195 ಕೋಟಿ ಖರ್ಚು ಮಾಡಿ ಸಿದ್ಧಪಡಿಸಿದಜಾತಿಗಣತಿ ಕಸದ ಬುಟ್ಟಿಗೆ
ಮೈಸೂರು

195 ಕೋಟಿ ಖರ್ಚು ಮಾಡಿ ಸಿದ್ಧಪಡಿಸಿದಜಾತಿಗಣತಿ ಕಸದ ಬುಟ್ಟಿಗೆ

October 3, 2019

ಬೆಂಗಳೂರು, ಅ.2(ಕೆಎಂಶಿ)- ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಳೆದ ಐದಾರು ವರ್ಷಗಳಿಂದ ಗೊಂದಲದ ಗೂಡಾಗಿರುವ ಜಾತಿ ಜನಗಣತಿಯ ವರದಿಯನ್ನು ಅಂಗೀಕಾರ ಅಥವಾ ತಿರಸ್ಕಾರ ಮಾಡಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟಪಡದೆ ಈವರೆಗಿನ ಎಲ್ಲಾ ಸರ್ಕಾರಗಳು ನಯವಾಗಿ ಜಾರಿಕೊಂಡಿದ್ದವು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರದಿಯನ್ನು ಸಂಪುಟ ಸಭೆ ಯಲ್ಲಿಟ್ಟು ತಿರಸ್ಕರಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ 195 ಕೋಟಿ ರೂ. ಖರ್ಚು ಮಾಡಿ, ಮನೆ ಮನೆ ಸಮೀಕ್ಷೆ ನಡೆಸಿ ಜಾತಿ ಜನಗಣತಿ ವರದಿ ಸಿದ್ಧಪಡಿಸಲಾ ಗಿದೆ. ಇದನ್ನು ಬಹಿರಂಗಪಡಿಸ ಬೇಕು ಎಂದು ಹಲವು ಸಂಘ ಟನೆಗಳು ಒತ್ತಾಯಿಸಿದ್ದವು. ಸರ್ಕಾ ರದ ಒಳಗೂ ಒತ್ತಡಗಳು ಕೇಳಿ ಬಂದಿದ್ದವು. ಆದರೆ ಸಿದ್ದರಾಮಯ್ಯ ಸರ್ಕಾರ 5 ವರ್ಷ ಅಧಿಕಾರಾವಧಿ ಪೂರ್ಣಗೊಳಿಸಿದರೂ ವರದಿಯ ತಂಟೆಗೆ ಹೋಗಲಿಲ್ಲ. ಸರ್ಕಾರಿ ಸೌಲಭ್ಯಗಳ ಹಂಚಿಕೆ ಸಮರ್ಪಕವಾಗಿ ನಡೆಯಬೇಕಾದರೆ ಜಾತಿಯ ಜನಸಂಖ್ಯೆ ನಿಖರವಾಗಿ ತಿಳಿಯಬೇಕು. ಯಾವ ಜಾತಿ ಎಷ್ಟು ಸೌಲಭ್ಯ ಪಡೆದುಕೊಂಡಿದೆ ಎಂಬ ಮಾಹಿತಿ ಸ್ಪಷ್ಟವಾಗಬೇಕು ಮತ್ತು ನ್ಯಾಯಾಲಯಗಳ ವಿಚಾರಣೆ ವೇಳೆ ಕರಾರುವಕ್ಕಾದ ವಾದ ಮಂಡಿಸಲು ಅನುಕೂಲವಾಗಬೇಕು ಎಂಬ ಕಾರಣಕ್ಕಾಗಿ 1997ರಲ್ಲಿ ಜಾತಿ ಜನಗಣತಿಗೆ ಪ್ರಯತ್ನಗಳು ಆರಂಭವಾದವು.

ಜಾತಿ ಸಮೀಕ್ಷೆ ಅಪೂರ್ಣವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಧಿಕೃತವಾಗಿ ವರದಿ ಬಿಡುಗಡೆಯಾಗದೆ ಇದ್ದರೂ, ಅನಧಿಕೃತವಾಗಿ ಸೋರಿಕೆಯಾಗಿತ್ತು. ಅದರಲ್ಲಿ ಕೆಲವು ಜಾತಿಗಳ ಜನಸಂಖ್ಯೆ ಹೆಚ್ಚಿದೆ, ಕೆಲವು ಕಡಿಮೆ ಇದೆ ಎಂಬ ಅವೈಜ್ಞಾನಿಕ ಮಾಹಿತಿಗಳು ಹರಿದಾಡಿದವು. ಇದು ವಿವಾದಕ್ಕೆ ಕಾರಣವಾಗಿತ್ತು. ಸರ್ಕಾರ ಸಮೀಕ್ಷೆಗೆ ಮೊದಲು ಜಾತಿಯ ಗುರುತಿಸುವಿಕೆ ವಿಷಯದಲ್ಲಿ ಸ್ಪಷ್ಟತೆ ಮತ್ತು ನಿಖರತೆಯನ್ನು ಅನುಸರಿಸಲಿಲ್ಲ. ಆದ್ದರಿಂದ ಇದು ಅವೈಜ್ಞಾನಿಕ ವರದಿ ತಿರಸ್ಕಾರ ಮಾಡಿ ಎಂಬ ಒತ್ತಾಯಗಳಿವೆ. ಅತೀವ ಆಸಕ್ತಿಯಿಂದ ಸಮೀಕ್ಷೆ ನಡೆಸಿದ ಸಿದ್ದರಾಮಯ್ಯ ಅವರೇ ಕೊನೆಗೆ ಆ ವರದಿ ಸ್ವೀಕರಿಸಿ ಬಿಡುಗಡೆ ಮಾಡುವ ಗೋಜಿಗೆ ಹೋಗಲಿಲ್ಲ. ನಂತರ ಬಂದ ಎಚ್.ಡಿ.ಕುಮಾರಸ್ವಾಮಿಯವರು ಕೂಡ ವರದಿ ತಂಟೆಗೆ ಹೋಗಲಿಲ್ಲ. ಯಡಿಯೂರಪ್ಪ ಅವರ ಸರ್ಕಾರ ವರದಿ ಅವೈಜ್ಞಾನಿಕವಾಗಿದೆ, ಸಮರ್ಪಕವಾಗಿ ಸಮೀಕ್ಷೆ ನಡೆದಿಲ್ಲ, ಸಮೀಕ್ಷೆ ಹಿಂದೆ ರಾಜಕೀಯ ದುರುದ್ದೇಶವಿದೆ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ಸಂಪುಟದಲ್ಲಿ ಚರ್ಚಿಸಿ ವರದಿಯನ್ನು ತಿರಸ್ಕರಿಸಲು ಮುಂದಾಗಿದೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಜಾತಿ ಸಮೀಕ್ಷೆ ವರದಿ ತಿರಸ್ಕಾರದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲು ನಿರಾಕರಿಸಿದರು. ವರದಿಯನ್ನು ಬಿಡುಗಡೆ ಮಾಡುತ್ತೀರಾ ಎಂಬ ಪ್ರಶ್ನೆಗೆ ತಲೆ ಅಲ್ಲಾಡಿಸಿ ಇಲ್ಲ ಎಂಬಂತೆ ಸನ್ನೆ ಮಾಡಿದ್ದಾರೆ.

Translate »