ದಸರಾ ಏರ್ ಶೋ ಹೆಲಿಕಾಪ್ಟರ್ ಶ್ರೀರಂಗಪಟ್ಟಣ ಬಳಿ ತುರ್ತು ಭೂ ಸ್ಪರ್ಶ
ಮೈಸೂರು

ದಸರಾ ಏರ್ ಶೋ ಹೆಲಿಕಾಪ್ಟರ್ ಶ್ರೀರಂಗಪಟ್ಟಣ ಬಳಿ ತುರ್ತು ಭೂ ಸ್ಪರ್ಶ

October 3, 2019

ಶ್ರೀರಂಗಪಟ್ಟಣ, ಅ.2(ವಿನಯ್ ಕಾರೇಕುರ)-ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಇಂದು ನಡೆದ ಏರ್ ಶೋನಲ್ಲಿ ಭಾಗವಹಿಸಬೇಕಿದ್ದ ವಾಯುಪಡೆ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತಾಲೂಕಿನ ಮಹದೇವಪುರ ಚನ್ನಹಳ್ಳಿ ಬೋರೆ ಬಳಿ ತುರ್ತು ಭೂಸ್ಪರ್ಶ ಮಾಡಿತು. ಅದೃಷ್ಟವಶಾತ್ ಅದರಲ್ಲಿದ್ದ ಯೋಧರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಏರ್ ಶೋಗಾಗಿ ಇಂದು ಬೆಳಿಗ್ಗೆ ಬೆಂಗಳೂರು ಯಲಹಂಕ ವಾಯುನೆಲೆಯಿಂದ ಮೈಸೂರಿನತ್ತ ಹೊರಟಿದ್ದ ಹೆಲಿ ಕಾಪ್ಟರ್‍ನಲ್ಲಿ ಇಂಧನ ಸೋರಿಕೆ ಅಪಾಯವರಿತ ಪೈಲಟ್ ಹೆಲಿಕಾಪ್ಟರ್ ಅನ್ನು ಮೊದಲಿಗೆ ಅರೆಕೆರೆ ಬಳಿ ಲ್ಯಾಂಡ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಹೆಲಿ ಕಾಪ್ಟರ್ ಫ್ಯಾನ್‍ನ ಬಿರುಸಾದ ಗಾಳಿಯಿಂದ ಅಲ್ಲಿದ್ದ ಮನೆಗಳ ಮೇಲ್ಛಾವಣಿಗಳು ಹಾರಿದ್ದು, ಗ್ರಾಮಸ್ಥರು ಗಾಬರಿಯಿಂದ ಹೊರಬಂದು ನೋಡಿದ್ದಾರೆ. ಈ ಸ್ಥಳ ಸುರಕ್ಷಿತವಲ್ಲ ಎಂಬುದನ್ನರಿತ ಪೈಲಟ್ ಚನ್ನಹಳ್ಳಿ ಬೋರೆ ಬಳಿ ಬಯಲು ಪ್ರದೇಶದಲ್ಲಿ ತುರ್ತು ಭೂ ಸ್ಪರ್ಶ ಮಾಡಿದರು. ಈ ವೇಳೆ ಹೆಲಿಕಾಪ್ಟರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅದರಲ್ಲಿದ್ದ ಯೋಧರು ಕೆಳಗೆ ಧುಮುಕಿ ಓಡಲಾರಂಭಿಸಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಸಹ ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೆಲ ಸಮಯದ ನಂತರ ಹೆಲಿಕಾಪ್ಟರ್‍ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನಂದಿದ ನಂತರ ಯೋಧರು ಅದರತ್ತ ತೆರಳಿದ್ದಾರೆ. ಇದನ್ನು ಕಂಡು ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ನಂತರ ಯೋಧರಿಗೆ ಎಳನೀರು ಕೊಟ್ಟು ಸತ್ಕರಿಸಿದ್ದಾರೆ. ಯೋಧರು ವೈರ್‍ಲೆಸ್ ಮೂಲಕ ವಿಷಯ ಮುಟ್ಟಿಸಿದ ನಂತರ ಬೆಂಗಳೂರಿಂದ ಎರಡು ಹೆಲಿಕಾಪ್ಟರ್‍ಗಳಲ್ಲಿ ಬಂದ ವಾಯುಪಡೆಯ ಯೋಧರ ತಂಡ ಒಂದು ಹೆಲಿಕಾಪ್ಟರ್‍ನಲ್ಲಿ ಪರಿಕರಗಳನ್ನು ಹಾಗೂ ಮತ್ತೊಂದು ಹೆಲಿಕಾಪ್ಟರ್‍ನಲ್ಲಿ ಯೋಧರನ್ನು ಸುರಕ್ಷಿತವಾಗಿ ಸಾಗಿಸಿದೆ. ನಂತರ ತುರ್ತು ಭೂ ಸ್ಪರ್ಶವಾಗಿದ್ದ ಹೆಲಿಕಾಪ್ಟರ್ ರಿಪೇರಿ ಮಾಡಲು ಪ್ರಯತ್ನಿಸಲಾಯಿತಾದರೂ ಅದು ಸಾಧ್ಯವಾಗದ ಕಾರಣ ಅರೆಕೆರೆ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿ ಬಯಲಲ್ಲಿ ನಿಂತಿರುವ ಹೆಲಿಕಾಪ್ಟರ್‍ಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ನಾಳೆ ತಜ್ಞರ ತಂಡ ಆಗಮಿಸಿ ರಿಪೇರಿ ಮಾಡಿದ ನಂತರ ಹೆಲಿಕಾಪ್ಟರ್ ಅನ್ನು ಯಲಹಂಕ ವಾಯುನೆಲೆಗೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ. ತುರ್ತು ಭೂ ಸ್ಪರ್ಶವಾಗಿರುವ ಹೆಲಿಕಾಪ್ಟರ್ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಯಾರೂ ಹೆಲಿಕಾಪ್ಟರ್ ಬಳಿ ಹೋಗದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.

Translate »