ಮೈಸೂರು: ದಸರಾ ಮಹೋತ್ಸವದ ಆಕರ್ಷಣೆಗಳಲ್ಲೊಂದಾದ ಏರ್ ಷೋ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿದೆ.
ಭಾರತೀಯ ವಾಯುದಳ (Indian Air Force) ಏರ್ ಷೋ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆ (ಅ.13) ಬೆಳಿಗ್ಗೆ 11 ಗಂಟೆಗೆ ಬನ್ನಿಮಂಟಪದ ಟಾರ್ಚ್‍ಲೈಟ್ ಪರೇಡ್ ಮೈದಾನದಲ್ಲಿ ಏರ್ ಷೋ ತಾಲೀಮು ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಭಾನುವಾರ
ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಪೂರ್ಣ ಪ್ರಮಾಣದ ಪ್ರದರ್ಶನದಲ್ಲಿ ಪೆಟಲ್ ಡ್ರಾಪಿಂಗ್, ಸ್ಲಿದರಿಂಗ್, ವಾಯು ದಳದ ಸ್ಕೈಡೈವರ್‍ಗಳಿಂದ ಸಾಹಸ ಪ್ರದರ್ಶನ ನೀಡುವರು. ಬೆಂಗಳೂರಿನ 2 ಐಎಫ್ ಹೆಲಿಕಾಪ್ಟರ್‍ಗಳೂ ಏರ್ ಷೋನಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿರುವ ಏರ್‍ಫೋರ್ಸ್ ಕಮಾಂಡ್ ಕಚೇರಿಯಲ್ಲಿ ದಸರಾ ಏರ್ ಷೋ ಕುರಿತಂತೆ ನೋಡಲ್ ಅಧಿಕಾರಿಗಳಾದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್ ಮತ್ತು ಮುಡಾ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಕ್ಷ್ಮೀಶ ಅವರು ಭಾರತೀಯ ವಾಯು ದಳದ ಹಿರಿಯ ಅಧಿಕಾರಿಗಳಾದ ವಿಂಗ್ ಕಮಾಂಡರ್ ನೀರಜ್ ಅಸ್ತಾನ್, ವಿಂಗ್ ಕಮಾಂಡರ್ ಗಜೇಂದ್ರ ಸಿಂಗ್ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಏರ್ ಷೋಗೆ ಜಿಲ್ಲಾಡಳಿತದಿಂದ ಮಾಡಬೇಕಾದ ವ್ಯವಸ್ಥೆ ಬಗ್ಗೆ ಸಮಾಲೋಚನೆ ನಡೆಸಿದರು.
ಎಎಸ್‍ಟಿಇಯಿಂದ ಆಕಾಶ ಗಂಗ ಎಎನ್-32 ವಿಮಾನದಿಂದ ಪೆಟಲ್ ಡ್ರಾಪ್ ಮತ್ತು ಸ್ಲಿದರಿಂಗ್ ನಡೆಯಲಿದ್ದು, ಗಾರುಡ ಎಂಐ-17 ತಂಡದ ಯೋಧರು ಸ್ಕೈಡೈವಿಂಗ್ ಪ್ರದರ್ಶನ ನೀಡುವರು. ಏರ್ ಷೋ ತಾಲೀಮಿನ ಮುನ್ನಾ ದಿನವಾದ ಇಂದು ಮಧ್ಯಾಹ್ನ ಮೈಸೂರಿನ ಬನ್ನಿಮಂಟಪದಲ್ಲಿ ಏರ್‍ಫೋರ್ಸ್ ಅಧಿಕಾರಿಗಳು ವಿಮಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಏರ್ ಷೋ ತಾಲೀಮು ಮತ್ತು ಪ್ರಮುಖ ಕಾರ್ಯಕ್ರಮಕ್ಕೆ ವಾಹನ ನಿಲುಗಡೆ ಮತ್ತಿತರ ಸೌಲಭ್ಯವನ್ನು ವ್ಯವಸ್ಥೆ ಮಾಡಲಾಗಿದೆ.