ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ
ಮೈಸೂರು, ಮೈಸೂರು ದಸರಾ

ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ

October 13, 2018

ಮೈಸೂರು:  ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಶುಕ್ರವಾರ ರೈತ ದಸರಾ ಮೆರವಣಿಗೆ ಮೈಸೂರಿನಲ್ಲಿ ಅದ್ಧೂರಿಯಿಂದ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ರೈತರು ಸಂಭ್ರಮ ದಿಂದ ಪಾಲ್ಗೊಂಡಿದ್ದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಬಳಿಕ ನಗಾರಿ ಬಾರಿಸುವ ಮೂಲಕ ಅದ್ಧೂರಿ ರೈತ ದಸರಾ ಮೆರವಣಿಗೆಯನ್ನು ಉದ್ಘಾಟಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸದಸ್ಯರು ಕಳಸಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವೀರಗಾಸೆ, ಕೋಲಾಟ, ಪೂಜಾ ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ಹುಲಿ ವೇಷ, ಪಾಳೇಗಾರ, ಮರಗಾಲು ಕುಣಿತ ಇನ್ನಿ ತರ ಜಾನಪದ ಕಲಾ ತಂಡಗಳು ಮೆರ ವಣಿಗೆಗೆ ಆಕರ್ಷಣೆ ತುಂಬಿದವು. ಕೃಷಿ, ರೇಷ್ಮೆ, ತೋಟಗಾರಿಕೆ ಹಾಗೂ ಪಶು ಪಾಲನಾ ಇಲಾಖೆ, ಸಾಮಾಜಿಕ ಅರಣ್ಯ ವತಿಯಿಂದ ಆಯಾ ಇಲಾಖೆ ಯಿಂದ ರೈತರಿಗೆ ದೊರೆಯುವ ಸೌಲಭ್ಯ ಗಳು ಹಾಗೂ ಸಬ್ಸಿಡಿ ಇನ್ನಿತರ ಯೋಜನೆಗಳ ಕುರಿತು ಮಾಹಿತಿ ನೀಡುವ ಟ್ಯಾಬ್ಲೊ ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಅಲಂಕೃತ ಜೋಡಿ ಎತ್ತಿನ ಗಾಡಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್, ಎನ್.ಎಚ್.ಶಿವಶಂಕರರೆಡ್ಡಿ ಎತ್ತಿನ ಗಾಡಿ ಏರಿ ತಾವೂ ರೈತ ಕುಟುಂಬಕ್ಕೆ ಸೇರಿದವರು ಎಂದು ತೋರಿಸಿ ಕೊಟ್ಟರು. ವರ್ಣರಂಜಿತ ಅದ್ಧೂರಿ ಮೆರವಣಿಗೆ ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಜೆ.ಕೆ.ಮೈದಾನಕ್ಕೆ ತಲುಪಿತು.

ಮೆರವಣಿಗೆಯಲ್ಲಿ ಡಿಸಿ ಅಭಿರಾಂ ಜಿ.ಶಂಕರ್, ದಸರಾ ಉಪಸಮಿತಿ ಉಪ ವಿಶೇಷಾಧಿಕಾರಿ, ಜಿಪಂ ಉಪ ಕಾರ್ಯದರ್ಶಿ ಕೆ.ಎಂ.ಶಿವಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾದ ಜಂಟಿ ಕೃಷಿ ನಿರ್ದೇ ಶಕ ಮಹಂತೇಶ್, ಕಾರ್ಯದರ್ಶಿ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಅಜಿತ್ ಕುಮಾರ್ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ಇನ್ನಿತರರು ಭಾಗವಹಿಸಿದ್ದರು.

ಕಾಂಗ್ರೆಸ್ ಮುಖಂಡರ ವರ್ತನೆಗೆ ಜಿಟಿಡಿ ಬೇಸರ

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಶಾಸಕ ಡಾ.ಯತೀಂದ್ರ ಹಾದಿಯಾಗಿ ಕಾಂಗ್ರೆಸ್‍ನ ಎಲ್ಲರನ್ನೂ ದಸರಾ ಮಹೋತ್ಸವಕ್ಕೆ ಕರೆದಿದ್ದೇನೆ. ಆದರೆ ಹೆಚ್ಚಿನ ರೀತಿಯಲ್ಲಿ ದಸರಾ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್‍ನವರು ತೊಡಗಿಸಿಕೊಳ್ಳಲು ಏಕೆ ಆಗುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜೆಕೆ ಮೈದಾನ ದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಹಾದಿಯಾಗಿ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಕಳೆದ ಅವಧಿಯಲ್ಲೂ ನಾನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕನಾಗಿದ್ದೆ. ಆಗ ಯಾರೂ ನನ್ನನ್ನು ಆಹ್ವಾನಿಸುತ್ತಿರಲಿಲ್ಲ. ಅಧಿಕಾರಿಗಳು ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿ ಆಹ್ವಾನಿಸುತ್ತಿದ್ದರು. ನಾನು ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದೆ. ಆದರೆ ಈಗ ಮಾಧ್ಯಮದವರು ಕಾಂಗ್ರೆಸ್‍ನವರು ಏಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗಿದೆ ಎಂದರು.

ಭಿನ್ನಾಭಿಪ್ರಾಯ?: ಇಂದು ಬೆಳಿಗ್ಗೆ ಮೈಸೂರಿನ ಕುವೆಂಪುನಗರ ಸೌಗಂಧಿಕ ಉದ್ಯಾನವನದಲ್ಲಿ ನಡೆದ ಯೋಗ ದಸರಾ ಉದ್ಘಾಟನಾ ಸಮಾರಂಭದ ಬಳಿಕ ಕಾಂಗ್ರೆಸ್‍ನವರ ಸಕ್ರಿಯ ಪಾಲ್ಗೊಳ್ಳುವಿಕೆ ಏಕೆ ಇಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಿ.ಟಿ.ದೇವೇಗೌಡ ಅವರು, ಸಚಿವ ಜಮೀರ್ ಅಹಮದ್ ಆಹಾರ ಮೇಳ ಉದ್ಘಾಟಿಸಿದ್ದಾರೆ. ಸಚಿವ ಡಾ.ಜಯಮಾಲ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆಯಲ್ಲೇ ಪಾಲ್ಗೊಂಡಿದ್ದರು. ನಮ್ಮ ನಡುವೆ ಯಾವುದೇ ಮನಸ್ತಾಪ, ಭಿನ್ನಾಭಿಪ್ರಾಯ ಇಲ್ಲ ಎಂದಿದ್ದರು. ಆದರೆ ರೈತ ದಸರಾದ ಉದ್ಘಾಟನಾ ಸಮಾರಂಭದ ಭಾಷಣದಲ್ಲಿ ಹೇಳಿದ ಮಾತುಗಳು ಭಿನ್ನಾಭಿಪ್ರಾಯ ಇದೆಯೇ? ಎಂಬ ಪ್ರಶ್ನೆ ಮೂಡುವಂತೆ ಮಾಡಿತು.

Translate »