಡಲ್‍ಗಳ ಲಾಕ್‍ಗಳನ್ನು ಮುರಿದು ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು. ಪತ್ತೆ ಕಾರ್ಯ ದಲ್ಲಿ ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ, ದೇವರಾಜ ವಿಭಾಗದ ಎಸಿಪಿ ಎಂ.ಎನ್.ಶಶಿಧರ್ ಮಾರ್ಗ ದರ್ಶನದಲ್ಲಿ ಉದಯಗಿರಿ ಠಾಣೆ ಇನ್‍ಸ್ಪೆಕ್ಟರ್ ಎನ್.ಎಂ. ಪೂಣಚ್ಚ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪಿಎಸ್‍ಐಗಳಾದ ಎಂ.ಜಯಕೀರ್ತಿ, ಮದನಕುಮಾರ್, ನಟರಾಜ್, ಮಾರುತಿ, ಎಎಸ್‍ಐ ದಿವಾಕರ್, ಪೊಲೀಸ್ ಸಿಬ್ಬಂದಿ ಎಂ.ಶಂಕರ್, ಸಿದ್ದಿಕ್ ಅಹಮದ್, ಮೋಹನಕುಮಾರ್, ಆರ್.ಎಸ್.ಕೃಷ್ಣ, ಶಿವರಾಜಪ್ಪ, ಮಾಲತಿ, ಭವ್ಯ ಪಾಲ್ಗೊಂಡಿದ್ದರು.

Translate »